ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈರ್‌ಲೆಸ್ ಚಾರ್ಜ್ ಬೆಂಬಲಿಸುವ ಅಗ್ಗದ ದರದ ಪವರ್‌ಬ್ಯಾಂಕ್ - ಸೈಬೋಟ್ರಾನ್ ಸ್ಪಿನ್

Published : 21 ಆಗಸ್ಟ್ 2024, 8:15 IST
Last Updated : 21 ಆಗಸ್ಟ್ 2024, 8:15 IST
ಫಾಲೋ ಮಾಡಿ
Comments
ಪ್ರಮುಖ ವೈಶಿಷ್ಟ್ಯಗಳು
  • ವೈರ್‌ಲೆಸ್ ಚಾರ್ಜಿಂಗ್ ಬೆಂಬಲ
  • ಏಕಕಾಲದಲ್ಲಿ ಎರಡು ಸಾಧನಗಳ ಚಾರ್ಜಿಂಗ್
  • ಯುಎಸ್‌ಬಿ ಲೈಟ್ನಿಂಗ್, ಟೈಪ್ ಸಿ, ಟೈಪ್ ಎ ಪೋರ್ಟ್ ಬೆಂಬಲ

ಸ್ಮಾರ್ಟ್ ಫೋನ್ ಬಳಕೆದಾರರಿಗೆ ನಿರಂತರವಾಗಿ ಅದನ್ನು ಬಳಸುವಲ್ಲಿ ತೊಡಕಾಗುವುದು ಅದರ ಬ್ಯಾಟರಿ ಚಾರ್ಜ್. ಕೈಯಲ್ಲಿ ಒಯ್ಯಬಹುದಾದ ಪವರ್‌ಬ್ಯಾಂಕ್ ಹೆಸರಿನ ಸಾಕಷ್ಟು ಸಾಧನಗಳಿದ್ದರೂ ಅವುಗಳ ಗಾತ್ರ, ನಿಧಾನಗತಿಯ ಚಾರ್ಜಿಂಗ್ ಮತ್ತು ನಿರ್ದಿಷ್ಟ ಇನ್‌ಪುಟ್-ಔಟ್‌ಪುಟ್ ಪೋರ್ಟ್‌ಗಳ ವ್ಯತ್ಯಾಸ - ಇವೆಲ್ಲವೂ ತೊಡಕಾಗುತ್ತವೆ. ಇದಕ್ಕೆ ಪರಿಹಾರ ರೂಪದಲ್ಲಿ ಭಾರತ ಮೂಲದ ನು-ರಿಪಬ್ಲಿಕ್ ಕಂಪನಿಯು ವಿನೂತನವಾದ 'ನು ರಿಪಬ್ಲಿಕ್ ಸೈಬೋಟ್ರಾನ್ ಸ್ಪಿನ್' ಹೆಸರಿನ 10000 mAh ಚಾರ್ಜ್ ಸಾಮರ್ಥ್ಯದ ಪವರ್ ಬ್ಯಾಂಕನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಅದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ವಿನ್ಯಾಸ, ವೈಶಿಷ್ಟ್ಯಗಳು

ಮೆಟಾಲಿಕ್ ಫಿನಿಶ್ ಇರುವ ಆಕರ್ಷಕವಾದ ಈ ಪವರ್‌ಬ್ಯಾಂಕ್ ಪುಟ್ಟದಾಗಿದ್ದು, ಅಂಗಿಯ ಜೇಬಿನಲ್ಲಿ ಕೂರುವಂತಹ ಗಾತ್ರವಿದೆ. ಹಗುರವೂ ಇದೆ. ನೋಡಿದ ತಕ್ಷಣ ಗಮನ ಸೆಳೆಯುವುದು ಅದರ ಹಿಂಭಾಗದಲ್ಲಿರುವ ಒಂದು ಚಕ್ರ. ಕೈಖಾಲಿ ಇದ್ದಾಗ ಇದನ್ನು ತಿರುಗಿಸುತ್ತಾ ಮನಸ್ಸಿನ ಏಕಾಗ್ರತೆಯತ್ತ ಗಮನ ಹರಿಸಬಹುದಾದ ಆಟಿಕೆ (ಫಿಜೆಟ್ ಸ್ಪಿನ್ನರ್) ಇದು. ಈ ಪವರ್‌ಬ್ಯಾಂಕ್‌ನಲ್ಲಿ ಮೂರು ವಿಧದ (ಲೈಟ್ನಿಂಗ್, ಟೈಪ್ ಸಿ, ಟೈಪ್ ಎ) ಪೋರ್ಟ್‌ಗಳು, ಬ್ಯಾಟರಿ ಚಾರ್ಜ್ ಎಷ್ಟಿದೆ ಎಂದು ತಿಳಿಸುವ ಎಲ್‌ಇಡಿ ಡಿಸ್‌ಪ್ಲೇ, ವೈರ್‌ಲೆಸ್ ಚಾರ್ಜಿಂಗ್ ಸೌಕರ್ಯ ಇದೆ. ಹೀಗಾಗಿ ಆಂಡ್ರಾಯ್ಡ್, ಆ್ಯಪಲ್ ಅಂತೆಲ್ಲ ಪ್ರತ್ಯೇಕ ಕೇಬಲ್‌ಗಳಿಗೆ ಪರದಾಡಬೇಕಿಲ್ಲ.

ಈ ಸೈಬೋಟ್ರಾನ್ ಸ್ಪಿನ್ ಪವರ್ ಬ್ಯಾಂಕ್‌ನ ಮುಖ್ಯ ವೈಶಿಷ್ಟ್ಯವೆಂದರೆ, ಇದರಲ್ಲಿ ವೈರ್‌ಲೆಸ್ ಚಾರ್ಜಿಂಗ್ ಕೂಡ ಸಾಧ್ಯ. ಅಂದರೆ, ಮ್ಯಾಗ್‌ಸೇಫ್ ಎಂಬ, ಅಯಸ್ಕಾಂತೀಯವಾಗಿ ಚಾರ್ಜ್ ಆಗುವ ವ್ಯವಸ್ಥೆಯನ್ನು ಬೆಂಬಲಿಸುವ ಸ್ಮಾರ್ಟ್ ಸಾಧನಗಳನ್ನು (ಉದಾಹರಣೆಗೆ, ಇತ್ತೀಚಿನ ಐಫೋನ್) ಇದರ ಮೇಲಿಟ್ಟರೆ ಸಾಕು, ಯಾವುದೇ ಕೇಬಲ್ ಇಲ್ಲದೆ ಸಾಧನವು ಚಾರ್ಜ್ ಆಗುತ್ತದೆ. ಅದು ಕೂಡ ವೇಗವಾಗಿಯೇ ಚಾರ್ಜ್ ಆಗುತ್ತದೆ. ಸಾಮಾನ್ಯ ಮ್ಯಾಗ್‌ಸೇಫ್ ಚಾರ್ಜರ್‌ಗಳು 7.5W ಚಾರ್ಜಿಂಗನ್ನು ಬೆಂಬಲಿಸುತ್ತಿದ್ದರೆ, ಸೈಬೋಟ್ರಾನ್ ಸ್ಪಿನ್ ಸಾಧನದಲ್ಲಿ 15W ವೇಗದಲ್ಲಿ ಚಾರ್ಜಿಂಗ್ ಆಗುತ್ತದೆ. ಸುಮಾರು 45 ನಿಮಿಷದಲ್ಲಿ ಐಫೋನ್ ಶೇ.50ರಷ್ಟು ಚಾರ್ಜ್ ಆಗಿದೆ.

ಅದೇ ರೀತಿ, ಕೇಬಲ್ ಮೂಲಕವೂ ಚಾರ್ಜ್ ಮಾಡಬಹುದಾಗಿದ್ದು, ಇದರ ವೇಗವೂ 22.5W ಅಂತ ಕಂಪನಿ ಹೇಳಿಕೊಂಡಿದೆ. ಅಂದರೆ, ಈ ವೇಗವನ್ನು ಬೆಂಬಲಿಸುವ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳು ವೇಗವಾಗಿಯೇ ಚಾರ್ಜ್ ಆಗುತ್ತವೆ. (ಮಾಹಿತಿಗಾಗಿ: ನಿಮ್ಮ ಸಾಧನವು ವೇಗದ ಚಾರ್ಜಿಂಗನ್ನು ಬೆಂಬಲಿಸದಿದ್ದರೆ, ಯಾವುದೇ ವೇಗದ ಚಾರ್ಜಿಂಗ್ ಅಡಾಪ್ಟರ್ ಕೂಡ ಕೆಲಸ ಮಾಡಲಾರದು).

ಇಷ್ಟಲ್ಲದೆ, ಹಳೆಯ, ಎಂದರೆ ಐಫೋನ್ 14 ಮತ್ತು ಹಿಂದಿನ ಬಳಕೆದಾರರು ಈ ಪವರ್ ಬ್ಯಾಂಕ್ ಚಾರ್ಜ್ ಮಾಡಬೇಕಿದ್ದರೆ, ಅವರಲ್ಲಿರುವ ಐಫೋನ್‌ನ ಲೈಟ್ನಿಂಗ್ ಕೇಬಲನ್ನೇ ಬಳಸಬಹುದಾಗಿದೆ. ಲೈಟ್ನಿಂಗ್ ಪೋರ್ಟ್ ಇದೆ. ಮತ್ತೊಂದು ಇನ್‌ಪುಟ್‌ಗೂ ಔಟ್‌ಪುಟ್‌ಗೂ ನೆರವಾಗಬಲ್ಲ ಟೈಪ್-ಸಿ ಪೋರ್ಟ್ ಇದೆ. ಜೊತೆಗೆ ಸಾಮಾನ್ಯ ಯುಎಸ್‌ಬಿ (ಟೈಪ್ ಎ) ಪೋರ್ಟ್ ಕೂಡ ಇದರಲ್ಲಿರುವುದರಿಂದ, ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು, ಅವುಗಳ ಪೋರ್ಟ್ ಯಾವುದೇ ರೀತಿ ಇದ್ದರೂ ಕೂಡ ಚಾರ್ಜ್ ಮಾಡಬಹುದಾಗಿದೆ.

ಏಕಕಾಲದಲ್ಲಿ ಎರಡು ಸಾಧನಗಳನ್ನು ಈ ಪವರ್ ಬ್ಯಾಂಕ್ ಮೂಲಕ ಚಾರ್ಜ್ ಮಾಡಬಹುದು ಎಂಬುದು ಮತ್ತೊಂದು ಹೊಸ ವೈಶಿಷ್ಟ್ಯ. 10000mAh ಚಾರ್ಜ್ ಸಾಮರ್ಥ್ಯ ಇರುವುದರಿಂದ, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ, (ಸಾಮಾನ್ಯವಾಗಿ ಎಲ್ಲ ಸಾಧನಗಳಲ್ಲಿ 5000mAh ಸಾಮರ್ಥ್ಯದ ಬ್ಯಾಟರಿ ಇರುತ್ತದೆ ಎಂಬ ಆಧಾರದಲ್ಲಿ) ಎರಡು ಸಾಧನಗಳನ್ನು ಶೂನ್ಯದಿಂದ ಪೂರ್ತಿಯಾಗಿ ಚಾರ್ಜ್ ಮಾಡುವುದಕ್ಕೆ ಯಾವುದೇ ತೊಡಕಾಗಿಲ್ಲ.

ಬೆಲೆ ₹2499 ಆಗಿದ್ದು, ಬ್ಲಿಂಕಿಟ್ ತಾಣದಲ್ಲಿ ಹಾಗೂ ನು-ರಿಪಬ್ಲಿಕ್ ಜಾಲತಾಣದಲ್ಲಿ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT