ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಮೀಟಿಂಗಿಗೆ ಹೊಸ ಟೂಲ್ 'ಫೇಸ್‌ಬುಕ್‌ನಿಂದ ಮೆಸೆಂಜರ್ ರೂಮ್' ಬಳಕೆ ಹೇಗೆ?

Last Updated 1 ಮೇ 2020, 5:45 IST
ಅಕ್ಷರ ಗಾತ್ರ

ಮನೆಯಿಂದಲೇ ಕಚೇರಿ ಕೆಲಸ ನಿಭಾಯಿಸುವಲ್ಲಿ ಮತ್ತು ಕಚೇರಿಗೆ ಸಂಬಂಧಿಸಿದ ದೈನಂದಿನ ಸಭೆಗಳನ್ನು ನಡೆಸುವಲ್ಲಿ ಆ್ಯಪ್‌ಗಳು ಮಹತ್ತರ ಪಾತ್ರ ವಹಿಸಿವೆ. ಇತ್ತೀಚೆಗೆ ಝೂಮ್ ಹಾಗೂ ಹೌಸ್‌ಪಾರ್ಟಿ ಎಂಬ ಆ್ಯಪ್‌ಗಳು ಭರ್ಜರಿಯಾಗಿ ಪ್ರಚಾರ ಪಡೆದು, ಬಳಕೆಯೂ ಹೆಚ್ಚಾದ ಬೆನ್ನಿಗೆ, ಖಾಸಗಿತನ ರಕ್ಷಣೆ ಕುರಿತು ಆತಂಕಗಳು ಸೃಷ್ಟಿಯಾದವು. ಆದರೆ ಸ್ಕೈಪ್, ಮೈಕ್ರೋಸಾಫ್ಟ್ ಟೀಮ್ಸ್, ಗೂಗಲ್ ಹ್ಯಾಂಗೌಟ್ಸ್ (ಗೂಗಲ್ ಮೀಟ್), ಸಿಸ್ಕೋ ವೆಬೆಕ್ಸ್ ಮುಂತಾದವುಗಳನ್ನು ಜನರು ನೆಚ್ಚಿಕೊಂಡಿದ್ದಾರೆ. ಇದರ ಮಧ್ಯೆಯೇ, ಆನ್‌ಲೈನ್ ಮೀಟಿಂಗ್‌ಗೆ ಇರುವ ಬೇಡಿಕೆಯನ್ನು ಮನಗಂಡು, ಫೇಸ್‌ಬುಕ್‌ನ ಮೆಸೆಂಜರ್ ತಂತ್ರಾಂಶವು ಕೂಡ ಕಣಕ್ಕೆ ಧುಮುಕಿದೆ.

ಇದುವರೆಗೆ ಮೆಸೆಂಜರ್ ಮೂಲಕ ಸೀಮಿತ ಬಳಕೆದಾರರೊಂದಿಗೆ ವಿಡಿಯೊ ಸಂವಾದ ನಡೆಸುವುದು ಸಾಧ್ಯವಾಗಿತ್ತಾದರೂ, ಕಳೆದ ವಾರ 'ಮೆಸೆಂಜರ್ ರೂಮ್ಸ್' ಎಂಬ ವೈಶಿಷ್ಟ್ಯವನ್ನು ಫೇಸ್‌ಬುಕ್ ಪರಿಚಯಿಸಿದೆ. ಅದನ್ನು ಹಂತ ಹಂತವಾಗಿ ಹಲವು ದೇಶಗಳಿಗೆ ಬಿಡುಗಡೆ ಮಾಡಿದ್ದು, ಈಗ ಭಾರತಕ್ಕೂ ಬಂದಿದೆ. ಕೆಲವರ ಮೊಬೈಲ್ ಫೋನ್‌ಗಳಲ್ಲಿ ಇನ್ನಷ್ಟೇ ಈ ಸೌಲಭ್ಯ ದೊರೆಯಬೇಕಿದೆ.

ಏನು ಮಿತಿ?
ಫೇಸ್‌ಬುಕ್ ಮೆಸೆಂಜರ್ ಆ್ಯಪ್ ಉಚಿತವಾಗಿ ಲಭ್ಯವಿದೆ. ಈಗಾಗಲೇ ಚಾಟಿಂಗ್‌ಗೆ, ಗ್ರೂಪ್ ಚಾಟಿಂಗ್‌ಗೆ ಇದು ಬಳಕೆಯಾಗುತ್ತಿದೆ. ಈಗ 'ರೂಮ್ಸ್' ಮೂಲಕ 50 ಮಂದಿ ಏಕಕಾಲದಲ್ಲಿ ಉಚಿತವಾಗಿ ವಿಡಿಯೊ ಕಾನ್ಫರೆನ್ಸ್ ಮಾಡುವ ಸೌಲಭ್ಯವಿದೆ. ವಿಶೇಷವೆಂದರೆ, ಇದರಲ್ಲಿ ಪಾಲ್ಗೊಳ್ಳುವವರಿಗೆ ಫೇಸ್‌ಬುಕ್ ಖಾತೆ ಇರಲೇಬೇಕೆಂದಿಲ್ಲ. ಮತ್ತು ಆನ್‌ಲೈನ್ ಸಭೆಗೆ ಸಮಯದ ಮಿತಿಯೂ ಇಲ್ಲ.

ಹೇಗೆ ಬಳಸುವುದು?
ಮೆಸೆಂಜರ್ ರೂಮ್ಸ್ ಎಂಬ ಈ ಸೌಕರ್ಯವನ್ನು ಬಳಸಲು, ಮೆಸೆಂಜರ್‌ಗೆ ಲಾಗಿನ್ ಆಗಿ. ಕೆಳ ಭಾಗದಲ್ಲಿ ಚಾಟ್ಸ್ ಹಾಗೂ ಪೀಪಲ್ ಎಂಬ ಎರಡು ಆಯ್ಕೆಗಳಿರುತ್ತವೆ. ಚಾಟ್ಸ್‌ನಲ್ಲಿ ನಾವು ಸಾಮಾನ್ಯವಾಗಿ ಪಠ್ಯದ ಮೂಲಕ ನಡೆಸುವ ಸಂವಹನದ ಪಟ್ಟಿ ಇರುತ್ತದೆ. ಪೀಪಲ್ಸ್ ಎಂಬಲ್ಲಿಗೆ ಹೋದರೆ, ನಮ್ಮ ಸ್ನೇಹಿತರ ಪಟ್ಟಿ ಗೋಚರಿಸುತ್ತದೆ. ಮೇಲ್ಭಾಗದಲ್ಲಿ 'Create Rooms' ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಒತ್ತಿದ ತಕ್ಷಣ, ಕೆಳಭಾಗದಲ್ಲಿ ಈ ಆನ್‌ಲೈನ್ ಸಮಾವೇಶದ ಲಿಂಕ್ ಅನ್ನು ಹಂಚಿಕೊಳ್ಳುವ ಬಟನ್ ಕಾಣಿಸುತ್ತದೆ. ಲಿಂಕ್ ನಕಲು ಮಾಡಿಕೊಂಡು, ನಮಗೆ ಬೇಕಾದವರಿಗೆ ಕಳುಹಿಸಬಹುದು. ಅಥವಾ ಈ ಆನ್‌ಲೈನ್ ಸಮಾವೇಶಕ್ಕೆ ಯಾರು ಸೇರ್ಪಡೆಯಾಗಬಹುದು ಎಂಬುದನ್ನು ನೀವೇ ನಿರ್ಧರಿಸಬಹುದು. ಅಂದರೆ ಲಿಂಕ್ ಇರುವವರು ಅಥವಾ ಫೇಸ್‌ಬುಕ್ ಖಾತೆ ಇರುವವರು ಅಂತ ನಿರ್ಧರಿಸಿ, ಲಿಂಕ್ ಶೇರ್ ಮಾಡಬಹುದು. ಇದರಲ್ಲಿ, ವಿಡಿಯೊ ಮತ್ತು ಆಡಿಯೊಗಳನ್ನು ಆಫ್ ಮಾಡಿಕೊಳ್ಳುವ, ಮೊಬೈಲ್‌ನ ಸೆಲ್ಫೀ ಕ್ಯಾಮೆರಾ ಅಥವಾ ಪ್ರಧಾನ ಕ್ಯಾಮೆರಾ ಬಳಸುವ ಆಯ್ಕೆಗಳಿರುತ್ತವೆ.

ವಿಂಡೋಸ್ ಅಥವಾ ಮ್ಯಾಕ್ ಕಾರ್ಯಾಚರಣಾ ವ್ಯವಸ್ಥೆಗಳಿರುವ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರ್ ಮೂಲಕವೂ ಈ ಆನ್‌ಲೈನ್ ಮೀಟಿಂಗ್‌ಗೆ ಸೇರಿಕೊಳ್ಳಬಹುದು. ತನ್ನ ಒಡೆತನದಲ್ಲಿರುವ ಇನ್‌ಸ್ಟಾಗ್ರಾಂ ಹಾಗೂ ವಾಟ್ಸ್ಆ್ಯಪ್ ಮೆಸೆಂಜರ್‌ಗೆ ಕೂಡ ಈ ಮೆಸೆಂಜರ್ ರೂಮ್‌ಗಳನ್ನು ಸಂಪರ್ಕವನ್ನು ವಿಸ್ತರಿಸಲಾಗುತ್ತದೆ ಅಂತ ಫೇಸ್‌ಬುಕ್ ಈಗಾಗಲೇ ಘೋಷಿಸಿದೆ.

ಸುರಕ್ಷತೆ ಎಷ್ಟು?
ಇದರಲ್ಲಿ ರೂಂ ಲಾಕ್ ಮಾಡುವ ಆಯ್ಕೆಯಿದೆ. ಇದರೊಂದಿಗೆ ಫೇಸ್‌ಬುಕ್‌ನಲ್ಲಿ ಇರುವ ಬ್ಲಾಕ್ ಮಾಡುವುದು, ಸದಸ್ಯರನ್ನು ತೆಗೆಯುವುದೇ ಮುಂತಾದ ಆಯ್ಕೆಗಳೂ ಇವೆ. ಫೇಸ್‌ಬುಕ್‌ನಲ್ಲಿ ಪ್ರೈವೆಸಿ (ಖಾಸಗಿತನ) ಬಗ್ಗೆ ನೀವು ಎಷ್ಟು ನಿಯಂತ್ರಣ ಮಾಡಿಕೊಂಡಿದ್ದೀರೋ, ಅವೆಲ್ಲವೂ ಇದರಲ್ಲಿವೆ. ಈ ರೂಮ್‌ಗಳು, ವಾಟ್ಸ್ಆ್ಯಪ್ ಚಾಟ್‌ನಲ್ಲಿರುವಂತೆ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುವುದಿಲ್ಲ. ಅಂದರೆ, ರೂಮ್ ಒಳಗಿನ ಸಂವಾದಗಳು ಸದ್ಯದ ಮಟ್ಟಿಗೆ ನೂರು ಶೇಕಡಾ ಸುಭದ್ರ ಅಲ್ಲ. ಸಾಮಾನ್ಯ ಮೀಟಿಂಗ್‌ಗಳಿಗೆ ಇದನ್ನು ಬಳಸಬಹುದು. ಕಂಪನಿಯ ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿರುವ ಸಭೆಗಳಿಗೆ ಬಳಸುವುದು ಸೂಕ್ತವಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT