ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಣ: ನೂರೆಂಟು ಅಭಿವ್ಯಕ್ತಿ

Last Updated 20 ಜೂನ್ 2020, 19:45 IST
ಅಕ್ಷರ ಗಾತ್ರ

ಅನೇಕರಿಗೆ 1980ರ ಸೂರ್ಯ ಗ್ರಹಣ ನೆನಪಿರಬಹುದು. ಆಗ ನೆರಳು ಕರ್ನಾಟಕದ ಮಧ್ಯಭಾಗವನ್ನೇ ಹಾದುಹೋಯಿತು. ಅಂಕೋಲಾ, ಹುಬ್ಬಳ್ಳಿ, ಗದಗ, ರಾಯಚೂರು ಇಲ್ಲಿ ನಡುಮಧ್ಯಾಹ್ನವೇ ಕತ್ತಲು ಕವಿಯಿತು. ಬೆಂಗಳೂರಲ್ಲಿ ಕತ್ತಲಾಯಿತಾದರೂ ಹೆಚ್ಚಿನ ಜನ ಮನೆಯೊಳಗೆ ಅವಿತುಕೊಂಡಿದ್ದರು. ಮುಂದೆ ಅವಕಾಶ ಸಿಕ್ಕಿದ್ದು ಕಳೆದ ಡಿಸೆಂಬರ್‌ನಲ್ಲಿ. ಮಧ್ಯೆ ಎರಡು ಮೂರು ಬಾರಿ ಉತ್ತರ ಭಾರತದಲ್ಲಿ ಕತ್ತಲ ಹಗಲು ಉಂಟಾದಾಗ, ಇಲ್ಲಿ ಕಂಡಿದ್ದು ಪಾರ್ಶ್ವ ಗ್ರಹಣ ಮಾತ್ರ. ಆದರೆ ಇಡೀ ದೇಶವೇ ಕರ್ಫ್ಯೂಗೆ ಒಳಪಟ್ಟಂತೆ ಸ್ತಬ್ಧವಾಗಿಬಿಟ್ಟಿತ್ತು. ಶೇ 99ರಷ್ಟು ಜನ ಮನೆಯೊಳಗೇ ಕುಳಿತು ಈ ಚಮತ್ಕಾರದ ನೋಟದಿಂದ ವಂಚಿತರಾದರು!

ಖಗೋಳ ವಿಜ್ಞಾನಿಗಳಿಗೆ ಮಾತ್ರವಲ್ಲದೆ, ಜನಸಾಮಾನ್ಯರ ಮೇಲೂ ಇದು ಉಂಟು ಮಾಡುವ ಪ್ರಭಾವದ ಅಧ್ಯಯನವನ್ನು 1980ರಲ್ಲಿ ಪ್ರೊ. ಚಿದಾನಂದಮೂರ್ತಿ ಅವರು ಕೈಗೆತ್ತಿಕೊಂಡಿದ್ದರು. (ಅವರಿಗೆ ನನ್ನ ಪರಿಚಯವಾಗಿದ್ದೇ ಈ ಸಂದರ್ಭದಲ್ಲಿ) ಗ್ರಹಣದೊಡನೆ ಅನೇಕ ಸಾಮಾಜಿಕ ಸಂಬಂಧಗಳನ್ನು ಬೆಸೆಯುವ ಅವರ ಕೃತಿ ಈ ವಿಷಯದಲ್ಲಿ ಆಕರ ಗ್ರಂಥವಾಗಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗ್ರಹಣದ ಜಾಡನ್ನು ಅವರು ಗುರುತಿಸಿದರು. ಅದು ವೈರಾಗ್ಯವನ್ನು ಸೂಚಿಸುವ ಸಂದರ್ಭಕ್ಕೆ ಅತ್ಯುತ್ತಮ ಉಪಮೆಯಾಗಿ ಬಳಕೆಯಾಗಿರುವ ಅನೇಕ ಉದಾಹರಣೆಗಳು ಅವರ ಪುಸ್ತಕದಲ್ಲಿವೆ. ಗ್ರಹಣದ ಉಲ್ಲೇಖಗಳ ಖಗೋಳ ವೈಜ್ಞಾನಿಕ ಮಹತ್ವವನ್ನು ಅವರು ಅಷ್ಟಾಗಿ ಗಮನಿಸಿರಲಿಲ್ಲ.

ಶಾಸನಗಳಲ್ಲಿ ಗ್ರಹಣದ ಉಲ್ಲೇಖ ಇರುವುದು ಸಾಮಾನ್ಯವೇ - ಏಕೆಂದರೆ ದಾನ ಧರ್ಮ ಮಾಡಲು ಅದು ಅತ್ಯಂತ ಪ್ರಶಸ್ತವಾದ ಸಮಯ ಎಂಬ ನಂಬಿಕೆ ರಾಜಮಹಾರಾಜರದ್ದು. ಅಂದಿನ ಜ್ಯೋತಿಷಿಗಳು ಶ್ರಮವಹಿಸಿ ಲೆಕ್ಕಗಳನ್ನು ಮಾಡಿ ಗ್ರಹಣದ ಸಮಯಗಳನ್ನು ಮುಂಚಿತವಾಗಿ ತಿಳಿಸುತ್ತಿದ್ದುದು ಸವಾಲಿನ ಕೆಲಸವೇ ಆಗಿತ್ತು. ಅವರ ಬುದ್ಧಿಮತ್ತೆಯನ್ನು ಗೌರವಿಸಲು ಇದೊಂದು ಅವಕಾಶವನ್ನಾಗಿ ದಾನ ಧರ್ಮಗಳ ಏರ್ಪಾಡನ್ನು ರಾಜರು ಮಾಡಿಕೊಂಡಿದ್ದಿರಬಹುದು.

ಕಲಾಕೃತಿಗಳು

ಯೂರೋಪಿನಲ್ಲಿ ಗ್ರಹಣಗಳಷ್ಟೇ ಅಲ್ಲದೆ ಧೂಮಕೇತುಗಳೂ ಕಲಾವಿದರ ಚಿತ್ರಪಟಗಳೊಳಗೆ ಸೆರೆಯಾಗಿವೆ. ನಮ್ಮಲ್ಲಿ ಈ ಬಗೆಯ ವರ್ಣಚಿತ್ರಗಳು ಇಲ್ಲವೆಂದರೂ ಒಂದು ಅಪವಾದವಿದೆ. ಗುರುನಾನಕ್ ಅವರು ಗ್ರಹಣದ ಸಮಯದಲ್ಲಿ ಪ್ರವಚನ ನೀಡುತ್ತಿರುವ ವರ್ಣಚಿತ್ರ ಅಮೃತಸರದ ಬಾಬಾ ಅತಲ್ ಸಾಹಬ್ ಜೀ ಗುರುದ್ವಾರದಲ್ಲಿ ಇರುವುದನ್ನು ಖಗೋಳ ವಿಜ್ಞಾನಿ ರಮೇಶ್ ಕಪೂರ್ ದಾಖಲಿಸಿದ್ದಾರೆ. 1507ರ ಜನವರಿ 13ರಂದು ಗ್ರಹಣದ ಸಂದರ್ಭ. ಗುರುನಾನಕ್ ಅವರು ಕುರುಕ್ಷೇತ್ರದಲ್ಲಿ ಸೇರಿದ್ದ ಯಾತ್ರಾರ್ಥಿಗಳಿಗೆ ‘ಗ್ರಹಣ ಎಂಬುದು ಖಗೋಳೀಯ ಘಟನೆ - ಅದು ಮಾನವನ ಜೀವನದ ಮೇಲೆ ಪ್ರಭಾವ ಬೀರುವುದಿಲ್ಲ; ಅದರ ಬಗ್ಗೆ ಇರುವ ಮೂಢನಂಬಿಕೆಗಳನ್ನು ಬಿಡಿ’ ಎಂದು ಹೇಳಿದ್ದರೆಂದು ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಸರ್ಪವೊಂದು ಚಂದ್ರನನ್ನು, ಸೂರ್ಯನನ್ನು ಕಬಳಿಸುತ್ತಿರುವ ಚಿತ್ರ, ಕೆಳದಿಯ ರಾಮೇಶ್ವರ ದೇವಾಲಯದಲ್ಲಿ, ಅಲ್ಲದೆ ಕವಲೇದುರ್ಗದ ದೇವಾಲಯದಲ್ಲಿ ಇವೆ. ಇವೆರಡೂ ಕೆಳದಿಯ ಅರಸರ ಕಾಲದ್ದು. ಈ ದೇವಾಲಯಗಳನ್ನು ಕಟ್ಟಿಸುತ್ತಿದ್ದಾಗ ಶಿಲ್ಪಿಗಳನ್ನು ಬೆರಗುಗೊಳಿಸಿದ ಗ್ರಹಣವೊಂದು ಹೀಗೆ ಅಭಿವ್ಯಕ್ತವಾಗಿರಬಹುದೇ?

ಹೀಗೊಂದು ಆಲೋಚನೆ ಬರಲು ಕಾರಣವಿಲ್ಲದಿಲ್ಲ. 1610ರಲ್ಲಿ (ಡಿಸೆಂಬರ್ 10) ಸಂಪೂರ್ಣ ಗ್ರಹಣದ ನೆರಳು ಕರ್ನಾಟಕದ ಮಧ್ಯಭಾಗವನ್ನು ಹಾದು ಹೋಗಿತ್ತು. ಇದು ಕಂಕಣ ಗ್ರಹಣ. ಸೂರ್ಯ ಪೂರ್ತಿ ಕಪ್ಪಾಗದೇ ಬಳೆಯ ಹಾಗೆ ಹೊಳೆಯುತ್ತಿದ್ದ. ಇದಾದ ಐದು ವರ್ಷಗಳ ನಂತರ 1615ರ ಮಾರ್ಚ್ 29ರಂದು ಪೂರ್ಣ ಗ್ರಹಣ ಗೋಚರಿಸಿತ್ತು. ಕೆಳದಿ, ಇಕ್ಕೇರಿ, ಬನವಾಸಿ - ಈ ಭಾಗಗಳಲ್ಲೂ ಕಂಡಿತ್ತು. ಈ ಎರಡೂ ಘಟನೆಗಳು ಶಿಲ್ಪಿಗಳ ಮನಸ್ಸಿನಲ್ಲಿ ಅಚ್ಚೊತ್ತಿದ್ದಿರಬೇಕು. ರಾಹು, ಕೇತು ಎಂಬ ರಾಕ್ಷಸರು ಸೂರ್ಯನನ್ನು ನುಂಗುವರೆಂದು ಜನ ನಂಬಿದ್ದ ಕಾಲವದು. ರಾಹುವಿಗೆ ಸರ್ಪದ ಮೈ; ಮಾನವ ತಲೆ. ಕೇತುವಿಗೆ ಮಾನವ ದೇಹ; ಸರ್ಪದ ತಲೆ. ಒಟ್ಟಿನಲ್ಲಿ ಸರ್ಪಕ್ಕೂ ಗ್ರಹಣಕ್ಕೂ ನಂಟು. ಹೀಗಾಗಿ ಈ ಶಿಲ್ಪ ಕೃತಿಗಳಲ್ಲಿ ಹಾವು ಸೇರಿಕೊಂಡಿದ್ದಿರಬೇಕು. ಆದರೆ ಖಗೋಳಜ್ಞರು ತಮ್ಮ ಲೆಕ್ಕಗಳನ್ನು ಬರೆದಿಟ್ಟರು - ತಮ್ಮ ವೀಕ್ಷಣೆಯನ್ನು ಮತ್ತು ಅನುಭವವನ್ನು ಬರೆಯಲಿಲ್ಲ.

ದಂತಕತೆಗಳು

ಉತ್ತರ ಕರ್ನಾಟಕದ ಜನಪದದ ಕತೆಯೊಂದರ ಪ್ರಕಾರ, ‘ಮೂರು ಜಾಮದ ಸ್ವಾಮಿ’ ಸೂರ್ಯನನ್ನೇ ಮೂರು ತಾಸು ತಡೆ ಹಿಡಿದಿಟ್ಟಿದ್ದನಂತೆ. ಇದನ್ನು ಮುಂಜಾವಿನ ಗ್ರಹಣ ಎಂದು ಗುರುತಿಸಬಹುದಾದರೆ ಕತೆಯ ಉಗಮವನ್ನು ಹುಡುಕಬಹುದು. ಆದರೆ ಜನಪದ ಕತೆಗಳು ಎಷ್ಟು ಹಳೆಯವೆಂದು ನಿಖರವಾಗಿ ತೀರ್ಮಾನಿಸಲಾಗದು. ಸುಮಾರು 300 - 400 ವರ್ಷಗಳಿಗೊಮ್ಮೆ ಮುಂಜಾವಿನ ಗ್ರಹಣ (ಪೂರ್ಣ) ನಡೆಯಬಹುದು. 1603 ಮತ್ತು 1604ರಲ್ಲಿ ಭಾರತದಿಂದ ಪೂರ್ಣ ನೆರಳು ಆರಂಭವಾಗುವ ಗ್ರಹಣಗಳು ನಡೆದಿದ್ದವು. ಇದು ಈ ಸ್ವಾಮಿಯ ಕಾಲವಾಗಿರಬಹುದೆಂದು ಊಹಿಸಬಹುದಷ್ಟೇ.

ಇನ್ನೊಂದು ದಂತಕತೆ 17ನೇ ಶತಮಾನದ ಸಂಸ್ಕೃತ ಗ್ರಂಥದಲ್ಲಿದೆ. ಸೂರ್ಯದಾಸ ಎಂಬ ಖಗೋಳಜ್ಞನ ಮೊಮ್ಮಗ ತಾತನ ಚರಿತ್ರೆಯನ್ನು ಹೆಂಡತಿಗೆ ಬಣ್ಣಿಸುವ ಗ್ರಂಥ. ಸೂರ್ಯದಾಸ ಅನೇಕ ಗಣಿತ ಮತ್ತು ಖಗೋಳ ಗ್ರಂಥಗಳನ್ನು ರಚಿಸಿದ್ದಾನೆ. ತಾಳೆಗರಿಗಳಲ್ಲಿ ಅಡಗಿದ್ದ ಈತನ ಕೃತಿಗಳು ಸಿಕ್ಕಿವೆ. ಈತ ವಿಜಯಪುರದ ಅರಸ ಮುಹಮ್ಮದ್ ಶಹಾ ಕಾಲದಲ್ಲಿದ್ದವನು. ‘ಅಮಾವಾಸ್ಯೆಯಂದು ಚಂದ್ರನನ್ನು ತೋರಿಸಬೇಕು’ ಎಂದು ಸವಾಲು ಸ್ವೀಕರಿಸಿದ ಈತನಿಗೆ ‘ಸೋತುಹೋದಲ್ಲಿ ಮರಣ ದಂಡನೆ’ ಎಂಬ ಷರತ್ತೂ ಇತ್ತು. ಈ ಗ್ರಂಥದ ಸುಮಾರು ಶ್ಲೋಕಗಳು ಜನರ ಮನಸ್ಸಿನ ಆತಂಕವನ್ನೇ ಬಿಂಬಿಸುತ್ತವೆ.

ಅಮಾವಾಸ್ಯೆಯಂದು ಎಲ್ಲ ಜನ ಸೇರಿದ್ದು, ಆತಂಕದಿಂದ ಕಣ್ಣೀರು ಕರೆದದ್ದು - ಇದೆಲ್ಲ ನಡೆದ ಮೇಲೆ ಕವಿ ಬರೆಯುವುದು ಹೀಗೆ - ‘ನಮ್ಮ ತಾಯಿ ಖಂಡೇಶ್ವರಿ ನಮ್ಮ ಕೈ ಬಿಡಲಿಲ್ಲ; ಕಡಗವನ್ನು ಬಿಚ್ಚಿ ಆಕಾಶಕ್ಕೆ ಎಸೆದಳು - ಅಲ್ಲಿ ಕಂಗೊಳಿಸಿದ ಚಂದ್ರ - ಮಹಮ್ಮದ್ ಶಹಾ ಸ್ಥಂಭೀಭೂತನಾದ - ಜನ ಜಯಕಾರ ಮಾಡಿದರು.’ ‌ಇದನ್ನು ದಂತಕತೆ ಎಂದು ಪರಿಗಣಿಸಲಾಗದು. ಕಡಗ ಎಂದು ಸೂಚಿಸಿರುವುದರಿಂದ ಇದು 1610ರ ಕಂಕಣ ಗ್ರಹಣವೇ ಇರಬಹುದು.

ಈ ಸಂದರ್ಭದಲ್ಲಿ ಜನಸಾಮಾನ್ಯರ ಅರಿವಿಗೆ ನಿಲುಕದ ಒಂದು ಅಂಶವನ್ನು ಕುಚೋದ್ಯ ಎನ್ನಬಹುದು. ಕಂಕಣ ಗ್ರಹಣವಾಗಲೀ, ಪೂರ್ಣಗ್ರಹಣವಾಗಲೀ, ಅದನ್ನು ನಾವು ‘ನೋಡಿದೆವು’ ಎಂದರೇನರ್ಥ? ಕಾಣುವುದು ಕಪ್ಪು ಬಿಲ್ಲೆ ಮತ್ತು ಅದರ ಸುತ್ತ ಪ್ರಭಾವಳಿಯಂತೆ ಸೂರ್ಯನ ಹೊರವಲಯ - ಅದು ಕರೋನ (ಕಿರೀಟ) ಅಥವಾ ಕಂಕಣಗ್ರಹಣದಲ್ಲಿ ಪ್ರಭಾವಲಯದ ಹೊರ ಅಂಚು. ಮಧ್ಯದ ಕಪ್ಪು ಬಿಲ್ಲೆ ಏನು? ಅದು ಚಂದ್ರ ಅಲ್ಲವೇ? ಹಾಗಾಗಿ ಸೂರ್ಯದಾಸ ತೋರಿಸಿದ್ದು ಚಂದ್ರನನ್ನೇ - ಕಂಕಣ ಗ್ರಹಣ ಅಂದರೆ ಚಂದ್ರ ಎಂಬ ಕಪ್ಪು ಬಿಲ್ಲೆ ಎಂದಿಟ್ಟುಕೊಂಡರೆ ಪಂಥದಲ್ಲಿ ಗೆದ್ದದ್ದು ಅರ್ಥಪೂರ್ಣವಾಗುತ್ತದೆ. ಸೂರ್ಯದಾಸನ ಹಾಸ್ಯ ಪ್ರವೃತ್ತಿಯ ಬಗ್ಗೆ ತಿಳಿಯದು. ಮಹಮ್ಮದ್ ಶಹಾ ಕೂಡ ಖಗೋಳ ಜ್ಞಾನ ಪಡೆದುಕೊಂಡಿದ್ದವನೇ. ಹಾಗಾಗಿ ಅವರಿಬ್ಬರ ನಡುವಿನ ಚರ್ಚೆ ಅದು ಪೂರ್ಣ ಗ್ರಹಣವೇ ಅಥವಾ ಕಂಕಣ ಗ್ರಹಣವೇ ಎಂಬುದರ ಕುರಿತು ಆಗಿದ್ದಿರಬಹುದು. ಈ ಬಗ್ಗೆ ಲಿಖಿತ ಮಾಹಿತಿ ಏನೂ ಇಲ್ಲ; ಎರಡು ತಲೆಮಾರುಗಳಾಚೆಗೆ ಈ ಘಟನೆ ಒಂದು ಪವಾಡದ ಸ್ವರೂಪ ಪಡೆದುಕೊಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಇಂದಿನ ಮನೋಧರ್ಮ

ಹಗಲ ಕತ್ತಲು ಮೂಡಿದ್ದ ಸಂದರ್ಭಗಳು ನಮ್ಮಲ್ಲಿ ಅಷ್ಟಾಗಿ ದಾಖಲೆಯಾಗಿಲ್ಲ. 1980ರ ಗ್ರಹಣವನ್ನು ಧಾರವಾಡದಿಂದ ನೋಡಿದ ಮೇಲೆ ನನ್ನ ತಾಯಿ ‘ನಾವು ಜೋಗದಲ್ಲಿದ್ದಾಗ ಹೀಗೆ ಕತ್ತಲಾಗಿತ್ತು’ ಎಂದು ನೆನಪಿಸಿಕೊಂಡಿದ್ದರು. ಅದು 1955ರ ಗ್ರಹಣ ಇರಬೇಕು ಎಂದು ನಾನೀಗ ಊಹಿಸುತ್ತಿದ್ದೇನೆ. ಇಂದಿನ ದಿನಗಳಲ್ಲಿ ಗ್ರಹಣ ಪ್ರವಾಸ ಬಹಳ ಜನಪ್ರಿಯವಾಗಿದೆ. ಮೈಸೂರಿನ ಪ್ರೊ.ಎಸ್.ಎನ್. ಪ್ರಸಾದ್ ಅವರಿಗೆ 1980ರ ಗ್ರಹಣ ಮಾಡಿದ ಮೋಡಿ ಎಂತಹುದೆಂದರೆ ಅದರ ಆಕರ್ಷಣೆಗೆ ಸಿಕ್ಕಿಬಿದ್ದು ಕಂಡು ಕೇಳರಿಯದ ವಿದೇಶಗಳನ್ನು ಹೊಕ್ಕು ಇಂದಿನವರೆಗೆ ಐದಾರು ಪೂರ್ಣ ಗ್ರಹಣಗಳನ್ನು ನೋಡಿದ್ದಾರೆ. 2024ರ ಗ್ರಹಣಕ್ಕೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.

ಸಮಕಾಲೀನ ಸಾಹಿತ್ಯದಲ್ಲಿ ಪದ್ಯವಾಗಿ ಉಪಮೆಯಾಗಿ ತನ್ನ ಅಸ್ತಿತ್ವವನ್ನು ಸಾರಿ ಹೋಗುವ ಗ್ರಹಣಗಳು ವ್ಯಂಗ್ಯಚಿತ್ರಗಳಲ್ಲಿ, ಕವನಗಳಲ್ಲಿ ಚುಟುಕಗಳಲ್ಲಿ ಅಭಿವ್ಯಕ್ತಗೊಂಡಿವೆ. ಈಚೆಗೆ ವಾಟ್ಸಾಪ್‍ನಲ್ಲಿ ಚಿತ್ರ ಸಮೇತ ‘ಕುಟುಕು ಕೃತಿ’ಯಾಗಿ ಕಾಣಿಸಿಕೊಳ್ಳುತ್ತಿವೆ. ನೀಳಾದೇವಿಯವರ ಕಾದಂಬರಿಯೊಂದರಲ್ಲಿ ಗ್ರಹಣ ಬಿಟ್ಟ ಚಂದ್ರ ಬೆಳ್ಳಿ ತಟ್ಟೆಯ ಹಾಗೆ ಹೊಳೆಯುತ್ತಿದ್ದ ಎಂಬ ವರ್ಣನೆ ಇದೆ. ಎಸ್.ಎಲ್. ಭೈರಪ್ಪನವರಿಗೆ ಯಾವ ‘ಗ್ರಹಣ’ ಸ್ಫೂರ್ತಿ ಕೊಟ್ಟಿತೋ ಗೊತ್ತಿಲ್ಲ. ಏಕೆಂದರೆ 1980ರ ‘ಕರ್ಫ್ಯೂ’ ಗ್ರಹಣಕ್ಕೆ ಮುಂಚೆಯೇ ಅವರ ಕಾದಂಬರಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT