ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ, ನೇಪಾಳಕ್ಕಿಂತಲೂ ಭಾರತದ ಜಿಡಿಪಿ ಕಡಿಮೆ: ವಿಶ್ವಬ್ಯಾಂಕ್‌

ಶೇ 6ಕ್ಕೆ ಕುಸಿಯಲಿದೆ ಜಿಡಿಪಿ
Last Updated 13 ಅಕ್ಟೋಬರ್ 2019, 19:57 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಆರಂಭಿಕ ತ್ರೈಮಾಸಿಕಗಳಲ್ಲಿ ಆರ್ಥಿಕತೆಯ ಬಹುತೇಕ ವಲಯಗಳಲ್ಲಿ ಹಿಂಜರಿತ ದಾಖಲಾಗಿರುವುದರಿಂದ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 6ಕ್ಕೆ ಇಳಿಯಲಿದೆ ಎಂದು ವಿಶ್ವ ಬ್ಯಾಂಕ್‌ ಅಂದಾಜಿಸಿದೆ.

ದಕ್ಷಿಣ ಏಷ್ಯಾದ ಆರ್ಥಿಕತೆ ಕೇಂದ್ರಿತ ವರದಿಯಲ್ಲಿ ಸತತ ಎರಡನೇ ವರ್ಷವೂ ಭಾರತದ ವೃದ್ಧಿ ದರ ಕುಸಿತವಾಗಲಿರುವುದನ್ನು ಉಲ್ಲೇಖಿಸಲಾಗಿದೆ. ಬಾಂಗ್ಲಾದೇಶ ಮತ್ತು ನೇಪಾಳದ ಆರ್ಥಿಕ ವೃದ್ಧಿ ದರವು ಭಾರತಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರಲಿದೆ. ಪಾಕಿಸ್ತಾನದ ‘ಜಿಡಿಪಿ’ಯು ಭಾರತಕ್ಕಿಂತ ತುಂಬ ಕಡಿಮೆ (ಶೇ 2.4) ಇದೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮಗಳು ಭಾರತದಲ್ಲಿ ತೀವ್ರ ಸ್ವರೂಪದಲ್ಲಿ ಕಂಡುಬರುತ್ತಿವೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್‌) ಆತಂಕ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಈ ವರದಿ ಪ್ರಕಟಗೊಂಡಿದೆ.

ಈ ಹಣಕಾಸು ವರ್ಷದಲ್ಲಿ ಭಾರತದ ಸರಕು ಮತ್ತು ಸೇವೆಗಳ ಒಟ್ಟಾರೆ ಉತ್ಪಾದನಾ ಹೆಚ್ಚಳವು ಶೇ 6ರಷ್ಟನ್ನು ಮೀರಲಾರದು ಎಂದು ವಿಶ್ವ ಬ್ಯಾಂಕ್‌ ಲೆಕ್ಕ ಹಾಕಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂದಾಜಿಗಿಂತ (ಶೇ 6.1) ಇದು ಕಡಿಮೆ ಇದೆ. 2018–19ರಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ6.9ರಷ್ಟು ದಾಖಲಾಗಿತ್ತು.ಸದ್ಯಕ್ಕೆ, ಸರಕು ಮತ್ತು ಸೇವೆಗಳ ಬಳಕೆ ಪ್ರಮಾಣದಲ್ಲಿನ ಹೆಚ್ಚಳವು ಕಳೆದ ವರ್ಷದ ಶೇ 7.3ಕ್ಕೆ ಹೋಲಿಸಿದರೆ ಶೇ 3.1ರಷ್ಟಿದೆ. ತಯಾರಿಕಾ ವಲಯದ ಬೆಳವಣಿಗೆಯು ವರ್ಷದ ಹಿಂದಿನ ಶೇ 10ಕ್ಕೆ ಹೋಲಿಸಿದರೆ ಶೇ 1ಕ್ಕೆ ಇಳಿದಿದೆ.ಚಾಲ್ತಿ ಖಾತೆ ಕೊರತೆಯು 2018–19ರಲ್ಲಿ ಜಿಡಿಪಿಯ ಶೇ 2.1ರಷ್ಟಾಗಿದೆ.ಅದಕ್ಕೂ ಹಿಂದಿನ ವರ್ಷ ಇದು ಶೇ 1.8ರಷ್ಟಿತ್ತು. ಇದು ವ್ಯಾಪಾರ ಸಮತೋಲನ ಪರಿಸ್ಥಿತಿಯು ಬಿಗಡಾಯಿಸಿರುವುದನ್ನು ಸೂಚಿಸುತ್ತದೆ. ಹಣಕಾಸು ವಲಯಕ್ಕೆ ಸಂಬಂಧಿಸಿ ಹೇಳುವುದಾದರೆ,ಈ ವರ್ಷದ ಮೊದಲಾರ್ಧದಲ್ಲಿ ಗಮನಾರ್ಹ ಪ್ರಮಾಣದ ಬಂಡವಾಳದ ಹೊರ ಹರಿವು ನಡೆದಿದೆ. ಸರ್ಕಾರದ ಕೊರತೆಯು 2018–19ರಲ್ಲಿ ಜಿಡಿಪಿಯ ಶೇ 0.2ರಷ್ಟು ಹೆಚ್ಚಾಗಿ ಶೇ 5.9ಕ್ಕೆ ತಲುಪಿದೆ.

ಆಶಾವಾದ: ಭಾರತದ ಆರ್ಥಿಕತೆಯು ಕ್ರಮೇಣ ಚೇತರಿಸಿಕೊಳ್ಳಲಿದೆ. 2021ರಲ್ಲಿ ಶೇ 6.9 ಮತ್ತು 2022ರಲ್ಲಿ ಶೇ 7.2 ಮಟ್ಟಕ್ಕೆ ಏರಿಕೆಯಾಗಲಿದೆಎಂದೂ ವಿಶ್ವಬ್ಯಾಂಕ್‌ ಆಶಾವಾದ ವ್ಯಕ್ತಪಡಿಸಿದೆ.

ಸರ್ಕಾರದ ಮುಂದಿನ ಸವಾಲು

ಸರಕು ಮತ್ತು ಸೇವೆಗಳ ಬಳಕೆ ಕಡಿಮೆಯಾಗಿರುವುದಕ್ಕೆ ತುರ್ತಾಗಿ ಪರಿಹಾರ ಕಂಡುಕೊಳ್ಳುವುದು ಭಾರತ ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ. ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನೂ ವಿಶ್ವಬ್ಯಾಂಕ್‌ ಸೂಚಿಸಿದೆ.

lಬಂಡವಾಳ ಹೂಡಿಕೆ ಹೆಚ್ಚಿಸಲು ಉತ್ತೇಜನ

lಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸುಧಾರಣೆ

lಬ್ಯಾಂಕೇತರ ಹಣಕಾಸು ಸಂಸ್ಥೆಗಳ ಕಠಿಣ ನಿಯಂತ್ರಣ

lವಿತ್ತೀಯ ಕೊರತೆಗೆ ಕಡಿವಾಣ

ಕುಂಠಿತದ ಕಾರಣಗಳು

lನೋಟು ರದ್ದತಿ, ಜಿಎಸ್‌ಟಿ ಜಾರಿಯ ಪರಿಣಾಮಗಳು

lಬೇಡಿಕೆ ಮತ್ತು ಬಳಕೆ ಪ್ರಮಾಣದಲ್ಲಿ ಕುಸಿತ

lಕೈಗಾರಿಕೆ ಹಾಗೂ ಸೇವಾ ವಲಯಗಳ ತಗ್ಗಿದ ಪೂರೈಕೆ

lಗ್ರಾಮೀಣ ಆರ್ಥಿಕತೆಯಲ್ಲಿನ ಸಂಕಷ್ಟ ಪರಿಸ್ಥಿತಿ

lನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ

***

ಹಿಂಜರಿತದ ಹೊರತಾಗಿಯೂ, ಭಾರತದ ಆರ್ಥಿಕತೆಯು ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಬೆಳವಣಿಗೆ ಕಾಣುತ್ತಿದೆ ಹ್ಯಾನ್ಸ್‌ ಟಿಮ್ಮರ್‌

–ವಿಶ್ವಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ

***

–ಸರಕು, ಸೇವೆಗಳ ಉತ್ಪಾದನಾ ಹೆಚ್ಚಳ ಶೇ 6 ಮೀರದು

–ಬಾಂಗ್ಲಾದೇಶ, ನೇಪಾಳಕ್ಕಿಂತ ಕಡಿಮೆ ವೃದ್ಧಿ ದರ

–2021ರಲ್ಲಿ ಚೇತರಿಕೆಯ ಹಾದಿಗೆ; ನಿರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT