ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಸಾಕು, ಭಾರತ ಬೇಕು: ಆ್ಯಪಲ್‌ ನಂತರ ಗೂಗಲ್ ಚಿತ್ತ ಭಾರತದತ್ತ

Published 21 ಜೂನ್ 2023, 6:44 IST
Last Updated 21 ಜೂನ್ 2023, 6:44 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೋವಿಡ್‌ ಲಾಕ್‌ಡೌನ್ ಹಾಗೂ ಚೀನಾದೊಂದಿಗಿನ ವ್ಯಾಪಾರ ಪೈಪೋಟಿಯಿಂದಾಗಿ ಅಮೆರಿಕ ಮೂಲದ ಆಲ್ಪಬೆಟ್‌ ಇಂಕ್‌ನ ಗೂಗಲ್‌ ಕಂಪನಿಯು ತನ್ನ ಪಿಕ್ಸೆಲ್ ಫೋನ್‌ಗಳ ಬಿಡಿಭಾಗಗಳ ಜೋಡಣಾ ಘಟಕವನ್ನು ಭಾರತದಲ್ಲಿ ತೆರೆಯಲು ಉತ್ಸುಕತೆ ತೋರಿದೆ.

ಐಫೋನ್‌ ನಂತರ ಚೀನಾ ತೊರೆದು ಭಾರತದತ್ತ ಮುಖ ಮಾಡಿದ ಎರಡನೇ ದೊಡ್ಡ ಕಂಪನಿ ಇದಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಗೂಗಲ್ ಕಂಪನಿಯು ಈಗಾಗಲೇ ಸ್ಥಳೀಯ ಲಾವಾ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ಡಿಕ್ಸಾನ್ ಟೆಕ್ನಾಲಜೀಸ್‌ ಇಂಡಿಯಾ ಲಿಮಿಟೆಡ್‌ ಹಾಗೂ ಫಾಕ್ಸ್‌ಕಾನ್‌ ಟೆಕ್ನಾಲಜೀಸ್‌ ಇಂಡಿಯಾ ಯೂನಿಟ್ ಭಾರತ್ ಎಫ್‌ಐಎಚ್‌ ಜತೆ ಮಾತುಕತೆ ನಡೆಸಿದೆ. ಈ ನಡುವೆ ಆ್ಯಪಲ್‌ ಕಂಪನಿಯು ಭಾರತದಲ್ಲಿನ ತನ್ನ ತಯಾರಿಕಾ ಸಾಮರ್ಥ್ಯವನ್ನು ಮೂರು ಪಟ್ಟು ಹೆಚ್ಚಿಸಿದೆ.

ಭಾರತವನ್ನು ಚೀನಾ ನಂತರದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಪರ್ಯಾಯ ತಯಾರಿಕಾ ಕೇಂದ್ರವನ್ನಾಗಿ ಅಮೆರಿಕ ಪರಿಗಣಿಸಿದೆ. ಜತೆಗೆ ವಾಷಿಂಗ್ಟನ್‌ ಹಾಗೂ ಬೀಜಿಂಗ್‌ ನಡುವಿನ ಗುದ್ದಾಟವೂ ಈ ಬೃಹತ್ ಬದಲಾವಣೆಗೆ ಕಾರಣ ಎಂದು ಬ್ಲೂಮ್‌ಬರ್ಗ್ ವಿಶ್ಲೇಷಿಸಿದೆ.

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ರಾಷ್ಟ್ರಗಳ ನಡುವಿನ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ವ್ಯಾಪಾರದಲ್ಲಿರುವ ಕೆಲ ತೊಡಕುಗಳ ನಿವಾರಣೆ ಕುರಿತಂತೆ ಚರ್ಚಿಸುವ ಸಾಧ್ಯತೆ ಇದೆ.

ಕೆಲ ದಿನಗಳ ಹಿಂದೆ ಭಾರತದ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಗೂಗಲ್ ಸಿಇಒ ಸುಂದರ ಪಿಚೈ ಅವರನ್ನು ಕ್ಯಾಲಿಫೋರ್ನಿಯಾದ ಮೌಂಟೈನ್ ವ್ಯೂದಲ್ಲಿರುವ ಕಂಪನಿಯ ಕಚೇರಿಯಲ್ಲಿ ಭೇಟಿ ಮಾಡಿದ್ದರು. ಭಾರತದಲ್ಲಿ ಉತ್ಪನ್ನಗಳ ತಯಾರಿಕೆ ಹೆಚ್ಚಳ ಕುರಿತಂತೆ ಪ್ರಧಾನಿ ಮೋದಿ ಅವರ ಯೋಜನೆಗಳ ಕುರಿತು ಅವರಿಗೆ ವಿವರಿಸಿದ್ದರು ಎಂದೆನ್ನಲಾಗಿದೆ. ಇದರ ಬೆನ್ನಲ್ಲೇ ಗೂಗಲ್‌ನ ಕೆಲ ಹಿರಿಯ ಅಧಿಕಾರಿಗಳು ಭಾರತ ಪ್ರವಾಸ ಕೈಗೊಂಡಿದ್ದಾರೆ. ಸ್ಥಳೀಯ ಸಂಪನ್ಮೂಲ, ತಯಾರಿಕಾ ವಾತಾವರಣ ಹಾಗೂ ಸೂಕ್ತ ಪಾಲುದಾರರಾಗಿ ಹುಡುಕಾಟ ನಡೆಸಿದ್ದಾರೆ ಎಂದೆನ್ನಲಾಗಿದೆ.

ಸದ್ಯ ಚೀನಾ ಹಾಗೂ ವಿಯಟ್ನಾಂನಲ್ಲಿ ತಯಾರಿಕಾ ಘಟಕಗಳನ್ನು ಹೊಂದಿರುವ ಗೂಗಲ್‌, ಕಳೆದ ವರ್ಷ ಸುಮಾರು 9 ದಶಲಕ್ಷ ಪಿಕ್ಸೆಲ್‌ ಫೋನ್‌ಗಳನ್ನು ತಯಾರಿಸಿದೆ. ಫೋನುಗಳ ಬಿಡಿಭಾಗಗಳನ್ನು ಸ್ಥಳೀಯವಾಗಿ ಜೋಡಿಸುವ ಕಾರ್ಯ ಯಶಸ್ವಿಯಾದಲ್ಲಿ ಫೋನುಗಳ ಮಾರಾಟವೂ ಹೆಚ್ಚಾಗಲಿದೆ. ಜತೆಗೆ, ಗೂಗಲ್‌ನ ಇತರ ತಂತ್ರಜ್ಞಾನ ಆಧಾರಿತ ಉತ್ಪನ್ನಗಳೂ ಭಾರತದಲ್ಲೇ ತಯಾರಾಗುವ ಸಾಧ್ಯತೆ ಇದೆ ಬ್ಲೂಮ್‌ಬರ್ಗ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT