ಬುಧವಾರ, ಸೆಪ್ಟೆಂಬರ್ 22, 2021
22 °C

ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ‘ಅಡ್ಡಾ’ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಯ್ದು ಕೊಳ್ಳುವುದು ಅನಿವಾರ್ಯ. ಅಪಾರ್ಟ್‌ಮೆಂಟ್‌, ಗೇಟೆಡ್‌ ಕಮ್ಯುನಿಟಿಗಳಲ್ಲಿ ವಾಸಿಸುವವರು ಮತ್ತು ಸಂಘ ರಚಿಸಿಕೊಂಡಿರುವ ಬಡಾವಣೆಗಳ ನಿವಾಸಿಗಳೂ ಅಕ್ಕಪಕ್ಕದ ಮನೆಯವರ ಜತೆಗೂ ದೂರ ಇರಬೇಕಾಗಿದೆ.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ‘ಅಡ್ಡಾ’ (ADDA) ಆ್ಯಪ್‌, ಹಲವಾರು ಬಗೆಗಳಲ್ಲಿ ಬಳಕೆದಾರರ ನೆರವಿಗೆ ಬರುತ್ತಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳ ಅನುಕೂಲಕ್ಕೆಂದೇ ಆರಂಭಿಸಿರುವ ನೆರೆಹೊರೆ ಸಂವಹನ ಜಾಲವಾಗಿರುವ ‘ಅಡ್ಡಾ’ ಬಹೂಪಯೋಗಿ ಆ್ಯಪ್‌ ಆಗಿದೆ. ತುರ್ತಾಗಿ ಸಂಪರ್ಕಿಸಬೇಕಾದ ಆಸ್ಪತ್ರೆ, ಪೊಲೀಸ್‌ ಠಾಣೆ, ಆಂಬುಲೆನ್ಸ್‌, ಔಷಧಿ ಮಳಿಗೆ ಮುಂತಾದವುಗಳ ಮೊಬೈಲ್‌ ಸಂಖ್ಯೆ ಇಲ್ಲಿ ಬೆರಳತುದಿಯಲ್ಲಿ ಲಭ್ಯ ಇರಲಿದೆ.

ಸಾಮಾಜಿಕ ಜಾಲತಾಣದ ‘ಅಡ್ಡಾ’ ಆ್ಯಪ್‌ ಅನ್ನು ಅಪಾರ್ಟ್‌ಮೆಂಟ್‌ ನಿವಾಸಿಗಳು ತಾವು ಪಡೆದ ಸರಕು ಮತ್ತು ಸೇವೆಗಳಿಗೆ ಹಣ ಪಾವತಿ ಮಾಡಲು ಮತ್ತು ಸೇವೆಗಳನ್ನು ಬುಕ್‌ ಮಾಡಲೂ ಬಳಸಬಹುದು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (ಆರ್‌ಡಬ್ಲ್ಯುಎ)  ತಮ್ಮ ಹಣಕಾಸು, ಸಿಬ್ಬಂದಿ ನಿರ್ವಹಣೆಗೂ ಇದನ್ನು ಬಳಸಬಹುದು.

ವಾಟ್ಸ್ಆ್ಯಪ್‌ ಗ್ರೂಪ್‌ ಮೂಲಕ ಪರಸ್ಪರ ಸಂಪರ್ಕದಲ್ಲಿ ಇರಲು ಎಲ್ಲರಿಗೂ ಸಾಧ್ಯವಾಗಿದೆ. ಈ ತಾಣದಲ್ಲಿ ಕೆಲವೊಮ್ಮೆ ಹರಿದಾಡುವ ತಪ್ಪು ಮಾಹಿತಿಯು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವವರನ್ನು ಅಪಾಯಕ್ಕೆ ದೂಡುವ ಸಾಧ್ಯತೆ ಇರುತ್ತದೆ. ಸುಳ್ಳು ಸುದ್ದಿ ನಂಬದಿರಲು,  ‘ಆರ್‌ಡಬ್ಲ್ಯುಎ’ಗಳು  ರೂಪಿಸುವ ನಿಯಮಗಳ ಪಾಲನೆ ಸಂಬಂಧ ಸದಸ್ಯರಿಗೆಲ್ಲ ಸಂದೇಶ ಕಳಿಸಲು ‘ಅಡ್ಡಾ’ ಆ್ಯಪ್‌ ನೆರವಿಗೆ ಬರಲಿದೆ.

ಕೋವಿಡ್‌ ಪಿಡುಗಿನ ಕಾರಣಕ್ಕೆ ವಸತಿ ಸಮುದಾಯ, ಅಪಾರ್ಟ್‌ಮೆಂಟ್‌ ಸಮುಚ್ಚಯ  ಮತ್ತು ನಿರ್ಬಂಧಿತ ವಸತಿ ಪ್ರದೇಶಗಳ (ಗೇಟೆಡ್‌ ಕಮ್ಯುನಿಟೀಸ್‌) ಕ್ಷೇಮಾಭಿವೃದ್ಧಿ ಸಂಘಗಳ ಹೊಣೆಗಾರಿಕೆಯು ಹೆಚ್ಚಿದೆ. ಸಂಘದ ಸದಸ್ಯರ ಅಗತ್ಯಗಳನ್ನೆಲ್ಲ ಒದಗಿಸಲು ಮತ್ತು ಸುರಕ್ಷತೆ ಕಾಯ್ದುಕೊಳ್ಳಲು ಹೆಚ್ಚಿನ ಗಮನ ನೀಡಬೇಕಾಗಿದೆ. ಇದಕ್ಕೆ ‘ಅಡ್ಡಾ’ ನೆರವಿಗೆ ಬರಲಿದೆ. ಸಂಘಗಳ ಕೆಲಸದ ಹೊರೆ ಕಡಿಮೆ ಮಾಡಲೂ ನೆರವಾಗಲಿದೆ. ‘ಅಡ್ಡಾ’ ಇಆರ್‌ಪಿ ಮತ್ತು ‘ಅಡ್ಡಾ’ ಗೇಟ್‌ಕೀಪರ್‌ ಸೌಲಭ್ಯ ಮಾಸಿಕ ಚಂದಾ ಆಧರಿಸಿ ಲಭ್ಯವಿದೆ.

‘ಕೋವಿಡ್‌ ಸಂದರ್ಭದಲ್ಲಿ ಅಗತ್ಯ ಸೇವೆಗಳ ಕೊಡುಗೆಯನ್ನು ಎಲ್ಲ ವಸತಿ ಸಮುದಾಯಗಳಿಗೆ ಉಚಿತವಾಗಿ ವಿಸ್ತರಿಸಲಾಗಿದೆ. ಸಂಘದ ಸದಸ್ಯರಿಂದ ಹೆಚ್ಚಿನ ಶುಲ್ಕ ಸಂಗ್ರಹಿಸದ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಗಳಿಗೆ ಇದು ಹೆಚ್ಚು ಉಪಯುಕ್ತಕರವಾಗಿದೆ. ಬಡಾವಣೆಯ ‘ಆರ್‌ಡಬ್ಲ್ಯುಎ’ಗಳ ಸದಸ್ಯರಿಗೆ ಮಾಹಿತಿ ರವಾನಿಸುವ ಸಂವಹನ ಸೇವೆಯನ್ನು ಉಚಿತವಾಗಿ ನೀಡಲಾಗುವುದು’ ಎನ್ನುತ್ತಾರೆ ಕಂಪನಿಯ ಸಿಇಒ ಸ್ಯಾನ್‌ ಬ್ಯಾನರ್ಜಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು