ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಂಬುಯಾನದ ನಡುವೆ ನಿಜದ್ದೇ ಧ್ಯಾನ

Published 28 ಏಪ್ರಿಲ್ 2024, 0:01 IST
Last Updated 28 ಏಪ್ರಿಲ್ 2024, 0:01 IST
ಅಕ್ಷರ ಗಾತ್ರ

ರೈಲು ಟಿಕೆಟ್‌ ಮೊಬೈಲ್‌ನಲ್ಲೇ ಬರುತ್ತೆ. ಏರ್ ಟಿಕೆಟ್‌ನ ಬೋರ್ಡಿಂಗ್ ಪಾಸ್ ಅನ್ನೂ ಮೊಬೈಲಲ್ಲೇ ಡೌನ್‌ಲೋಡ್ ಮಾಡಿ, ‘ಡಿಜಿಯಾತ್ರಾ’ ಆ್ಯಪ್‌ಗೆ ಹಾಕಿದರೆ ಸುಮ್ಮನೇ ಹೋಗಿ ಯಂತ್ರವೊಂದರ ಮುಂದೆ ನಿಂತರಾಯಿತು; ಅದು ನಮ್ಮ ಜಾತಕವನ್ನೆಲ್ಲಾ ಜಾಲಾಡಿ, ಕೆಲಕ್ಷಣಗಳಲ್ಲಿ ಭದ್ರತಾ ಗೇಟು ತೆರೆಯುತ್ತದೆ. ಪ್ರವಾಸಕ್ಕೆ ಹೋದಾಗ ಎಲ್ಲಿ ಉಳಿಯಬೇಕು, ಯಾವ ಹೋಟೆಲ್ಲಿನಲ್ಲಿ ಏನಿದೆ-ಏನಿಲ್ಲ, ಆ ಹೋಟೆಲಿನಿಂದ ನೀವು ನೋಡಬೇಕಾದ ಜಾಗಗಳು ಎಷ್ಟು ದೂರದಲ್ಲಿವೆ ಎನ್ನುವ ಮಾಹಿತಿ ಬೇಕೋ? ಅವುಗಳಿಗಾಗಿಯೇ ಮೊಬೈಲ್ ಆ್ಯಪ್‌ಗಳಿವೆ.

‘ಗೂಗಲ್ ಮ್ಯಾಪ್’ ಕೇವಲ ದಾರಿ ತೋರಿಸುವುದಷ್ಟೇ ಅಲ್ಲ; ಎಷ್ಟು ಟ್ರಾಫಿಕ್ ದಟ್ಟಣೆ ಇದೆ, ನೀವು ನೋಡಬೇಕಾದ ಮ್ಯೂಸಿಯಂ ಮುಚ್ಚಿದೆಯೇ, ತೆರೆದಿದೆಯೇ, ಟಿಕೆಟ್ ದರ ಎಷ್ಟು, ಅದರ ಸುತ್ತಮುತ್ತ ಇನ್ನೇನು ನೋಡಬಹುದು ಎನ್ನುವುದೆಲ್ಲವನ್ನೂ ತೆರೆದಿಟ್ಟು ಬಿಡುತ್ತದೆ. ಆದರೆ, ಈ ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಆಧಾರಿತವಾದ ತಂತ್ರಜ್ಞಾನದ ಉಪ ಉತ್ಪನ್ನಗಳೆಲ್ಲ ನಮ್ಮ ಪ್ರವಾಸದ ಅನುಭವವನ್ನು, ಅದರ ಗುಣಮಟ್ಟವನ್ನು ಹೆಚ್ಚಿಸಿವೆಯೇ?

ಪ್ರವಾಸ ಅಂದಾಕ್ಷಣ ದೈನಂದಿನ ಜಂಜಡಗಳಿಂದ, ಮೊಬೈಲ್ ಕರೆಗಳಿಂದ, ಸಂದೇಶಗಳ ‘ಠಣ್’ ಸದ್ದಿನಿಂದ ದೂರವಾಗಿ ‘ಆರಾಮವಾಗಿರುವುದು’. ಮತ್ತು ನದಿ-ಸಮುದ್ರಗಳ ಪ್ರಕೃತಿ ಸೌಂದರ್ಯವನ್ನು ಮನಸಾರೆ ಸವಿಯುವುದು; ವಿವಿಧ ತಿನಿಸುಗಳು ಮತ್ತು ಶಾಪಿಂಗ್ ಅನ್ನು ನೇರವಾಗಿ ಅನುಭವಿಸುವುದು. ಈಗೇನಾಗಿದೆ? ‘ಪ್ರವಾಸಿಗರ ಸ್ವರ್ಗ’ ಎಂಬ ಕಲ್ಪನೆಯು ವಾಸ್ತವವಾಗಬೇಕೆಂದೇನೂ ಇಲ್ಲ. ಇಂದಿನ ‘ಯಾಂತ್ರಿಕ ಬುದ್ಧಿಮತ್ತೆಯ ಯುಗ’ದಲ್ಲಿ ನಾವು ಕ್ಷಣಗಳಲ್ಲಿ ಪ್ರವಾಸ ಯೋಜಿಸಿ, ಎಲ್ಲವನ್ನೂ ಆ್ಯಪ್‌ಗಳ ಮೂಲಕವೇ ಒಂದು ಬಾರಿ ನೋಡಿ, ಬೇಕಿದ್ದರೆ ಮಾತ್ರ ಭೇಟಿ ಕೊಡಬಹುದು.

ಮಾರ್ಕೋ ಪೋಲೊನಂತಹ ಪ್ರವಾಸಿ 24 ವರ್ಷಗಳ ಕಾಲ ಸತತ ಪ್ರಯಾಣ ಮಾಡಿ ತನ್ನ ಪ್ರವಾಸದ ಅನುಭವಗಳನ್ನು ದಾಖಲಿಸಿದ್ದಾರೆ. ಆದರೆ ಈಗಿನ ತಂತ್ರಜ್ಞಾನದ ಯುಗದಲ್ಲಿ ಅಷ್ಟೆಲ್ಲ ಕಷ್ಟ ಪಡಬೇಕಿಲ್ಲ, ಎಲ್ಲವೂ ‘ಅಂಗೈ’ಯ ಸಾಧನದಲ್ಲೇ ಲಭ್ಯ ಎಂದುಕೊಳ್ಳುತ್ತೀರಾ? ‘ದೇಶ ಸುತ್ತು ಕೋಶ ಓದು’ ಎಂಬ, ಜ್ಞಾನಾರ್ಜನೆ-ಜೀವನಾನುಭವಗಳ ಗಳಿಕೆಯ ಅಂಗವಾಗಿರುವ ಪ್ರವಾಸವನ್ನು ಈ ರೀತಿ ‘ಯಾಂಬು’ ಆಧಾರದಲ್ಲಿ ಸವಿಯಲಾದೀತೇ?

ಎಲೈನ್ ಡಿ ಬೋಟನ್ ‘ಎ ವೀಕ್ ಅಟ್ ದಿ ಏರ್‌ಪೋರ್ಟ್’ ಎಂಬ ಪುಸ್ತಕ ಬರೆದಿದ್ದಾರೆ. ಲಂಡನ್ನಿನ ವಿಮಾನ ನಿಲ್ದಾಣದಲ್ಲಿನ ಏಳು ದಿನಗಳ ಅನುಭವವನ್ನು ಸೊಗಸಾಗಿ ಬರೆದಿದ್ದಾರೆ. ವಿಮಾನ ನಿಲ್ದಾಣವೇ ಏಕೆ? ವಿಮಾನ ನಿಲ್ದಾಣ ಆಧುನಿಕ ಪ್ರವಾಸಗಳು ರೂಪುಗೊಂಡು, ಅವುಗಳ ಬಣ್ಣಗಳನ್ನು ಗರಿಗೆದರಿಸುವ ಸ್ಥಳ ಎಂಬ ಕಾರಣಕ್ಕೆ. ಯಾಂಬುವಿನೊಡನೆ ಏನನ್ನಾದರೂ ನೋಡಿಬಿಡುವ ನಾವು ವಿಮಾನದ ಕಿಟಕಿಯಿಂದ ಮೋಡಗಳನ್ನು ಏಕಾಗಿ ನೋಡಿಯೇವು? ಎಂಬುದನ್ನು ಯೋಚಿಸಬೇಕಾಗಿದೆ. ಹಿಂದಿನ ಪ್ರವಾಸಗಳು ಸವಾಲುಗಳ ಜೊತೆಗೇ ದೀರ್ಘಕಾಲ ಉಳಿಯುವ ಅನುಭವಗಳನ್ನೂ ನೀಡುತ್ತಿದ್ದವಷ್ಟೆ. ಈಗ ಅಂಥ ಬಹುಕಾಲ ನೆನಪುಳಿಯುವ ಘಟನೆಗಳನ್ನು ಈ ಪ್ರವಾಸಗಳು ಕಟ್ಟಿಕೊಡುವುದು ಕಷ್ಟವೇ.

ಡಿ ಬೋಟನ್ ವಿಮಾನ ನಿಲ್ದಾಣದ ನಿರ್ಗಮನದ ಹಾಲ್‌ನಲ್ಲಿ ಭೇಟಿಯಾಗುವ ವ್ಯಕ್ತಿ ‘ಡೇವಿಡ್’ ನಾವ್ಯಾರೂ ಆಗಿರಬಹುದು. ಡೇವಿಡ್ ಸುಂದರ ತಾಣಕ್ಕೆ ತನ್ನ ರಜೆಯ ಬುಕಿಂಗ್ ಮಾಡಿದ್ದಾನೆ. ಪ್ರತಿ ದಿನದ ಹವಾಮಾನ ವರದಿಗಳನ್ನು ನೋಡಿದ್ದಾನೆ. ರೆಸಾರ್ಟ್‌ನ ವರ್ಚುವಲ್ ಪ್ರವಾಸ ಮಾಡಿ ತಾಳೆ ಮರಗಳ ತೋಟದಲ್ಲಿ ಪತ್ನಿಯೊಂದಿಗೆ ವಿಹರಿಸುವ, ಮಕ್ಕಳೊಂದಿಗೆ ಆಟವಾಡುವ ದೃಶ್ಯವನ್ನು ಮನಸ್ಸಿನಲ್ಲಿಯೇ ಕಲ್ಪಿಸಿ, ಕಾತುರದಿಂದ ಕಾಯುತ್ತಿದ್ದಾನೆ. ಈ ದೃಶ್ಯದೊಂದಿಗೆ ಚೆಕ್ ಇನ್ ಕೌಂಟರ್‌ನಲ್ಲಿ ಕಾಯುತ್ತಿರುವಾಗ ತನ್ನ ಕುಟುಂಬದ ಸಮಸ್ಯೆಗಳೂ, ಭಯ-ಆತಂಕಗಳೂ ಅವನೊಂದಿಗೆ ಬಂದಿವೆ!

ಹೀಗಾದಲ್ಲಿ, ನಾವು ಮನದಲ್ಲಿ ಕಲ್ಪಿಸಿಕೊಳ್ಳುವ, ಈಗ ಯಾಂಬು ಉತ್ಪ್ರೇಕ್ಷಿಸಿ ನಮ್ಮ ಮುಂದಿಟ್ಟಿರುವ ಪ್ರವಾಸದ ಆನಂದದ ಪರಿಕಲ್ಪನೆಯ ಜೊತೆಗೇ ನಮ್ಮ ಆತಂಕ-ಭಯ-ಜೀವನದ ಸಮಸ್ಯೆಗಳೂ ನಮ್ಮೊಂದಿಗೇ ಪ್ರವಾಸಕ್ಕೆ ಬರುತ್ತವೆ.

ಪ್ರವಾಸದ ಅನುಭವವನ್ನು ನಾವು ಅವಲೋಕಿಸಲು ಕಲಿತರೆ, ಜೀವನದ ಸಮಸ್ಯೆಗಳಿಗೂ ಉತ್ತರ ದೊರಕಲು ಸಾಧ್ಯವಿದೆ. ಯಾವುದೇ ಸಂಪರ್ಕತಾಣವನ್ನು ನಾವು ಆದಷ್ಟು ಬೇಗ ದಾಟಿ ನಮ್ಮ ಗುರಿಯೆಡೆಗೆ ಧಾವಿಸುತ್ತೇವೆ. ನಿಲ್ದಾಣಗಳಲ್ಲಿ ಕಾಯುವುದೆಂದರೆ, ಪಯಣಿಸುವುದೆಂದರೆ ಗೂಗಲ್ ಮ್ಯಾಪ್‌ನಲ್ಲಿ ಇನ್ನೆಷ್ಟು ಹೊತ್ತು ಎಂದು ಲೆಕ್ಕ ಹಾಕುವುದೇ ನಮ್ಮ ಪರಿ! ಆದರೆ ರೋಚಕ-ತೀವ್ರ-ಭಾವನಾತ್ಮಕ ಅನುಭವ ನಿಲ್ದಾಣಗಳಲ್ಲೇ ಸಿಗುತ್ತವೆ ಎನ್ನುತ್ತಾನೆ ಡಿ ಬೋಟನ್. ವಿಮಾನದ ಸಹಪ್ರಯಾಣಿಕ, ಆಗಮನದ ಹಾಲ್‌ನಲ್ಲಿ ಕಾಣುವ ಪುನರ್ಮಿಲನದ ದೃಶ್ಯ, ರೈಲು ತಪ್ಪಿಸಿಕೊಳ್ಳುವ ಅನುಭವ, ಯಾವುದೋ ಒಂದು ಬೀದಿಯಲ್ಲಿ ಇದ್ದಕ್ಕಿದ್ದಂತೆ ಕಂಡ ಒಂದು ಸ್ವಾರಸ್ಯಕರ ಫಲಕ ಎಲ್ಲವೂ ಪ್ರವಾಸದ ನಿಜ ಅನುಭವವಾಗಲು ಸಾಧ್ಯವಿದೆ.

ಮನುಷ್ಯರಾಗಿ ಪ್ರತಿ ಪ್ರವಾಸದ ನಂತರ ನಾವು ಕೇಳಿಕೊಳ್ಳಬಹುದಾದ ಪ್ರಶ್ನೆಗಳಿವೆ- ಯಾವುದು ನಮಗೆ ಉದ್ವೇಗವನ್ನು ತಂದಿತು; ದೈನಂದಿನ ಜೀವನದಲ್ಲಿ ನಾವು ನೋಡಲಾಗದ ಯಾವುದನ್ನು ನೋಡಿದೆವು; ‘ಮನುಷ್ಯತ್ವ’ ಯಾವ ಮಾದರಿಯನ್ನು ನಾವು ಪ್ರವಾಸದಲ್ಲಿ ಕಂಡೆವು. ನಾವೆಷ್ಟು ಆ ಕ್ಷಣದಲ್ಲಿ ಮಗ್ನರಾಗಿ, ಎಲ್ಲ ಜಂಜಡಗಳನ್ನೂ ಮರೆತು ಆ ಪ್ರವಾಸವನ್ನು ಸವಿಯುತ್ತೇವೆ ಎನ್ನುವುದೇ ಮುಖ್ಯ. ಇಂಥ ಧ್ಯಾನ ಮಾತ್ರ ವಾಸ್ತವಿಕ ಅನುಭವವನ್ನು ಸಾಧ್ಯವಾಗಿಸುತ್ತದೆ; ಯಾಂಬುವನ್ನು ಮೀರಿಸುತ್ತದೆ. ಪ್ರವಾಸದ ಕೊನೆಗೆ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ, ಪ್ರವಾಸ ಹೇಗೆ ನಮ್ಮನ್ನು ಕೊಂಚವಾದರೂ ಭಿನ್ನವಾಗಿ ಬದುಕುವಂತೆ ಸಾಧ್ಯ ಮಾಡಬಲ್ಲದು? ನಮ್ಮ ಅರಿವಿಗೇ ಬಾರದಂತೆ ಪ್ರವಾಸದ ಉದ್ಯಾನ ಭೇಟಿಯ ನಂತರ, ನಮ್ಮ ಮನೆಯ ಸುತ್ತಮುತ್ತಲಲ್ಲೇ ನಾವು ಗಮನಿಸುವ ಮರಗಳ ಆಕೃತಿಯ ಬಗೆಗಿನ ಕುತೂಹಲದಂತಹ ಸಣ್ಣ ಬದಲಾವಣೆಯೂ ಇರಬಹುದು.

ಯಾಂಬುವಿನೊಂದಿಗೆ ಓಡುವ ಯುಗದಲ್ಲಿ, ನಿಧಾನವಾಗಿ ನೋಡುವುದೇ ಹೊಸ ಅನುಭವ! ಮತ್ತೊಬ್ಬರೊಡನೆ ಮಾತನಾಡುವುದು. ರಜೆಯಲ್ಲಿ ಪ್ರವಾಸ ಎಲ್ಲಿಗೇ ಆಗಲಿ, ಯಾಂಬುವಿನೊಂದಿಗೆ ಆನಂದಿಸಬಹುದು, ಆದರೆ ಅದರ ಬಳಕೆಗೆ ಮಿತಿ ಬೇಕಾಗುತ್ತದೆ. ಇಲ್ಲವಾದರೆ, ಬದುಕಿನ, ಪ್ರವಾಸದ ಅಮೂಲ್ಯ ಕ್ಷಣಗಳನ್ನು ನಾವು ಮಿಸ್ ಮಾಡಿಕೊಂಡೇವು. ಪ್ರವಾಸವು ಕೂಡ ‘ಯಾಂತ್ರಿಕ’ವಾಗದಿರಲು, ಜೀವನಕ್ಕೆ ಬಣ್ಣ ತುಂಬಲು ಆ ಕ್ಷಣದಲ್ಲಿ ಬದುಕಬೇಕು.

ರಿಯಾಲಿಟಿಗಿಂತ ನಿಜ!

ಒಮ್ಮೆ ಉಜ್ಜಯಿನಿಯ ಪ್ರಸಿದ್ಧ ಭಸ್ಮ ಆರತಿಯನ್ನು ಅರ್ಧರಾತ್ರಿಯಲ್ಲಿ ಹೋಗಿ ಬೆಳಗಿನ ಜಾವದವರೆಗೆ ನೂಕು ನುಗ್ಗಲಿನಲ್ಲಿ ನಿಂತು ಇಣುಕಿ ನೋಡಿ ಹೊರ ಬಂದಿದ್ದೆ. ಮಧ್ಯಾಹ್ನ ಕಾರಿಡಾರ್‌ನಲ್ಲಿ ಓಡಾಡುತ್ತಿರುವಾಗ ₹ 200 ಕ್ಕೆ ‘ವರ್ಚುವಲ್ ರಿಯಾಲಿಟಿಯಲ್ಲಿ ಭಸ್ಮ ಆರತಿ’ ಎಂಬ ಬೋರ್ಡ್ ಕಾಣಿಸಿತು. ಸಾದಾ ಕೊಠಡಿಯಲ್ಲಿ ಹತ್ತಾರು ಕುರ್ಚಿಗಳು. ಕುರ್ಚಿಯಲ್ಲಿ ಕೂರಿಸಿ ‘ವಿ.ಆರ್.’ ಸಾಧನ ಕಣ್ಣಿಗೆ. ಮುಂದಿನ 20 ನಿಮಿಷ ಮಹಾಕಾಲನ ಗರ್ಭಗುಡಿಯೊಳಗೆ! ಡೈರೆಕ್ಟ್ ಎಂಟ್ರಿ! ನೂಕು ನುಗ್ಗಲೇ ಇಲ್ಲ. ನನಗಾಗೇ ಮಹಾಕಾಲ ಭಸ್ಮ ಆರತಿ ಮಾಡಿಸಿಕೊಳ್ಳುತ್ತಿದ್ದಾನೆ ಎಂಬಂತೆ! ನಿಜ ದರ್ಶನದಲ್ಲಿ ‘ಭಾವ’ ವೊಂದು ಬಿಟ್ಟರೆ ಮಿಕ್ಕೆಲ್ಲವೂ ‘ವರ್ಚುವಲ್’ ನಲ್ಲಿ ‘ರಿಯಾಲಿಟಿ’ ಗಿಂತ ನಿಜ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT