ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಸಂಶೋಧನೆ; ಭಾರತೀಯ–ಅಮೆರಿಕನ್ ಬಾಲಕಿಗೆ 25,000 ಡಾಲರ್ ಬಹುಮಾನ

Last Updated 19 ಅಕ್ಟೋಬರ್ 2020, 14:49 IST
ಅಕ್ಷರ ಗಾತ್ರ

ಹ್ಯೂಸ್ಟನ್‌: ಇಡೀ ಜಗತ್ತು ಕೋವಿಡ್‌–19 ಚಿಕಿತ್ಸೆಗೆ ಪರಿಣಾಮಕಾರಿಯಾಗಬಲ್ಲ ಮಾರ್ಗಗಳ ಹುಡುಕಾಟದಲ್ಲಿದ್ದು, 14 ವರ್ಷ ವಯಸ್ಸಿನ ಭಾರತೀಯ ಅಮೆರಿಕನ್‌ ಹುಡುಗಿ ಪ್ರಸ್ತುತ ಪಡಿಸಿರುವ ಕೋವಿಡ್‌ ಪ್ರಾಜೆಕ್ಟ್‌ಗೆ 25,000 ಡಾಲರ್‌ ಬಹುಮಾನ ಸಂದಿದೆ.

ಟೆಕ್ಸಾಸ್‌ನ ಫ್ರಿಸ್ಕೊದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನಿಕಾ ಚೆಬ್ರೊಲು '3ಎಂ ಯಂಗ್‌ ಸೈಂಟಿಸ್ಟ್‌ ಚಾಲೆಂಜ್‌ನಲ್ಲಿ' ಗಮನ ಸೆಳೆದಿದ್ದಾಳೆ. ಸಾರ್ಸ್‌–ಕೋವ್–2 ವೈರಸ್‌ನ (ಕೊರೊನಾ ವೈರಸ್) ಸ್ಪೈಕ್‌ ಪ್ರೊಟೀನ್‌ ಮೇಲೆ ಅಂಟಿಕೊಳ್ಳಬಹುದಾದ ಅಣುವನ್ನು ಇನ್‌–ಸಿಲಿಕೊ ವಿಧಾನದ ಮೂಲಕ ಅನಿಕಾ ಪತ್ತೆ ಮಾಡಿದ್ದಾಳೆ. ಅಣು ಪ್ರೊಟೀನ್‌ ಮೇಲೆ ಉಳಿಯುವ ಮೂಲಕ ಅದನ್ನು ಕಾರ್ಯಾಚರಿಸದಂತೆ ಮಾಡುತ್ತದೆ.

ಪ್ರೌಢಶಾಲೆ ಮಟ್ಟದ ವಿಜ್ಞಾನ ಸ್ಪರ್ಧೆಗಳ ಪೈಕಿ ಅತ್ಯಂತ ಮಹತ್ವ ಪಡೆದಿರುವ ಈ ವಿಜ್ಞಾನದ ಸವಾಲಿನಲ್ಲಿ ಅನಿಕಾ ಕೋವಿಡ್‌–19 ಚಿಕಿತ್ಸೆಗೆ ಪರಿಣಾಮಕಾರಿಯಾಗಬಹುದಾದ ಮಾರ್ಗ ಪತ್ತೆ ಮಾಡಿರುವುದಾಗ 3ಎಂ ಚಾಲೆಂಜ್‌ ವೆಬ್‌ಸೈಟ್‌ ಪ್ರಕಟಿಸಿದೆ. 3ಎಂ ಅಮೆರಿಕದ ಗ್ರಾಹಕ ಸರಕುಗಳು, ಆರೋಗ್ಯ ಸೇವೆಗಳು, ತಯಾರಿಕಾ ಕಂಪನಿಯಾಗಿದೆ.

ಕಳೆದ ವರ್ಷ ಇನ್‌ಫ್ಲುಯೆಂಜಾ ವೈರಸ್‌ ಸೋಂಕಿಗೆ ಒಳಗಾಗಿದ್ದ ಅನಿಕಾ ಬಹಳಷ್ಟು ಕಷ್ಟ ಅನುಭವಿಸಿದ್ದಳು. ಇನ್‌ಫ್ಲುಯೆಂಜಾ ಶಮನಗೊಳಿಸುವ ನಿಟ್ಟಿನಲ್ಲಿ ಅತ್ಯವಿರುವ ಚಿಕಿತ್ಸೆಗಾಗಿ ಸಂಶೋಧನೆ ನಡೆಸಲು ಮುಂದಾದಳು, ಆದರೆ ಕೋವಿಡ್‌–19 ಸಾಂಕ್ರಾಮಿಕ ವ್ಯಾಪಿಸಿದ್ದರ ಪರಿಣಾಮ ಕೊರೊನಾ ವೈರಸ್‌ ಕುರಿತು ಹಲವು ಕಂಪ್ಯೂಟರ್‌ ಪ್ರೊಗಾಮ್‌ಗಳನ್ನು ಬಳಸಿ ಅಧ್ಯಯನ ನಡೆಸಿದಳು.

'3ಎಂ ವಿಜ್ಞಾನಿಗಳ ಸಹಕಾರದಿಂದ ವೈರಸ್‌ಗೆ ಔಷಧ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ. ಔಷಧ ಅಂಶಗಳ ಇನ್‌–ವಿಟ್ರೊ ಮತ್ತು ಇನ್‌–ವಿವೊ ಪರೀಕ್ಷೆ ನಡೆಸುವ ಹಂಬಲವಿದೆ' ಎಂದು ಅನಿಕಾ ಹೇಳಿದ್ದಾಳೆ.

ಕಂಪನಿಯ ವಿಜ್ಞಾನಿ ಡಾ.ಮಹ್ಫುಜಾ ಅಲಿ ಅವರು ಅನಿಕಾಗೆ ಪರಿಕಲ್ಪನೆಯ ಹಂತದಿಂದ ವೈಜ್ಞಾನಿಕವಾಗಿ ಪ್ರಾಜೆಕ್ಟ್‌ ಅಭಿವೃದ್ಧಿ ಪಡಿಸಲು ಸಹಕಾರ ನೀಡಿದ್ದಾರೆ. ಅನಿಕಾ ವೈದ್ಯಕೀಯ ಸಂಶೋಧಕಿ ಮತ್ತು ಪ್ರೊಫೆಸರ್‌ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT