ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ನೆಕ್ಕಿದರೆ, ಅಪ್ಪೀತು ವೈರಸ್‌: ಎಚ್ಚರ!

Last Updated 15 ಫೆಬ್ರುವರಿ 2020, 7:40 IST
ಅಕ್ಷರ ಗಾತ್ರ
ADVERTISEMENT
""

ಬೀಜಿಂಗ್‌: ನೋಟು ಎಣಿಸುವಾಗ ಕೈಬೆರಳನ್ನು ನಾಲಿಗೆಗೆ ಒತ್ತುವುದು, ಪ್ರತಿ ಬಾರಿ ನೋಟು ಹಿಡಿಯುವ ಮುನ್ನ ಎಂಜಲಿನಿಂದತೇವ ಮಾಡಿಕೊಳ್ಳುವ ಅಭ್ಯಾಸ ಇದ್ದರೆ; ಬಹುಬೇಗ ವೈರಸ್‌ ಆಹ್ವಾನಿಸಿಕೊಂಡಂತೆ. ಸಾಂಕ್ರಾಮಿಕವಾಗಿರುವ ಕೊರೊನಾದಂತಹ ವೈರಸ್‌ಗಳು ಪ್ರಾಣಕ್ಕೇ ಕುತ್ತಾಗಬಹುದು. ಚೀನಾದಲ್ಲಿ ಬಳಸಿದ ನೋಟುಗಳನ್ನು ಬೇರ್ಪಡಿಸುವ ಹಾಗೂ ಅದಕ್ಕೆ ಅಂಟಿರಬಹುದಾದ ಸೋಂಕು ನಿವಾರಿಸುವ ಪ್ರಯತ್ನ ನಡೆಯುತ್ತಿದೆ.

1,500ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್‌ ಹರಡದಂತೆ ತಡೆಯಲು ಚೀನಾ ಕೈಗೊಂಡಿರುವ ಕ್ರಮಗಳಲ್ಲಿ ನೋಟುಗಳನ್ನು ಬೇರ್ಪಡಿಸುವುದಕ್ಕೂ ಆದ್ಯತೆ ನೀಡಲಾಗಿದೆ. ಬಳಸಿದ ಯುವಾನ್ ನೋಟುಗಳನ್ನು ಬೇರ್ಪಡಿಸುವ ಬ್ಯಾಂಕ್‌ಗಳು, ನೋಟುಗಳ ಮೇಲೆ ಅಲ್ಟ್ರಾವೈಲೆಟ್‌ (ನೇರಳಾತೀತ) ಬೆಳಕನ್ನು ಹರಿಸುವ ಮೂಲಕ ಅಥವಾ ಹೆಚ್ಚು ಉಷ್ಣಾಂಶ ವ್ಯವಸ್ಥೆಯಲ್ಲಿ ನೋಟುಗಳನ್ನು ಸಂಗ್ರಹಿಸಿ ಸೋಂಕು ನಿವಾರಿಸಲಾಗುತ್ತಿದೆ.

ಸಂಗ್ರಹಿಸಿದ ನೋಟುಗಳನ್ನು ಏಳರಿಂದ 14 ದಿನಗಳ ವರೆಗೂ ಮೊಹರು ಹಾಕಿ ಮುಚ್ಚಿಡಲಾಗುತ್ತದೆ. ಪ್ರದೇಶವಾರ ಸೋಂಕಿನ ಪ್ರಮಾಣವನ್ನು ಆಧರಿಸಿ ನೋಟುಗಳ ಸಂಗ್ರಹದ ದಿನಗಳಲ್ಲಿ ವ್ಯತ್ಯಾಸವಾಗುತ್ತದೆ ಎಂದು ಚೀನಾದ ಸೆಂಟ್ರಲ್‌ ಬ್ಯಾಂಕ್‌ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದೆ.

ಗ್ರಾಹಕರಿಗೆ ಅಗತ್ಯವಿದ್ದಾಗ ಹೊಸ ನೋಟು ನೀಡುವಂತೆ ಬ್ಯಾಂಕ್‌ಗಳಿಗೆ ಸೆಂಟ್ರಲ್‌ ಬ್ಯಾಂಕ್‌ ಡೆಪ್ಯುಟಿ ಗವರ್ನರ್‌ ಫ್ಯಾನ್‌ ಇಫಿ ಸೂಚಿಸಿದ್ದಾರೆ. ತುರ್ತು 400 ಕೋಟಿಯುವಾನ್‌ ಕರೆನ್ಸಿ ಹೊಸ ನೋಟುಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ.

ಸುಮಾರು 24 ರಾಷ್ಟ್ರಗಳಿಗೆ ವ್ಯಾಪಿಸಿರುವ ಕೊರೊನಾ ವೈರಸ್‌ ಸೋಂಕು, ಚೀನಾವೊಂದರಲ್ಲೇ 66,000 ಜನರಿಗೆ ತಗುಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ನಿವಾರಿಸುವುದು ಹಾಗೂ ಸೋಂಕಿಗೆ ಒಳಗಾಗಿರುವ ಜನರನ್ನು ಇತರರೊಂದಿಗೆ ಸಂಪರ್ಕಿಸದಂತೆ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ.

ಜನವರಿಯಲ್ಲಿ ವುಹಾನ್‌ ನಗರದಲ್ಲಿ ಕೋವಿಡ್‌–19 (ಕೊರೊನಾ ವೈರಸ್‌) ಹರಡುತ್ತಿರುವುದು ಪ್ರಕಟಿಸುತ್ತಿದ್ದಂತೆ ಚೀನದಾದ್ಯಂತ ಸೋಂಕು ನಿವಾರಕ ಔಷಧಿಗಳು ಹಾಗೂ ಸರ್ಜಿಕಲ್‌ ಮಾಸ್ಕ್‌ಗಳು ಬಿಕರಿಯಾಗಿವೆ. ಕಚೇರಿಗಳಲ್ಲಿ ಎಲಿವೇಟರ್‌ಗಳ ಬಟನ್ ಒತ್ತುವಾಗಲೂ ಟಿಶ್ಯು ಬಳಸುವಂತೆ ಸೂಚಿಸಲಾಗಿದೆ. ಕಾರು ಸೇವೆ ನೀಡುವ ಕಂಪನಿಗಳು ನಿತ್ಯವೂ ಕಾರುಗಳನ್ನು ಸೋಂಕು ನಿವಾರಣಗೊಳಿಸುವುದು ಅನಿವಾರ್ಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಚೀನಾದ ಜನರು ಮೊಬೈಲ್‌ ಮೂಲಕ ಪಾವತಿಸುವ ವ್ಯವಸ್ಥೆಗೆ ತೆರಿದುಕೊಂಡಿದ್ದು, ನಗದು ಬಳಸುವ ಪ್ರಮಾಣದಲ್ಲಿ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT