ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Apple ಹೊಸ ಸರಣಿಯ ಗ್ಯಾಜೆಟ್‌ಗಳ ಲೋಕಾರ್ಪಣೆ ಇಂದು; ಕನ್ನಡದಲ್ಲೂ ‘ಸಿರಿ‘ ಲಭ್ಯ!

Published : 9 ಸೆಪ್ಟೆಂಬರ್ 2024, 11:08 IST
Last Updated : 9 ಸೆಪ್ಟೆಂಬರ್ 2024, 11:08 IST
ಫಾಲೋ ಮಾಡಿ
Comments

ಸ್ಯಾನ್‌ಫ್ರಾನ್ಸಿಸ್ಕೊ: ಆ್ಯಪಲ್ ಕಂಪನಿಯ ವಾರ್ಷಿಕ ಸಮಾವೇಶ ಇಂದು (ಸೆ. 9)ರಂದು ರಾತ್ರಿ 10.30ಕ್ಕೆ ಆರಂಭವಾಗಲಿದ್ದು, ಐಫೋನ್‌, ವಾಚ್‌ ಸೇರಿದಂತೆ ಹೊಸ ಆವೃತ್ತಿಯ ಗ್ಯಾಜೆಟ್‌ಗಳನ್ನು ಕಂಪನಿ ಪರಿಚಯಿಸುವ ಸಾಧ್ಯತೆ ಇದೆ.

ಕುಪರ್ಟಿನೊ ಮೂಲದ ಆ್ಯಪಲ್ ಈ ಬಾರಿ ಯಾವೆಲ್ಲಾ ಹೊಸ ಸಾಧನಗಳು ಹಾಗೂ ಆಪರೇಟಿಂಗ್ ಸಿಸ್ಟಂನಲ್ಲಿ ತರಲಿರುವ ಹೊಸ ಬದಲಾವಣೆಗಳ ಕುರಿತು ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ.

ಆ್ಯಪಲ್‌ ತನ್ನ 2024ರ ಸಮಾವೇಶಕ್ಕೆ ‘ಇಟ್ಸ್ ಗ್ಲೋಟೈಂ’ ಎಂಬ ಶೀರ್ಷಿಕೆಯನ್ನು ನೀಡಿದೆ. ಆ್ಯಪಲ್‌ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಕಾರ್ಯಕ್ರಮವು ಆ್ಯಪಲ್‌ ಅಂತರ್ಜಾಲ ತಾಣ ಹಾಗೂ ಯುಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲಿದೆ.

ಯಾವೆಲ್ಲ ಹೊಸ ಸಾಧನಗಳ ಬಿಡುಗಡೆ?

ಆ್ಯಪಲ್‌ ಆರಂಭವಾದಾಗಿನಿಂದಲೂ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ವಾರ್ಷಿಕ ಸಮಾವೇಶ ಆಯೋಜಿಸುತ್ತಲೇ ಬಂದಿದೆ. ಈ ಕಾರ್ಯಕ್ರಮದಲ್ಲಿ ಹೊಸ ಸರಣಿಯ ಗ್ಯಾಜೆಟ್‌ಗಳನ್ನು ಅದು ಬಿಡುಗಡೆಗೊಳಿಸುವುದು ವಾಡಿಕೆಯಾಗಿ ನಡೆದುಕೊಂಡು ಬಂದಿದೆ. ಈ ಬಾರಿಯೂ ಹೊಸ ಮಾದರಿಯ ಮೊಬೈಲ್ ಹಾಗೂ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಆ್ಯಪಲ್ ಈ ಬಾರಿ ಐಫೋನ್‌ 16 ಆವೃತ್ತಿಯನ್ನು ಬಿಡುಗಡೆ ಮಾಡಲಿದೆ ಎಂದು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಇದು ನಾಲ್ಕು ಮಾದರಿಗಳಲ್ಲಿ ಲಭ್ಯ. ಐಫೋನ್ 16, 16 ಪ್ಲಸ್, 16 ಪ್ರೊ ಹಾಗೂ 16 ಪ್ರೊ ಮ್ಯಾಕ್ಸ್‌ ಬಿಡುಗಡೆಯಾಗಲಿರುವ ಹೊಸ ಫೋನ್‌ಗಳು. ಈ ಬಾರಿ ಫೋನ್‌ಗಳ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದ ಹಾರ್ಡ್‌ವೇರ್‌ಗಳನ್ನು ಬಳಸಲಾಗಿದೆ ಎಂದೆನ್ನಲಾಗಿದೆ.

ಐಫೋನ್ 16 ಸ್ಮಾರ್ಟ್‌ಫೋನ್‌ 6.1 ಇಂಚುಗಳ ಪರದೆ, 16 ಪ್ಲಸ್‌ ಆವೃತ್ತಿಯು 6.7ಇಂಚುಗಳ ಪರದೆಯನ್ನು ಹೊಂದಿರಲಿದೆ. ಫೋನ್‌ನ ಹೊರ ಕವಚವು ಏರೋಸ್ಪೇಸ್‌ ಗುಣಮಟ್ಟದ ಅಲ್ಯೂಮಿನಿಯಂನಿಂದ ಸಿದ್ಧಪಡಿಸಲಾಗಿದೆ. ಈ ಬಾರಿ ಕ್ಯಾಮೆರಾವನ್ನು ಲಂಭವಾಗಿ ಜೋಡಿಸುವ ಮೂಲಕ ಹಿಂದಿನ ಮೂರು ಆವೃತ್ತಿಗಳ ವಿನ್ಯಾಸವನ್ನು ಆ್ಯಪಲ್ ಬದಲಿಸಿದೆ ಎಂದೆನ್ನಲಾಗಿದೆ. 

ಎಲ್ಲಾ ರೀತಿಯ ಬೆಳಕಿನಲ್ಲೂ ಸ್ಪಷ್ಟ ಚಿತ್ರಗಳನ್ನು ದಾಖಲಿಸಬಲ್ಲ ಲೆನ್ಸ್ ಹಾಗೂ ಕ್ಯಾಮೆರಾ ಹೊಂದಿದೆ. ಇದರೊಂದಿಗೆ ಚಿತ್ರವನ್ನು ಕ್ಲಿಕ್ಕಿಸಲು ಪ್ರತ್ಯೇಕ ಗುಂಡಿಯನ್ನು ಹಾರ್ಡ್‌ವೇರ್‌ನಲ್ಲೇ ನೀಡಲಾಗಿದೆ. ಐಫೋನ್‌ಗಳಲ್ಲಿ ಆ್ಯಪಲ್‌ನ ಎ16 ಸಿಲಿಕಾನ್ ಚಿಪ್‌ ಅಳವಡಿಸಲಾಗಿದೆ. 

ಪ್ರೊ ಮಾದರಿಯ ಐಫೋನ್‌ಗಳಲ್ಲಿ ಇನ್ನಷ್ಟು ಬದಲಾವಣೆ ತರಲಾಗಿದೆ. ಐಫೋನ್ 16 ಪ್ರೊ ಹಾಗೂ ಪ್ರೊ ಮ್ಯಾಕ್ಸ್‌ ಫೋನ್‌ಗಳು ಕ್ರಮವಾಗಿ 6.3 ಹಾಗೂ 6.9 ಇಂಚುಗಳ ಪರದೆ ಹೊಂದಿವೆ. ಈ ಹಿಂದಿನ ಐಫೋನ್ 15 ಪ್ರೊ ಹಾಗೂ ಪ್ರೊ ಮ್ಯಾಕ್ಸ್‌ ಕ್ರಮವಾಗಿ 6.1 ಹಾಗೂ 6.7 ಇಂಚುಗಳನ್ನು ಹೊಂದಿದ್ದವು. ಹೀಗಾಗಿ ದೊಡ್ಡ ಪರದೆ, ದೊಡ್ಡ ಬ್ಯಾಟರಿ ಬಳಕೆದಾರರಿಗೆ ಸಿಗಲಿದೆ. ಪ್ರೊ ಮಾದರಿಯ ಫೋನ್‌ಗಳ ಕ್ಯಾಮೆರಾಗಳ ಹಾರ್ಡ್‌ವೇರ್‌, ಸೆನ್ಸರ್‌ಗಳು ಬೇರೆಯೇ ಆಗಿವೆ. ಗುಣಮಟ್ಟದ ಚಿತ್ರ ಹಾಗೂ ವಿಡಿಯೊ ಚಿತ್ರೀಕರಣ ಇದರಿಂದ ಸಾಧ್ಯ ಎಂದೆನ್ನಲಾಗಿದೆ.

ಕನ್ನಡದಲ್ಲೂ ಸಿರಿ ಲಭ್ಯ?

ಈ ಎಲ್ಲಾ ಫೋನ್‌ಗಳೂ ಆಧುನಿಕ ಕೃತಕ ಬುದ್ಧಿಮತ್ತೆಯನ್ನು ಹೊಂದಿವೆ ಎನ್ನುವುದು ವಿಶೇಷ. ಇದರ ಭಾಗವೇ ಆಗಿರುವ ಆ್ಯಪಲ್‌ನ ‘ಸಿರಿ’ ಕೂಡಾ ಕೃತಕ ಬುದ್ಧಿಮತ್ತೆ ಮೂಲಕ ಹೊಸ ಸ್ವರೂಪ ಪಡೆದಿರುವ ಸಾಧ್ಯತೆ ಇದೆ. ಧ್ವನಿಯು ಭಾವನೆಗಳಿಂದ ಕೂಡಿದ್ದು, ಮನುಷ್ಯರೊಂದಿಗಿನ ಸಂವಹನಕ್ಕೆ ಸರಿಸಮಾನವಾಗಿದೆ ಎಂದೇ ಬಿಟಾ ಆವೃತ್ತಿ ಬಳಕೆದಾರರು ಹೇಳಿದ್ದಾರೆ.

ಆ್ಯಪಲ್‌ನ ಐಒಎಸ್‌ 18 ಬಿಟಾ ಈಗಾಗಲೇ ಬಿಡುಗಡೆಯಾಗಿದ್ದು, ಐಫೋನ್ ಬಳಕೆದಾರರಲ್ಲಿ ಹೊಸ ಹುರುಪು ಮೂಡಿಸಿದೆ. ಈ ಬಾರಿ ಕನ್ನಡವನ್ನೂ ಒಳಗೊಂಡು 9 ಭಾರತೀಯ ಭಾಷೆಗಳಲ್ಲಿ ಸಿರಿ ಲಭ್ಯ. ತೆಲುಗು, ಬಂಗಾಳಿ, ಗುಜರಾತಿ, ಹಿಂದಿ, ಮಲಯಾಳ, ಮರಾಠಿ, ಪಂಜಾಬಿ ಹಾಗೂ ತಮಿಳು ಭಾಷೆಗಳಲ್ಲೂ ಸಿರಿ ಪ್ರತಿಕ್ರಿಯಿಸಲಿದೆ ಎಂಬುದು ಆ್ಯಪಲ್‌ ಬಳೆದಾರರಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಈ ಎಲ್ಲಾ ಕುತೂಹಲಕ್ಕೂ ಸೋಮವಾರ ರಾತ್ರಿ ನಡೆಯಲಿರುವ ಸಮಾವೇಶ ತೆರೆಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT