ಫ್ರೆಡ್ ರಾಮ್ಸ್ಡೆಲ್ ಸೊನೊಮಾ ಬಯೋಥೆರಾಪ್ಯುಟಿಕ್ಸ್ ಎನ್ನುವ ಜೈವಿಕ ತಂತ್ರಜ್ಞಾನದ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರು. ಆರು ವರ್ಷದ ಹಿಂದೆ, 2019ನೆ ಇಸವಿಯಲ್ಲಿ ಈತ ತನ್ನ ಮೂವರು ಗೆಳೆಯರೊಂದಿಗೆ ಸೇರಿ ಈ ಕಂಪೆನಿಯನ್ನು ಸ್ಥಾಪಿಸಿದರು. ಆಟೊ ಇಮ್ಯೂನ್ ಕಾಯಿಲೆಗಳ ರೋಗಿಗಳಲ್ಲಿ ಸಮತೋಲ ಕೆಟ್ಟಿದ್ದ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ತಹಬಂದಿಗೆ ತರುವಂತಹ ಚಿಕಿತ್ಸೆಗಳನ್ನು ರೂಪಿಸುವುದು ಈ ಕಂಪನಿಯ ಉದ್ದೇಶವಾಗಿತ್ತು. ಕಂಪನಿಯನ್ನು ಸ್ಥಾಪಿಸಿದ ಐದೇ ವರ್ಷದೊಳಗೆ ರಾಮ್ಸ್ಡೆಲ್ಗೆ ನೊಬೆಲ್ ಪ್ರಶಸ್ತಿ ದೊರಕಿದ ಸುದ್ದಿ ಬಂದಿದೆ. ಈ ವರ್ಷದ ಜೀವಕ್ರಿಯಾವಿಜ್ಞಾನ ಹಾಗೂ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯ ಮೂರನೇ ಒಂದು ಪಾಲು ರಾಮ್ಸ್ಡೆಲ್ಗೆ ಸಂದಿದೆ.

ಆದರೆ ನೊಬೆಲ್ ಪ್ರಶಸ್ತಿ ಕಂಪನಿಯಲ್ಲಿ ಇವರು ಮಾಡಿದ ಕೆಲಸಕ್ಕೆ ದೊರೆತದ್ದಲ್ಲ; ಅದಕ್ಕೂ ಹಿಂದೆ ಇಪ್ಪತ್ತೈದು ವರ್ಷಗಳ ಹಿಂದೆ ಮತ್ತೊಂದು ಕಂಪನಿಯಲ್ಲಿ ನಡೆಸಿದ ಸಂಶೋಧನೆಗಳಿಗಾಗಿ ಸಂದ ಸನ್ಮಾನವಿದು. ಆಗ ರಾಮ್ಸ್ಡೆಲ್ ಇನ್ನೂ ಮೂವತ್ತರ ಹರೆಯದ ಯುವಕ. ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಿಂದ ಸೂಕ್ಷ್ಮಜೀವಿವಿಜ್ಞಾನ ಹಾಗೂ ರೋಗಪ್ರತಿರೋಧ ಕುರಿತು ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ಆ ಬಳಿಕ ಉದ್ಯೋಗವನ್ನು ಅರಸಿ ಹೊರಟಿದ್ದರು. ಎಲ್ಲ ಯುವಕರಂತೆ ಆತನ ಮುಂದೂ ಎರಡು ಪ್ರಶ್ನೆಗಳಿದ್ದುವು: ವಿವಿಗಳಲ್ಲಿ ಸಂಶೋಧನೆಗೆ ಸೇರುವುದೋ ಅಥವಾ ಆಗ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿದ್ದ ಜೈವಿಕ ತಂತ್ರಜ್ಞಾನ ಕಂಪೆನಿಗಳಲ್ಲಿ ಉದ್ಯೋಗ ಹುಡುಕುವುದೋ? ಕೊನೆಗೆ ಕಂಪನಿಯ ಹುದ್ದೆಯೇ ಸರಿ ಎಂದು ತೀರ್ಮಾನಿಸಿ, ಸೆಲ್ಟೆಕ್ ಎನ್ನುವ ಕಂಪೆನಿ ಸೇರಿದರು.

ರೋಗಪ್ರತಿರೋಧ ವ್ಯವಸ್ಥೆಯ ಬಗ್ಗೆ ಅದ್ಭುತವಾದ ಸಂಶೋಧನೆಗಳು ನಡೆಯುತ್ತಿದ್ದ ಕಾಲ ಅದು. ಆಗಷ್ಟೆ ಕ್ಯಾನ್ಸರ್ ಕೋಶಗಳನ್ನೂ, ರೋಗ ಪ್ರತಿರೋಧವನ್ನುಂಟು ಮಾಡುವ ಆ್ಯಂಟಿಬಾಡಿಗಳನ್ನು ಸೃಷ್ಟಿಸುವ ಕೋಶಗಳನ್ನೂ ಕೂಡಿಸಿ, ಒಂದೇ ತೆರನಾದ ಆ್ಯಂಟಿಬಾಡಿಗಳನ್ನು ಸೃಷ್ಟಿಸುವ ತಂತ್ರ ಬಂದಿತ್ತು. ನಿರ್ದಿಷ್ಟವಾದ ಜೈವಿಕ ಅಣುವನ್ನಷ್ಟೆ ಗುರುತಿಸಬಲ್ಲ ಈ ಬಗೆಯ ಮಾನೋಕ್ಲೋನಲ್ ಪ್ರತಿಕಾಯುಗಳನ್ನು ಬಳಸಿಕೊಂಡು, ಆ ಅಣುಗಳು ಎಲ್ಲಿವೆ, ಅವುಗಳ ಕಾರ್ಯವೇನು ಎಂದು ತಿಳಿಯುವ ಇಮ್ಯುನೋಪರೀಕ್ಷೆಗಳು ಸಿದ್ಧವಾಗಿದ್ದುವು. ಇವೆಲ್ಲ ಕ್ರಾಂತಿಕಾರಕ ಬೆಳೆವಣಿಗೆಗೆಳೂ ಹೊಸ ಕನಸನ್ನು ಹುಟ್ಟಿಸಿದ್ದುವು. ಕ್ಯಾನ್ಸರಿಗೆ, ಚಿಕಿತ್ಸೆಯೇ ಇಲ್ಲವೆಂದು ಭಾವಿಸಿದ್ದ ಆಟೊ ಇಮ್ಯೂನು ಕಾಯಿಲೆಗಳೀಗೆ ಚಿಕಿತ್ಸೆ ಸಾಧ್ಯ ಎನ್ನುವ ಕನಸು. ಈ ಕನಸನ್ನು ರಾಮ್ಸ್ಡೆಲ್ ಕಂಡಿದ್ದರು. ಹೀಗಾಗಿ ಜೈವಿಕ ತಂತ್ರಜ್ಞಾನ ಕಂಪನಿಗೆ ಸೇರಿದರೆ ಒಳ್ಳೆಯದು ಎನ್ನುವ ತೀರ್ಮಾನಕ್ಕೆ ಬಂದಿದ್ದರು.

ಅದೃಷ್ಟವೋ ದುರದೃಷ್ಟವೋ – ರಾಮ್ಸ್ಡೆಲ್ಲನ ಬದುಕೆಲ್ಲವೂ ಮುಂದೆ ಇಂತಹ ಖಾಸಗಿ ಕಂಪನಿಗಳಲ್ಲಿ ಸಂಶೋಧಕರಾಗಿಯೇ ನಡೆಯಿತು. ಆ ಹೊತ್ತಿನಲ್ಲಿ ಅವರಿಗೆ ಜೊತೆಯಾದವರು ಈ ವರ್ಷದ ನೊಬೆಲ್ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ಮೇರಿ ಬ್ರಂಕೋವ್. ಇವರಿಬ್ಬರಿಗೂ ನೆರವಾಗಿ ಬಂದಿದ್ದು ಒಂದು ವಿಶಿಷ್ಟ ಇಲಿ. ನಲವತ್ತು ವರ್ಷಗಳ ಹಿಂದೆ ಪರಮಾಣು ಬಾಂಬು ಯೋಜನೆ ನಡೆಯುತ್ತಿದ್ದಾಗ, ಓಕ್ಸ್ಬರ್ಗ್ ಸಂಶೋಧನಾಲಯದಲ್ಲಿ ಹುಟ್ಟಿದ ಇಲಿ.

ಓಕ್ಸ್ಬರ್ಗ್ನಲ್ಲಿ ವಿಕಿರಣಗಳ ಪರಿಣಾಮವೇನಿರಬಹುದು ಎನ್ನುವ ಪ್ರಯೋಗಗಳು ನಡೆದಿದ್ದುವು. ಇಲಿಗಳನ್ನು ವಿಕಿರಣಗಳಿಗೆ ಒಡ್ಡಿ ಪರೀಕ್ಷಿಸಿದ್ದರು. ಇಂತಹ ಇಲಿಗಳಿಗೆ ಹಲವಾರು ವಿಕೃತ ಸಂತಾನಗಳು ಹುಟ್ಟಿದ್ದುವು. ಅವುಗಳಲ್ಲಿ ಒಂದು ‘ಸ್ಕರ್ಫಿ’ ಎನ್ನುವ ತಳಿ. ಈ ತಳಿಯ ಗಂಡುಗಳಲ್ಲಿ ಅರ್ಧಕ್ಕರ್ಧ ಹುಟ್ಟಿದ ಕೆಲವೇ ವಾರಗಳಲ್ಲಿ ಸಾಯುತ್ತಿದ್ದುವು. ಹಲವು ಅಂಗಗಳಲ್ಲಿ ದೋಷಗಳು ಉಂಟಾಗುತ್ತಿತ್ತು. ಈ ದೋಷಗಳೆಲ್ಲವೂ ಇಲಿಗಳದ್ದೇ ರೋಗನಿರೋಧಕ ವ್ಯವಸ್ಥೆ ಹದಗಟ್ಟಿದ್ದರಿಂದ ಆಗಿದ್ದು ಎನ್ನುವುದು ತಿಳಿದಿತ್ತು. ಈ ಇಲಿಯನ್ನು ಬಳಸಿಕೊಂಡು ಚಿಕಿತ್ಸೆಯನ್ನು ರೂಪಿಸಲು ರಾಮ್ಸ್ಡೆಲ್ ಮತ್ತು ಬ್ರಂಕೋವ್ ನಿರ್ಧಿಸಿದ್ದರು.

ಅದುವೂ ಅವರ ಅದೃಷ್ಟವೇ. ಏಕೆಂದರೆ ಇಂತಹ ದೋಷಪೂರ್ಣ ತಳಿಗಳನ್ನು ಸಾಕುವುದು ಸುಲಭವಲ್ಲ. ಹಾಗೆಯೇ ಅದಕ್ಕಾಗಿ ಆಗುವ ಶ್ರಮ ಮತ್ತು ಖರ್ಚು ಬಹಳಷ್ಟು. ಹಾಗಿದ್ದೂ ಓಕ್ಸ್ಬರ್ಗ್ ಪ್ರಯೋಗಾಲಯದಲ್ಲಿ ಇವನ್ನು ನಾಶ ಮಾಡದೆ, ನೂರಾರು ಸಂತತಿಗಳ ವರೆಗೆ, ನಲವತ್ತು ವರ್ಷಗಳ ಕಾಲ ಬೆಳೆಸಲಾಗಿತ್ತು. ರಾಮ್ಸ್ಡೆಲ್ ಮತ್ತು ಬ್ರಂಕೋವರಿಗೆ ಇದು ವರದಾನವಾಯಿತು. ಈ ಸ್ಕರ್ಫಿ ಇಲಿಗಳಲ್ಲಿ ಎಕ್ಸ್ ಎನ್ನುವ ವರ್ಣತಂತುವಿನಲ್ಲಿ ಮಾತ್ರ ವ್ಯತ್ಯಾಸ ಇದ್ದುದರಿಂದ ಗಂಡುಗಳಷ್ಟೆ ರೋಗಕ್ಕೆ ಈಡಾಗುತ್ತಿದ್ದುವು. ಅಧ್ಯಯನಕ್ಕೆ ಅನುಕೂಲವಾಗಿತ್ತು.

ಎಕ್ಸ್ ವರ್ಣತಂತುವಿನಲ್ಲಿ ಎಂತಹ ದೋಷ ಉಂಟಾಗಿದೆ? ಅದನ್ನು ಪತ್ತೆ ಮಾಡಬಹುದೇ? ಅದು ಯಾವ ಜೀನ್? ಆ ಜೀನ್ನಲ್ಲಿರುವ ದೋಷವನ್ನು ತಿದ್ದಲು ಸಾಧ್ಯವಾದರೆ ಆಟೊಇಮ್ಯೂನ್ ದೋಷಗಳಿಗೆ ಚಿಕಿತ್ಸೆ ದೊರೆಯಬಹುದೇ ಎಂದು ರಾಮ್ಸ್ಡೆಲ್ ಯೋಚಿಸಿದರು. ಎಕ್ಸ್ ವರ್ಣತಂತವಿನ ಮೇಲಿರುವ ದೋಷಪೂರ್ಣ ಜೀನನ್ನು ಹುಡುಕಲು ಹೊರಟರು. ಈ ಕೆಲಸಕ್ಕೆ ಹತ್ತಾರು ವರ್ಷಗಳು ಆದುವು. ಆ ಅವಧಿಯಲ್ಲಿ ಸ್ಕರ್ಫಿ ಉಂಟು ಮಾಡುವ ಜೀನ್ಗಳು ಯಾವುವು, ಎಲ್ಲಿವೆ ಎಂದು ಗುರುತಿಸಿದ್ದಷ್ಟೆ ಅಲ್ಲ, ಅದೇ ತೆರನ ದೋಷಗಳು ಮನುಷ್ಯನಲ್ಲಿಯೂ ಇರಬಹುದು ಎಂದು ರಾಮ್ಸ್ಡೆಲ್ ಗುರುತಿಸಿದರು. ಫಾಕ್ಸ್–3 ಎನ್ನುವ ಜೀನ್ ದೋಷವೇ ಇದಕ್ಕೆ ಕಾರಣ ಎಂದು ಪತ್ತೆ ಮಾಡಿದರು. ಇವುಗಳಿಂದಾಗಿ ರೋಗಪ್ರತಿರೋಧದಲ್ಲಿ ಪ್ರಮುಖ ಪಾತ್ರ ವಹಿಸುವ ಟಿಕೋಶಗಳನ್ನು ನಿಯಂತ್ರಿಸುವ ಕೋಶಗಳು ಹುಟ್ಟುವುದೇ ಇಲ್ಲ. ಈ ನಿಯಂತ್ರಕ ಕೋಶಗಳನ್ನೇ ಟಿ-ನಿಯಂತ್ರಕಗಳು ಅಥವಾ ಟ್ರೆಗ್ ಎಂದು ಚುಟುಕಾಗಿ ಇವರು ಕರೆದಿದ್ದಾರೆ.

ಈ ಎಲ್ಲ ಅಂಶಗಳನ್ನೂ ಗುರುತಿಸಿ, ಇದೀಗ ಸುಧಾರಣೆ ಆಗಿರುವ ತಂತ್ರಗಳ ನೆರವಿನಿಂದ ಹೊಸ ಚಿಕಿತ್ಸೆಯನ್ನು ರೂಪಿಸುವುದು ರಾಮ್ಸ್ಡೆಲ್ ಅವರ ಆಶಯ. ಕಾಲು ದಶಕದ ಹಿಂದಿನ ಕನಸನ್ನು ಎಡೆಬಿಡದೆ ಮುಂದುವರೆಸಿಕೊಂಡು ಬಂದಿರುವ ರಾಮ್ಸ್ಡೆಲ್, ಬದುಕಿನುದ್ದಕ್ಕೂ ಖಾಸಗಿ ಕಂಪನಿಗಳಲ್ಲಿಯೇ ಕಾಲ ಕಳೆದ ರಾಮ್ಸ್ಡೆಲ್ ವಿದ್ವಾಂಸರ ಜಗತ್ತಿನಲ್ಲಿಯೂ ಈಗ ಮನ್ನಣೆ ಪಡೆಯುವಂತಾಗಿದೆ. ನೊಬೆಲ್ ಎಂದರೆ ವಿವಿ ವಿದ್ವಾಂಸರ ಪ್ರಶಸ್ತಿ ಎನ್ನುವುದನ್ನು ರಾಮ್ಸ್ಡೆಲ್ ಹಾಗೂ ಬ್ರಂಕೋವ್ ಸುಳ್ಳಾಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.