ಮಂಗಳವಾರ, ಮೇ 18, 2021
24 °C

ಆರು ತಿಂಗಳ ಪ್ರಯಾಣ; ಮಂಗಳನ ಅಂಗಳಕ್ಕೆ ಜಿಗಿದ ನಾಸಾದ ‘ಇನ್‌ಸೈಟ್‌’ ಶೋಧಕ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಫ್ಲೋರಿಡಾ: ನಾಸಾದ ’ಕ್ಯೂರಿಯಾಸಿಟಿ ರೋವರ್‌’ 2012ರಲ್ಲಿ ಮಂಗಳ ಗ್ರಹದ ಅಂಗಳದಲ್ಲಿ ಇಳಿದು ಸುತ್ತಾಡಿತ್ತು. ಇದೀಗ ನಾಸಾದ ಮತ್ತೊಂದು ಗಗನನೌಕೆ ಕೆಂಪು ಗ್ರಹದಲ್ಲಿ ಇಳಿದು ಅಲ್ಲಿನ ಭೂಮಿ ಬಗೆದು ಪರೀಕ್ಷಿಸುವ ಕಾರ್ಯಕ್ಕೆ ಮುಂದಾಗಿದೆ. 

ಆರು ತಿಂಗಳು, 48.2 ಕೋಟಿ ಕಿಲೋಮೀಟರ್‌ ನಿರಂತರ ಪ್ರಯಾಣದೊಂದಿಗೆ ಸೋಮವಾರ ಮಂಗಳನ ನೆಲೆದ ಮೇಲೆ ’ಇನ್‌ಸೈಟ್‌’ ಗಗನನೌಕೆ ಇಳಿದಿದೆ. ಗಗನನೌಕೆ ’ನೆಲ ಮುಟ್ಟಿದೆ(ಟಚ್‌ಡೌನ್‌ ಕನ್‌ಫರ್ಮ್ಡ್)’ ಎಂದು ಪ್ಲೈಟ್‌ ಕಂಟ್ರೋಲರ್ ಘೋಷಿಸುತ್ತಿದ್ದಂತೆ ಕ್ಯಾಲಿಫೋರ್ನಿಯಾದ ಪ್ರಯೋಗಾಲಯದಲ್ಲಿ ಸಂಭ್ರಮದ ಚೀರಾಟ.

ಮಂಗಳನ ವಾತಾವರಣದಲ್ಲಿ ಸುತ್ತುತ್ತ ಸೂಕ್ತ ಸಮಯ, ವೇಗ ನಿಯಂತ್ರಿಸಿಕೊಂಡ ಇಂಜಿನ್‌ ಹಾಗೂ ತೆರೆದುಕೊಂಡ ಪ್ಯಾರಾಚ್ಯೂಟ್‌ ಸಹಕಾರದೊಂದಿಗೆ ಮೂರು ಕಾಲುಗಳ ಇನ್‌ಸೈಟ್‌ ಗಗನನೌಕೆ ಮಂಗಳನನ್ನು ಮುಟ್ಟಿದೆ. ಮಂಗಳ ಮತ್ತು ಭೂಮಿಯ ನಡುವಿನ 16 ಕೋಟಿ ಕಿಲೋಮೀಟರ್‌ ಅಂತರವನ್ನು ಹಾದು ಎಂಟು ನಿಮಿಷಗಳ ನಂತರ ನಾಸಾಗೆ ರವಾನೆಯಾದ ರೆಡಿಯೊ ಸಿಗ್ನಲ್‌, ಇನ್‌ಸೈಟ್‌ ನೆಲೆಮುಟ್ಟಿರುವುದು ಯಶಸ್ವಿಯಾಗಿರುವುದನ್ನು ದೃಢಪಡಿಸಿದೆ. 

ಮಂಗಳನ ಮೇಲೆ ಶೋಧಕ ಗಗನನೌಕೆಯನ್ನು ಇಳಿಸುವ ನಾಸಾದ ಒಂಬತ್ತನೇ ಪ್ರಯತ್ನ ಇದಾಗಿತ್ತು. 1976ರಲ್ಲಿ ವೈಕಿಂಗ್‌ ಶೋಧಕ ಗಗನನೌಕೆಗಳಿಂದ ಹಿಡಿದು 2012ರ ಕ್ಯೂರಿಯಾಸಿಟಿ ರೋವರ್ ವರೆಗೂ ಮಂಗಳನನ್ನು ತಲುಪುವ ಕಾರ್ಯಾಚರಣೆಗಳಲ್ಲಿ ಬಹುತೇಕ ಯಶಸ್ವಿಯಾಗಿದೆ. 

ಮಂಗಳನ ವಾತಾವರಣದಲ್ಲಿ ಗಂಟೆಗೆ 19,800 ಕಿಲೋಮೀಟರ್‌ ವೇಗದಲ್ಲಿ ಸುತ್ತುತ್ತಿದ್ದ ಇನ್‌ಸೈಟ್‌ ಆರು ನಿಮಿಷಗಳಲ್ಲಿ ಶೂನ್ಯ ವೇಗಕ್ಕೆ ಬಂದು ನೆಲಕ್ಕೆ ಇಳಿದಿದೆ. ವೇಗವಾಗಿ ಸುತ್ತುತ್ತಿರುವ ಗಗನನೌಕೆಯನ್ನು ನಿಯಂತ್ರಿಸಿ ವೇಗ ಶೂನ್ಯಗೊಳಿಸಿ, ಶೋಧಕಕ್ಕೆ ಘಾಸಿಯಾಗದಂತೆ ಕೆಂಪು ಗ್ರಹದ ನೆಲ ತಲುಪುವುದೇ ಅತ್ಯಂತ ಕಠಿಣ ಮತ್ತು ಸವಾಲಿನ ಕೆಲಸ ಎನ್ನುತ್ತಾರೆ ಇನ್‌ಸೈಟ್‌ ಯೋಜನೆಯ ವಿಜ್ಞಾನಿಗಳ ನೇತೃತ್ವ ವಹಿಸಿರುವ ಬ್ರ್ಯೂಸ್‌ ಬ್ಯಾನರ್ಡ್.

ಗಗನನೌಕೆಯನ್ನು ಇಳಿಸುವ ಸಮಯ ಅತ್ಯಂತ ಜಾಗೃತ ಸಮಯ, ಅಲ್ಲಿ ಯಾವುದೇ ಕ್ಷಣದಲ್ಲಿ ಯೋಜನೆ ಕೈತಪ್ಪುವ ಅವಕಾಶ ಹೇರಳ. 1960ರಿಂದ ಅಮೆರಿಕ, ರಷ್ಯಾ ಸೇರಿದಂತೆ ಇತರೆ ರಾಷ್ಟ್ರಗಳು ಮಂಗಳ ಗ್ರಹದ ಶೋಧಕ್ಕೆ ಕೈಗೊಂಡ ಯೋಜನೆಗಳ ಪೈಕಿ ಯಶಸ್ಸಿನ ಪ್ರಮಾಣ ಶೇ 40 ಮಾತ್ರ. ಅಮೆರಿಕ ಕಳೆದ 40 ವರ್ಷಗಳಲ್ಲಿ ನಡೆಸಿರುವ ಎಂಟು ಪ್ರಯತ್ನಗಳ(ಇನ್‌ಸೈಟ್ ಹೊರತುಪಡಿಸಿ) ಪೈಕಿ ಏಳು ಬಾರಿ ಯಶಸ್ಸು ಕಂಡಿದೆ. ಈವರೆಗೂ ಬೇರೆ ಯಾವುದೇ ರಾಷ್ಟ್ರದ ಗಗನನೌಕೆ ಮಂಗಳನ ಅಂಗಳವನ್ನು ತಲುಪಲು ಸಾಧ್ಯವಾಗಿಲ್ಲ.  

ಇನ್‌ಸೈಟ್‌: 360 ಕೆ.ಜಿ ತೂಕದ ಶೋಧಕ ಯಂತ್ರವು ತನ್ನ 6 ಅಡಿ ಉದ್ದ ರೊಬಾಟಿಕ್‌ ಕೈಗಳನ್ನು ಬಳಸಿ ನೆಲದ ಪರೀಕ್ಷೆ ನಡೆಸಲಿದೆ. ನೆಲವನ್ನು 16 ಅಡಿಗಳಷ್ಟು ಆಳ ಕೊರೆತು ಅಲ್ಲಿನ ಉಷ್ಣತೆಯನ್ನು ಅಳೆಯಲಿದ್ದು, ಭೂಮಿ ಕಂಪಿಸುವುದನ್ನು ಸಿಸ್ಮೋಮೀಟರ್‌ ಮೂಲಕ ಗಮನಿಸಲಿದೆ.  

4.5 ಶತಕೋಟಿ ವರ್ಷಗಳ ಹಿಂದೆ ಸೌರಮಂಡಲದಲ್ಲಿ ಗ್ರಹಗಳು ರೂಪುಗೊಂಡ ಬಗೆ ಹಾಗೂ ಗ್ರಹಗಳ ಭಿನ್ನ ವಾತಾವರಣಗಳನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಮಂಗಳನ ನೆಲದ ಪರೀಕ್ಷೆ ಸಹಕಾರಿಯಾಗಲಿದೆ ಎಂಬುದು ವಿಜ್ಞಾನಿಗಳ ವಿಶ್ವಾಸ. ಇನ್‌ಸೈಟ್‌ ಮಂಗಳನಲ್ಲಿ ಜೀವಿಗಳ ಇರುವಿಕೆ ಕುರಿತು ಯಾವುದೇ ಅಧ್ಯಯನ ನಡೆಸುವುದಿಲ್ಲ. ನಾಸಾ 2020ಕ್ಕೆ ಯೋಜಿಸಿರುವ ಮಂಗಳಯಾನ ಕಾರ್ಯಕ್ರಮದಲ್ಲಿ ಮಂಗಳ ಗ್ರಹದ ಮೇಲೆ ಕಲ್ಲು, ಮಣ್ಣು ಸಂಗ್ರಹಿಸಿ ಭೂಮಿ ತಂದು ಪರೀಕ್ಷಿಸಿ ಜೀವಿಗಳು ಇದ್ದಿರಬಹುದಾದ ಕುರುಹಿನ ಹುಡುಕಾಟ ನಡೆಯಲಿದೆ. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು