ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರೋನ್ ವಿಜ್ಞಾನಿ ಮಂಡ್ಯದ ಪ್ರತಾಪ್

Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಮಂಡ್ಯದ ಪ್ರತಾಪ್‌ ಎನ್‌.ಎಂ. ಅವರಿಗೆ ಡ್ರೋನ್‌ಗಳ ಬಗ್ಗೆ ಬಹಳ ಆಸಕ್ತಿ. ಅವರಿಗೆ ತಾವೇ ಏಕೆ ಒಂದು ಡ್ರೋನ್‌ ತಯಾರು ಮಾಡಬಾರದು ಎನ್ನುವ ಆಲೋಚನೆ ಬಂತು.

ಹದಿನಾರು ವರ್ಷ ವಯಸ್ಸಿನಲ್ಲಿ ಇದ್ದಾಗ ಇವರು ತಾವೇ ಒಂದು ಡ್ರೋನ್‌ ಸಿದ್ಧಪಡಿಸಿದರು. ಅದು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿತ್ತು. ಅದು ಹಾರಾಟ ನಡೆಸಿ, ಒಂದಿಷ್ಟು ಚಿತ್ರಗಳನ್ನು ಸೆರೆಹಿಡಿದಿದ್ದನ್ನು ಕಂಡ ಪ್ರತಾಪ್ ಅವರ ಉತ್ಸಾಹ ಇಮ್ಮಡಿಯಾಯಿತು.

ಈಗ ಪ್ರತಾಪ್‌ ಅವರಿಗೆ 22 ವರ್ಷ ವಯಸ್ಸು. ವಿಜ್ಞಾನ ಪದವೀಧರ ಆಗಿರುವ ಅವರು ಇಲ್ಲಿಯವರೆಗೆ 600ಕ್ಕೂ ಹೆಚ್ಚು ಡ್ರೋನ್‌ಗಳನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿಯೂ ಒಂದು ವಿಶೇಷ ಇದೆ. ಈ ಯುವ ವಿಜ್ಞಾನಿಗೆ ಡ್ರೋನ್‌ ಸಿದ್ಧಪಡಿಸಲು ಅಗತ್ಯ ಇರುವುದು ಹಾಳಾದ ಮಿಕ್ಸರ್‌ ಹಾಗೂ ಟಿ.ವಿ. ಸೆಟ್‌ಗಳಿಂದ ದೊರೆತ ಇ–ತ್ಯಾಜ್ಯ. ಹಾಗೆಯೇ, ಅವರು ಹಾಳಾದ ಡ್ರೋನ್‌ಗಳ ಬಿಡಿಭಾಗಗಳನ್ನು ಕೂಡ ಬಳಸಿ ಹೊಸ ಡ್ರೋನ್‌ ಸಿದ್ಧಪಡಿಸುತ್ತಾರೆ.

ಈಗ ಪ್ರತಾಪ್ ಅವರನ್ನು ಡ್ರೋನ್‌ ವಿಜ್ಞಾನಿ ಎಂದು ಕರೆಯಲಾಗುತ್ತಿದೆ. ಉತ್ತರ ಕರ್ನಾಟಕದ ಹಲವೆಡೆ ಕಳೆದ ವರ್ಷ ಪ್ರವಾಹ ಪರಿಸ್ಥಿತಿ ಉಂಟಾಗಿದ್ದಾಗ ಪ್ರತಾಪ್ ಅವರು ಅಲ್ಲಿನ ಜನರ ಸಹಾಯಕ್ಕೆ ಧಾವಿಸಿದ್ದರು. ಅವರು ತಮ್ಮ ಡ್ರೋನ್‌ಗಳನ್ನು ಬಳಸಿ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸಿದ್ದರು. ಈ ಕೆಲಸವಲ್ಲದೆ, ಪ್ರತಾಪ್ ಅವರು ಗಡಿ ಭದ್ರತೆ, ಸಂಚಾರ ನಿರ್ವಹಣೆಗೆ ಸಂಬಂಧಿಸಿದ ಕೆಲವು ಪ್ರಮುಖ ಯೋಜನೆಗಳ ಭಾಗವಾಗಿಯೂ ಕೆಲಸ ಮಾಡಿದ್ದಾರೆ.

ತಮ್ಮ ಡ್ರೋನ್‌ ವ್ಯವಸ್ಥೆಯನ್ನು ಬೇರೆಯವರು ಹಾಳು ಮಾಡಬಾರದು ಎನ್ನುವ ಉದ್ದೇಶದಿಂದ ಅವರು ಗೂಢಲಿಪಿಯ ಮೊರೆ ಹೋಗಿದ್ದಾರೆ. ಈಗ ಪ್ರತಾಪ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಜೊತೆ ಕೆಲಸ ಮಾಡುತ್ತಿದ್ದಾರೆ.

ಪ್ರತಾಪ್‌ ಅವರ ಕೀರ್ತಿ ಈಗ ವಿಶ್ವದ ಹಲವು ಭಾಗಗಳಿಗೆ ಪಸರಿಸಿದೆ. ಇವರು ಸಿದ್ಧಪಡಿಸಿರುವ ಬೇರೆ ಬೇರೆ ಬಗೆಯ ಡ್ರೋನ್‌ಗಳನ್ನು ಪ್ರದರ್ಶಿಸುವಂತೆ ಕೋರಿ ಎಂಬತ್ತಕ್ಕೂ ಹೆಚ್ಚಿನ ದೇಶಗಳು ಆಹ್ವಾನಿಸಿವೆ. ಜಪಾನಿನ ಟೋಕಿಯೊದಲ್ಲಿ 2017ರಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನದಲ್ಲಿ ಪ್ರತಾಪ್ ಅವರು ಪ್ರಶಸ್ತಿ ಗೆದ್ದಿದ್ದಾರೆ.

ಜರ್ಮನಿಯಲ್ಲಿ 2018ರಲ್ಲಿ ನಡೆದ ಅಂತರರಾಷ್ಟ್ರೀಯ ಡ್ರೋನ್ ಪ್ರದರ್ಶನದಲ್ಲಿ ‘ಆಲ್ಬರ್ಟ್‌ ಐನ್‌ಸ್ಟೀನ್‌ ನಾವೀನ್ಯ ಚಿನ್ನದ ಪದಕ’ ಪ್ರಶಸ್ತಿ ಪಡೆದಿದ್ದಾರೆ.

ಪರಿಸರಸ್ನೇಹಿ ಕ್ಯಾಂಪಸ್

ಬ್ರೆಜಿಲ್‌ ದೇಶದ ಮಳೆಕಾಡು ಪ್ರದೇಶದಲ್ಲಿ ನಿರ್ಮಿಸಿರುವ ‘ಚಿಲ್ಡ್ರನ್ ವಿಲೇಜ್’ ಎನ್ನುವ ಶಾಲೆಯ ಕ್ಯಾಂಪಸ್‌ ವಿಶ್ವದಲ್ಲೇ ಅತ್ಯುತ್ತಮ ಎಂದು ರಾಯಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ರಿಟಿಷ್ ಆರ್ಕಿಟೆಕ್ಟ್ಸ್‌ ಘೋಷಿಸಿದೆ. ಇದು ಪರಿಸರಸ್ನೇಹಿ ಕ್ಯಾಂಪಸ್ ಕೂಡ ಹೌದು.

ಇಲ್ಲಿನ ಕಟ್ಟಡಗಳನ್ನು ನಾಟಾ ಮತ್ತು ಮಣ್ಣಿನ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಇಟ್ಟಿಗೆಗಳ ನಡುವೆ ಗಾಳಿ ಸಂಚರಿಸಲು ಅವಕಾಶವಿದ್ದು, ಸಹಜ ವಾತಾನುಕೂಲ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT