ವೈದ್ಯಕೀಯ ಲೋಕ ದಿನೇ ದಿನೇ ಪ್ರಗತಿಯನ್ನು ಸಾಧಿಸುತ್ತಲೇ ಇದೆ. ಅಂದರೆ, ಕಡಿಮೆ ರಕ್ತನಷ್ಟ, ಕಡಿಮೆ ಆಸ್ಪತ್ರೆವಾಸ, ತ್ವರಿತ ಉಪಶಮನ ಎನ್ನುವುದು ಈಗಿನ ವೈದ್ಯಕೀಯಲೋಕದ ಮಂತ್ರಗಳಾಗಿವೆ. ರೋಗಿಗಳೂ ಇದನ್ನೇ ಬಯಸುತ್ತಾರೆ; ಹಾಗೂ ಅದೇ ಸೂಕ್ತವಾದುದು. ಈ ರೀತಿ ತ್ವರಿತ ಗುಣಮಂತ್ರಕ್ಕೆ ಈಗ ಹೊಸ ಸೇರ್ಪಡೆಯಾಗಿದೆ. ಅದೇ ಡಿಎನ್ಎ ರೋಬೊ!

ಕಾಯಿಲೆಗೆ ಪರಿಣಾಮಕಾರಿ ಮದ್ದನ್ನು ಕೊಡುವುದು ಎಂದರೆ ರೋಗದ ಮೂಲಕ್ಕೆ ಮದ್ದು ಕೊಡುವುದು ಎನ್ನುವುದೇ ಬಹುಮುಖ್ಯವಾದ ಪರಿಣಾಮಕಾರಿ ವಿಧಾನ. ಇದಕ್ಕೆ ಎಲ್ಲ ಬಗೆಯ ವೈದ್ಯಕೀಯ ವಿಧಾನಗಳೂ ಮನ್ನಣೆ ನೀಡುತ್ತವೆ. ಚರ್ಮರೋಗವೊಂದು ಕಾಣಿಸಿಕೊಂಡರೆ ಕೇವಲ ಮುಲಾಮು ನೀಡುವುದಕ್ಕಿಂತ, ಪೌಷ್ಟಿಕಾಂಶ ಕೊರತೆ ಇರಬಹುದೇ, ಜೀರ್ಣಕ್ರಿಯೆಯ ಸಮಸ್ಯೆ ಇರಬಹುದೇ ಎಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ, ಚರ್ಮರೋಗ ತನಗೆ ತಾನೇ ಗುಣವಾಗಬಹುದು. ಇದೇ ಮಂತ್ರವನ್ನು ಮೂಲಾಧಾರವಾಗಿ ಇರಿಸಿಕೊಂಡು ಜರ್ಮನಿಯ ಯೂನಿರ್ವಸಿಟಿ ಆಫ್ ಸ್ಟಟ್ಗಾರ್ಟ್ ವಿಶ್ವವಿದ್ಯಾಲಯದ ವಿಜ್ಞಾನಿ ಲಾರಾ ನಾ ಲಿಯೂ ನೇತೃತ್ವದ ತಂಡವು ವರ್ಣತಂತು (ಡಿಎನ್ಎ) ಆಧರಿಸಿದ ರೋಬೊಗಳನ್ನು ನಿರ್ಮಿಸಿದೆ. ಇವರ ಈ ಸಂಶೋಧನೆಯು ಪ್ರತಿಷ್ಠಿತ ‘ನೇಚರ್ ಮಟೀರಿಯಲ್ಸ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಈ ತಂಡದ ಪ್ರಕಾರ, ಮೇಲೆ ಉದಾಹರಿಸಿದಂತೆ ರೋಗದ ಮೂಲಕ್ಕೆ ಮದ್ದನ್ನು ನೀಡುವುದೇ ಆಗಿದೆ. ಯಾವುದೇ ಜೀವಿಯ ಯಾವುದೇ ಅಂಗ, ಪ್ರಕ್ರಿಯೆ, ವರ್ತನೆಗಳು ಆ ಜೀವಿಯ ಡಿಎನ್ಎಗಳ ಮೇಲೆಯೇ ಅವಲಂಬಿಸಿರುತ್ತದೆ. ವರ್ಣತಂತುಗಳು ನಮ್ಮ ದೇಹದ ಅಡಿಪಾಯ ಎನ್ನಬಹುದು. ನಮ್ಮ ಬಣ್ಣ, ಆಕಾರ, ಮಾನಸಿಕ ವರ್ತನೆ ಇವೆಲ್ಲವೂ ನಮ್ಮ ಪೂರ್ವಿಕರ ಮೂಲಕ ನಮಗೆ ವರ್ಗಾವಣೆಯಾಗಿರುತ್ತವೆ. ನಮ್ಮ ಪ್ರತಿ ಜೀವಕೋಶದಲ್ಲೂ ಡಿಎನ್ಎ ಇರುತ್ತದೆ. ಎಲೆಕ್ಟ್ರಾನಿಕ್ ಮೈಕ್ರೋಸ್ಕೋಪ್ ಮೂಲಕ ನೋಡಿದಾಗ ಮಾತ್ರ ಕಾಣುವಷ್ಟು ಅತಿ ಸೂಕ್ಷ್ಮರಚನೆಗಳು ಇವು. ಅಷ್ಟು ನ್ಯಾನೋ ಸೂಕ್ಷ್ಮಗಾತ್ರದಲ್ಲಿ ಈ ಡಿಎನ್ಎಗಳು ಇರುತ್ತವೆ.
ಯಾವುದೇ ರೋಗ ಕಾಣಿಸಿಕೊಳ್ಳಬೇಕಾದರೆ, ಈ ಡಿಎನ್ಎಗಳು ಸಹ ಕಾರಣವಾಗಬಹುದು. ಅಂದರೆ, ದೋಷಪೂರಿತ ಡಿಎನ್ಎಗಳು, ಹಾಳಾದ, ಗಾಸಿಯಾದ ಡಿಎನ್ಎಗಳು ಇತ್ಯಾದಿ. ಈ ಹಾಳಾದ, ದೋಷಪೂರಿತ ಡಿಎನ್ಎಗಳನ್ನು ದುರಸ್ತಿ ಮಾಡಿದರೆ ಹೇಗೆ? ಇದೇ ಪ್ರಶ್ನೆಯನ್ನು ಸಂಶೋಧನಾ ಅಡಿಪಾಯವಾಗಿ ಇರಿಸಿಕೊಂಡು ಲಾರಾ ಅವರು ಡಿಎನ್ಎ ನ್ಯಾನೋ ರೋಬೊಗಳನ್ನು ನಿರ್ಮಿಸಿದ್ದಾರೆ.

ಹೇಗಿದರ ಕಾರ್ಯಾಚರಣೆ?

ಇದರ ಕಾರ್ಯಾಚರಣೆ ಹಾಗೂ ರಚನೆ ಬಹುಸಂಕೀರ್ಣವಾದುದು. ಕೆಲವೇ ಕೆಲವು ನ್ಯಾನೋಮೀಟರ್ ಗಾತ್ರದಲ್ಲಿರುವ ಈ ರೋಬೊ ಅನ್ನು ಕಾಯಿಲೆ ಕಾಣಿಸಿಕೊಳ್ಳುವ ಜಾಗಕ್ಕೆ ಇಂಜೆಕ್ಷನ್ ಮೂಲಕ ದೇಹದ ಒಳಕ್ಕೆ ಕಳುಹಿಸಲಾಗುತ್ತದೆ. ಅಂದರೆ, ಇದು ದ್ರಾವಣದ ಮೂಲಕ ದೇಹದ ಪ್ರವೇಶ ಮಾಡುತ್ತದೆ. ಈ ದ್ರಾವಣದಲ್ಲಿರುವ ಡಿಎನ್ಎ ರೋಬೊಗಳು ದೋಷಪೂರಿತ ಜೈವಿಕ ಡಿಎನ್ಎಗಳನ್ನು ಗುರುತಿಸುತ್ತವೆ. ಅಲ್ಲಿ ತಲುಪಿದ ಕೂಡಲೇ ಗಾಸಿಯಾದ ಡಿಎನ್ಎಗಳನ್ನು ದುರಸ್ತಿ ಮಾಡಲು ಶುರು ಮಾಡುತ್ತವೆ. ಅಂದರೆ, ಹಾಳಾದ ಡಿಎನ್ಎ ಅನ್ನು ಸಂಪೂರ್ಣವಾಗಿ ಬದಲಿಸುವುದು. ಅಥವಾ ಅದನ್ನೇ ಸರಿಪಡಿಸುವುದು. ಈ ಡಿಎನ್ಎ ರೋಬೊ ಯಂತ್ರದ ಸ್ವರೂಪದಲ್ಲಿ ಇರುವುದಿಲ್ಲ.

ಸಾಮಾನ್ಯವಾಗಿ ರೋಬೊ ಎಂದರೆ, ಯಂತ್ರದಂತಿರುವ, ಚಿತ್ರಗಳಲ್ಲಿ ನೋಡಿರುವ ಎರಡು ಕೈ, ಎರಡು ಕಾಲುಗಳಿರುವ ಸ್ವರೂಪವೇ ಇರಬೇಕು ಎಂದೇನಿಲ್ಲ. ವಾಹನ ಕಾರ್ಖಾನೆಗಳಲ್ಲಿ, ಆಸ್ಪತ್ರೆಗಳಲ್ಲಿ ಬಳಕೆಯಾಗುವ ರೋಬಾಟ್ಗಳು ವಿಶೇಷ ಆಕಾರದಲ್ಲಿದ್ದು, ಕೆಲಸವನ್ನು ಮಾಡಲು ಬೇಕಾದ ನಿರ್ದಿಷ್ಟ ಆಕಾರದಲ್ಲಿ ಇರುತ್ತವೆ. ಅದೇ ರೀತಿ ಈ ಡಿಎನ್ಎ ರೋಬೊ ಸಹ ಇದೆ. ಈ ಡಿಎನ್ಎ ರೋಬೊಗಳು ದೇಹದಲ್ಲಿರುವ ವಿದ್ಯುತ್ ಬಳಸಿಕೊಂಡು ಆ ವಿದ್ಯುತ್ತನ್ನು ದೋಷಪೂರಿತ ಡಿಎನ್ಎಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಹಾಯಿಸುತ್ತವೆ. ಆಗ, ಡಿಎನ್ಎಗಳಲ್ಲಿ ಬದಲಾವಣೆಯಾಗಿ ಅದು ಅದರ ಮೂಲರೂಪಕ್ಕೆ ಬರುತ್ತದೆ. ಸಂಪೂರ್ಣ ಹಾಳಾದ ಡಿಎನ್ಎಗಳನ್ನು ಬದಲಿಸಲಾಗುತ್ತದೆ.

ಆದರೆ, ಹೀಗೆ ವಿವರಿಸಿದಷ್ಟು ಸುಲಭವಾದ ಪ್ರಕ್ರಿಯೆ ಇದಲ್ಲ. ಡಿಎನ್ಎಗಳನ್ನು ದುರಸ್ತಿ ಮಾಡುವುದು ಅಥವಾ ಬದಲಿಸುವುದು ಸುಲಭವಲ್ಲ. ಏಕೆಂದರೆ, ಇದರಲ್ಲಿ ಕೊಂಚವೇ ಹೆಚ್ಚು ಕಡಿಮೆಯಾದರೂ ಸಾವೇ ಸಂಭವಿಸಬಹುದು ಅಥವಾ ದೈಹಿಕ, ಮಾನಸಿಕ ಬದಲಾವಣೆಗಳು ಆಗಬಹುದು. ಅಲ್ಲದೇ, ಡಿಎನ್ಎ ಚಿಕಿತ್ಸೆ ಈಗ ಹೊಸದೇನೂ ಅಲ್ಲ. ಸಾಕಷ್ಟು ದಿನಗಳಿಂದಲೂ ಬಳಕೆಯಲ್ಲಿದೆ. ಹಾಲಿ ಜಾರಿಯಲ್ಲಿರುವ ಡಿಎನ್ಎ ಚಿಕಿತ್ಸಾ ವಿಧಾನಗಳನ್ನೇ ಬಳಸಿಕೊಂಡು ಈ ಹೊಸ ಡಿಎನ್ಎ ರೋಬೊಗಳನ್ನು ಬಳಸಿಕೊಂಡರೆ ಮತ್ತಷ್ಟು ತ್ವರಿತ, ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ಸಾಧ್ಯ ಎಂದು ಪ್ರೊ. ಲಾರಾ ಅವರ ತಂಡವು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.