ಶನಿವಾರ, ಅಕ್ಟೋಬರ್ 31, 2020
22 °C
ವೈದ್ಯರ ತಂಡದಿಂದ ಅಧ್ಯಯನ

PV Web Exclusive | ಕೊರೊನಾ ವೈರಸ್ ಅಟ್ಟಲು ‘ಆವಿ’ ಪರಿಣಾಮಕಾರಿ!

ಎಸ್‌.ರವಿಪ್ರಕಾಶ್ Updated:

ಅಕ್ಷರ ಗಾತ್ರ : | |

ಜಾಗತಿಕ ಸಾಂಕ್ರಾಮಿಕ ಕೊರೊನಾದ ಅಟ್ಟಹಾಸ ನಿಂತಿಲ್ಲ. ಇದರ ವಿರುದ್ಧ ವಿಶ್ವದ ಎಲ್ಲ ಸರ್ಕಾರಗಳೂ ಸಮರ ಸಾರಿವೆ. ಈ ಸಮರದಲ್ಲಿ ಪ್ರತಿಯೊಬ್ಬ ನಾಗರಿಕ ತನ್ನ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪ್ರಾಣವನ್ನು ಕಾಪಾಡಿಕೊಳ್ಳಲು ಸ್ವಯಂ ಎಚ್ಚರಿಕೆ ಮತ್ತು ಕಾಳಜಿ ವಹಿಸಬೇಕಾದುದು ಅತಿ ಮುಖ್ಯ. ಇದಕ್ಕಾಗಿ ವ್ಯಕ್ತಿಗತ ಅಂತರ ಕಾಪಾಡುವುದು, ಮಾಸ್ಕ್‌ ತೊಡಡುವುದು, ಸ್ಯಾನಿಟೈಸರ್‌ ಬಳಕೆ, ವ್ಯಾಯಾಮ, ಯೋಗ ಮತ್ತು ಪ್ರಾಣಾಯಾಮ ಜತೆಗೆ ಪೌಷ್ಠಿಕ ಆಹಾರದ ಸೇವನೆ ಬಗ್ಗೆಯೂ ಎಲ್ಲರೂ ಹೇಳುತ್ತಲೇ ಬಂದಿದ್ದಾರೆ. ಆಯುರ್ವೇದ ಔಷಧಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವ ಪಾತ್ರವಹಿಸಿವೆ.

ಹೊಸ ವೈದ್ಯಕೀಯ ತಂಡದ ಅಧ್ಯಯನವೊಂದರ ಪ್ರಕಾರ, ಮೂಗಿನ ಮೂಲಕ ಪ್ರತಿ ನಿತ್ಯ ಆವಿಯನ್ನು ತೆಗೆದುಕೊಳ್ಳವುದರಿಂದ ಕೊರೊನಾ ವೈರಸ್‌ ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯ. ಅದು ಹೇಗೆ ನೋಡೋಣ–

ಕೊರೊನಾ ವೈರಸ್‌ ರಚನೆಯೂ ಇನ್‌ಫ್ಲುಯೆಂಜಾ ವೈರಸ್‌ ಮತ್ತು ಸಾರ್ಸ್ ಕೊರೊನಾ ವೈರಸ್‌ ರೀತಿಯೇ ಇದೆ. ಈ ಹಿಂದಿನ ಅಧ್ಯಯನಗಳ ಪ್ರಕಾರ ಕೊರೊನಾ ವೈರಸ್‌ ಮತ್ತು ಇನ್‌ಫ್ಲುಯೆಂಜಾ ವೈರಸ್‌ಗಳು ಅಧಿಕ ತಾಪಮಾನಕ್ಕೆ ನಿಷ್ಕ್ರಿಯವಾಗುತ್ತವೆ ಎಂಬುದು ಸಾಬೀತಾಗಿದೆ.

ಮುಂಬೈನ ‘ಸೆವೆನ್‌ ಹಿಲ್ಸ್‌’ ಕೋವಿಡ್‌ ಆಸ್ಪತ್ರೆಯ ಕನ್ಸಲ್ಟಂಟ್‌ ಡಾ.ದಿಲೀಪ್‌ ಪವಾರ್‌ ಮತ್ತು ತಂಡ ತಮ್ಮ ಅಧ್ಯಯನದಲ್ಲಿ ಕೊರೊನಾ ವೈರಸ್‌ ಅಧಿಕ ತಾಪಮಾನ ಮತ್ತು ತೇವದ ವಾತಾವರಣದಲ್ಲಿ ಹೇಗೆ ವರ್ತಿಸುತ್ತವೆ ಎಂಬುದನ್ನು ಗಮನಿಸಿದ್ದಾರೆ.

ಇವರು ಎರಡು ಗುಂಪುಗಳಲ್ಲಿ ಅಧ್ಯಯನ ನಡೆಸಿದರು. ಕೋವಿಡ್‌–19 ರೋಗಿಗಳ ಸಂಪರ್ಕಕ್ಕೆ ಬಂದ ರೋಗ ಲಕ್ಷಣಗಳಿಲ್ಲದವರು ಮೊದಲ ಗುಂಪಿನಲ್ಲಿ ಇದ್ದರು. ಈ ಗುಂಪಿನಲ್ಲಿ ವೈದ್ಯರು ಮತ್ತು ನರ್ಸ್‌ಗಳೂ ಸೇರಿದ್ದರು. ಇವರು ನೇರವಾಗಿ ಅಥವಾ ಪ್ರವಾಸದ ಸಂದರ್ಭದಲ್ಲಿ ಕೋವಿಡ್‌ ರೋಗಿಗಳ ಸಂಪರ್ಕಕ್ಕೆ ಬಂದವರು. ಈ ಗುಂಪಿನ ರೋಗಿಗಳಿಗೆ ದಿನಕ್ಕೆ ಎರಡು ಸಲ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಟೀಮರ್‌ ಮೂಲಕ ಅಥವಾ ಸಾಮಾನ್ಯವಾಗಿ ನೀರನ್ನು ಕುದಿಸಿದಾಗ ಬರುವ ಆವಿಯನ್ನು ಮೂಗಿನ ಹೊಳ್ಳೆಗಳ ಮೂಲಕ ಸೆಳೆದುಕೊಳ್ಳಲು ಸೂಚಿಸಲಾಯಿತು.

ಎರಡನೇ ಗುಂಪಿನ ರೋಗಿಗಳನ್ನು ಪುನಃ ಸಾಮಾನ್ಯ ಮತ್ತು ಅಲ್ಪ ಮಟ್ಟದ ರೋಗ ಲಕ್ಷಣಗಳನ್ನು ಹೊಂದಿರುವ ಎರಡು ಗುಂಪುಗಳನ್ನಾಗಿ ಬೇರ್ಪಡಿಸಲಾಯಿತು. ಗಂಭೀರ ಸ್ವರೂಪದ ಕೋವಿಡ್‌ ರೋಗಿಗಳು ಅಂದರೆ ವೆಂಟಿಲೇಟರ್ ಮತ್ತು ಆಮ್ಲಜನಕರ‌ ನೆರವಿನೊಂದಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದವರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಿಲ್ಲ. ಅಲ್ಪಮಟ್ಟದ ಸೋಂಕು ಇದ್ದವರಲ್ಲಿ ಮೂಗು, ಗಂಟಲು ಅಥವಾ ಶ್ವಾಸನಾಳಗಳು ಬಾಧಿತವಾಗಿದ್ದವು.

ಮೊದಲ ಗುಂಪಿಗೆ ಆಸ್ಪತ್ರೆಗಳ ಶಿಷ್ಟಾಚಾರದಂತೆ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆಯ ಜತೆಗೆ ಆವಿಯನ್ನೂ ತೆಗೆದುಕೊಳ್ಳಲು (inhale) ಸೂಚಿಸಲಾಯಿತು. 5 ದಿನಗಳ ಬಳಿಕ ಸತತ ಎರಡು ಬಾರಿ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ಎಂಬ ವರದಿ ಬಂದಿತ್ತು. ಎರಡನೇ ಗುಂಪಿನಲ್ಲಿ ರೋಗ ಲಕ್ಷಣ ಇದ್ದ ಮತ್ತು ಕೋವಿಡ್‌ ಪಾಸಿಟಿವ್‌ ಆಗಿದ್ದ ರೋಗಿಗಳು ಇದ್ದರು. ಇವರಲ್ಲಿ ಬಹುತೇಕರು ವೈದ್ಯರು ಮತ್ತು ನರ್ಸ್‌ಗಳಾಗಿದ್ದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸೋಂಕಿಗೆ ಒಳಗಾಗಿದವರು.

ಮೊದಲ ಗುಂಪಿನಲ್ಲಿ 25 ಮಂದಿ, ಎರಡನೇ ಗುಂಪಿನಲ್ಲಿ 80 ರೋಗಿಗಳನ್ನು ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿತ್ತು. ಮೊದಲ ಗುಂಪಿಗೆ ಆವಿಯನ್ನು ದಿನಕ್ಕೆ ಎರಡು ಬಾರಿ ಮೂಗಿನ ಮೂಲಕ 5 ನಿಮಿಷ ತೆಗೆದುಕೊಳ್ಳಲು ಸೂಚಿಸಲಾಯಿತು. ಇದು ಹೇಗೆಂದರೆ, ಮೂಗಿನ ಮೂಲಕ ಆವಿಯನ್ನು ತೆಗೆದುಕೊಳ್ಳಬೇಕು ಸ್ವಲ್ಪ ತಡೆ ಹಿಡಿದು ಬಾಯಿಯಿಂದ ಉಸಿರು ಹೊರ ಹಾಕಬೇಕು.

ಎರಡನೇ ಗುಂಪಿಗೆ ಪ್ರತಿ ಮೂರು ಗಂಟೆಗೆ ಒಮ್ಮೆ 5 ನಿಮಿಷದಂತೆ ಮೂಗು ಮತ್ತು ಬಾಯಿಯ ಮೂಲಕ ಆವಿಯನ್ನು ತೆಗೆದುಕೊಂಡು ಹೊರಬಿಡಲು ಸೂಚಿಸಲಾಯಿತು.

ಫಲಿತಾಂಶ ಏನು?
ಒಂದನೇ ಗುಂಪಿನಲ್ಲಿ  14 ದಿನಗಳಿಂದ 2 ತಿಂಗಳ ಕಾಲ ಆವಿಯನ್ನು ತೆಗೆದುಕೊಂಡಿದ್ದರಿಂದ ಯಾವುದೇ ಒಬ್ಬ ರೋಗಿಯಲ್ಲೂ ಕೋವಿಡ್‌ ಇರಲಿಲ್ಲ. ಎರಡನೇ ಗುಂಪಿನಲ್ಲಿ ಅಲ್ಪಮಟ್ಟದ ಲಕ್ಷಣ ಇದ್ದವರಲ್ಲಿ ರೋಗಿಗಳು 3 ದಿನಗಳಲ್ಲಿ ಸಾಮಾನ್ಯ ಸ್ಥಿತಿಗೆ ಬಂದರು. ಮಧ್ಯಮ ಪ್ರಮಾಣದ ಲಕ್ಷಣ ಇದ್ದವರು ಸಾಮಾನ್ಯ ಸ್ಥಿತಿಗೆ ಮರಳಲು 7 ರಿಂದ 10 ದಿನಗಳು ಬೇಕಾದವು. 10 ದಿನಗಳ ಬಳಿಕ ಮತ್ತೆ ಕೋವಿಡ್‌19 ಪರೀಕ್ಷೆ ಮಾಡಿದಾಗ 65 ಪ್ರಕರಣಗಳಲ್ಲಿ ನೆಗೆಟಿವ್‌ ಇದ್ದವು. 13 ಪ್ರಕರಣಗಳಲ್ಲಿ ನೆಗೆಟಿವ್‌ ಬರಲು 14 ದಿನಗಳು ಬೇಕಾದವು. 2 ಪ್ರಕರಣಗಳಲ್ಲಿ 18 ದಿನಗಳು ಬೇಕಾದವು.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ವೈರಸ್‌ನ ಸ್ಥಿರತೆ ವಿಭಿನ್ನ ತಾಪಮಾನಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತಿತ್ತು. 22 ರಿಂದ 25 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಎಂದರೆ ಹವಾನಿಯಂತ್ರಿತ ವಾತಾವರಣದಲ್ಲಿ ವೈರಸ್‌ 5 ದಿನಗಳವರೆಗೆ ತನ್ನ ಜೀವ ಶಕ್ತಿಯನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಅಂದರೆ ಇಲ್ಲಿ ತೇವಾಂಶ ಶೇ 40 ರಿಂದ 50 ರಷ್ಟಿತ್ತು. ಆದರೆ ತಾಪಮಾನ ಹೆಚ್ಚಾಗಿ ಇರುವ ಕಡೆಗಳಲ್ಲಿ ವೈರಸ್‌ನ ಜೀವಶಕ್ತಿ ಬೇಗನೇ ಕುಸಿದು ಹೋಗಿತ್ತು. ಆವಿಯ ಉಷ್ಣಾಂಶ ಅಧಿಕವಾಗಿಯೇ ಇತ್ತು. ಆವಿ ಸುಮಾರು 700 ರಿಂದ 800 ಸೆಲ್ಸಿಯಸ್‌ನಷ್ಟು ಉಷ್ಣ ಹೊಂದಿರುತ್ತದೆ. ಯಾವುದೇ ಇನ್‌ಫ್ಲುಯೆಂಜಾ ಅಥವಾ ಸಾರ್ಸ್‌ ವೈರಸ್‌ಗಳು 300 ಸೆಲ್ಸಿಯಸ್‌ ತಾಪಮಾನದಲ್ಲಿ ಬದುಕಿರುವುದಿಲ್ಲ.

ಕೋವಿಡ್‌–19 ರೋಗಿಗಳಿಗೆ ಆವಿಯನ್ನು ಕೊಟ್ಟ ಬಳಿಕ ಅವರ ರೋಗ ಲಕ್ಷಣಗಳು ಕ್ರಮೇಣ ಕಡಿಮೆ ಆದವು. ಆವಿ ತೆಗೆದುಕೊಂಡ ರೋಗಿಗಳಿಂದ ವೈರಸ್‌ ಹರಡುವಿಕೆಯೂ ನಿಂತು ಹೋಯಿತು. ಆದ್ದರಿಂದ, ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್‌ ಬಳಸುವುದು ಮತ್ತು ಮಾಸ್ಕ್‌ ಹಾಕಿಕೊಳ್ಳುವುದರ ಜತೆಗೆ ಆವಿ ತೆಗೆದುಕೊಳ್ಳುವುದನ್ನೂ ಕಡ್ಡಾಯವಾಗಿ ಸೇರಿಸಬೇಕು. ಇದರಿಂದ ಕೋವಿಡ್‌ ಸೋಂಕಿತರು ಬೇಗನೆ ಗುಣಮುಖ ಹೊಂದಲು ಸಾಧ್ಯ ಎಂಬುದಾಗಿ ಅಧ್ಯಯನ ನಡೆಸಿದ ತಂಡ ಹೇಳಿದೆ. ಈ ಅಧ್ಯಯನದ ವರದಿ ಇಂಡಿಯನ್‌ ಮೆಡಿಕಲ್‌ ಗೆಜೆಟ್‌ನಲ್ಲಿ ಪ್ರಕಟವಾಗಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು