ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶದಲ್ಲಿ ‘ಶಕುಂತಲೆ’

Last Updated 10 ಮೇ 2022, 19:30 IST
ಅಕ್ಷರ ಗಾತ್ರ

ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿರುವ ‘ಶಕುಂತಲೆ’, ಭಾರತೀಯರ ಮತ್ತು ವಿಶೇಷವಾಗಿ ಕನ್ನಡಿಗರ ಹಿರಿಮೆ, ಗರಿಮೆಯನ್ನು ಹೆಚ್ಚಿಸಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಯುವಕ ಅವೇಜ್ ಅಹ್ಮದ್, ಬೆಂಗಳೂರಿನಲ್ಲಿ ಸ್ಥಾಪಿಸಿರುವ ‘ಪಿಕ್ಸೆಲ್’ ಹೆಸರಿನ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿ ಮಾಡಿರುವ ಉಪಗ್ರಹದ ಹೆಸರು ಶಕುಂತಲೆ. ಎಲಾನ್ ಮಸ್ಕ್‌ ಅವರ ‘ಸ್ಪೇಸೆಕ್ಸ್’ ಸಂಸ್ಥೆಯಿಂದ ಉಡಾವಣೆ ಮಾಡಿ, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಕುಂತಲೆ, ಭಾರತದಲ್ಲಿ ಖಾಸಗಿ ಸಂಸ್ಥೆಯೊಂದು ಅಭಿವೃದ್ಧಿ ಮಾಡಿ, ನಿರ್ವಹಿಸುತ್ತಿರುವ ಮೊದಲ ವಾಣಿಜ್ಯ ಬಳಕೆಯ ಉಪಗ್ರಹವೆಂದು ಇತಿಹಾಸ ಸೃಷ್ಟಿಸಿದ್ದಾಳೆ.

ಕಿರಿಯ ಗಾತ್ರದ ಉಪಗ್ರಹಗಳನ್ನು ಬಳಸಿ, ಹವಾಮಾನ ಮಾಹಿತಿ, ಕೃಷಿ, ಮಳೆ, ಬೆಳೆ ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸಲು ಬಾಹ್ಯಾಕಾಶ ಕ್ಷೇತ್ರದ ನವೋದ್ಯಮಗಳು ಮುಂದಾಗಿವೆ. ವಾರ್ಷಿಕ 710 ಕೋಟಿ ಡಾಲರ್ ಮೌಲ್ಯದ ಈ ಮಾರುಕಟ್ಟೆಯಲ್ಲಿ ಭಾರತದ ಫಿಕ್ಸೆಲ್ ಸಂಸ್ಥೆ ಶಕುಂತಲೆ ಉಪಗ್ರಹದ ಮೂಲಕ ತನ್ನ ಕೆಲಸವನ್ನು ಆರಂಭಿಸಿದೆ.

ಇಸ್ರೋ, ನಾಸಾದಂತಹ ಸಂಸ್ಥೆಗಳ ಉಪಗ್ರಹಗಳು ಹವಾಮಾನ ಮಾಹಿತಿ, ಕೃಷಿ ಮಾಹಿತಿ ಇತ್ಯಾದಿಯನ್ನು ನೀಡುತ್ತಿರುವಾಗ, ಫಿಕ್ಸೆಲ್‌ನಂತಹ ಸಂಸ್ಥೆಗಳು ಶಕುಂತಲೆಯಂತಹ 15 ಕೆಜಿಗೂ ಕಡಿಮೆ ತೂಕದ ಉಪಗ್ರಹದ ನೆರವಿನಿಂದ ಮಾಡುವುದೇನು ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಮೊದಲ ಹಂತದಲ್ಲಿ ಶಕುಂತಲೆಯಂತಹ ಹಲವಾರು ಉಪಗ್ರಹಗಳನ್ನು ಅಭಿವೃದ್ಧಿ ಮಾಡಿ, ಉಡಾವಣೆ ಹಾಗೂ ನಿರ್ವಹಣೆ ಮಾಡುವ ಉದ್ದೇಶವನ್ನು ಫಿಕ್ಸೆಲ್ ಸಂಸ್ಥೆ ಹೊಂದಿದೆ. ಹೀಗೆ ಮಾಡುವುದರಿಂದ, ದಿನದ 24 ಗಂಟೆಗಳ ಕಾಲ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸುವ, ವಿಶ್ಲೇಷಣೆ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡಲಿದೆ. ಹೈಫರ್‌ಸ್ಪೆಕ್ಟ್ರಲ್ ಇಮೇಜಿಂಗ್ ತಂತ್ರಜ್ಞಾನವನ್ನು ಬಳಸಿದ ಜಗತ್ತಿನಲ್ಲಿ ಅತ್ಯಂತ ಸಮರ್ಥವಾದ ಉಪಗ್ರಹವೆಂದು ಶಕುಂತಲೆ ಇತಿಹಾಸ ಸೃಷ್ಟಿಸಿದ್ದಾಳೆ.

ಶಕುಂತಲೆ ನೀಡುವ ಮಾಹಿತಿ ನಮ್ಮ ರೈತರಿಗೆ ಹೇಗೆ ಉಪಯೋಗವಾಗುತ್ತದೆ ಎಂದು ತಿಳಿದುಕೊಳ್ಳೋಣ.

1. ಮುಂಗಾರು ಮತ್ತು ಹಿಂಗಾರು ಸಮಯದಲ್ಲಿ ಪ್ರತಿದಿನ ಕೃಷಿಭೂಮಿಯ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಣೆ ಮಾಡಿ ಉಪಯುಕ್ತ ಸಲಹೆ, ಸೂಚನೆಗಳನ್ನು ರೈತರಿಗೆ ನೀಡಲಾಗುತ್ತದೆ.

2. ರೈತನ ಭೂಮಿಯಲ್ಲಿ ಬೆಳೆ ಮತ್ತು ಕಳೆ ಇರುವ ಪ್ರದೇಶವನ್ನು ನಿಖಿರವಾಗಿ ವಿಶ್ಲೇಷಣೆ ಮಾಡಲಾಗುತ್ತದೆ. ಇದರಿಂದಾಗಿ ಕಳೆ ನಿಯಂತ್ರಣಕ್ಕೆ ಸೂಕ್ತಕ್ರಮವನ್ನು ಕೈಗೊಳ್ಳಲು ರೈತರಿಗೆ ನೆರವಾಗುತ್ತದೆ.

3. ಕೀಟಗಳ ಹಾವಳಿ ಮತ್ತು ರೋಗಗಳ ಬಗ್ಗೆ ಸಾಕಷ್ಟು ಸಮಯ ಮುಂಚಿತವಾಗಿ ರೈತರಿಗೆ ಮುನ್ನೆಚ್ಚರಿಕೆ ನೀಡಲು ಸಾಧ್ಯವಿದೆ.

4. ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹದಂತಹ ಪ್ರಕೃತಿ ವಿಕೋಪಗಳ ಬಗ್ಗೆ ಹಾಗೂ ಕಾಡ್ಗಿಚ್ಚು ಭೂಕುಸಿತದಂತಹ ಅಪಾಯಗಳ ಮುನ್ನೆಚ್ಚರಿಕೆ ಮಾಹಿತಿಯನ್ನು ನೀಡಲು ಸಾಧ್ಯವಿದೆ.

5. ನೀರಾವರಿ ಮತ್ತು ಮಳೆಯಾಶ್ರಿತ ಕೃಷಿಕರಿಗೆ, ನೀರಿನ ಸಮರ್ಪಕ ಬಳಕೆಯ ಮಾಹಿತಿ ನೀಡಲು ಸಾಧ್ಯವಿದೆ.
ಇದಲ್ಲದೆ, ಅರಣ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಉಪಯುಕ್ತ ಮಾಹಿತಿನ್ನು ಶಕುಂತಲೆ ನೀಡುವುದು ಸಾಧ್ಯವಿದೆ. ಉದಾಹರಣೆಗೆ:

ಅರಣ್ಯ ಪ್ರದೇಶದ ಒತ್ತುವರಿ, ಕಾಡುಮರಗಳ ಹನನ ಮೊದಲಾದ ಮಾಹಿತಿಯನ್ನು ಪ್ರತಿದಿನವೂ ನೀಡಲು ಸಾಧ್ಯವಿದೆ.

ನೆಲ, ಜಲ ಮತ್ತು ವಾಯುಮಾಲಿನ್ಯದ ಪ್ರಮಾಣವನ್ನು ಹಾಗೂ ಇಂತಹ ಮಾಲಿನ್ಯಕಾರಕ ತ್ಯಾಜ್ಯಗಳನ್ನು ಅನಧಿಕೃತವಾಗಿ ಮತ್ತು ಪರಿಸರಕ್ಕೆ ಮಾರಕವಾಗುವಂತೆ ವಿಲೇವಾರಿ ಮಾಡುವ ಘಟನೆಗಳನ್ನು ಗುರುತಿಸಿ, ಪ್ರತಿದಿನವೂ ನೀಡಲು ಸಾಧ್ಯವಿದೆ.

ತೈಲ ಮತ್ತು ಗ್ಯಾಸ್ ಸಾಗಾಣಿಕೆಗಾಗಿ ಭೂಮಿಯ ಮೇಲೆ ಹಾಗೂ ಭೂಮಿಯ ಒಳಗೆ ಅಳವಡಿಸಲಾಗಿರುವ ಪೈಪುಗಳಲ್ಲಿ ಸೋರಿಕೆಯನ್ನು ಗುರುತಿಸಿ, ಅವಘಡ ಸಂಭವಿಸದಂತೆ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ಮಾಹಿತಿ ನೀಡುವುದು ಸಾಧ್ಯವಿದೆ.

ಅಕ್ರಮ ಕಲ್ಲು, ಮರಳು ಮತ್ತು ಖನಿಜ ಗಣಿಗಾರಿಕೆ ಹಾಗೂ ಗಣಿತ್ಯಾಜ್ಯವನ್ನು ಪರಿಸರಕ್ಕೆ ಮಾರಕವಾಗುವಂತೆ ವಿಲೇವಾರಿ ಮಾಡುವ ಪ್ರಕರಣಗಳನ್ನು ಗುರುತಿಸಿ, ಪ್ರತಿದಿನ ಮಾಹಿತಿ ನೀಡಲು ಸಾಧ್ಯವಿದೆ.

ಶಕುಂತಲೆಯಂತಹ ಉಪಗ್ರಹಗಳನ್ನು ಬಳಸಿ ದೇಶದಲ್ಲಿ ನಡೆಯುತ್ತಿರುವ ಬೃಹತ್ ಕಾಮಗಾರಿ ಯೋಜನೆಗಳ ನಿರ್ವಹಣೆ, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ಥರ ರಕ್ಷಣೆ ಮತ್ತು ಪರಿಹಾರ ನಿರ್ವಹಣೆ – ಹೀಗೆ ಹಲವು ರೀತಿಯ ಉಪಯುಕ್ತ ಮಾಹಿತಿಯನ್ನು ನೀಡಲು ಸಾಧ್ಯವಿದೆ.

ಶಕುಂತಲೆಯಂತಹ ಉಪಗ್ರಹಗಳಿಂದ ದೊರೆಯುವ ಮಾಹಿತಿಯನ್ನು ಸಂಗ್ರಹಿಸಿ, ಸಂಸ್ಕರಿಸಿ, ವಿಶ್ಲೇಷಣೆ ಮಾಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೊದಲಾದ ತಂತ್ರಜ್ಞಾನಗಳನ್ನು ಬಳಸಿ ಅಭಿವೃಪಡಿಸಿದ ವ್ಯವಸ್ಥೆಯನ್ನು ಫಿಕ್ಸೆಲ್ ಸಂಸ್ಥೆ ಹೊಂದಿದೆ. ಈ ಸೌಲಭ್ಯವನ್ನು ಬಳಸಿ ವಿದೇಶದ ಸಂಸ್ಥೆಗಳಿಗೆ ಅಗತ್ಯವಾದ ಉಪಗ್ರಹ ಮಾಹಿತಿಯನ್ನು ವಿಶ್ಲೇಷಣೆ ಮಾಡಿ ನೀಡುವುದರ ಮೂಲಕ ಭಾರತಕ್ಕೆ ಕೋಟ್ಯಂತರ ಡಾಲರ್ ವಿದೇಶಿ ವಿನಿಮಯವನ್ನು ಗಳಿಸಿಕೊಡುವುದು ಈ ಸಂಸ್ಥೆಯ ಉದ್ದೇಶವಾಗಿದೆ.

ಮೊದಲ ಹಂತದಲ್ಲಿ ಶಕುಂತಲೆಯಂತಹ ಹಲವಾರು ಉಪಗ್ರಹಗಳನ್ನು ಅಭಿವೃದ್ಧಿ ಮಾಡಿ, ಉಡಾವಣೆ ಹಾಗೂ ನಿರ್ವಹಣೆ ಮಾಡುವುದು ಹಾಗೂ ಉಪಗ್ರಹ ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಣೆ ಮಾಡುವ ಗುರಿಯನ್ನು ಹೊಂದಿರುವ ಫಿಕ್ಸೆಲ್ ಸಂಸ್ಥೆ, ಎರಡನೆಯ ಹಂತದಲ್ಲಿ ನಮ್ಮ ಸೌರಮಂಡಲದಲ್ಲಿ ಲಭ್ಯವಿರುವ ಸಂಪನ್ಮೂಲಗಳ ಮಾಹಿತಿಯನ್ನು ಸಂಗ್ರಹಿಸಲು ಅಗತ್ಯವಾದ ಅತ್ಯಾಧುನಿಕ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿ ಪಡಿಸುವ, ಉಡಾವಣೆ ಮತ್ತು ನಿರ್ವಹಣೆ ಮಾಢುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ.

ಇಡೀ ಸೌರಮಂಡಲದಲ್ಲಿರುವ ಸಂಪನ್ಮೂಲಗಳ ಮಾಹಿತಿಯನ್ನು ಈ ರೀತಿ ಸಂಗ್ರಹಿಸಿ, ವಿಶ್ಲೇಷಣೆ ಮಾಡುವ ಕೆಲಸವನ್ನು ಭಾರತದ ಸಂಸ್ಥೆ ಮಾಡಲಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಶಕುಂತಲೆಯ ಯಶೋಗಾಥೆಯಿಂದ ಸ್ಫೂರ್ತಿ ಪಡೆದು ವಿಫುಲ ಅವಕಾಶಗಳಿರುವ ಈ ಕ್ಷೇತ್ರದಲ್ಲಿ ನಮ್ಮವರು ತೊಡಗಿಸಿಕೊಂಡು ಯಶಸ್ವಿಯಾಗಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT