ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ಪರಿಸರ ಸೂಕ್ಷ್ಮ ವಲಯಕ್ಕೆ ಕುತ್ತು

ರಾಷ್ಟ್ರೀಯ ಉದ್ಯಾನ: ಇಎಸ್‌ಜೆಡ್‌ ಕಡಿತಕ್ಕೆ ಒತ್ತಾಯಿಸಿ ಕೇಂದ್ರ ಪರಿಸರ ಸಚಿವರಿಗೆ ಮುಖ್ಯಮಂತ್ರಿ ಪತ್ರ
Last Updated 18 ಫೆಬ್ರುವರಿ 2020, 22:26 IST
ಅಕ್ಷರ ಗಾತ್ರ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯವನ್ನು (ಇಎಸ್‌ಜೆಡ್‌) ಕಡಿತಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಪತ್ರ ಬರೆದಿದ್ದಾರೆ.

ರಾಷ್ಟ್ರೀಯ ಉದ್ಯಾನದ ಇಎಸ್‌ಜೆಡ್‌ ಕಡಿತ ಮಾಡಬಾರದು ಎಂದು ಬಿಜೆಪಿಯು ವಿರೋಧ ಪಕ್ಷದಲ್ಲಿದ್ದ ವೇಳೆ ಬಲವಾಗಿ ಪ್ರತಿಪಾದಿಸಿತ್ತು. ಈ ಕುರಿತು ಪರಿಸರ ಕಾರ್ಯಕರ್ತರ ಹೋರಾಟಕ್ಕೆ ಸಂಸದರಾದ ಪಿ.ಸಿ.ಮೋಹನ್‌, ತೇಜಸ್ವಿಸೂರ್ಯ ಹಾಗೂ ರಾಜೀವ ಚಂದ್ರಶೇಖರ್‌ ಅವರೂ ದನಿಗೂಡಿಸಿದ್ದರು.

ಬಿಜೆಪಿ ಸರ್ಕಾರ ತನ್ನದೇ ಪಕ್ಷದ ಸಂಸದರ ಒತ್ತಾಯಕ್ಕೆ ಕಿವಿಗೊಡದೆ ಇಎಸ್‌ಜೆಡ್‌ ವ್ಯಾಪ್ತಿ ಕಡಿತಗೊಳಿಸಲು ಮುಂದಾಗಿರುವುದಕ್ಕೆ ಪರಿಸರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ರಾಜಕಾರಣಿಗಳಿಗೆ ಪರಿಸರದ ಬಗ್ಗೆ ಎಳ್ಳಿನಿತು ಕಾಳಜಿ ಇಲ್ಲ ಎಂಬುದು ಇದರಿಂದ ಸ್ಪಷ್ಟ. ಈ ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ಪರಿಸರ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ 2016ರಲ್ಲಿ ಹೊರಡಿಸಿದ್ದ ಕರಡು ಅಧಿಸೂಚನೆಯಲ್ಲಿ 268.96 ಚದರ ಕಿ.ಮೀ ವಿಸ್ತೀರ್ಣದ ಪರಿಸರ ಸೂಕ್ಷ್ಮ ವಲಯವನ್ನು ಗುರುತಿಸಲಾಗಿತ್ತು. ಆದರೆ, ಈ ಕುರಿತು ಅಂತಿಮ ಅಧಿಸೂಚನೆ ಪ್ರಕಟವಾಗಿರಲಿಲ್ಲ. ಈ ನಡುವೆ, ರಾಜ್ಯ ಸರ್ಕಾರದ ಸಂಪುಟ ಉಪಸಮಿತಿಯು ಇಎಸ್‌ಜೆಡ್‌ನ ವ್ಯಾಪ್ತಿಯನ್ನು 168.84 ಚದರ ಕಿ.ಮೀ.ಗೆ ಕಡಿತಗೊಳಿಸುವ ಕುರಿತು 2017ರ ಫೆ. 10ರಂದು ನಿರ್ಣಯ ಕೈಗೊಂಡಿತು.

ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಇಎಸ್‌ಜೆಡ್‌ ವ್ಯಾಪ್ತಿಯನ್ನು 168.84 ಚದರ ಕಿ.ಮೀ.ಗೆ ಸೀಮಿತಗೊಳಿಸಿ ಕೇಂದ್ರ ಸಚಿವಾಲಯ ಗೆಜೆಟ್‌ನಲ್ಲಿ 2018ರ ಅ.30ರಂದು ಕರಡು ಅಧಿಸೂಚನೆ ಪ್ರಕಟಿಸಿತು. ಇದಕ್ಕೆ ಪರಿಸರ ಕಾರ್ಯಕರ್ತರು ತೀವ್ರ ಆಕ್ಷೇಪ
ವ್ಯಕ್ತಪಡಿಸಿದ್ದರು. ವಿರೋಧ ಲೆಕ್ಕಿಸದೆ ಕೇಂದ್ರ ಇಎಸ್‌ಜೆಡ್‌ ತಜ್ಞರ ಸಮಿತಿಯು 2019ರ ಫೆ. 28ರ ಸಭೆಯಲ್ಲಿ ಕರಡು ಅಧಿ
ಸೂಚನೆಗೆ ಅನುಮೋದನೆ ನೀಡಿತ್ತು.

ಪರಿಸರ ಕಾರ್ಯಕರ್ತರು ಪಿ.ಸಿ.ಮೋಹನ್‌ ಹಾಗೂ ರಾಜೀವ ಚಂದ್ರಶೇಖರ್‌ ನೇತೃತ್ವದಲ್ಲಿ ಆಗಿನ ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನ ಅವರನ್ನು ಭೇಟಿ ಮಾಡಿ, ಇಎಸ್‌ಜೆಡ್‌ ಕಡಿತಗೊಳಿಸದಂತೆ ಒತ್ತಾಯಿಸಿದ್ದರು. ಬಳಿಕ ಸಮಿತಿಯ ನಿರ್ಣಯವನ್ನು ಸಚಿವಾಲಯ ತಡೆಹಿಡಿದಿತ್ತು. ಸಚಿವಾಲಯದ ನಿರ್ದೇಶಕ ಡಾ.ಸುಬ್ರತಾ ಬೋಸ್‌ 2019ರ ಆ.20ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಇಎಸ್‌ಜೆಡ್‌ ವ್ಯಾಪ್ತಿಯನ್ನು ಮೂಲದಷ್ಟೇ (268.96 ಚ.ಕಿ.ಮೀ ) ಉಳಿಸಿಕೊಳ್ಳುವ ಸಾಧ್ಯತೆ ಬಗ್ಗೆ ವರದಿ ಕೇಳಿದ್ದರು.

‘ರಾಜ್ಯ ಸರ್ಕಾರ ಈಗಾಗಲೇ ನಿಲುವನ್ನು ಸ್ಪಷ್ಟಪಡಿಸಿದೆ. ಇಎಸ್‌ಜೆಡ್‌ ಬಗ್ಗೆ ಅಂತಿಮ ಅಧಿಸೂಚನೆ ಪ್ರಕಟವಾಗುವವರೆಗೆ ರಾಷ್ಟ್ರೀಯ ಉದ್ಯಾನದ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳುವುದಿದ್ದರೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿಸಮಿತಿ (ಎಸ್‌ಬಿಡಬ್ಲ್ಯುಎಲ್‌) ಅನುಮತಿ ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಇದರಿಂದಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆಸುಪಾಸಿನಲ್ಲಿ ಅನೇಕ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹಾಗಾಗಿ ರಾಜ್ಯ ಸರ್ಕಾರ ಪ್ರಸ್ತಾಪಿಸಿರುವಂತೆಯೇ ಇಎಸ್‌ಜೆಡ್‌ ಕುರಿತ ಅಂತಿಮ ಅಧಿಸೂಚನೆ ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿಯವರು ಕೇಂದ್ರ ಸಚಿವರಿಗೆ ಇದೇ ಫೆ.1ರಂದು ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

*
ಇಎಸ್‌ಜೆಡ್‌ ಕಡಿತಕ್ಕೆ ಒತ್ತಾಯಿಸಿ ಕೇಂದ್ರ ಪರಿಸರ ಸಚಿವರಿಗೆ ಮುಖ್ಯಮಂತ್ರಿ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ. ಇಎಸ್‌ಜೆಡ್‌ ಕಡಿತಗೊಳಿಸಬಾರದು ಎಂದು ಈಗಲೂ ಒತ್ತಾಯಿಸುತ್ತೇನೆ
-ಪಿ.ಸಿ.ಮೋಹನ್, ಸಂಸದ

*
ಬಿಜೆಪಿ ಸರ್ಕಾರವೂ ರಿಯಲ್‌ ಎಸ್ಟೇಟ್‌ ಮತ್ತು ಗಣಿಗಾರಿಕೆ ಲಾಬಿಗೆ ಮಣಿದಿದೆ. ಈ ನಿರ್ಧಾರ ಬಿಜೆಪಿಯ ಇಬ್ಬಂದಿತನವನ್ನು ತೋರಿಸುತ್ತದೆ
-ವಿಜಯ್‌ ನಿಶಾಂತ್‌, ಪರಿಸರ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT