ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವಿಷ್ಕಾರ | ವಿಜ್ಞಾನದ ವಿಸ್ಮಯಗಳು

Last Updated 23 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಸ್ಫೋಟಗೊಳ್ಳದ ಬ್ಯಾಟರಿ
ಮೊಬೈಲ್ ಫೋನ್, ಲ್ಯಾಪ್‍ಟಾಪ್ – ಹೀಗೆ ಹಲವಾರು ಉಪಕರಣಗಳಲ್ಲಿ ಲಿಥಿಯಮ್-ಇಯಾನ್ ಬ್ಯಾಟರಿ ಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಬ್ಯಾಟರಿಗಳಿಗೆ ಬೆಂಕಿ ಹೊತ್ತಿಕೊಳ್ಳುವುದು, ಬ್ಯಾಟರಿ ಸ್ಫೋಟಿಸುವುದು ಮೊದಲಾದ ಅವಘಡಗಳು ನಡೆಯುತ್ತಿವೆ. ಹೀಗೆ ಬ್ಯಾಟರಿಗೆ ಬೆಂಕಿ ಹೊತ್ತುವುದು, ಸ್ಫೋಟಗಳನ್ನು ತಡೆಯಲು ಹೊಸ ರೀತಿಯ ಲಿಥಿಯಮ್-ಇಯಾನ್ ಬ್ಯಾಟರಿಯನ್ನು ಅಮೆರಿಕದ ಮೇರಿಲ್ಯಾಂಡ್‌ ವಿಶ್ವವಿದ್ಯಾಲಯ ಮತ್ತು ಅಮೆರಿಕಾ ರಕ್ಷಣಾ ಸಂಶೋಧನೆ ಪ್ರಯೋಗಾಲಯದ ತಂತ್ರಜ್ಞರು ಅಭಿವೃದ್ಧಿಪಡಿಸಿದ್ದಾರೆ.

ನೀರು ಮತ್ತು ಲವಣಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿರುವ ಈ ಹೊಸ ಬ್ಯಾಟರಿಯನ್ನು ವಿವಿಧ ಸನ್ನಿವೇಶಗಳಲ್ಲಿ ಮತ್ತು ಉಪಕರಣಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದೊರೆತಿದೆ. ಮುಂದುವರಿದ ಪರೀಕ್ಷೆಗಳನ್ನು ನಡೆಸಿ, ನಂತರ ಈ ಹೊಸ ಬ್ಯಾಟರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಇದೆ.

ಪ್ರಕೃತಿ ವಿಕೋಪದಲ್ಲಿ ಸೋಲಾರ್ ವಿದ್ಯುತ್
ಮನೆಯ ಮೇಲೆ ಸೋಲಾರ್ ಫಲಕಗಳಿಂದ ವಿದ್ಯುತ್ ಉತ್ಪಾದಿಸಿ. ಇಂತಹ ವಿದ್ಯುತ್ತನ್ನು ಸರ್ಕಾರಿ ಸ್ವಾಮ್ಯದ ವಿದ್ಯುತ್ ಸಂಸ್ಥೆಗಳು ಖರೀದಿಸುತ್ತವೆ. ಇದು ನಿಮಗೆ ಆದಾಯ ಮೂಲವಾಗುತ್ತದೆ ಎನ್ನುವ ಯೋಜನೆಗಳನ್ನು ಜನಪ್ರಿಯಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಮನೆಯ ಮೇಲೆ ಅಳವಡಿಸಲಾಗಿರುವ ಸೋಲಾರ್ ಫಲಕಗಳಿಂದ ಉತ್ಪಾದಿಸಲಾಗುವ ವಿದ್ಯುತ್ತನ್ನು ವಿದ್ಯುತ್ ಸಂಸ್ಥೆಗಳ ವಿದ್ಯುತ್ ಜಾಲಕ್ಕೆ ಪೂರೈಸಲು ಸೋಲಾರ್ ಇನ್‍ವರ್ಟರ್‌ಗಳನ್ನು ಬಳಸಲಾಗುತ್ತದೆ. ವಿದ್ಯುತ್ ಜಾಲದಲ್ಲಿ ತಾಂತ್ರಿಕ ಸಮಸ್ಯೆಯಾದಾಗ, ಈ ಸೋಲಾರ್ ಇನ್‍ವರ್ಟರ್‌ನ ಸುರಕ್ಷತೆಯ ದೃಷ್ಟಿಯಿಂದ ಆಫ್ ಮಾಡಲಾಗುತ್ತದೆ. ಹೀಗಾಗಿ ವಿದ್ಯುತ್ ಕಡಿತದ ಸನ್ನಿವೇಶದಲ್ಲಿ ಮನೆಯ ಮೇಲಿನ ಸೋಲಾರ್ ಫಲಕಗಳು ಉತ್ಪಾದಿಸುವ ವಿದ್ಯುತ್ತನ್ನು ಮನೆಯವರಿಗೆ ಬಳಸಲು ಸಮಸ್ಯೆಯಾಗುತ್ತದೆ.

ಈ ಸಮಸ್ಯೆಯನ್ನು ಪರಿಹರಿಸಲು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಸ್ಯಾಂಡಿ ಹೆಸರಿನ ಚಂಡಮಾರುತ ಅಪ್ಪಳಿಸಿದಾಗ, ಸುಮಾರು 80 ಲಕ್ಷ ಜನರಿಗೆ ಸಮಸ್ಯೆಯಾಗಿತ್ತು. ಚಂಡಮಾರುತದಿಂದಾಗಿ ವಿದ್ಯುತ್ ಜಾಲಕ್ಕೆ ಅಪಾರ ಹಾನಿಯಾಗಿ ಲಕ್ಷಾಂತರ ಅಮೆರಿಕನ್ನರು ವಿದ್ಯುತ್ ಇಲ್ಲದೆ ಎರಡು ವಾರಗಳನ್ನು ಕಳೆಯಬೇಕಾಗಿತ್ತು. ಚಂಡಮಾರುತದಂತಹ ಪ್ರಕೃತಿ ವಿಕೋಪಗಳಿಂದಾಗಿ ವಿದ್ಯುತ್ ಜಾಲಕ್ಕೆ ಹಾನಿಯಾದಾಗ, ಸೋಲಾರ್ ವಿದ್ಯುತ್ತನ್ನು ಜನಸಾಮಾನ್ಯರಿಗೆ ಪೂರೈಸಲು ಹೊಸ ತಂತ್ರಾಂಶ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರತಿಯೊಂದು ಮನೆಯಲ್ಲಿ ಸೋಲಾರ್ ವಿದ್ಯುತ್‍ ಸಂಗ್ರಹಿಸಿಡಲು ದುಬಾರಿ ಬೆಲೆಯ ಬ್ಯಾಟರಿಗಳನ್ನು ಬಳಸುವ ಬದಲು ಸೋಲಾರ್ ವಿದ್ಯುತ್ ಉತ್ಪಾದನೆ ವ್ಯವಸ್ಥೆ ಹೊಂದಿರುವ ಹಲವು ಮನೆಗಳಿಗೆ ಕೇಂದ್ರೀಕೃತ ವಿದ್ಯುತ್ ಸಂಗ್ರಹಣಾ ವ್ಯವಸ್ಥೆಯನ್ನು ಇಲ್ಲಿ ಬಳಸಲಾಗುತ್ತದೆ. ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಈ ಕೇಂದ್ರೀಕೃತ ವಿದ್ಯುತ್ ಸಂಗ್ರಹಣಾ ವ್ಯವಸ್ಥೆಯಲ್ಲಿ ಅತ್ಯಾಧುನಿಕ ಬ್ಯಾಟರಿ ವ್ಯವಸ್ಥೆಯಲ್ಲಿ ಸಂಗ್ರಹಿಸಿಡಲಾಗುವ ವಿದ್ಯುತ್ತನ್ನು ಪ್ರತಿಯೊಂದು ಮನೆಯ ಅಗತ್ಯಕ್ಕೆ ತಕ್ಕಂತೆ ವಿತರಿಸಲಾಗುತ್ತದೆ. ಎಷ್ಟು ವಿದ್ಯುತ್ ಲಭ್ಯವಿದೆ, ಯಾವ ಸಮಯದಲ್ಲಿ ಯಾವ ಮನೆಗೆ ವಿದ್ಯುತ್ ಪೂರೈಸಬೇಕು ಎಂದು ಲೆಕ್ಕ ಮಾಡುವ ತಂತ್ರಾಂಶವು ಈ ವ್ಯವಸ್ಥೆಯ ಹೃದಯದಂತಿದೆ.

ಪ್ರಾಯೋಗಿಕ ಪರೀಕ್ಷೆಗಳಲ್ಲಿ ಜನಸಾಮಾನ್ಯರಿಂದ ಈ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮುಂಬರುವ ದಿನಗಳಲ್ಲಿ ಈ ವ್ಯವಸ್ಥೆಯನ್ನು ಹೆಚ್ಚು ಸುಧಾರಿಸಲು ಮತ್ತು ಜನಸಾಮಾನ್ಯರಿಗೆ ನೀಡಲು ಯೋಜನೆ ರೂಪಿಸಲಾಗಿದೆ.

ತಲೆಯ ಪೆಟ್ಟಿನ ಪತ್ತೆಗೆ ಸ್ಮಾರ್ಟ್‌ ಫೋನ್
ಅಪಘಾತ, ಯುದ್ಧ, ಕ್ರೀಡೆ ಮೊದಲಾದ ಸಂದರ್ಭದಲ್ಲಿ ತಲೆಗೆ ಪೆಟ್ಟಾಗುವ ಸಂಭವವಿರುತ್ತದೆ. ಸ್ಮಾರ್ಟ್‌ ಫೋನ್ ಕ್ಯಾಮೆರಾ ಮತ್ತು ವಿಶೇಷ ತಂತ್ರಾಂಶವನ್ನು ಬಳಸಿ ‘ತಲೆಗೆ ಎಂತಹ ಪೆಟ್ಟಾಗಿದೆ’ ಎಂದು ತಿಳಿದುಕೊಳ್ಳಲು ಮತ್ತು ಸೂಕ್ತವಾದ ತುರ್ತು ಚಿಕಿತ್ಸೆ ನೀಡಲು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಾಧ್ಯವೆಂದು ವಾಶಿಂಗ್ಟನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಇವರು ಅಭಿವೃದ್ಧಿಪಡಿಸಿರುವ ವಿಶೇಷವಾದ ತಂತ್ರಾಂಶವನ್ನು ಸ್ಮಾರ್ಟ್‌ ಫೋನ್‍ನಲ್ಲಿ ಅಳವಡಿಸಿದರೆ ಸಾಕು.

ಪೆಟ್ಟಾಗಿರುವ ವ್ಯಕ್ತಿಯ ಕಣ್ಣಿಗೆ ಸ್ಮಾರ್ಟ್‌ ಫೋನ್ ಕ್ಯಾಮೆರಾವನ್ನು ಕೇಂದ್ರೀಕರಿಸಿದಾಗ, ಈ ಕ್ಯಾಮೆರಾದ ಬೆಳಕಿಗೆ ಕಣ್ಣು ಸ್ಪಂದಿಸುವ ರೀತಿಯನ್ನು (ಪ್ಯುಪಿಲರಿ ಲೈಟ್ ರಿಫ್ಲೆಕ್ಸ್) 3 ಸೆಕೆಂಡ್ ಅವಧಿಯ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ.

ಈ ವಿಡಿಯೊವನ್ನು ವಿಶ್ಲೇಷಣೆ ಮಾಡುವ ತಂತ್ರಾಂಶವು ನೀಡುವ ವರದಿಯಿಂದ ತಲೆಗೆ ಎಂತಹ ಪೆಟ್ಟಾಗಿದೆ ಎಂದು ಸುಲಭವಾಗಿ ವೈದ್ಯರು ನಿರ್ಧರಿಸಲು ಸಾಧ್ಯವಾಗುತ್ತದೆ. ಸ್ಮಾರ್ಟ್‌ ಫೋನ್ ಮತ್ತು ವಿಶೇಷ ತಂತ್ರಾಂಶ ಬಳಸಿ ಪ್ಯುಪಿಲರಿ ಲೈಟ್ ರಿಫ್ಲೆಕ್ಸ್‌ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸುವ ಈ ಹೊಸ ವಿಧಾನವು ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ.

ಕೆಲವು ಆಸ್ಪತ್ರೆಗಳಲ್ಲಿ ಲಭ್ಯವಿರುವ ದುಬಾರಿ ಬೆಲೆಯ ಪ್ಯೂಪಿಲೋ ಮೀಟರ್‌ ಬಳಸಿ ಈಗ ಪ್ಯುಪಿಲರಿ ಲೈಟ್ ರಿಫ್ಲೆಕ್ಸ್ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುತ್ತದೆ. ಇದರ ಬದಲು ಸ್ಮಾರ್ಟ್‌ ಫೋನ್ ಮತ್ತು ವಿಶೇಷ ತಂತ್ರಾಂಶವನ್ನು ಬಳಸಿಕೊಂಡ ಈ ಹೊಸ ವಿಧಾನದಿಂದ ದೊರೆಯುವ ವರದಿಯ ಗುಣಮಟ್ಟ ಮತ್ತು ನಿಖರತೆ ಕುರಿತು ತಜ್ಞವೈದ್ಯರು ಪ್ರಶಂಸಿದ್ದಾರೆ. ಈ ವಿಧಾನವನ್ನು ಸುಧಾರಿಸಲು ಮತ್ತು ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಲು ಕೆಲಸ ಮಾಡುತ್ತಿರುವ ವಿಜ್ಞಾನಿಗಳು ಮುಂಬರುವ ದಿನಗಳಲ್ಲಿ ಈ ವಿಶೇಷ ತಂತ್ರಾಂಶವನ್ನು ಸಾರ್ವಜನಿಕರಿಗೆ ನೀಡುವ ವಿಶ್ವಾಸವನ್ನು ಹೊಂದಿದ್ದಾರೆ.

ಇ-ತ್ಯಾಜ್ಯಕ್ಕೊಂದು ಪರಿಹಾರ
ಟಿ.ವಿ, ಆಡಿಯೊ ಪ್ಲೇಯರ್, ಮೊಬೈಲ್ ಫೋನ್, ಕಂಪ್ಯೂಟರ್ – ಹೀಗೆ ಪ್ರತಿದಿನ ಸಂಗ್ರಹವಾಗುವ ಕೋಟ್ಯಂತರ ನಿರುಪಯುಕ್ತವಾದ ವಿದ್ಯುನ್ಮಾನ ಉಪಕರಣಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಸಮಸ್ಯೆಯಾಗುತ್ತಿದೆ. ಇ-ತ್ಯಾಜ್ಯ ಕುರಿತು ಜನಸಾಮಾನ್ಯರಲ್ಲಿ ಅರಿವಿನ ಕೊರತೆ ಮತ್ತು ಇ-ತ್ಯಾಜ್ಯ ನಿರ್ವಹಣೆಗಾಗಿ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಅತ್ಯಾಧುನಿಕ ಸಂಸ್ಕರಣಾ ಘಟಕಗಳು ಲಭ್ಯವಿಲ್ಲದಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

ವಿದ್ಯುನ್ಮಾನ ಉಪಕರಣ ನಿರುಪಯುಕ್ತವಾದಾಗ, ತಾನಾಗಿಯೇ ವಿನಾಶ ಹೊಂದಿದರೆ ಇ-ತ್ಯಾಜ್ಯ ಸಮಸ್ಯೆಗೆ ಒಂದು ಪರಿಹಾರ ನೀಡಿದಂತಾಗುತ್ತದೆ. ಇದಕ್ಕಾಗಿ ಹೌಸ್ಟನ್ ವಿಶ್ವವಿದ್ಯಾಲಯ ಮತ್ತು ಚೀನಾದ ವಿಜ್ಞಾನಿಗಳು ಹೊಸ ವಿಧಾನವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಮೊದಲು ವಿದ್ಯುನ್ಮಾನ ಬಿಡಿಭಾಗಗಳಿಗೆ ವಿಶೇಷವಾದ ಲೇಪನವನ್ನು ಬಳಸಲಾಗುತ್ತದೆ. ವಿದ್ಯುನ್ಮಾನ ಉಪಕರಣ ನಿರುಪಯುಕ್ತವಾದಾಗ, ವಾತಾವರಣದಲ್ಲಿರುವ ತೇವಾಂಶವನ್ನು ಬಳಸಿ, ಈ ಲೇಪನವನ್ನು ಮತ್ತು ಬಿಡಿಭಾಗಗಳನ್ನು ನಾಶಪಡಿಸಲಾಗುತ್ತದೆ. ಇಲ್ಲಿ ಯಾವುದೇ ಆ್ಯಸಿಡ್‌ ಮತ್ತು ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ; ಸುರಕ್ಷಿತವಾಗಿ ಈ ವಿಧಾನವನ್ನು ಬಳಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ನಿರುಪಯುಕ್ತ ವಿದ್ಯುನ್ಮಾನ ಉಪಕರಣಗಳಿಗೆ ಮಾತ್ರ ಈ ವಿಧಾನ ಸೀಮಿತವಾಗಿಲ್ಲ. ಸೈನಿಕರು ಸೆರೆ ಸಿಕ್ಕಾಗ ಅಥವಾ ಅವರ ಬಳಿ ಇರುವ ವಿದ್ಯುನ್ಮಾನ ಉಪಕರಣಗಳು ವೈರಿಗಳ ಪಾಲಾದಾಗ, ಈ ವಿಧಾನವನ್ನು ಬಳಸಿ ಆ ಉಪಕರಣಗಳನ್ನು ನಾಶಪಡಿಸಬಹುದು. ಇದೇ ರೀತಿ ಮಾನವನ ಆರೋಗ್ಯ ಸುಧಾರಿಸಲು ದೇಹದಲ್ಲಿ ಅಳವಡಿಸಲಾಗುವ ವಿದ್ಯುನ್ಮಾನ ಉಪಕರಣಗಳು, ತಮ್ಮ ಕೆಲಸ ಮುಗಿದ ನಂತರ ಅಲ್ಲೇ ನಾಶವಾಗಲು ಈ ವಿಧಾನವನ್ನು ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT