ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಯಾತ್ರೆಯೂ ಮೂಳೆಗಳೂ...

Published 5 ಸೆಪ್ಟೆಂಬರ್ 2023, 23:30 IST
Last Updated 5 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ
ದೀರ್ಘಕಾಲದ ಗಗನಯಾತ್ರೆಯ ನಂತರದಲ್ಲಿ ಗಗನಯಾತ್ರಿಗಳ ಅಸ್ಥಿಮಜ್ಜೆಯಲ್ಲಿನ ಬದಲಾವಣೆಗಳ ಕುರಿತು ಕೆನಡಾದ ಒಟಾವಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮಾಡಿರುವ ಸಂಶೋಧನೆ ‘ನೇಚರ್‌ ಕಮ್ಯುನಿಕೇಷನ್ಸ್‌’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಗಗನಯಾತ್ರೆ ಎಂದಾಕ್ಷಣ ಸಾಮಾನ್ಯರಾದ ನಮ್ಮ ಮನಸ್ಸಿನಲ್ಲಿ ಒಂದು ಕಲ್ಪನಾಲೋಕವೇ ತೆರೆದುಕೊಳ್ಳುತ್ತದೆ. ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಾಡುವ ಆ ಕಲ್ಪನೆ ಅದ್ಭುತವೇ ಸರಿ. ಆದರೆ ಹಕ್ಕಿಗಳಂತೇ ಮೇಲೆ ಹಾರಾಡಿ ಕೆಳಗೆ ಇಳಿಯುವುದು ನಮ್ಮ ದೇಹಕ್ಕೆ ಅಷ್ಟು ಸುಲಭವಲ್ಲ. ಅದಕ್ಕೆಂದೇ ಸೂಕ್ತವಾದ ಮಾರ್ಪಾಟನ್ನು ದೇಹ ಮಾಡಿಕೊಳ್ಳಬೇಕಾಗುತ್ತದೆ. ಹಕ್ಕಿಗಳೋ ಬೇಕೆನಿಸಿದಾಗ ಪುರ್‍ರನೆ ಆಕಾಶಕ್ಕೆ ಹಾರಿ ತಕ್ಷಣವೇ ನಿರಾಯಾಸವಾಗಿ ಇಳಿದುಬಿಡುತ್ತವೆ. ಅದಕ್ಕೆ ಸೂಕ್ತವಾದ ದೇಹವ್ಯವಸ್ಥೆಯನ್ನು ಪಕ್ಷಿಗಳಿಗೆ ನಮ್ಮ ಪ್ರಕೃತಿ ನೀಡಿದೆಯೆನ್ನಿ. ಆದರೆ ನಾವು ಮನುಷ್ಯರೋ ಅದನ್ನೂ ಅನುಕರಿಸುವ ಪ್ರಯತ್ನದಲ್ಲಿ ಭಾರೀ ವಿಜಯವನ್ನು ಸಾಧಿಸಿ ಗಗನಯಾತ್ರೆ ಆರಂಭಿಸಿಬಿಟ್ಟಿದ್ದೇವೆ. ಜೊತೆಗೆ ತಿಂಗಳುಗಟ್ಟಲೆ ಆಕಾಶದಲ್ಲಿಯೇ ಇದ್ದು ಸಂಶೋಧನೆ ಮಾಡುತ್ತಿದ್ದೇವೆ. ಬಾಹ್ಯಾಕಾಶದ ಸಂಶೋಧನೆ ಒಂದೆಡೆಯಾದರೆ ಭೂಮಿಯ ಮೇಲಿನ ವಾಸ, ಬಾಹ್ಯಾಕಾಶದ ವಾಸ ಹಾಗೂ ಗಗನಯಾತ್ರೆಯ ನಂತರದ ಭೂಮಿಯ ಮೇಲಿನ ವಾಸದಲ್ಲಿ ಗಗನಯಾತ್ರಿಗಳ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆ ಮತ್ತೊಂದೆಡೆ. ಇದೋ ಗಗನಯಾತ್ರಿಗಳ ದೀರ್ಘಕಾಲದ ಯಾತ್ರೆಯ ನಂತರದಲ್ಲಿ ಅವರ ಅಸ್ಥಿಮಜ್ಜೆಯಲ್ಲಿನ ಬದಲಾವಣೆಗಳ ಕುರಿತು ಕೆನಡಾದ ಒಟಾವಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮಾಡಿರುವ ಸಂಶೋಧನೆ ಮೊನ್ನೆ ‘ನೇಚರ್‌ ಕಮ್ಯುನಿಕೇಷನ್ಸ್‌’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಗಗನಯಾತ್ರೆಗೆ ನಮ್ಮ ದೇಹ ಸಾಕಷ್ಟು ವ್ಯತ್ಯಾಸಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಮೂಳೆ, ಅಲ್ಲಿ ಉತ್ಪಾದನೆಯಾಗುವ ಅಸ್ಥಿಮಜ್ಜೆ, ರಕ್ತದ ಹುಟ್ಟು ಮತ್ತು ಬೆಳವಣಿಗೆ - ಇವು ನಮ್ಮ ಇರುವಿಕೆಯ ಬಹುಮುಖ್ಯ ಭಾಗ. ಆದರೆ ಆಕಾಶದಲ್ಲಿದ್ದಾಗ ನಮ್ಮ ದೇಹದ ಅತಿಮುಖ್ಯ ಜೀವರಸವಾದ ಅಸ್ಥಿಮಜ್ಜೆಯಲ್ಲಿರುವ ಕೊಬ್ಬಿನಾಂಶಗಳಲ್ಲಿ ಆಗುವ ವ್ಯತ್ಯಾಸದ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಇದು ಮನುಷ್ಯನ ದೇಹದ ಚಯಾಚಯ ಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅಸ್ಥಿಮಜ್ಜೆಯ ಪ್ರಮಾಣದ ವ್ಯತ್ಯಾಸದಿಂದಾಗುವ ಪರಿಣಾಮಗಳು ನಿರ್ಲಕ್ಷಿಸುವಂತವೂ ಅಲ್ಲ. ಮೂಳೆಗಳ ಸವೆತ ಅಥವಾ ಆಸ್ಟಿಯೋಪೋರೋಸಿಸ್‌, ರಕ್ತಹೀನತೆ, ಸ್ಥೂಲಕಾಯ, ಗ್ಲೂಕೋಸ್‌ ಇನ್‌ಟಾಲೆರೆನ್ಸ್ ಹಾಗೂ ಕ್ಯಾನ್ಸರಿನಂತಹ ಮಾರಕ ಕಾಯಿಲೆಗಳನ್ನೂ ತಂದೊಡ್ಡಿಬಿಡುತ್ತದೆ. ಬಾಹ್ಯಾಕಾಶದಲ್ಲಿ ತಲುಪುತ್ತಿದ್ದಂತೆ ಮೂಳೆಗಳ ಮೇಲೆ ಆಗುವ ಬಲಪ್ರಯೋಗವು ಶೂನ್ಯವಾಗುತ್ತದೆ; ದೇಹದೊಳಗಿನ ವಿವಿಧ ರಸಗಳು ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಚಲಿಸಲಾರಂಭಿಸುತ್ತವೆ; ರಕ್ತದಲ್ಲಿನ ಕೆಂಪುರಕ್ತಕಣಗಳು ಒಡೆಯುತ್ತವೆ. ಇಷ್ಟಲ್ಲದೇ ಅಲ್ಲಿನ ವಾತಾವರಣವು ಬೇರೆಯಾಗಿರುವುದರಿಂದ ವಿಭಿನ್ನ ರೀತಿಯ ವಿಕಿರಣಗಳು ದೇಹವನ್ನು ತಾಕುತ್ತವೆ. ಇವೆಲ್ಲವೂ ಗಗನಯಾತ್ರಿಗಳ ದೇಹದಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಉಂಟುಮಾಡುತ್ತವೆ. ಅದನ್ನು ಗೆದ್ದು ಸಂಶೋಧನೆಯನ್ನು ಪೂರ್ಣಗೊಳಿಸಿ ಭೂಮಿಗೆ ಮರಳಿ ತಲುಪುವುದು ನಿಜಕ್ಕೂ ಸವಾಲು ಹಾಗೂ ಸಾಧನೆಯೇ ಸರಿ. ದುರದೃಷ್ಟವಶಾತ್‌ ಅದರ ಪರಿಣಾಮಗಳು ಭೂಮಿಗೆ ಮರಳಿದ ಮೇಲೂ ಇರುತ್ತದೆ. ಇದನ್ನು ಸರಿದೂಗಿಸಿಕೊಳ್ಳಲು ಇವರಿಗೆ 60 ದಿನಗಳ ಸತತ ಹಾಗೂ ಸಂಪೂರ್ಣ ವಿಶ್ರಾಂತಿ ಬೇಕಾಗುತ್ತದೆಯಂತೆ.

ಇದನ್ನು ಸ್ಥೂಲವಾಗಿ ಅಧ್ಯಯನ ಮಾಡಲು ಒಟಾವಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು 14 ಗಗನಯಾತ್ರಿಗಳ ಅಸ್ಥಿಮಜ್ಜೆಯನ್ನು ಪರೀಕ್ಷಿಸಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಆರು ತಿಂಗಳ ಯೋಜನೆಗಾಗಿ ಗಗನಯಯಾತ್ರೆಯನ್ನು ಮುಗಿಸಿ ಬಂದ 41 ದಿನಗಳ ನಂತರ ಎದೆಗೂಡಿನ ಹಾಗೂ ಸೊಂಟದ ನಡುವೆ ಕಂಡುಬರುವ ಲುಂಬಾರ್‌ ಮೂಳೆಗಳಲ್ಲಿರುವ ಅಸ್ಥಿಮಜ್ಜೆಯನ್ನು ಹಾಗೂ ಅದರ ಕೊಬ್ಬಿನ ಕಣಗಳನ್ನು ಅಧ್ಯಯನ ಮಾಡಿದ್ದಾರೆ. ಹಲವಾರು ಪರೀಕ್ಷೆಗಳ ಪ್ರಕಾರ ಅವರ ಅಸ್ಥಿಮಜ್ಜೆಯಲ್ಲಿನ ಕೊಬ್ಬಿನ ಸಂಗ್ರಹಣೆಯಲ್ಲಿ ಇಳಿಕೆ ಕಂಡುಬಂದಿತ್ತಂತೆ. ನಂತರ, ನೆಲದ ಮೇಲೆಯೇ ಇದ್ದವರ ಸೊಂಟದ ಮೂಳೆಗಳ ಬೆಳವಣಿಗೆ ಹಾಗೂ ಅವರ ಅಸ್ಥಿಮಜ್ಜೆಯ ಕೊಬ್ಬಿನ ಅಂಶದಲ್ಲಾಗುವ ಇಳಿಕೆ ಹಾಗೂ ಕಾರಣಗಳನ್ನು ಪರೀಕ್ಷೆ ಮಾಡಿದ್ದಾರೆ. ಇವರ ಅಂದಾಜಿನ ಪ್ರಕಾರ ಗಗನಯಾತ್ರೆಯ ನಂತರ ಅದೇ ಕಾರಣಕ್ಕಾಗಿ ಅಸ್ಥಿಮಜ್ಜೆಯ ಕೊಬ್ಬಿನಾಂಶದಲ್ಲಿ ವ್ಯತ್ಯಾಸ ಆಗುವುದು ಖಚಿತವಾಯಿತಂತೆ. ಆದರೆ ಮಹಿಳಾ ಗಗನಯಾತ್ರಿಗಳಲ್ಲಿ ಇದು ಬೇಗನೆ ಸಮತೋಲನವಾಗುತ್ತದೆಯಂತೆ. ಯುವ ಗಗನಯಾತ್ರಿಗಳಲ್ಲಂತೂ ಇನ್ನೂ ಕ್ಷಿಪ್ರವಾಗಿ ಬೆಳವಣಿಗೆಯಾಗುತ್ತದೆಯಂತೆ. ಬಾಹ್ಯಾಕಾಶದ ಬಿರುಸಾದ ವಾತಾವಾರಣದಲ್ಲಿ ಇವೆಲ್ಲವನ್ನು ಪರೀಕ್ಷೆ ಮಾಡುವುದು ಕಷ್ಟಸಾಧ್ಯ. ಹಾಗಾಗಿ ಗಗನಯಾತ್ರಿಗಳಲ್ಲಿ ಅಸ್ಥಿಮಜ್ಜೆಯ ಕೊಬ್ಬಿನಾಂಶವನ್ನು ಅಧ್ಯಯನ ಮಾಡುವುದರಿಂದ ಆಕಾಶ ಹಾಗೂ ಭೂಮಿಯ ಮೇಲಿದ್ದಾಗ ಆಗುವ ಆಂತರಿಕ ದೈಹಿಕ ವ್ಯತ್ಯಾಸಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎನ್ನುವುದು ವಿಜ್ಞಾನಿಗಳ ಲೆಕ್ಕಾಚಾರ.

ಹೀಗೆ ದೀರ್ಘಕಾಲದ ಬಾಹ್ಯಾಕಾಶ ಅಧ್ಯಯನಗಳು ಯೋಜಿತ ಸಂಶೋಧನೆಗಳನ್ನು ಪೂರೈಸುವುದರ ಜೊತೆಗೆ ಭೂಮಿ ಹಾಗೂ ಇತರೆ ಗ್ರಹ ಅಥವಾ ಬಾಹ್ಯಾಕಾಶದಲ್ಲಿ ವಾಸವಿರುವುದರಿಂದ ನಮ್ಮ ದೇಹದಲ್ಲಿ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಮತ್ತು ಅದಕ್ಕೆ ಸಂಬಂಧಿಸಿದಂತೆ ಮುಂದಿನ ಯೋಜನೆಗಳಿಗೆ ಯಾವ ರೀತಿಯ ಸಿದ್ದತೆಗಳನ್ನು ನಡೆಸಿಕೊಳ್ಳಬೇಕು ಎನ್ನುವುದರ ಹೊಸ ಸಂಶೋಧನೆಗೆ ಹಾದಿಮಾಡಿಕೊಡುತ್ತವೆ. ಇದು ಗಗನಯಾತ್ರಿಗಳು ತಮ್ಮ ವಯಸ್ಸು ಹಾಗೂ ಲಿಂಗದ ಅನುಸಾರ ಆರೋಗ್ಯದ ಬಗ್ಗೆ ಹೇಗೆ ಪೂರ್ವತಯಾರಿ ಮಾಡಿಕೊಳ್ಳಬೇಕು ಎನ್ನುವುದರ ಒಳನೋಟವನ್ನು ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT