ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದು ರ್‍ಯಾಬಿಟ್ ಆರ್1? ಸ್ಮಾರ್ಟ್‌ಫೋನ್‌ಗೆ ಸ್ಪರ್ಧಿಯೇ ಈ ರ್‍ಯಾಬಿಟ್‌?

ಈ ಸ್ಮಾರ್ಟ್‌ಫೋನ್ ಎಂಬುದು ನಮ್ಮನ್ನು ಆಳುವುದಕ್ಕೆ ಶುರು ಮಾಡಿ ಇನ್ನೇನು ಎರಡು ದಶಕ ಸಮೀಪಿಸಲಿದೆ.
Published 28 ಫೆಬ್ರುವರಿ 2024, 0:32 IST
Last Updated 28 ಫೆಬ್ರುವರಿ 2024, 0:32 IST
ಅಕ್ಷರ ಗಾತ್ರ

ಈ ಸ್ಮಾರ್ಟ್‌ಫೋನ್ ಎಂಬುದು ನಮ್ಮನ್ನು ಆಳುವುದಕ್ಕೆ ಶುರು ಮಾಡಿ ಇನ್ನೇನು ಎರಡು ದಶಕ ಸಮೀಪಿಸಲಿದೆ. 2007ರಲ್ಲಿ ಐಫೋನ್ ಬಿಡುಗಡೆಯಾದಾಗ ಇಡೀ ಫೋನ್ ಮಾರ್ಕೆಟ್ ಒಂದು ಹೊಸ ಮಗ್ಗಲು ಬದಲಿಸಿತ್ತು. ಅದರ ಅನಂತರವೂ ಯಾವ ಡಿವೈಸ್ ಕೂಡ ಸ್ಮಾರ್ಟ್‌ಫೋನ್‌ಗೆ ಸ್ಫರ್ಧೆ ಒಡ್ಡಲಿಲ್ಲ. ಬದಲಿಗೆ, ಸ್ಮಾರ್ಟ್‌ಫೋನ್‌ನ ಕೆಲಸವನ್ನೂ, ಅದರ ಪ್ರಾಮುಖ್ಯವನ್ನೂ ಇನ್ನಷ್ಟು ಹೆಚ್ಚಿಸುತ್ತಲೇ ಇದ್ದವು. ಆದರೆ, ತಂತ್ರಜ್ಞಾನ ವಲಯ ಹುಡುಕಾಟ ನಡೆಸುತ್ತಲೇ ಇದ್ದಿದ್ದು, ಈ ಸ್ಮಾರ್ಟ್‌ಫೋನ್ ಅನ್ನು ಬದಲಿಸುವ, ಅದಕ್ಕೆ ಪರ್ಯಾಯವಾದ ಡಿವೈಸ್ ಯಾವುದಾಗಬಹುದು ಎಂಬುದನ್ನೂ ಕುತುಹೂಲದಿಂದ ನಿರೀಕ್ಷಿಸುವಂತೆ ಮಾಡುತ್ತಲೇ ಇದೆ.

ಅಂದಹಾಗೆ, ಕೆಲವೇ ತಿಂಗಳುಗಳ ಹಿಂದೆ ಬಿಡುಗಡೆಯಾದ ‘ರ್‍ಯಾಬಿಟ್ ಆರ್1’ ಅನ್ನು ‘ಸ್ಮಾರ್ಟ್‌ಫೋನ್ ಕಿಲ್ಲರ್’ ಎಂದು ತಂತ್ರಜ್ಞಾನವಲಯ ಕರೆಯಲು ಶುರು ಮಾಡಿದೆ. ಆದರೆ, ಅದು ನಿಜವಾಗಿಯೂ ಸ್ಮಾರ್ಟ್‌ಫೋನ್ ಕಿಲ್ಲರ್ ಆಗಿ ಕೆಲಸ ಮಾಡುತ್ತದೆಯೇ? ಈಗ ಜನರು ಸ್ಮಾರ್ಟ್‌ಫೋನನ್ನು ಹಿಡಿದುಕೊಂಡು ತಿರುಗಾಡುತ್ತಿರುವ ಹಾಗೆ, ಮುಂದೊಂದು ದಿನ ‘ರ್‍ಯಾಬಿಟ್ ಒಎಸ್’ ಇರುವ ಡಿವೈಸ್ ಇಟ್ಟುಕೊಂಡು, ಅದರ ಜೊತೆಗೆ ಮಾತನಾಡುತ್ತಾ ಇರುತ್ತಾರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕು. ಏಕೆಂದರೆ, ಸದ್ಯಕ್ಕಂತೂ ಈ ರ್‍ಯಾಬಿಟ್ ಒಎಸ್ ಒಳಗೊಂಡಿರುವ ಆರ್1 ಇನ್ನೂ ಶೈಶವಾವಸ್ಥೆಯಲ್ಲಿ ಇರುವ ಹಾಗೆ ಕಾಣಿಸುತ್ತದೆ.

ಏನಿದು ರ್‍ಯಾಬಿಟ್ ಆರ್1?


ಇದೊಂದು ಪುಟ್ಟ, ಅಂಗೈಯಲ್ಲಿ ಇಟ್ಟುಕೊಳ್ಳಬಹುದಾದ, ಬೇಕಾದರೆ ಪುಟ್ಟ ಜೇಬಿನಲ್ಲೂ ಇಟ್ಟುಕೊಳ್ಳಬಹುದಾದ ಒಂದು ಸಾಧನ. ಇದರಲ್ಲಿ ‘ರ್‍ಯಾಬಿಟ್ ಒಎಸ್’ ಎಂಬ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್ ಇದೆ. ಇದರಲ್ಲೂ ‘ಎಐ’, ಎಂದರೆ ’ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಇದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಬಿಡಿ. ಹಾಗೆಂದು ಇದು ಸ್ಮಾರ್ಟ್‌ಫೋನ್. ಇದರಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಹಾಗೆ 6 ಇಂಚು ಸ್ಕ್ರೀನ್ ಇಲ್ಲ; ಬದಲಿಗೆ 2.8 ಇಂಚು ಸ್ಕ್ರೀನ್ ಇದೆ. ಇದೊಂದು ರೀತಿ ‘ಪರ್ಸನಲ್ ಅಸಿಸ್ಟೆಂಟ್’ ಹಾಗೆ ಕೆಲಸ ಮಾಡುತ್ತದೆ. ಒಂದು ಕ್ಯಾಮೆರಾ, ಒಂದು ವೀಲ್, ಸ್ಪೀಕರ್ ಮತ್ತು ಮೈಕ್ರೋಫೋನ್‌ಗಳಿವೆ.
ಇದು ‘ಚಾಟ್‌ ಜಿಪಿಟಿ’ ಅಥವಾ ‘ಜನರೇಟಿವ್ ಎಐ’ ರೀತಿ ಲ್ಯಾಂಗ್ವೇಜ್ ಮಾಡೆಲ್‌ಗಳನ್ನು ಆಧರಿಸಿ ಕೆಲಸ ಮಾಡುವುದಿಲ್ಲ. ಬದಲಿಗೆ, ಇದು ‘ಎಲ್ಎಎಂ’ ಎಂದರೆ ‘ಲಾರ್ಜ್ ಆಕ್ಷನ್ ಮಾಡೆಲ್‌’ಗಳನ್ನು ಆಧರಿಸಿ ಕೆಲಸ ಮಾಡುತ್ತದೆ. ಹಾಗೆ ನೋಡಿದರೆ, ಇದು ‘ಅಲೆಕ್ಸಾ’ ಅಥವಾ ‘ಗೂಗಲ್ ಅಸಿಸ್ಟೆಂಟ್’ ರೀತಿಯಲ್ಲೇ ಕೆಲಸ ಮಾಡುತ್ತದೆ. ಆದರೆ, ಆಂತರಿಕವಾಗಿ ಅದಕ್ಕಿಂತಲೂ ಈ ರ್‍ಯಾಬಿಟ್ ಒಎಸ್ ಭಿನ್ನ. ಏಕೆಂದರೆ, ಇದರ ಆಕ್ಷನ್ ಮಾಡೆಲ್‌ಗಳು ಎಷ್ಟು ವ್ಯಾಪಕವಾದವು ಎಂದರೆ, ಈ ಒಎಸ್‌ಗೆ ಅಂಥ ಪ್ರತ್ಯೇಕ ಆ್ಯಪ್‌ಗಳನ್ನು ಡೆವಲಪ್ ಮಾಡಬೇಕಿಲ್ಲ. ಇದು ನಮ್ಮ ಸ್ಮಾರ್ಟ್‌ಫೋನ್‌ಲ್ಲಿರುವ ಯಾವ ಆ್ಯಪ್‌ಗಳ ಜೊತೆಗೆ ಬೇಕಾದರೂ ಕೆಲಸ ಮಾಡಬಲ್ಲದು. ‘ಚಾಟ್ ಜಿಪಿಟಿ’, ‘ಜೆಮಿನಿ’ಗಳೆಲ್ಲ ಹೇಗೆ ಸ್ವಯಂ ಕಲಿಕೆ ಸಾಮರ್ಥ್ಯವನ್ನು ಹೊಂದಿದೆಯೋ ಇದರ ಆಕ್ಷನ್ ಮಾಡೆಲ್ ಕೂಡ ಸ್ವಯಂ ಕಲಿಕೆಯ ಸಾಮರ್ಥ್ಯವನ್ನು ಹೊಂದಿವೆ.

ಇದು ನಮಗೆ ಬೇಕಾದ ಹಾಡುಗಳನ್ನು ಪ್ರಸಾರ ಮಾಡುತ್ತದೆ, ಕಾರಿಗೆ ಸೂಚನೆ ನೀಡುತ್ತದೆ, ದಿನಸಿ ಖರೀದಿ ಮಾಡುತ್ತದೆ, ಬೇಕಾದವರಿಗೆ ಮೆಸೇಜ್ ಕಳುಹಿಸುತ್ತದೆ... ಇವೆಲ್ಲವನ್ನೂ ಅತ್ಯಂತ ಸುಲಭವಾಗಿ ಮಾತಿನ ಆದೇಶದಲ್ಲಿ ಮಾಡಿ ಮುಗಿಸುತ್ತದೆ. ಉದಾಹರಣೆಗೆ, ಫೋಟೋಶಾಪ್ ಬಳಸಿಕೊಂಡು ಒಂದು ಫೋಟೋದಲ್ಲಿನ ವಾಟರ್‌ಮಾರ್ಕನ್ನು ತೆಗೆದುಹಾಕು ಎಂದು ಈ ರ್‍ಯಾಬಿಟ್ ಒಎಸ್‌ಗೆ ಹೇಳಿದರೆ, ಅದು ಬರಿ 30 ಸೆಕೆಂಡುಗಳಲ್ಲಿ ಅದನ್ನು ಅಳಿಸಿ ಹಾಕಿಕೊಡುತ್ತದೆ. ಅಷ್ಟೇ ಅಲ್ಲ, ವಾಟರ್‌ಮಾರ್ಕ್ ತೆಗೆಯುವ ಇದೇ ಕೆಲಸವನ್ನು ನಿಮಗೆ ಬೇಕಾಗುವ ಮುಂದಿನ ಫೋಟೊಗಳಲ್ಲೂ ನೀವು ಹೇಳದೇ ಇದ್ದರೂ ಮಾಡಿಕೊಡುತ್ತದೆ.
ಮೇಲ್ನೋಟಕ್ಕೆ ಇದು ಸ್ಮಾರ್ಟ್‌ಫೋನ್‌ಗೆ ಪರ್ಯಾಯವಲ್ಲ ಎಂದು ತೋರುತ್ತದೆಯಾದರೂ, ಸದ್ಯಕ್ಕೆ ಮಟ್ಟಿಗೆ ಇದೊಂದು ‘ಸೂಪರ್ ಆ್ಯಪ್‌’ ರೀತಿ ಕೆಲಸ ಮಾಡುತ್ತದೆ. ಆದರೆ, ಇದು ತನ್ನ ಸವಾಲುಗಳನ್ನೆಲ್ಲ ಎದುರಿಸಿ ನಂತರ, ಸಂಕೀರ್ಣ ಕೆಲಸಗಳನ್ನೆಲ್ಲ ಸರಾಗವಾಗಿ ಮಾಡಿ ಮುಗಿಸುವಂತಾದರೆ, ಸ್ಮಾರ್ಟ್‌ಫೋನ್‌ಗೆ ಪರ್ಯಾಯವಾಗುವ ಎಲ್ಲ ಸಾಮರ್ಥ್ಯವನ್ನೂ ಹೊಂದಿದೆ ಎಂದು ಹೇಳಲಾಗಿದೆ.


‘ಸ್ಟೀವ್ ಜಾಬ್ಸ್ ತಮ್ಮ ಐಫೋನ್ ಅನ್ನು ಪ್ರಸ್ತುತಪಡಿಸಿದ ನಂತರದಲ್ಲಿ ಅತ್ಯಂತ ಕುತೂಹಲದಿಂದ, ಆಸಕ್ತಿಯಿಂದ ನಾನು ನೋಡಿದ ಪ್ರೆಸೆಂಟೇಶನ್‌ಗಳ ಪೈಕಿ ರ್‍ಯಾಬಿಟ್ ಒಎಸ್ ಒಂದಾಗಿದೆ’ ಎಂದು ಮೈಕ್ರೋಸಾಫ್ಟ್ನ ಸಿಇಒ ಸತ್ಯ ನಾದೆಳ್ಲ ಹೇಳಿದ್ದಾರೆ. ಮಾರ್ಚ್‌ನಲ್ಲಿ ಇದರ ಮೊದಲ ಬ್ಯಾಚ್‌ನ ಆರ್ಡರ್ ಜನರಿಗೆ ತಲುಪಲಿದೆ. ಈಗಾಗಲೇ ನಾಲ್ಕು ಬ್ಯಾಚ್‌ಗಳಲ್ಲಿ ‘ಪ್ರೀ ಆರ್ಡರ್‌ಗೆ’ ಅವಕಾಶ ಮಾಡಿಕೊಡಲಾಗಿದ್ದು, ಎಲ್ಲವೂ ಬುಕ್ ಆಗಿವೆ. ಅಮೆರಿಕದ ಲಾಸ್ ವೆಗಾಸ್‌ನಲ್ಲಿ ನಡೆದ ‘ಕನ್‌ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋ’ದಲ್ಲಿ ರ್‍ಯಾಬಿಟ್ ಸಂಸ್ಥೆಯ ಸಂಸ್ಥಾಪಕ ಜೆಸ್ಸೀ ಲ್ಯೂ ಇದನ್ನು ಪ್ರಸ್ತುತಪಡಿಸಿದ್ದರು. ಆ ಪ್ರಸ್ತುತಿ ಇಡೀ ತಂತ್ರಜ್ಞಾನವಲಯದಲ್ಲಿ ಹೊಸ ಕುತೂಹಲವನ್ನು ಮೂಡಿಸಿದೆ. ಇದರ ಬೆಲೆಯೂ ಹೆಚ್ಚಿಲ್ಲ. ಬರಿ 199 ಅಮೆರಿಕನ್ ಡಾಲರ್‌ನಲ್ಲಿ ಕೈಗೆ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT