ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ.ಐ ಆಧಾರಿತ ಸ್ಯಾಮ್‌ಸಂಗ್ ಟಿ.ವಿ ಬಿಡುಗಡೆ

Published 17 ಏಪ್ರಿಲ್ 2024, 13:15 IST
Last Updated 17 ಏಪ್ರಿಲ್ 2024, 13:15 IST
ಅಕ್ಷರ ಗಾತ್ರ

ಬೆಂಗಳೂರು: ಎಲೆಕ್ಟ್ರಾನಿಕ್‌ ಉಪಕರಣ ತಯಾರಿಸುವ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಕಂಪನಿಯು, ತನ್ನ ಮೊದಲ ಕೃತಕ ಬುದ್ಧಿಮತ್ತೆ (ಎ.ಐ) ಫೀಚರ್‌ಗಳನ್ನು ಒಳಗೊಂಡ ಮೂರು ಮಾದರಿಯ ಟಿ.ವಿಗಳನ್ನು ನಗರದ ಸ್ಯಾಮ್ಸಂಗ್‌ ಒಪೆರಾ ಹೌಸ್‌ನಲ್ಲಿ ಬುಧವಾರ ಬಿಡುಗಡೆ ಮಾಡಿದೆ.

2024ರ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್‌ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ 4 ಕೆ ಮತ್ತು ಓಎಲ್‌ಇಡಿ ಟಿ.ವಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.  

ನಿಯೋ ಕ್ಯೂಎಲ್‌ಇಡಿ 8ಕೆ ಮಾದರಿ ಟಿ.ವಿಯು ಅತ್ಯಾಧುನಿಕ ಎನ್ ಕ್ಯೂ 8 ಎ.ಐ ಜೆನ್‌ 3 ಪ್ರೊಸೆಸರ್‌ ಹೊಂದಿದೆ. ಇದು ಇದರ ಹಿಂದಿನ ಪ್ರೊಸೆಸರ್‌ಗಿಂತ ಎರಡು ಪಟ್ಟು ವೇಗವನ್ನು ಹೊಂದಿದೆ. ಎಐ ಪಿಚ್ಚರ್‌ ಟೆಕ್ನಾಲಜಿ, ಅಪ್‌ ಸ್ಕೇಲಿಂಗ್‌ ಪ್ರೊ, ಮೋಷನ್‌ ಎನ್‌ ಹ್ಯಾನ್ಸರ್‌ ಪ್ರೊ, ರಿಯಲ್‌ ಡೆಪ್ತ್‌ ಎನ್ ಹಾನ್ಸರ್‌ ಪ್ರೊ, ಸೌಂಡ್‌ ಟೆಕ್ನಾಲಜಿ, ಆಟೊ ಗೇಮ್‌ ಮೋಡ್‌, ಕಸ್ಟಮೈಸೇಷನ್‌ ಮೋಡ್‌ ಮತ್ತು ಎನರ್ಜಿ ಮೋಡ್‌ನಂತಹ ವೈಶಿಷ್ಟ್ಯ ಹೊಂದಿದೆ.

ಎ.ಐ ಮೋಷನ್‌ ಎನ್‌ ಹ್ಯಾನ್ಸರ್‌ ಪ್ರೊ ವೈಶಿಷ್ಟ್ಯವು ಪಂದ್ಯಗಳನ್ನು ನೇರವಾಗಿ ವೀಕ್ಷಿಸಿದ ಅನುಭವ, ಪಿಚ್ಚರ್‌ ಟೆಕ್ನಾಲಜಿಯು ಸ್ಪಷ್ಟವಾದ ದೃಶ್ಯ, ಸೌಂಡ್‌ ಟೆಕ್ನಾಲಜಿಯು ನಿಖರವಾದ ಧ್ವನಿಯನ್ನು ಒದಗಿಸಲಿದೆ. ಧ್ವನಿಯು ಸ್ವಯಂ ಚಾಲಿತವಾಗಿ ಸರಿಹೊಂದಿಸುತ್ತದೆ. ಎನರ್ಜಿ ಮೋಡ್‌ ವಿದ್ಯುತ್‌ ಅನ್ನು ಉಳಿತಾಯ ಮಾಡಲಿದೆ. ಈ ಮಾದರಿ ಟಿ.ವಿಯು ಕ್ಯೂ ಎನ್‌ 900 ಡಿ ಮತ್ತು ಕ್ಯೂ ಎನ್‌800 ಡಿ ಎಂಬ ಎರಡು ಮಾದರಿಯಲ್ಲಿ ಲಭ್ಯವಿದೆ. 65,75 ಮತ್ತು 85 ಇಂಚಿನ ಗಾತ್ರದಲ್ಲಿ ದೊರೆಯುತ್ತದೆ.

ನಿಯೋ ಕ್ಯೂಎಲ್‌ಇಡಿ 4 ಕೆ ಟಿ.ವಿಯು ಎನ್‌ ಕ್ಯೂ 4 ಎ.ಐ ಜೆನ್‌ 2 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸಲಿದೆ. ರಿಯಲ್ ಡೆಪ್ತ್‌ ಎನ್‌ ಹಾನ್ಸರ್‌ ಪ್ರೊ ಮತ್ತು ಕ್ವಾಂಟಂ ಮ್ಯಾಟ್ರಿಕ್ಸ್‌ ಟೆಕ್ನಾಲಜಿಯಿಂದ ಅಭಿವೃದ್ಧಿಗೊಳಿಸಲಾಗಿದೆ. ಜಗತ್ತಿನ ಮೊದಲ ಪ್ಯಾನ್‌ ಟೋನ್ ಫೀಚರ್‌ ಹೊಂದಿದ ಡಿಸ್‌ ಪ್ಲೇ ನೈಜ ಬಣ್ಣವನ್ನು ತೋರಿಸುತ್ತದೆ. ಜೊತೆಗೆ, ಗುಣಮಟ್ಟದ ಧ್ವನಿಯನ್ನು ನೀಡುತ್ತದೆ.

ಈ ಮಾದರಿ ಟಿ.ವಿಯು ಕ್ಯೂಎನ್‌ 85 ಡಿ ಮತ್ತು ಕ್ಯೂ ಎನ್‌90 ಡಿ ಎಂಬ ಎರಡು ಮಾದರಿಗಳಲ್ಲಿ, 55, 65, 75, 85 ಮತ್ತು 98 ಇಂಚು ಗಾತ್ರದಲ್ಲಿ ದೊರೆಯುತ್ತದೆ.

ವಿಶ್ವದ ಮೊದಲ ಗ್ಲೇರ್ ಫ್ರೀ ಓಎಲ್‌ಇಡಿ ಟಿ.ವಿಯನ್ನು ಸಹ ಸ್ಯಾಮ್ಸಂಗ್‌ ಪರಿಚಯಿಸಿದೆ. ನಿಯೋ ಕ್ಯೂಎಲ್‌ಇಡಿ 4 ಕೆ ಶ್ರೇಣಿಯ ಟಿ.ವಿಯಂತೆ ಎನ್‌ ಕ್ಯೂ ಎಐ ಜೆನ್‌ 2 ಪ್ರೊಸೆಸರ್‌ನಿಂದ ನಡೆಸಲ್ಪಡುತ್ತದೆ. ಹೆಚ್ಚುವರಿಯಾಗಿ, ಮೋಷನ್‌ ಆಕ್ಸಲೇಟರ್‌ 144 ಹರ್ಟ್ಜ್‌ನಂತಹ ವೈಶಿಷ್ಟ್ಯ ಹೊಂದಿದೆ. ಇದು ಎಸ್‌95 ಡಿ ಮತ್ತು ಎಸ್‌ 90 ಡಿ ಮಾದರಿಯಲ್ಲಿ ಲಭ್ಯವಿದೆ. 55, 65, 77 ಮತ್ತು 83 ಇಂಚಿನ ಗಾತ್ರದಲ್ಲಿ ದೊರೆಯುತ್ತದೆ.

ಈ ಎಲ್ಲ ವೈಶಿಷ್ಟ್ಯಗಳ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಗೇಮಿಂಗ್‌, ಮನರಂಜನೆ, ಶಿಕ್ಷಣ, ಯೋಗ ಸೇರಿದಂತೆ ಅನೇಕ ಸವಲತ್ತನ್ನು ಒದಗಿಸುತ್ತಿದೆ. ಸ್ಯಾಮ್‌ಸಂಗ್ ಟಿ.ವಿ ಪ್ಲಸ್‌ ಮೂಲಕ ಸುದ್ದಿ, ಚಲನಚಿತ್ರಗಳು, ಮನರಂಜನೆಯನ್ನು ಒದಗಿಸುವ 100ಕ್ಕೂ ಅಧಿಕ ಚಾನೆಲ್‌ಗಳನ್ನು ಉಚಿತವಾಗಿ ಪಡೆಯಬಹುದು. ಟಿವಿ ಕೀ ಕ್ಲೌಡ್‌ ಸೇವೆಯಿಂದ ಕ್ಲೌಡ್‌ ಮೂಲಕವೇ ನೇರ ಪ್ರಸಾರವನ್ನು ಪಡೆಯಬಹುದಾಗಿದೆ. ಹಾಗಾಗಿ, ಗ್ರಾಹಕರಿಗೆ ಸೆಟ್‌–ಟಾಪ್‌ ಬಾಕ್ಸ್‌ ಅಗತ್ಯ ಇರುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಉತ್ತಮ ಮಾರುಕಟ್ಟೆ: ‘ಬೆಂಗಳೂರು ಸ್ಯಾಮ್‌ಸಂಗ್‌ಗೆ ಉತ್ತಮ ಮಾರುಕಟ್ಟೆ ನೀಡಿದೆ. ಕಳೆದ 18 ವರ್ಷದಿಂದ ವಿಶ್ವದಲ್ಲಿ ಕಂಪನಿಯು ಮೊದಲ ಸ್ಥಾನದಲ್ಲಿದ್ದರೆ, ಭಾರತದಲ್ಲಿ ಐದು ವರ್ಷದಿಂದ ಮೊದಲ ಸ್ಥಾನ ಹೊಂದಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಗ್ರಾಹಕರಿಗೆ ಉತ್ತಮ ವೀಕ್ಷಣೆಯ ಅನುಭವ ನೀಡಲು ಎ.ಐ ಫೀಚರ್‌ಗಳನ್ನು ನೀಡುತ್ತಿದ್ದೇವೆ’ ಎಂದು ಕಂಪನಿಯ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಜೆಬಿ ಪಾರ್ಕ್‌ ಹೇಳಿದರು.

ಸ್ಯಾಮ್‌ಸಂಗ್ ಇಂಡಿಯಾದ ವಿಷುವಲ್‌ ಡಿಸ್ಪ್ಲೇ ಬ್ಯುಸಿನೆಸ್‌ನ ಹಿರಿಯ ಉಪಾಧ್ಯಕ್ಷ ಮೋಹನ್‌ ದೀಪ್‌ ಸಿಂಗ್‌ ಮಾತನಾಡಿ, ಭಾರತದಲ್ಲಿ ದೊಡ್ಡ ಗಾತ್ರದ ಟಿ.ವಿಯ ಬೇಡಿಕೆ ಹೆಚ್ಚುತ್ತಿದೆ. ದೃಶ್ಯ ಮತ್ತು ಧ್ವನಿಯ ಗುಣಮಟ್ಟದಲ್ಲಿ ಹೊಸ ಮಾನದಂಡ ಸ್ಥಾಪಿಸಲು ವಿನ್ಯಾಸಗೊಳಿಸಲಾಗಿರುವ ಎ.ಐ ಟಿ.ವಿಗಳನ್ನು ಬಿಡುಗಡೆ ಮಾಡಿದ್ದೇವೆ. ಇದು ದೇಶದ ಟಿ.ವಿ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲಿದೆ ಎಂದು ಹೇಳಿದರು.

ಬೆಲೆ ಎಷ್ಟು?: ನಿಯೋ ಕ್ಯೂಎಲ್‌ಇಡಿ 8 ಕೆ ಮಾದರಿಯ ಟಿ.ವಿ ಬೆಲೆಯು ₹3,19,900, ನಿಯೋ ಕ್ಯೂಎಲ್‌ಇಡಿ 4ಕೆ ಟಿ.ವಿ ಬೆಲೆ ₹1,39,990 ಮತ್ತು ಓಎಲ್‌ಇಡಿ ಮಾದರಿಯ ಟಿ.ವಿ ದರವು ₹1,64,990ರಿಂದ ಪ್ರಾರಂಭವಾಗಲಿದೆ.

ಫ್ರೀ ಆರ್ಡರ್‌ ಕೊಡುಗೆಯ ಭಾಗವಾಗಿ ನಿಯೋ ಕ್ಯೂಎಲ್‌ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ 4ಕೆ ಮತ್ತು ಗ್ಲೇರ್‌ ಫ್ರೀ ಓಎಲ್‌ಇಡಿ ಶ್ರೇಣಿಯನ್ನು ಖರೀದಿಸುವ ಗ್ರಾಹಕರು ₹79,990 ಮೌಲ್ಯದ ಉಚಿತ ಸೌಂಡ್‌ ಬಾರ್‌, ₹59,990 ಮೌಲ್ಯದ ಫ್ರೀಸ್ಟೈಲ್‌ ಮತ್ತು ₹29,900 ಮೌಲ್ಯದ ಮ್ಯೂಸಿಕ್‌ ಫ್ರೇಮ್‌ ಅನ್ನು ಪಡೆಯಲಿದ್ದಾರೆ. ಈ ಆಫರ್‌ ಖರೀದಿಸುವ ಮಾದರಿಯನ್ನು ಅವಲಂಬಿಸಿದ್ದು, ಶೇ 20ರಷ್ಟು ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದೆ. ಈ ಕೊಡುಗೆ ಏಪ್ರಿಲ್‌ 30ರವರೆಗೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT