ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಗೆ ಕರಿದೆಣ್ಣೆಯ ಔಷಧ! ‘ನಟಾಮೈಸಿನ್‌’ ಕಂಡು ಹಿಡಿದಿದ್ದಾರೆ ಚೀನಿಗರು

Last Updated 17 ಮೇ 2022, 20:30 IST
ಅಕ್ಷರ ಗಾತ್ರ

ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಅಡುಗೆಗೆ ಬಳಸಿದರೆ ಆರೋಗ್ಯ ಕೆಡುವುದುಂಟು. ಆದರೆ ಈಗ ಅಂಥ ಎಣ್ಣೆಯಿಂದ ಔಷಧವೊಂದನ್ನು ತಯಾರಿಸಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳು.

ರಾತ್ರಿಯಿಡೀ ಎದ್ದಿರಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಾಗರಣೆ ಇರುವ ತಂತ್ರವೊಂದು ನಿಮಗೆ ಗೊತ್ತೇ ಇದೆ. ಇದೀಗ ಕಣ್ಣಿಗೆ ಬಿಟ್ಟುಕೊಳ್ಳುವ ಔಷಧವನ್ನೂ ಎಣ್ಣೆಯಿಂದ ಪಡೆಯಬಹುದೆನ್ನುವ ಹೊಸ ಸುದ್ದಿ ಬಂದಿದೆ. ಅದೂ ಯಾವ ಎಣ್ಣೆ ಎಂದುಕೊಂಡಿರಿ? ತಿಂಡಿಗಳನ್ನು ಕರಿದ ಎಣ್ಣೆ! ಕರಿದ, ಹಳೆಯ ಎಣ್ಣೆಯನ್ನು ಬಳಸಿಕೊಂಡು ‘ನಟಾಮೈಸಿನ್‌’ ಎನ್ನುವ ಔಷಧವನ್ನೂ ತಯಾರಿಸಬಹುದು ಎಂದು ಚೀನಾದ ವಿಜ್ಞಾನಿಗಳು ಇತ್ತೀಚೆಗೆ ವರದಿ ಮಾಡಿದ್ದಾರೆ.

ನಟಾಮೈಸಿನ್‌ ಎನ್ನುವುದು ಕಣ್ಣಿಗೆ ತಗುಲುವ ಶಿಲೀಂಧ್ರದ ಸೋಂಕಿಗೆ ಚಿಕಿತ್ಸೆಯಾಗಿ ಬಳಸುವ ಔಷಧ. ಕಣ್ಣಿಗೆ ಬಿಟ್ಟರೆ ಬೇರೆ ಯಾವ ಚಿಕಿತ್ಸೆಯಲ್ಲಿಯೂ ನಟಾಮೈಸಿನನ್ನು ಬಳಸಲಾಗದು. ಔಷಧವಾಗಲ್ಲದೆ ಇದನ್ನು ಆಹಾರಪದಾರ್ಥಗಳ ಸಂರಕ್ಷಣೆಯಲ್ಲಿಯೂ ಬಳಸುತ್ತಾರೆ. ಶಿಲೀಂಧ್ರಗಳು ಅಥವಾ ಬೂಸು ಜೀವಿಗಳಿಗೆ ಇದು ರಾಮಬಾಣ. ನಟಾಮೈಸಿನನ್ನು ಮೊದಲಿಗೆ 1955ರಲ್ಲಿ ಪತ್ತೆ ಮಾಡಲಾಯಿತು. ಸಾಮಾನ್ಯವಾಗಿ ಇದನ್ನು ‘ಸ್ಟ್ರೆಪ್ಟೋಮೈಸಿಸ್‌ ನಟಾಲೆನ್ಸಿಸ್‌’ ಎನ್ನುವ ವಿಶಿಷ್ಟ ಬ್ಯಾಕ್ಟೀರಿಯಾವನ್ನು ಕೃಷಿ ಮಾಡಿ ಸೃಷ್ಟಿಸುತ್ತಾರೆ. ಈ ಬ್ಯಾಕ್ಟೀರಿಯಾವನ್ನು ಕೃಷಿ ಮಾಡುವುದಕ್ಕೆ ಬೇಕಾದ ಪೋಷಕಾಂಶಗಳಿಗೆ ಗ್ಲುಕೋಸ್‌ ಮೊದಲಾದ ಸಾವಯವ ಪದಾರ್ಥಗಳನ್ನು ಉಪಯೋಗಿಸಬೇಕು. ಅಂತಹ ಪದಾರ್ಥಗಳಿಗೆ ಪರ್ಯಾಯವಾಗಿ ಕರಿದ ಎಣ್ಣೆಯನ್ನು ಉಪಯೋಗಿಸಿದರೆ ಹೇಗೆ ಎನ್ನುವುದು ಚೀನಾದ ಹುನಾನ್‌ ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಮಿಂಗ್ಶಿ ಯೂ ಮತ್ತು ತಂಡದವರ ಯೋಚನೆ.

ಕರಿದ ಎಣ್ಣೆಯನ್ನು ಬಳಸುವುದರಿಂದ ಹಲವು ಲಾಭಗಳಿವೆ. ಮೊದಲನೆಯದಾಗಿ ಸ್ಟ್ರೆಪ್ಟೊಮೈಸೀಸ್‌ ಬ್ಯಾಕ್ಟೀರಿಯಾ ನಟಾಮೈಸಿನನ್ನು ತಯಾರಿಸಲು ಕೊಬ್ಬಿನಾಮ್ಲಗಳನ್ನು ಬಳಸುತ್ತದೆ. ಈ ಆಮ್ಲಗಳ ಅಣುಗಳು ದೊಡ್ಡದಾಗಿದ್ದಷ್ಟೂ ನಟಾಮೈಸಿನ್ನಿನ ಪ್ರಮಾಣ ಹೆಚ್ಚು. ಆದರೆ ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಕೃಷಿಯಲ್ಲಿ ಬಳಸುವ ಗ್ಲುಕೋಸ್‌ ಹಾಗೂ ಅಸೆಟಿಕ್‌ ಆಮ್ಲಗಳು ಪುಟ್ಟ ಅಣುಗಳಾದ್ದರಿಂದ ಇವುಗಳಿಂದ ಉದ್ದ ಅಣುವನ್ನು ತಯಾರಿಸುವುದಕ್ಕೆ ಬಹಳಷ್ಟು ಶಕ್ತಿ ವ್ಯಯವಾಗಿಬಿಡುತ್ತದೆ. ಹೀಗಾಗಿ ತಯಾರಾಗುವ ನಟಾಮೈಸಿನ್ನಿನ ಪ್ರಮಾಣ ಕಡಿಮೆ ಹಾಗೂ ನಿಧಾನ. ಅದಕ್ಕೆ ಬದಲಾಗಿ ಈಗಾಗಲೇ ದೊಡ್ಡ ಕೊಬ್ಬಿನಾಮ್ಲಗಳ ಅಣುಗಳಿರುವ ಅಡುಗೆ ಎಣ್ಣೆಯನ್ನೇ ಬಳಸಬಹುದಲ್ಲ? ಅದಕ್ಕಿಂತಲೂ ಮುಖ್ಯವಾಗಿ ಬೇಡ ಎಂದು ಬಿಸಾಡುವ ಕರಿದ ಎಣ್ಣೆಯನ್ನು ಉಪಯೋಗಿಸಬಹುದಲ್ಲ? ಏಕೆಂದರೆ ಕರಿದಾಗ ಎಣ್ಣೆಯಲ್ಲಿನ ಕೊಬ್ಬಿನ ಆಮ್ಲಗಳಲ್ಲಿ ಆಗುವ ಬದಲಾವಣೆಗಳು ಇದಕ್ಕೆ ತಕ್ಕುದಾದವು.

ಅತಿ ಬಿಸಿಯಾದಾಗ ಎಣ್ಣೆಯಲ್ಲಿರುವ ಆಮ್ಲಗಳು ಗಾಳಿಯಲ್ಲಿರುವ ಆಕ್ಸಿಜನ್‌ನ ಜೊತೆಗೂಡುತ್ತವೆ. ಸ್ಯಾಚುರೇಟೆಡ್‌ ಆಮ್ಲಗಳಾಗುತ್ತವೆ. ಇವು ಆರೋಗ್ಯಕ್ಕೆ ಹಾನಿಕರವೆನ್ನಿಸುವ ಕೊಬ್ಬಿನ ಅಂಶಗಳು. ಮಿಂಗ್ಶಿ ಯೂ ಮತ್ತು ಸಂಗಡಿಗರು ಈ ಉಪ ಉತ್ಪನ್ನವನ್ನೇ ವಿಜ್ಞಾನಿಗಳು ನಟಾಮೈಸಿನ್‌ ಉತ್ಪಾದನೆಗೆ ಬಳಸಿಕೊಂಡಿದ್ದಾರೆ. ಸ್ಯಾಚುರೇಟೆಡ್‌ ಕೊಬ್ಬಿನಾಮ್ಲಗಳು ಸಾಮಾನ್ಯವಾಗಿ ಉತ್ತಮ ಪ್ರಮಾಣದ ನಟಾಮೈಸಿನ್‌ ಉತ್ಪಾದನೆ ಮಾಡುತ್ತದೆ. ಅದಕ್ಕಾಗಿ ಇವರು ಕರಿದ ಎಣ್ಣೆಯಲ್ಲಿರುವ ಅನ್‌ ಸ್ಯಾಚುರೇಟೆಡ್‌ ಕೊಬ್ಬಿನಾಮ್ಲಗಳನ್ನು ಹೈಡ್ರೋಜಿನೇಷನ್‌ ಕ್ರಿಯೆಯ ಮೂಲಕ ಪರಿವರ್ತಿಸಿದ್ದಾರೆ. ಹೀಗೆ ಪಡೆದ ಪ್ರತಿ 40g/L ಎಣ್ಣೆಯಿಂದ 2.1g/L ನಟಾಮೈಸಿನನ್ನು ಉತ್ಪಾದಿಸಿದ್ದಾರೆ. ಈ ಆಹಾರವನ್ನು ಬಳಸಿ ಮಾಡಿದ ಕೃಷಿಯಿಂದ ಉತ್ತಮ ಪ್ರಮಾಣದಲ್ಲಿ ನಟಾಮೈಸಿನ್‌ ದೊರಕಿದೆಯಷ್ಟೆ ಅಲ್ಲ ಕಡಿಮೆ ಸಮಯದಲ್ಲಿಯೇ ಇದು ದೊರೆತಿದೆ. ಪ್ರಯೋಗಾಲಯದಲ್ಲಿ ಮಾತ್ರವಲ್ಲ, ವಾಣಿಜ್ಯಕವಾಗಿಯೂ ತಯಾರಿಸಬಹುದಾದಷ್ಟು ದೊಡ್ಡ ಪ್ರಮಾಣದಲ್ಲಿ ಬ್ಯಾಕ್ಟೀರಿಯಾ ಕೃಷಿ ಮಾಡಿ ನಟಾಮೈಸಿನನ್ನು ಮಿಂಗ್ಶಿ ಯೂ ತಯಾರಿಸಿದ್ದಾರೆ.

ಹೀಗೆ, ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಅಡುಗೆಗೆ ಬಳಸಿಕೊಂಡು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಉಪಯುಕ್ತವೆನಿಸುವ ಔಷಧವೊಂದನ್ನು ತಯಾರಿಸಬಹುದು ಎಂಬ ಇವರ ಉದ್ದೇಶ ಒಳ್ಳೆಯದೇ. ಏಕೆಂದರೆ ಕರಿದ ಎಣ್ಣೆ ಅನಾರೋಗ್ಯಕರ ಪದಾರ್ಥವಾದ್ದರಿಂದ ಇದನ್ನು ಅಡುಗೆಯಲ್ಲಿ ಮರು ಬಳಸಬಾರದೆಂದು ನಿರ್ಬಂಧವಿದ್ದರೂ ಬಹುಪಾಲು ಬೀದಿ ಬದಿಯ ವ್ಯಾಪಾರಿಗಳು ಕರಿದ ಎಣ್ಣೆಯನ್ನೇ ಉಪಯೋಗಿಸುವುದುಂಟು. ಇಂತಹ ಕಸದಿಂದ ನಟಾಮೈಸಿನ್ನಿನಂತಹ ರಸ ತೆಗೆಯುವುದು ಎಷ್ಟು ಚೆನ್ನ ಅಲ್ಲವೇ?

ಈ ಸಂಶೋಧನೆಯ ವಿವರಗಳು ‘ಪ್ರೋಸೆಸ್‌ ಬಯೋಕೆಮಿಸ್ಟ್ರಿ’ಯ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT