ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಪಟ್ಟಿ ಧರಿಸಿ ಕರ್ತವ್ಯ: ಪಿ.ಯು ಉಪನ್ಯಾಸಕರ ನಿರ್ಧಾರ

ಅನಿರ್ದಿಷ್ಟಾವಧಿ ಮುಷ್ಕರ ವಾಪಸ್‌
Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವ ನಿರ್ಧಾರ ವಾಪಸ್ ಪಡೆದಿರುವ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಕಪ್ಪುಪಟ್ಟಿ ಧರಿಸಿ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದೆ.

ಮಾ.1ರಿಂದ ಪರೀಕ್ಷೆ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಪ್ರತಿಭಟನೆ ಆರಂಭಿಸಿದರೆ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಲಿದೆ. ಅದಕ್ಕೆ ಅವಕಾಶ ನೀಡದೆ ಯಶಸ್ವಿಯಾಗಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಮಾಧ್ಯಮಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ವೇತನ ತಾ‌ರತಮ್ಯ ನಿವಾರಣೆಗಾಗಿ ಹತ್ತು ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. 2011ರಲ್ಲಿ ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ಜಿ. ಕುಮಾರ ನಾಯ್ಕ್‌ ನೇತೃತ್ವದಲ್ಲಿ ಸಮಿತಿ ರಚಿಸಿ ಸರ್ಕಾರ ವರದಿ ಪಡೆದುಕೊಂಡಿದೆ. ಈ ವರದಿ ಜಾರಿ ಮಾಡಲು ವಿವಿಧ ಹಂತಗಳಲ್ಲಿ ಹೋರಾಟ ನಡೆಸಿದ್ದರೂ ಸ್ಪಂದಿಸಿಲ್ಲ’ ಎಂದು ಹೇಳಿದರು.

2017ರಲ್ಲಿ ಮೌಲ್ಯಮಾಪನ ಬಹಿಷ್ಕರಿಸುವ ಕರೆ ನೀಡಿದಾಗ ವೇತನ ತಾರತಮ್ಯ ಸರಿಪಡಿಸುವ ಭರವಸೆಯನ್ನು ಶಿಕ್ಷಣ ಸಚಿವರು ಲಿಖಿತವಾಗಿ ನೀಡಿದ್ದರು. ಆದರೆ, ಆರನೇ ವೇತನ ಆಯೋಗದ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರದ ಈ ನಿರ್ಲಕ್ಷ್ಯ ಉಪನ್ಯಾಸಕ ಸಮುದಾಯದಲ್ಲಿ ಬೇಸರ ಉಂಟು ಮಾಡಿದೆ. ನಮ್ಮ ನೋವಿಗೆ ಕಿವಿಗೊಡುವ ಮನಸ್ಸು ಸರ್ಕಾರಕ್ಕೆ ಇಲ್ಲ. ಇದರಿಂದ ಮನನೊಂದು ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT