ಸೋಮವಾರ, ಅಕ್ಟೋಬರ್ 26, 2020
24 °C
ಪಾಕಿಸ್ತಾನ, ಅಫ್ಗಾನಿಸ್ತಾನ, ನೇಪಾಳದ ವಿದೇಶಾಂಗ ಸಚಿವರ ಸಭೆ

ಭಾರತದ ನೆರೆಯ ದೇಶಗಳ ಜತೆ ಚೀನಾ ಸಭೆ: ಪ್ರಾದೇಶಿಕ ಸಹಕಾರ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ನೇಪಾಳದ ವಿದೇಶಾಂಗ ಸಚಿವರೊಂದಿಗೆ ಮೊದಲ ವಿಡಿಯೊ ಸಂವಾದ ಸಭೆ ನಡೆಸಿದರು. ಕೋವಿಡ್ ಸೋಂಕು ನಿಯಂತ್ರಣಕ್ಕೆ ನಾಲ್ಕು ಅಂಶಗಳ ಕಾರ್ಯಕ್ರಮ, ಆರ್ಥಿಕ ಚೇತರಿಕೆ ಹಾಗೂ ಬೆಲ್ಟ್ ಅಂಡ್ ರೋಡ್ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಪುನರಾರಂಭ ಕುರಿತು ಚರ್ಚಿಸಿದರು. 

ಭಾರತ–ಚೀನಾ ನಡುವೆ ಲಡಾಖ್ ಗಡಿ ಬಿಕ್ಕಟ್ಟು ಇರುವ ನಡುವೆಯೇ ಚೀನಾ ನೇತೃತ್ವದಲ್ಲಿ ಭಾರತದ ನೆರೆಯ ನಾಲ್ಕು ದೇಶಗಳು ಸಭೆ ಸೇರಿರುವುದು ಗಮನಾರ್ಹ ಅಂಶ.

ಅಫ್ಗಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್ ಹನೀಫ್ ಅತ್ಮರ್, ನೇಪಾಳದ ಸಚಿವ ಪ್ರದೀಪ್ ಕುಮಾರ್ ಗ್ಯಾವಲಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪಾಕಿಸ್ತಾನದ ವಿದೇಶಾಂಗ ಸಚಿವರ ಬದಲಾಗಿ, ಆರ್ಥಿಕ ವ್ಯವಹಾರಗಳ ಸಚಿವ ಮಕ್ದೂಮ್ ಖುಸ್ರೊ ಭಕ್ತಿಯಾರ್ ಇದ್ದರು.

ನಾಲ್ಕು ದೇಶಗಳು ಒಟ್ಟಿಗೆ ನಡೆಸಿದ ಮೊದಲ ಸಭೆಯಲ್ಲಿ ನಾಲ್ಕು ಅಂಶಗಳ ಕಾರ್ಯಕ್ರಮವನ್ನು ವಾಂಗ್ ಪ್ರಸ್ತಾಪಿಸಿದರು. ಕೊರೊನಾ ವಿರುದ್ಧ ಒಗ್ಗಟ್ಟಾಗಿ ಹೋರಾಡುವುದು, ಒಮ್ಮತದ ನಿರ್ಧಾರ ತೆಗೆದುಕೊಳ್ಳುವುದು, ಕೊರೊನಾ ಕಳಂಕವನ್ನು ತೊಡೆದುಹಾಕುವುದು ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯೂಎಚ್‌ಒ) ಬೆಂಬಲವಾಗಿ ನಿಲ್ಲುವುದು ಈ ಪ್ರಸ್ತಾವದಲ್ಲಿವೆ. 

ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬರಲಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಕಳೆದ ತಿಂಗಳು ಖಚಿತಪಡಿಸಿದ್ದರು. ಕೊರೊನಾ ವಿಚಾರದಲ್ಲಿ ಆರೋಗ್ಯ ಸಂಸ್ಥೆಯು ಚೀನಾ ಪರವಾಗಿ ನಿಂತಿದೆ ಎಂಬುದು ಟ್ರಂಪ್ ಅವರ ಆರೋಪವಾಗಿತ್ತು. 

ಸಾಂಕ್ರಾಮಿಕ ರೋಗಗಳನ್ನು ಜಂಟಿಯಾಗಿ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ನಾಲ್ಕು ದೇಶಗಳು ಪ್ರಾದೇಶಿಕ ಸಹಕಾರವನ್ನು ಕೈಗೊಳ್ಳಬೇಕು ಎಂದು ವಾಂಗ್ ಹೇಳಿದರು. ‘ಲಸಿಕೆಯನ್ನು ಚೀನಾ ಅಭಿವೃದ್ಧಿಪಡಿಸಿದೆ. ಮೂರೂ ದೇಶಗಳಿಗೆ ಲಸಿಕೆ ಲಭ್ಯವಾಗಲಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಗೊಳ್ಳಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)‌ ಅನ್ನು ಅಫ್ಗಾನಿಸ್ತಾನಕ್ಕೆ ವಿಸ್ತರಿಸುವ ಉದ್ದೇಶವಿದ್ದು, ಇದರಿಂದ ಪ್ರಾದೇಶಿಕ ಸಂಪರ್ಕ ಸುಲಭವಾಗಲಿದೆ ಎಂದರು. ಬೆಲ್ಟ್ ಅಂಡ್ ರೋಡ್ ಯೋಜನೆಯನ್ನೂ ಚೀನಾ ಆರಂಭಿಸಿದ್ದು, ಇದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. 

‘ನಾಲ್ಕೂ ದೇಶಗಳು ಪರಸ್ಪರ ಸಹಕಾರವನ್ನು ಬಲಗೊಳಿಸಬೇಕಿದೆ. ಆಗ್ನೇಯ ಏಷ್ಯಾ, ಮಧ್ಯ ಏಷ್ಯಾ ನಡುವೆ ಸಂಪರ್ಕ ಬೆಳೆಯಬೇಕಿದೆ. ಇದರಿಂದ ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆ ಸಾಧ್ಯವಾಗುತ್ತದೆ’ ಎಂದು ವಾಂಗ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು