ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಬಾಹ್ಯಾಕಾಶ ನಿಲ್ದಾಣದಲ್ಲಿ ಗಾಳಿ ಸೋರಿಕೆ ಪತ್ತೆ ಯಶಸ್ವಿ

Last Updated 28 ಅಕ್ಟೋಬರ್ 2020, 6:20 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌)ವರ್ಷದಿಂದೀಚೆಗೆ ಆಗುತ್ತಿರುವ ಗಾಳಿಯ ಸೋರಿಕೆಯನ್ನು ಪತ್ತೆ ಹಚ್ಚುವಲ್ಲಿಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ) ಹಾಗೂರಷ್ಯಾ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ (ರೊಸ್‌ಕಾಸ್ಮೊಸ್‌) ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ನಿಲ್ದಾಣದ ರಷ್ಯಾದ ವಿಭಾಗದಲ್ಲಿರುವ (ಸೆಗ್‌ಮೆಂಟ್‌) ಝ್ವೆಝ್ಡಾ ಸರ್ವೀಸ್‌ ಮಾಡ್ಯೂಲ್‌ನಲ್ಲಿ (Zvezda Service Module) ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಹೊರಬರುತ್ತಿರುವುದ‌ನ್ನು ವಿಜ್ಞಾನಿಗಳು ತಿಂಗಳ ಹಿಂದೆ ಪತ್ತೆ ಮಾಡಿದ್ದಾರೆ. ಹಾಗಿದ್ದರೂ, ಗಾಳಿ ಸೋರಿಕೆಯಾಗುತ್ತಿರುವ ನಿರ್ದಿಷ್ಟ ಸ್ಥಳವನ್ನು ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗಿಲ್ಲ.

ನಿಲ್ದಾಣದ ಒಳಗಿನಿಂದ ಸಣ್ಣ ಪ್ರಮಾಣದಲ್ಲಿ ಗಾಳಿ ಸೋರಿಕೆಯಾಗುವುದು ಸಾಮಾನ್ಯ. ಆದರೆ, 2019ರ ಸೆಪ್ಟೆಂಬರ್‌ನಿಂದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಸೋರಿಕೆಯಾಗುತ್ತಿರುವುದನ್ನು ವಿಜ್ಞಾನಿಗಳು ಗುರುತಿಸಿದ್ದರು. ಈ ವರ್ಷದ ಆಗಸ್ಟ್‌ನಿಂದೀಚೆಗೆ ಸೋರಿಕೆ ಮೂಲ ಪತ್ತೆಹಚ್ಚಲು ನಿಲ್ದಾಣದಲ್ಲಿದ್ದ ಗಗನಯಾನಿಗಳಾದನಾಸಾದ ಕ್ರಿಸ್ ಕ್ಯಾಸಿಡಿ, ರಷ್ಯಾದ ಅನಾಟೊಲಿ ಇವಾನಿಶಿನ್‌ ಮತ್ತು ಇವಾನ್‌ ವಾಗ್ನೆರ್ ಹಾಗೂ ನಾಸಾ ವಿಜ್ಞಾನಿಗಳು ಹರಸಾಹಸ ಪಟ್ಟಿದ್ದರು.ಸೆಪ್ಟೆಂಬರ್‌ ತಿಂಗಳ ಅಂತ್ಯದಲ್ಲಿ ಈ ಕಾರ್ಯದಲ್ಲಿ ಅವರು ಯಶ ಕಂಡಿದ್ದಾರೆ.

ಝ್ವೆಝ್ಡಾ ಸರ್ವೀಸ್‌ ಮಾಡ್ಯೂಲ್: ಇದುಬಾಹ್ಯಾಕಾಶ ನಿಲ್ದಾಣದ ಬಹುಮುಖ್ಯ ಭಾಗ. ರಷ್ಯಾ ವಿಭಾಗದ ಹೃದಯ ಭಾಗ. 2000ನೇ ಇಸವಿಯಲ್ಲಿ ಐಎಸ್‌ಎಸ್‌ಗೆ ಈ ಘಟಕವನ್ನು ಜೋಡಿಸಲಾಗಿದೆ. ಭೂಮಿಯಿಂದ ತೆರಳುವ ಗಗನನೌಕೆಗಳನ್ನು ಜೋಡಿಸಲೂ (ಡಾಕಿಂಗ್‌) ಇದನ್ನು ಬಳಸಲಾಗುತ್ತದೆ. ಬಾಹ್ಯಾಕಾಶ ಅಧ್ಯಯನದ ಆರಂಭದ ದಿನಗಳಲ್ಲಿ ಅಂತರಿಕ್ಷದಲ್ಲಿ ಮಾನವ ವಾಸಕ್ಕೆ ಅವಕಾಶ ಕಲ್ಪಿಸಿದ ಹೆಗ್ಗಳಿಕೆ ಝ್ವೆಝ್ಡಾದ್ದು. ಇಬ್ಬರು ವಾಸಿಸಲು ಇಲ್ಲಿ ವ್ಯವಸ್ಥೆ ಇದೆ.

43 ಅಡಿಗಳಷ್ಟು ಉದ್ದ, 13.5 ಅಡಿ ಸುತ್ತಳತೆ ಹೊಂದಿರುವ ಈ ಘಟಕದಲ್ಲಿಜೀವ ರಕ್ಷಕ ಸಲಕರಣೆಗಳಿವೆ. ಭೂಮಿಯೊಂದಿಗೆ ಸಂವಹನ ನಡೆಸುವ, ವಿದ್ಯುತ್‌ ಪೂರೈಸುವ ವ್ಯವಸ್ಥೆ, ದತ್ತಾಂಶಗಳನ್ನು ವಿಶ್ಲೇಷಿಸುವ ವ್ಯವಸ್ಥೆ, ನೌಕೆಯ ನಿಯಂತ್ರಣ ವ್ಯವಸ್ಥೆಗಳನ್ನೂ ಘಟಕ ಹೊಂದಿವೆ.

ಸೋರಿಕೆ ಪತ್ತೆ ಹಚ್ಚಿದ್ದು ಹೇಗೆ?:ನಿಲ್ದಾಣದಲ್ಲಿದ್ದ ಮೂವರೂ ಗಗನಯಾತ್ರಿಗಳು ಐಎಸ್‌ಎಸ್‌ನ ರಷ್ಯಾ ವಿಭಾಗದ ಎಲ್ಲ ಘಟಕಗಳನ್ನು ಒಂದೊಂದಾಗಿ ಮುಚ್ಚಿ ಆಲ್ಟ್ರಾಸೋನಿಕ್ ಸೋರಿಕೆ ಪತ್ತೆ ಉಪಕರಣದ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಿದ್ದರು. ಇವುಗಳನ್ನು ಭೂಮಿಯಲ್ಲಿದ್ದ ವಿಜ್ಞಾನಿಗಳು ವಿಶ್ಲೇಷಿಸಿದ್ದರು. ಝ್ವೆಝ್ಡಾ ಘಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಳಿ ಹೊರಬರುತ್ತಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಸೋರಿಕೆಯಾಗುತ್ತಿರುವ ನಿರ್ದಿಷ್ಟ ಸ್ಥಳದ ಶೋಧ ಕಾರ್ಯ ಮುಂದುವರಿದಿದೆ ಎಂದು ರಷ್ಯಾ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಗಾಳಿಯ ಸೋರಿಕೆಯಿಂದಾಗಿ ಗಗನಯಾತ್ರಿಗಳಿಗೆ ಯಾವುದೇ ಅಪಾಯ ಇಲ್ಲ. ಆದರೆ, ಅವರ ಕೆಲಸದ ವೇಳಾಪಟ್ಟಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಎಂದುನಾಸಾ ಹೇಳಿದೆ.

ನಿರಂತರ ಗಾಳಿ ಸೋರಿಕೆಯಿಂದ ಘಟಕದಲ್ಲಿನ ಉಷ್ಣಾಂಶದಲ್ಲಿ ಬದಲಾವಣೆ ಕಂಡು ಬಂದಿದೆ. ನಿಲ್ದಾಣದ ಒಳಗಡೆ ಗಾಳಿಯ ಒತ್ತಡವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಚ್ಚುವರಿ ಗಾಳಿಯನ್ನು ಪೂರೈಕೆ ಮಾಡಬೇಕಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

64ನೇ ತಂಡ: ಐಎಸ್‌ಎಸ್‌ಗೆ ಅಕ್ಟೋಬರ್‌ 14ರಂದು ಮೂವರು ಗಗನಯಾನಿಗಳ ಹೊಸ ತಂಡ ಭೂಮಿಯಿಂದ ತೆರಳಿದೆ. ನಾಸಾದ ವಿಜ್ಞಾನಿ ಕೇಟ್‌ ರೂಬಿನ್ಸ್‌, ರಷ್ಯಾದ ಸೆರ್ಗಿ ರಿಝಿಕೊವ್‌ ಮತ್ತು ಸೆರ್ಗಿ ಕುಡ್‌–ಸ್ವೆರ್ಕೊವ್‌ ಅವರು ಸದ್ಯ ನಿಲ್ದಾಣದಲ್ಲಿ ಅಧ್ಯಯನದಲ್ಲಿ ತೊಡಗಿದ್ದಾರೆ. ಐಎಸ್‌ಎಸ್‌ಗೆ ತೆರಳಿರುವ 64ನೇ ತಂಡ ಇದು.

63ನೇ ತಂಡದ ಸದಸ್ಯರಾದಕ್ರಿಸ್ ಕ್ಯಾಸಿಡಿ, ರಷ್ಯಾದ ಅನಾಟೊಲಿ ಇವಾನಿಶಿನ್‌ ಮತ್ತು ಇವಾನ್‌ ವಾಗ್ನೆರ್ ಅವರು ಅಕ್ಟೋಬರ್‌ 21ರಂದು ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಹಾಗಾಗಿ, ಗಾಳಿ ಸೋರಿಕೆಯ ಮೂಲ ಪತ್ತೆ ಹಚ್ಚುವ ಹೊಣೆ ಹೊಸ ತಂಡದ ಹೆಗಲೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT