ದೇಶಿ ವೈದ್ಯಕೀಯ ಆವಿಷ್ಕಾರಗಳು

7

ದೇಶಿ ವೈದ್ಯಕೀಯ ಆವಿಷ್ಕಾರಗಳು

Published:
Updated:

ವೈದ್ಯಕೀಯ ಕ್ಷೇತ್ರದಲ್ಲಿ ನಿತ್ಯ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಕೃತಕ ಅಂಗಾಂಗಳಿಂದ ಹಿಡಿದು ಕೃತಕ ಬುದ್ಧಿಮತ್ತೆವರೆಗೆ ಎಲ್ಲಕಡೆ ಹೊಸ ತಂತ್ರಜ್ಞಾನ ಬಳಕೆಯಾಗುತ್ತಿದೆ. ವೈದ್ಯಕೀಯ ಚಿಕಿತ್ಸೆಗೆ ನೆರವಾಗುವ ಕೆಲವು ಸಾಧನಗಳನ್ನು ಭಾರತದ ಹಲವು ಸಂಸ್ಥೆಗಳು, ಸ್ಥಳೀಯವಾಗಿಯೇ ತಯಾರಿಸಿವೆ. ಕೆಲವೊಂದು ಸಾಧನಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ...

ಕಿವಿ ಸೋಂಕು ಪತ್ತೆಗೆ ಸಾಧನ
ಇಯರ್ ಇನ್ಫೆಕ್ಷನ್ (ಕಿವಿ ಸೋಂಕು) ಎಂಬುದು ಚಿಕ್ಕ ಸಮಸ್ಯೆಯಾಗಿ ಕಂಡರೂ, ನಿರ್ಲಕ್ಷಿಸಿದರೆ ಪ್ರಾಣಕ್ಕೆ ಕುತ್ತಾಗಬಹುದು. ಈ ಸೋಂಕು ಇತರ ಅಂಗಾಂಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ಕೂಡಲೇ ಪತ್ತೆ ಮಾಡಿ, ಅದರ ವಿವರಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿರುವ ವೈದ್ಯರಿಗೆ ಆನ್‌ಲೈನ್‌ನಲ್ಲೇ ಕಳುಹಿಸುವಂತಹ ‘ಇಯರ್ ಸ್ಕ್ರೀನಿಂಗ್ ಡಿವೈಸ್‌’ ಸಾಧನವನ್ನು ಬೆಂಗಳೂರಿನ ‘ಇಕಾರಸ್ ನೋವಾ’ ಸಂಸ್ಥೆ ತಯಾರಿಸಿದೆ.

ಇದರ ಸಹಾಯದಿಂದ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಕಿವಿಗಳನ್ನು ಪರೀಕ್ಷಿಸಲಾಗಿದೆ. ಇದನ್ನು ಕಿವಿಗೆ ಇಯರ್‌ಫೋನ್‌ ಇಟ್ಟುಕೊಳ್ಳುವಂತೆ ಇಟ್ಟುಕೊಂಡರೆ ಸಾಕು, ಕಿವಿಯೊಳಗಿನ ಚಿತ್ರಗಳನ್ನು ಸೆರೆಹಿಡಿದು ಸಾಧನದೊಂದಿಗೆ ಸಂಪರ್ಕ ಹೊಂದಿರುವ ಸರ್ವರ್‌ಗೆ ಕಳುಹಿಸುತ್ತದೆ. ಸರ್ವರ್‌ನಲ್ಲಿ ಸಂಗ್ರಹವಾದ ಮಾಹಿತಿಯನ್ನು ವೈದ್ಯರಿಗೆ ಕಳುಹಿಸಬಹುದು. ಈಗಾಗಲೇ ಇದರ ಸಹಾಯದಿಂದ ದೇಶದಲ್ಲಿನ ಸುಮಾರು 4 ಲಕ್ಷ ಜನರ ಕಿವಿಗಳನ್ನು ಪರೀಕ್ಷಿಸಲಾಗಿದೆ. ಇತರ ದೇಶಗಳಿಗೂ ಇದನ್ನು ಪೂರೈಸಲು ಸಿದ್ಧತೆ ನಡೆಸಲಾಗುತ್ತಿದೆ.

ಸ್ತನ ಸ್ಕ್ಯಾನರ್
ಮಹಿಳೆಯರನ್ನು ಹೆಚ್ಚು ಕಾಡುತ್ತಿರುವ ರೋಗ ಸ್ತನ ಕ್ಯಾನ್ಸರ್. ದೇಶದಲ್ಲಿನ ಮಧ್ಯವಯಸ್ಸಿನ ಮಹಿಳೆಯರ ಪೈಕಿ ಸುಮಾರು 20 ಕೋಟಿ ಮಹಿಳೆಯರು ಇದರಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಸ್ತನ ಕ್ಯಾನ್ಸರ್ ಪತ್ತೆಹಚ್ಚುವ ಹಲವು ಸಾಧನಗಳು ಪ್ರಸ್ತುತ ಬಳಕೆಯಲ್ಲಿವೆ. ತುಂಬಾ ಸುಲಭವಾಗಿ ಪತ್ತೆಹಚ್ಚುವ ಸಾಧನವನ್ನು ಮಹಾರಾಷ್ಟ್ರದ ‘ಯೂ ಇ ಲೈಫ್ ಸೈನ್ಸೆಸ್’ ಎಂಬ ತಯಾರಿಸಿದೆ. ಇದಕ್ಕೆ ‘ಐಬ್ರೆಸ್ಟ್ ಎಕ್ಸಾಂ’ ಎಂದು ಹೆಸರಿಡಲಾಗಿದೆ.

ಇದರ ಸಹಾಯದಿಂದ ಕೇವಲ ₹65ನಲ್ಲಿ ಪರೀಕ್ಷೆ ಮಾಡಬಹುದು. ಈ ಸಾಧನವನ್ನು ಸೂಕ್ಷ್ಮವಾಗಿ ಸ್ತನಗಳಿಗೆ ತಾಕಿಸಿದರೆ ಸಾಕು, ಸ್ಕ್ಯಾನ್ ಮಾಡುತ್ತದೆ. ಪುಟ್ಟ ಗಂಟುಗಳಿಂದ ಹಿಡಿದು ಯಾವುದೇ ಲೋಪವಿದ್ದರೂ ತಿಳಿಸುತ್ತದೆ. ಬಳಸುವುದು ಕೂಡ ಸುಲಭ. ಸ್ಕ್ಯಾನಿಂಗ್ ಸಮಯದಲ್ಲಿ ಯಾವುದೇ ನೋವು ಆಗುವುದಿಲ್ಲ. ಈಗಾಗಲೇ ಸುಮಾರು 25 ಆಫ್ರಿಕಾ ರಾಷ್ಟ್ರಗಳು ಈ ಪರಿಕರ ಪೂರೈಸುವಂತೆ ಕೇಳಿಕೊಂಡಿವೆ. ಅಮೆರಿಕದಲ್ಲೂ ಬಳಸಲು ಎಫ್‌ಡಿಎ ಅನುಮತಿ ನೀಡಿದೆ.


**

 ಬಡವರ ಇಸಿಜಿ
ದೇಶದಲ್ಲಿ 2020ರ ಹೊತ್ತಿಗೆ ಹೆಚ್ಚಿನ ಸಾವುಗಳಿಗೆ ಹೃದ್ರೋಗ ಕಾರಣವಾಗಲಿದೆ ಎಂದು ಹಲವು ಸಂಶೋಧನೆಗಳು ಎಚ್ಚರಿಸಿವೆ.  ವಯಸ್ಸಿನ ಭೇದವೆಣಿಸದೆ ಹೃದಯ ಕಾಯಿಲೆಗಳು ದಾಳಿ ಮಾಡುತ್ತಿವೆ. ದೊಡ್ಡ ಆಸ್ಪತ್ರೆಗಳಲ್ಲಿ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳೋಣ ಎಂದರೆ, ಕನಿಷ್ಠ ₹ 2,000 ಆದರೂ ಖರ್ಚು ಮಾಡಬೇಕು. ಜನಸಾಮಾನ್ಯರಿಗೆ ಈ ಮೊತ್ತವೂ ಭಾರವೇ. ಹೀಗಾಗಿಯೇ ನೊಯಿಡಾದ ಹೆಲ್ತ್‌ಕೇರ್ ನವೋದ್ಯಮ ಅಗಸ್ತಾ, ಬೆಂಕಿಪೊಟ್ಟಣದಷ್ಟು ಗಾತ್ರದ ಇಸಿಜಿ ಮಾನಿಟರ್‌ ತಯಾರಿಸಿದೆ.

ಇದಕ್ಕೆ ‘ಸಂಕೇತ್ ಲೈಫ್’ ಎಂದು ಹೆಸರಿಟ್ಟಿದೆ. ಇದನ್ನು ತಂತಿರಹಿತವಾಗಿ ಸ್ಮಾರ್ಟ್‌ಫೋನ್‌ಗೆ ಜೋಡಿಸಬಹುದು. ಫೋನ್‌ ಪರದೆ ಮೇಲೆ ಇಸಿಜಿ ಗ್ರಾಫ್ ಕಾಣಿಸುತ್ತದೆ. ಇದರ ಸಹಾಯದಿಂದ ಕೇವಲ ₹5 ಖರ್ಚಿನಲ್ಲಿ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಇಸಿಜಿ ವರದಿಯನ್ನು ಇಮೇಲ್ ಅಥವಾ ಬ್ಲೂಟೂತ್ ಮೂಲಕ ವೈದ್ಯರೊಂದಿಗೆ ಹಂಚಿಕೊಳ್ಳಬಹುದು.

ಈಚೆಗಷ್ಟೇ ಟಾಟಾ ಟ್ರಸ್ಟ್ ಜತೆ ಅಗಸ್ತಾ ಒಪ್ಪಂದ ಮಾಡಿಕೊಂಡಿದ್ದು, ತ್ರಿಪುರದಲ್ಲಿನ ಕೆಲವು ಕ್ಲಿನಿಕ್‌ಗಳಿಗೆ ಇಸಿಜಿ ಮಾನಿಟರ್‌ಗಳನ್ನು ಪೂರೈಸಲು ತಯಾರಿ ನಡೆಸುತ್ತಿದೆ.


***

 ನೇತ್ರ ರಕ್ಷಣೆಗೆ ‘ತ್ರಿನೇತ್ರ’
ಶೇ 80ರಷ್ಟು ದೃಷ್ಟಿದೋಷಗಳನ್ನು ಚಿಕಿತ್ಸೆ ಮೂಲಕ ಪರಿಹರಿಸಬಹುದು ಎಂದು ಹಲವು ಅಧ್ಯಯನಗಳು ತಿಳಿಸಿವೆ. ಜನರಲ್ಲಿ ಜಾಗೃತಿ ಇಲ್ಲದಿರುವುದು, ಖರ್ಚು ಭರಿಸುವ ಸಾಮರ್ಥ್ಯ ಇಲ್ಲದಿರುವುದು… ಮುಂತಾದ ಕಾರಣಗಳಿಂದ ಹಲವರು ಚಿಕಿತ್ಸೆಯಿಂದ ದೂರ ಉಳಿಯುತ್ತಿದ್ದಾರೆ. ಇಂತಹವರಿಗೆ ‘ತ್ರಿನೇತ್ರ’ ವರವಾಗಲಿದೆ. ಇದೊಂದು ‘ಕಂಫರ್ಟ್ ಸ್ಕ್ರೀನಿಂಗ್ ಮಷಿನ್’.

ರಾಜ್ಯದ ‘ಫೋರಸ್ ಹೆಲ್ತ್’ ಎಂಬ ನವೋದ್ಯಮ ಇದನ್ನು ತಯಾರಿಸಿದೆ. ಇದರ ಸಹಾಯದಿಂದ ಒಂದೇ ಬಾರಿಗೆ ಗ್ಲುಕೊಮಾ, ಕ್ಯಾಟ್‌ರಾಕ್ಟ್,  ರೆಟಿನೊಪತಿ, ಕಾರ್ನಿಯಾದಂತಹ  ಸಮಸ್ಯೆಗಳನ್ನು ಪತ್ತೆಹಚ್ಚಬಹುದು. ಪರೀಕ್ಷೆಗಳ ಫಲಿತಾಂಶವನ್ನು ವಿಶ್ಲೇಷಿಸಿ ವರದಿ ತಯಾರಿಸುವ ಕೆಲಸ ಕೂಡ ಈ ಸಾಧನದ್ದೇ. ಈ ಪರಿಕರ ಈಗಾಗಲೇ 25 ರಾಷ್ಟ್ರಗಳಲ್ಲಿ ಬಳಕೆಯಾಗುತ್ತಿದೆ. ಈವರೆಗೆ ಸುಮಾರು 20 ಲಕ್ಷ ಮಂದಿ ಬಳಸಿದ್ದಾರೆ.

***

ಮಕ್ಕಳ ರಕ್ಷಣೆಗೆ

ತಾಯಿ ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಅನೇಕ ಶಿಶುಗಳು ‘ಅಫಿಕ್ಸಿಯಾ’ ಎಂಬ ಸಮಸ್ಯೆಯೊಂದಿಗೆ ಜನಿಸುತ್ತಿವೆ.  ಈ ಸಮಸ್ಯೆ ಎದುರಿಸುತ್ತಿರುವ ಶಿಶುಗಳ ದೇಹಕ್ಕೆ ಆಮ್ಲಜನಕ ಪೂರೈಕೆ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ಶಿಶುಗಳು ಮರಣಿಸುವ ಸಾಧ್ಯತೆಯೂ ಇರುತ್ತದೆ. ಇದಕ್ಕೆ ತಕ್ಷಣ ಚಿಕಿತ್ಸೆ ಕೊಡಿಸಬೇಕೆಂದರೆ, ಈ ವರೆಗೆ ಸುಮಾರು ₹15 ಲಕ್ಷದ ಸಾಧನವನ್ನು ಬಳಸಬೇಕಿತ್ತು. ಅದು ಕೂಡ ಕೆಲವೊಂದು ಆಸ್ಪತ್ರೆಗಳಲ್ಲಿ ಸಿಗುತ್ತಿತ್ತು.

ಈ ಶಿಶುಗಳ ರಕ್ಷಣೆಗೆಂದೇ  ‘ಮಿರಾ ಕ್ರೆಡಲ್ ನಿಯೊನೇಟ್ ಕೂಲರ್’ ಎಂಬ ಸಾಧನವನ್ನು ತಯಾರಿಸಲಾಗಿದೆ. ಕೇವಲ ₹15 ಸಾವಿರದಲ್ಲಿ ಇದರ ಸೇವೆ ಪಡೆಯಬಹುದು. ತಮಿಳುನಾಡಿನ ವೆಲ್ಲೂರು ವೈದ್ಯಕೀಯ ಕಾಲೇಜಿನ ನಿಯೊನಾಟಾಲಜಿ ವಿಭಾಗದ ಮುಖ್ಯಸ್ಥ ನಿರಂಜನ್ ಥಾಮಸ್ ಅವರು ಇದನ್ನು ತಯಾರಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರು ಅಧ್ಯಯನ ಮಾಡಿರುವ ಕೆಲವು ಸಾಧನಗಳಿಂದ ಸ್ಪೂರ್ತಿ ಪಡೆದು ಇದನ್ನು ತಯಾರಿಸಿದ್ದಾರೆ. 

ಇದರಲ್ಲಿ ಐಸ್ ಜೆಲ್‌ಪ್ಯಾಕ್‌ಗಳನ್ನು ಬಳಸುತ್ತಾರೆ. ತೊಟ್ಟಿಯಂತಹ ವಸ್ತುವಿನಲ್ಲಿ ಈ ಪ್ಯಾಕ್‌ಗಳನ್ನು ತುಂಬಿಸಿ, ಕೂಲರ್ ರೀತಿ ಮಾಡಲಾಗಿದೆ. ಮಗುವನ್ನು ಇದರಲ್ಲಿ ಮಲಗಿಸಿದರೆ ದೇಹ ಉಷ್ಣಾಂಶ ಸ್ಥಿರತೆಯಲ್ಲಿ ಇಡುತ್ತದೆ. ಈ ಯಂತ್ರವನ್ನು 11 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈವರೆಗೆ 2 ಲಕ್ಷ ಶಿಶುಗಳ ಜೀವ ರಕ್ಷಣೆ ಮಾಡಿದೆ ಈ ಸಾಧನ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !