ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳನ ನೆಲದಿಂದ ಚಿಮ್ಮಿತು ಮಂಜು!

Published : 2 ನವೆಂಬರ್ 2022, 4:09 IST
ಫಾಲೋ ಮಾಡಿ
Comments

ಕೆಲವು ದಿನಗಳ ಹಿಂದೆ ಮಂಗಳಗ್ರಹದ ಅಂಗಳಕ್ಕೆ ಉಲ್ಕೆಯೊಂದು ವೇಗದಿಂದ ಅಪ್ಪಳಿಸಿತು. ಅದು ಅಪ್ಪಳಿಸಿದ ರಭಸಕ್ಕೆ ಮಂಗಳನ ಅಂಗಳದ ಮೇಲೆ ಭೂಕಂಪನದ ಅಲೆಗಳೇ ಎದ್ದವು. ನಾವು ಭೂಗ್ರಹದಲ್ಲಿ ಆಗುವ ಭೂಕಂಪನಗಳಿಗೆ ಇಂಗ್ಲಿಷ್‌ನಲ್ಲಿ ‘ಅರ್ತ್‌ ಕ್ವೇಕ್‌’ ಎಂದು ಕರೆಯುವಂತೆ ಮಂಗಳನ ಉಂಟಾಗುವ ಕಂಪನಗಳನ್ನು ‘ಮಾರ್ಸ್ ಕ್ವೇಕ್‌’ ಎಂದು ಕರೆಯುತ್ತೇವೆ. ಆ ಉಲ್ಕೆಯು ಅಪ್ಪಳಿದಾಗ ಮಂಗಳನ ಅಂಗಳದ ಮೇಲೆ ನಾಲ್ಕರ ತೀವ್ರತೆಯಲ್ಲಿ ‘ಮಾರ್ಸ್‌ ಕ್ವೇಕ್‌’ ಉಂಟಾಯಿತು. ಬರೋಬ್ಬರಿ 490 ಅಡಿ ಅಗಲದ ಕುಳಿ ಉಂಟಾಯಿತು. ಅಚ್ಚರಿ ಎಂಬಂತೆ, ಆ ಉಲ್ಕೆಯು ಅಪ್ಪಳಿಸಿದಾಗ ನೆಲದಿಂದ ಮೇಲೆದ್ದ ಮಣ್ಣಿನ ಜೊತೆಗೆ ಮಂಜಿನ ಕಣಗಳೂ ಹೊರ ಚಿಮ್ಮಿರುವುದು ಸಂಶೋಧಕರಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.

ಮಂಗಳಗ್ರಹದ ಅಂಗಳದ ಮೇಲಿನ ಕಂಪನಗಳನ್ನು ಅಧ್ಯಯನ ಮಾಡಲೆಂದೇ ‘ನಾಸಾ’ ಪ್ರತಿಷ್ಠಾಪಿಸಿರುವ ‘ಇನ್‌ಸೈಟ್’ ಸಾಧನವು ಈ ಅಲೆಗಳನ್ನು ಗಮನಿಸಿ, ಮಂಗಳನನ್ನು ಪರಿಭ್ರಮಿಸುತ್ತಿರುವ ‘ಮಾರ್ಸ್ ರೀಕಾನ್‌ಸಾನ್ಸ್‌ ಆರ್ಬಿಟರ್’ ಉಪಗ್ರಹಕ್ಕೆ ರವಾನಿಸಿತು. ಉಪಗ್ರಹವು ತನಗೆ ಸಿಕ್ಕ ಸೂಚನೆಗಳನ್ನು ಆಧಾರವಾಗಿ ಇರಿಸಿಕೊಂಡು ಕೂಡಲೇ ಉಲ್ಕೆ ಅಪ್ಪಳಿಸುವ ಘಟನೆಯ ಛಾಯಾಚಿತ್ರಗಳನ್ನು ಸೆರೆಹಿಡಿಯಿತು. ಈ ಎಲ್ಲ ಮೇಲಿನ ಪ್ರಕ್ರಿಯೆಗಳೂ ಮಾನವ ಸೂಚನೆಗಳಿಲ್ಲದೆ ತನಗೆ ತಾನೇ ಯಾಂತ್ರಿಕವಾಗಿ ಆದಂಥವು. ಆದರೆ, ಆಗ ಸೆರೆ ಸಿಕ್ಕ ಛಾಯಾಚಿತ್ರಗಳು ಮಂಗಳನ ಮೇಲಿನ ಇದುವರೆಗಿನ ಹಲವು ಅನುಮಾನಗಳನ್ನೂ ಸಿದ್ಧಾಂತಗಳನ್ನೂ ಬಹುತೇಕ ನಿಜಗೊಳಿಸಿದವು.

‘ನಾಸಾ’ ಬಳಿ ಮಂಗಳನ ಮೇಲಿನ ಅನೇಕ ಉಲ್ಕೆ, ಕ್ಷುದ್ರಗ್ರಹ ಇತ್ಯಾದಿ ಆಕಾಶಕಾಯಗಳಿಂದ ಉಂಟಾದ ಕುಳಿಗಳ ಸಾಕಷ್ಟು ಛಾಯಾಚಿತ್ರಗಳಿವೆ. ಆದರೆ, ಈಗ ಸಿಕ್ಕಿರುವ ಮಾದರಿಯ ಕುಳಿಯ ಚಿತ್ರ ಇದುವರೆಗೂ ‘ನಾಸಾ’ಗೆ ಸಿಕ್ಕಿರಲಿಲ್ಲ. ಸಾಮಾನ್ಯವಾಗಿ ಉಲ್ಕೆಯೊ, ಕ್ಷುದ್ರಗ್ರಹವೊ ಮೇಲ್ಮೈಗೆ ಅಪ್ಪಳಿಸಿದಾಗ ಆ ಆಕಾಶಕಾಯವು ಅಪ್ಪಳಿಸುವ ಜಾಗದಿಂದ ಆ ಆಕಾಶಕಾಯದ ಗಾತ್ರಕ್ಕಿಂತ ಕೊಂಚ ಹೆಚ್ಚಿನ ನೆಲದ ಭಾಗ ಹೊರಮುಖವಾಗಿ ಚಿಮ್ಮುತ್ತದೆ. ಅದಕ್ಕೆ ಆಕಾಶಕಾಯದ ರಭಸವೂ ಕಾರಣವಾಗಿರುತ್ತದೆ. ಈ ಉಲ್ಕೆಯು ಮಂಗಳನ ಅಂಗಳದ ಮೇಲೆ ಕೆಲವು ದಿನಗಳ ಹಿಂದೆ ಅಪ್ಪಳಿಸಿದಾಗ ಈ ಭಾಗದಲ್ಲೂ ಮಣ್ಣು, ಕಲ್ಲು ಇತ್ಯಾದಿಗಳು ಹೊರಮುಖವಾಗಿ ಚಿಮ್ಮಲ್ಪಟ್ಟವು. ಆದರೆ, ಈ ಬಾರಿ ಕೇವಲ ಮಣ್ಣು–ಕಲ್ಲುಗಳು ಮಾತ್ರವೇ ಚಿಮ್ಮಲಿಲ್ಲ. ಬದಲಿಗೆ, ಹಿಮವೂ ಚಿಮ್ಮಿತು. ಚಿಮ್ಮಿರುವ ಹಿಮವು ಛಾಯಾಚಿತ್ರಗಳಲ್ಲಿ ದಾಖಲಾಯಿತು.

ಮಂಗಳನ ನೆಲದೊಳಗೆ ನೀರು ಇರಬಹುದು ಎಂಬುದು ಒಂದು ಪ್ರಮುಖವಾದ ಊಹೆ ಅಥವಾ ಸಿದ್ಧಾಂತ. ಅದಕ್ಕೆ ಕಾರಣ ಇಷ್ಟೇ, ಮಂಗಳನ ಮೇಲ್ಮೈ ಬಹುತೇಕ ಕಬ್ಬಿಣದಿಂದ ಕೂಡಿದೆ. ಮಂಗಳನ ವಾತಾವರಣ ಬಹು ತೆಳುವಾಗಿರುವ ಕಾರಣ ಸೂರ್ಯನ ಕಿರಣಗಳು ನೇರವಾಗಿ ನೆಲದ ಮೇಲೆ ಬಿದ್ದು ಉಷ್ಣಾಂಶ ಹೆಚ್ಚುತ್ತದೆ. ಹಾಗಾಗಿ, ಮಂಗಳನ ಮೇಲ್ಮೈ ಮೇಲೆ ನೀರು ಕಾಲಾಂತರದಲ್ಲಿ ಸಂಪೂರ್ಣವಾಗಿ ಆವಿಯಾಗಿ ಹೋಗಿದೆ ಎನ್ನುವುದು ವಾದ. ಆದರೆ, ಸೂರ್ಯನ ಶಾಖ ಮುಟ್ಟದ ನೆಲದಾಳದಲ್ಲಿ ನೀರು ಇನ್ನೂ ಇದೆ ಎಂಬುದು ವಾದ. ಅಲ್ಲದೇ, ‘ನಾಸಾ’ ಮಂಗಳನ ಅಂಗಳದ ಮೇಲೆ ಇಳಿಸಿರುವ ಅನೇಕ ವಾಹನ, ಸಾಧನಗಳು ನೀರು ನೆಲದಲ್ಲಿ ಇವೆ ಎಂಬ ವಾದವನ್ನು ಪುಷ್ಟೀಕರಿಸಿ ದತ್ತಾಂಶವನ್ನು ನೀಡಿವೆ.

ಆದರೆ, ಮಂಗಳಗ್ರಹದ ಧ್ರುವ ಭಾಗಗಳಲ್ಲಿ ಬೆಳ್ಳನೆ ಹಿಮದಂತೆ ಕಾಣುವ ರಚನೆಗಳಿವೆ. ಅದೇನೆಂದು ಸಂಶೋಧಿಸಿದಾಗ, ಅದು ನೀರಿನಿಂದ ಉಂಟಾದ ಹಿಮವಲ್ಲ, ಬದಲಿಗೆ, ಅದು ಇಂಗಾಲದ ಡೈ ಆಕ್ಸೈಡ್‌ ಘನೀಭವಗೊಂಡು ಹಿಮವಾಗಿರುವುದು ಎಂಬ ಅಂಶ ಬೆಳಕಿಗೆ ಬಂದಿತು. ಹಾಗಾಗಿ, ಮಂಗಳಗ್ರಹದಲ್ಲಿ ‘ಬೆಳ್ಳಗಿರುವುದೆಲ್ಲಾ ಹಿಮವಲ್ಲ’ ಎಂಬ ಹೊಸ ನಾಣ್ನುಡಿ ಸೃಷ್ಟಿಯಾಗಿದೆ. ಹಾಗಾಗಿ, ಈಗ ‘ನಾಸಾ’ ಸೆರೆಹಿಡಿದಿರುವ ಛಾಯಾಚಿತ್ರದಲ್ಲಿ ಕಾಣುವ ಬೆಳ್ಳಗಿನ ಹಿಮವು ಇಂಗಾಲದ ಡೈ ಆಕ್ಸೈಡ್‌ ಇರಬಹುದೇ ಅಥವಾ ನೀರೇ ಹಿಮವಾಗಿದೆಯೇ ಎನ್ನುವುದು ಇನ್ನೂ ದೃಢಪಡಬೇಕಿದೆ.

‘ನಾಸಾ’ ಇದನ್ನು ಈ ರೀತಿ ವ್ಯಾಖ್ಯಾನಿಸಿದೆ. ‘ನಾಸಾ’ ಮಾದರಿಯ ಸಂಸ್ಥೆಗಳು ಸಿದ್ಧಾಂತಗಳನ್ನು ಕೇವಲ ಊಹೆಯ ಆಧಾರದ ಮೇಲೆ ರೂಪಿಸಿವುದಿಲ್ಲ; ಬದಲಿಗೆ, ದತ್ತಾಂಶಗಳ ಮುಖೇನ ರೂಪಿಸುತ್ತವೆ. ಹಾಗಾಗಿ, ‘ನಾಸಾ’ ಈ ರೀತಿ ಹೇಳಿಕೆ ನೀಡಿದೆ, ‘ಈವರೆಗೆ ನಮಗೆ ಸಿಕ್ಕಿರುವ ಯಾವುದೇ ಛಾಯಾಚಿತ್ರದಲ್ಲೂ ಹಿಮದ ದೃಶ್ಯ ನಮಗೆ ಸಿಕ್ಕಿರಲಿಲ್ಲ. ಉಲ್ಕೆಯೊಂದು ಅಪ್ಪಳಿಸಿದಾಗ ಒಳಗಿನ ಹಿಮ ಆಚೆ ಚಲ್ಲಬಹುದು. ಆದರೆ, ಹಿಮ ಶಾಖಕ್ಕೆ ಬಹುಬೇಗ ಆವಿಯಾಗುವುದು. ಹಾಗಾಗಿ, ದೃಶ್ಯವನ್ನು ಸೆರೆ ಹಿಡಿಯುವ ಸಾಧ್ಯತೆಗಳು ಅತ್ಯಲ್ಪ. ಈ ಚಿತ್ರದಿಂದ ಒಂದು ಅಂಶವಂತೂ ಸಾಬೀತಾಗಿದೆ; ನೆಲದೊಳಗೆ ಹಿಮವಿದೆ. ಅದು ನೀರಿನ ಹಿಮವೇ ಆಗಿರಲಿ ಎಂಬುದು ನಮ್ಮ ಬಯಕೆಯಾಗಿದೆ’ ಎಂದು ಹೇಳಿದೆ.

ಮಂಗಳನ ಅಂಗಳದ ಮೇಲೆ ನೀರು ಹರಿದಿರುವ, ನದಿಗಳಿದ್ದ ಕುರುಹುಗಳು ನಮಗೆ ಸಾಕಷ್ಟು ಸಿಕ್ಕಿವೆ. ಅಲ್ಲದೇ, ಮಂಗಳನ ನೆಲದೊಳಗೆ ಅಡಗಿರುವ ವಿಚಾರಗಳ ಜ್ಞಾನ ನಮಗೆ ಇದುವರೆಗೆ ಸಿಕ್ಕಿರುವುದು ಅತ್ಯಲ್ಪ. ಹಾಗಾಗಿ, ಈ ಛಾಯಾಚಿತ್ರವು ಹೊಸ ಜ್ಞಾನವೊಂದರ ಸೇರ್ಪಡೆ ಎನ್ನುವುದು ಅಂತರಿಕ್ಷ ವಿಜ್ಞಾನಿಗಳ ವ್ಯಾಖ್ಯಾನವಾಗಿದೆ.

ಅಲ್ಲದೇ, ಈಗ ಸೃಷ್ಟಿಯಾಗಿರುವ ಕುಳಿ ಸಣ್ಣ ಪುಟ್ಟದೇನೂ ಅಲ್ಲ. ಬರೋಬ್ಬರಿ 490 ಅಡಿ ಆಳವಿದೆ. ‘ನಾಸಾ’ ಬಳಿ ಇರುವ ಪರ್ಸಿವರೆನ್ಸ್‌ ವಾಹನವನ್ನೂ ‘ನಾಸಾ’ ಅಲ್ಲಿಗೆ ಕಳುಹಿಸಿದರೂ ಕಳುಹಿಸಬಹುದು. ಇದರಿಂದ ಅದರಲ್ಲಿರುವ ಸಾಧನಗಳ ಸಹಾಯದಿಂದ ಅಲ್ಲಿರುವುದು ನೀರೋ ಅಲ್ಲವೋ ಎಂಬ ಜ್ಞಾನವೂ ಸಿಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT