ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಯೊ ಗ್ಲಾಸ್‌: 3ಡಿ ವಿಡಿಯೊ ಮಾತುಕತೆ, ಟ್ವಿಟರ್‌ನಲ್ಲೂ ಟ್ರೆಂಡ್‌

ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಡೆಟ್‌ನ ವಾರ್ಷಿಕ ಸಭೆಯಲ್ಲಿ (ಎಜಿಎಂ) ಗೂಗಲ್‌ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ₹33,737 ಕೋಟಿ ಹೂಡಿರುವುದು ಹಾಗೂ ದೇಶೀಯ 5ಜಿ ತಂತ್ರಜ್ಞಾನ ವಿನ್ಯಾಸ ಮತ್ತು ಅಭಿವೃದ್ಧಿ ಪಡಿಸಿರುವ ಕುರಿತು ಮುಕೇಶ್‌ ಅಂಬಾನಿ ಪ್ರಕಟಿಸಿದರು. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಆ ಎರಡಕ್ಕಿಂತಲೂ 'ಜಿಯೊ ಗ್ಲಾಸ್‌' ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಟ್ವಿಟರ್‌ನಲ್ಲೂ ಜಿಯೊ ಗ್ಲಾಸ್ (#JioGlass) ಟ್ರೆಂಡ್‌ ಆಗಿದೆ.

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಮನೆಯಿಂದಲೇ ಕಾರ್ಯಾಚರಣೆ ಹಾಗೂ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಆನ್‌ಲೈನ್‌ ಸಭೆಗಳು ಅಥವಾ ತರಗತಿಗಳನ್ನು ವಾಸ್ತವಕ್ಕೆ ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ಜಿಯೊ ವಿಶೇಷ ಸಾಧನ 'ಜಿಯೊ ಗ್ಲಾಸ್‌' ಅನಾವರಣಗೊಳಿಸಿದೆ. 3ಡಿ ಮಿಕ್ಸಡ್‌ ರಿಯಾಲಿಟಿಯು ವಿಡಿಯೊ ಕಾನ್ಫರೆನ್ಸ್‌ಗಿಂತಲೂ ಆಪ್ತ ಅನುಭವ ನೀಡಲಿದೆ.

ವರ್ಚುವಲ್‌ ಆಗಿ ಎದುರಿಗೆ ಬರುವ ವ್ಯಕ್ತಿಯು ತನ್ನದೇ ಕೋಣೆಯಲ್ಲಿ ಕುಳಿತಿದ್ದಾರೆ ಅಥವಾ ನಿಂತು ಮಾತನಾಡುವ ಅನುಭವವನ್ನು ಜಿಯೊ ಗ್ಲಾಸ್‌ ನೀಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಅಧ್ಯಕ್ಷ ಕಿರಣ್ ಥಾಮಸ್‌ ಹೇಳಿದ್ದಾರೆ.

ರಿಲಯನ್ಸ್‌ ಜಿಯೊ ಗ್ಲಾಸ್‌ನ ಗುಣಲಕ್ಷಣಗಳು ಇಲ್ಲಿವೆ:

* ಸನ್‌ಗ್ಲಾಸ್‌ ರೀತಿಯಲ್ಲಿ ಕಾಣುವ ಜಿಯೊ ಗ್ಲಾಸ್‌ ಕೇವಲ 75 ಗ್ರಾಂ ತೂಕವಿದೆ. ಸುಲಭವಾಗಿ ಕಿವಿಗಳ ಮೇಲೆ ಕೂರುತ್ತದೆ ಹಾಗೂ ದೀರ್ಘಾವಧಿ ವರೆಗೆ ಧರಿಸಿದ್ದರೂ ಭಾರದ ಅನುಭವ ಆಗುವುದಿಲ್ಲ.
* ಸ್ಮಾರ್ಟ್‌ಫೋನ್‌ ಜೊತೆಗೆ ಸಂಯೋಜಿಸಿ ಇಂಟರ್‌ನೆಟ್‌ ಸಂಪರ್ಕ ಪಡೆಯಲು ಸೂಕ್ತ ಕೇಬಲ್‌ ನೀಡಲಾಗುತ್ತದೆ.
* ಹೈ ರೆಸಲ್ಯೂಷನ್‌ ಡಿಸ್‌ಪ್ಲೇ ಹಾಗೂ ಗ್ರಾಫಿಕ್ಸ್‌ ಸಪೋರ್ಟ್‌ ಮಾಡುವ ಮೂಲಕ ಬಳಕೆದಾರರಿಗೆ ಅತ್ಯುತ್ತಮ ವೀಕ್ಷಣೆಯ ಅನುಭವ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
* ಕನ್ನಡಕದ ಫ್ರೇಮ್‌ನಲ್ಲೇ ಆಡಿಯೊ ಸಾಧನ ಅಳವಡಿಸಿರುವುದರಿಂದ ಪ್ರತ್ಯೇಕ ಆಡಿಯೊ ಸಾಧನದ ಅವಶ್ಯಕತೆ ಇರುವುದಿಲ್ಲ.
* ಪ್ರಸ್ತುತ 25 ಸಾಮಾಜಿಕ ಮಾಧ್ಯಮಗಳು ಹಾಗೂ ವಿಡಿಯೊ ಚಾಟ್‌ ಅಪ್ಲಿಕೇಷನ್‌ಗಳೊಂದಿಗೆ ಜಿಯೊ ಗ್ಲಾಸ್‌ ಕಾರ್ಯನಿರ್ವಹಿಸಬಹುದಾಗಿದೆ.
* ಫೈಲ್ಸ್‌ ಶೇರಿಂಗ್‌, 3ಡಿ ಮಾಡೆಲ್ಸ್‌ ಅಥವಾ ಹಾಲೊಗ್ರಾಮ್‌ಗಳ ಮೂಲಕ ಪ್ರಾಜೆಕ್ಟ್ ಪ್ರಸ್ತುತ ಪಡಿಸುವುದು ಸಾಧ್ಯವಿದೆ.

ಶಾಲೆಗಳ ಆನ್‌ಲೈನ್‌ ತರಗತಿಗಳಲ್ಲಿ ಭೂಗೋಳ, ಪ್ರಾಣಿ ಪ್ರಪಂಚ, ವಿಜ್ಞಾನ ಪ್ರಯೋಗಗಳನ್ನು 3ಡಿ ಮಾದರಿಗಳ ಮೂಲಕ ಪ್ರಸ್ತುತ ಪಡಿಸಲು ಅನುವಾಗಲಿದೆ. ಆದರೆ, ಜಿಯೊ ಗ್ಲಾಸ್‌ ಲಭ್ಯತೆ ಹಾಗೂ ಬೆಲೆಯ ಕುರಿತು ಕಂಪನಿ ಪ್ರಕಟಿಸಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ 3ಡಿ ವಿಡಿಯೊ ಅನುಭವ ನೀಡುವ ಸ್ನ್ಯಾಪ್‌ ಸ್ಪೆಕ್ಟಕಲ್ಸ್‌ ( ₹29,999) ಹಾಗೂ ಆಡಿಯೊ ಮಾತ್ರ ನೀಡುವ ಬೋಸ್‌ ಫ್ರೇಮ್ಸ್‌ (21,900) ಕನ್ನಡಕಗಳಿಗಿಂತ ಜಿಯೊ ಗ್ಲಾಸ್ ಭಿನ್ನ ಅನುಭವ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಿಲಯನ್ಸ್‌ ಒಂದರ ಹಿಂದೊಂದು ಪ್ರಾಡಕ್ಟ್‌ಗಳನ್ನು ಬಿಡುಗಡೆ ಮಾಡಿರುವುದನ್ನು ಪ್ರಸ್ತಾಪಿಸಿರುವ ಟ್ವೀಟಿಗರು ಅಚ್ಚರಿ ವ್ಯಕ್ತಪಡಿಸುವ ಜೊತೆಗೆ ವ್ಯಂಗ್ಯದ ‍ಪೋಸ್ಟ್‌ಗಳನ್ನೂ ಹರಿಯಬಿಟ್ಟಿದ್ದಾರೆ. 'ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ಗಿಂತಲೂ ಹೆಚ್ಚು ರಿಲಯನ್ಸ್‌ ಹೂಡಿಕೆದಾರರು ಹಾಗೂ ಜನರಿಗೆ ನೀಡುತ್ತಿದೆ', 'ಗೂಗಲ್‌ ಗ್ಲಾಸ್‌ಗೆ ಭಾರತದಿಂದ ಪರ್ಯಾಯ ಸಾಧನ ಇದು', 'ಇದರಲ್ಲಿ ಸಿನಿಮಾ ನೋಡಿದರೆ ಹೇಗಿರುತ್ತೆ?',...ಇಂಥ ಹಲವು ಪೋಸ್ಟ್‌ಗಳನ್ನು ಟ್ವಿಟರ್‌ನಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT