ಶನಿವಾರ, ಮಾರ್ಚ್ 25, 2023
30 °C

‘ಹನಿ’ಯಿಂದ ಹಾಲಿನ ಪರೀಕ್ಷೆ

ಕೊಳ್ಳೇಗಾಲ ಶರ್ಮ Updated:

ಅಕ್ಷರ ಗಾತ್ರ : | |

ಹನಿಯಿಂದಲೇ? ಲೀಟರುಗಟ್ಟಲೆ ಹಾಲಿನಲ್ಲಿಯೇ ಆಗಿರುವ ಕಲಬೆರಕೆ ಪತ್ತೆ ಮಾಡಲಾಗುವುದಿಲ್ಲ. ಇನ್ನು ಹನಿ ಹಾಲಿನಿಂದ ಹೇಗೋ ಎಂದು ಮೂಗಿನ ಮೇಲೆ ಬೆರಳಿಡಬೇಡಿ. ಹಾಲಿನ ಹನಿಯನ್ನು ಒಣಗಿಸಿದರೆ ತೋರುವ ಕರೆಯೇ ಅದರಲ್ಲಿ ಕಲಬೆರಕೆ ಆಗಿದೆಯೋ ಇಲ್ಲವೋ ಎನ್ನುವುದನ್ನು ತೋರಿಸಬಹುದು ಎನ್ನುತ್ತಾರೆ, ಬೆಂಗಳೂರಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ನ ಮೆಕ್ಯಾನಿಕಲ್‌ ಇಂಜಿನೀಯರಿಂಗ್‌ ವಿಭಾಗದ ವಿಜ್ಞಾನಿಗಳು. ಇತ್ತೀಚೆಗೆ ಹಾಲಿನಲ್ಲಿ ನೀರಿನ ಕಲಬೆರಕೆಯನ್ನು ಪತ್ತೆ ಮಾಡಲು ಹನಿಯನ್ನು ಆವಿಯಾಗಿಸುವ ವಿಧಾನವನ್ನು ಇವರು ಪರಿಚಯಿಸಿದ್ದು ಸುದ್ದಿಯಾಗಿತ್ತು.

ಆವಿಯಾದಾಗ ಕಲಬೆರಕೆ ಕಾಣುವುದು ಹೇಗೆ ಎಂದಿರಾ? ಇದು ಬಲು ಜಟಿಲವಾದ ಭೌತವಿಜ್ಞಾನ. ಹಾಲಿನಂತಹ ವಿವಿಧ ವಸ್ತುಗಳು ಮಿಶ್ರವಾಗಿರುವ ದ್ರವಗಳು ಆವಿಯಾದ ಮೇಲೆ ಅವುಗಳೊಳಗೆ ಕರಗದೆ ಇದ್ದಂತಹ ಘನ ಪದಾರ್ಥಗಳು ಉಳಿಯುತ್ತವಷ್ಟೆ. ಇವು ಕರೆಯನ್ನುಂಟುಮಾಡುತ್ತವೆ. ಆದರೆ ಈ ಕರೆಯೇ ದ್ರವದೊಳಗೆ ಇರುವ ವಸ್ತುಗಳ ಬಗ್ಗೆ ಸುಳಿವು ಬಿಟ್ಟುಕೊಡಬಹುದು ಎನ್ನುವ ತರ್ಕವಿತ್ತು. ಇದನ್ನು ಆಧರಿಸಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ನ ಸುಶ್ಮಿತಾ ದಾಶ್‌ ಮತ್ತು ಅವರ ವಿದ್ಯಾರ್ಥಿ ವೀರಕೇಶ್ವರ ಕುಮಾರ್‌ ಕಲಬೆರಕೆ ಪತ್ತೆ ಮಾಡುವ ವಿಧಾನವೊಂದನ್ನು ರೂಪಿಸಿದ್ದಾರೆ.

ಹಾಲಿನ ಕಲಬೆರಕೆಯ ಹಾವಳಿಯ ಬಗ್ಗೆ ಹೇಳಬೇಕಿಲ್ಲ. ಭಾರತೀಯ ಆಹಾರ ಸುರಕ್ಷತೆ ಹಾಗೂ ಮಾನಕಗಳ ನಿಕಾಯವು ನಿಗದಿ ಪಡಿಸಿರುವ ಮಾನಕಗಳನ್ನು ಪಾಲಿಸದ ಹಾಲು ಸರಬರಾಜುದಾರರೇ ಹೆಚ್ಚು. ಹಾಲಿನಲ್ಲಿ ಕಲಬೆರಕೆ ಎಂದರೆ ಕೇವಲ ನೀರಷ್ಟೆ ಅಲ್ಲ. ಇತ್ತೀಚೆಗೆ ಹಾಲನ್ನು ಇನ್ನಷ್ಟು ಬೆಳ್ಳಗಾಗಿ, ಗಟ್ಟಿಯಾಗಿ, ಸಿಹಿಯಾಗಿ ಕಾಣಲೆಂದು ಯೂರಿಯಾ, ಸಕ್ಕರೆ ಮೊದಲಾದ ವಸ್ತುಗಳನ್ನು ಬೆರೆಸುವುದೂ ಪತ್ತೆಯಾಗಿದೆ. ಎರಡು ವರ್ಷಗಳ ಹಿಂದೆ ನಡೆದ ಅಧ್ಯಯನವೊಂದು ಭಾರತದಲ್ಲಿ ಮಾರಾಟವಾಗುವ ಹಾಲಿನಲ್ಲಿ ಹನ್ನೆರಡಲ್ಲೊಂದು ಅಂಶ ಕಲಬೆರಕೆಯಾಗಿರುತ್ತದೆ ಎಂದು ಹೇಳಿತ್ತು. ನೀರಷ್ಟೇ ಆದರೆ ಪರವಾಗಿಲ್ಲ. ಆದರೆ ಯೂರಿಯಾದಂತಹ ವಸ್ತುಗಳು ಜೇಬಿಗಷ್ಟೆ ಕತ್ತರಿ ಹಾಕುವುದಲ್ಲದೆ ದೇಹದ ವಿವಿಧ ಅಂಗಗಳಿಗೆ ಅಪಾಯವನ್ನೂ ತರಬಲ್ಲವು.

ಹಾಲಿನಲ್ಲಿ ನೀರು ಬೆರೆತಿದೆಯೋ ಇಲ್ಲವೋ ಎನ್ನುವುದನ್ನು ಪತ್ತೆ ಮಾಡಲು ಲ್ಯಾಕ್ಟೋಮೀಟರನ್ನು ಬಳಸಬೇಕು. ಅಥವಾ ಅದು ಹೆಪ್ಪುಗಟ್ಟುವ ಉಷ್ಣತೆಯನ್ನು ಗಮನಿಸಬೇಕು. ಹಾಲಿನಲ್ಲಿ ಶೇ. 3.5ರಷ್ಟು ಹೆಚ್ಚುವರಿ ನೀರು ಬೆರೆಸಿದ್ದರಷ್ಟೆ ಈ ವಿಧಾನಗಳು ಕಲಬೆರಕೆಯನ್ನು ಪತ್ತೆ ಮಾಡಬಲ್ಲುವು. ಯೂರಿಯಾ ಕಲಬೆರಕೆಯ ಪತ್ತೆ ಇನ್ನೂ ಕಷ್ಟ. ಅದನ್ನು ಪತ್ತೆ ಮಾಡುವ ಜೈವಿಕ ಸೆನ್ಸಾರುಗಳಂತಹ ಸುಧಾರಿತ ವಿಧಾನಗಳು ಇವೆಯಾದರೂ, ಆ ಉಪಕರಣಗಳು ದುಬಾರಿ ಹಾಗೂ ಬೇಗನೆ ಹಾಳಾಗಬಲ್ಲವು.

ಇದಕ್ಕೆ ಪರ್ಯಾಯವಾಗಿ ಹನಿಯನ್ನು ಒಣಗಿಸಿ, ಉಳಿವ ಕರೆಯನ್ನು ಬಳಸಿದರೆ ಹೇಗೆ? ಈ ಹಿಂದೆ ಇದೇ ವಿಧಾನವನ್ನು ಬಳಸಿ ವಿವಿಧ ವ್ಯಕ್ತಿಗಳ ಅಥವಾ ಪ್ರಾಣಿಗಳ ರಕ್ತವನ್ನು ಪತ್ತೆ ಮಾಢಬಹುದೇ ಎಂದು ಪರಿಶೀಲಿಸಲಾಗಿತ್ತು. ಹಾಗೆಯೇ ಅಮೆರಿಕೆಯಲ್ಲಿ ವಿವಿಧ ವೈನ್‌ ಬಗೆಗಳನ್ನು ಗುರುತಿಸಲೂ ಈ ರೀತಿಯಲ್ಲಿ ದ್ರವ ಒಣಗಿಸುವ ವಿಧಾನ ಉಪಯುಕ್ತ ಎಂದು ಪತ್ತೆ ಮಾಡಿದ್ದರು. ಇದೀಗ ಇದೇ ಅಂಶವನ್ನು ಬಳಸಿ ಹಾಲಿನ ಹನಿಯೊಂದರಿಂದಲೇ ಕಲಬೆರಕೆಯನ್ನು ಪತ್ತೆ ಮಾಡಲು ಐಐಎಸ್ಸಿ ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಹನಿಯನ್ನು ಗಾಜಿನ ಹಾಳೆಯ ಮೇಲೆ ಇಟ್ಟು ಒಣಗಿಸಿ ಪರೀಕ್ಷಿಸಿದ್ದಾರೆ.

ಚೆಲ್ಲಿದ ಹಾಲಿನ ಹನಿ ಹಾಲು ಆವಿಯಾದಾಗ ಉಳಿಯುವ ಕರೆಯ ವಿನ್ಯಾಸಗಳು ಹೇಗಿರುತ್ತವೆ ಎಂದು ವಿಜ್ಞಾನಿಗಳು ಗಮನಿಸಿದ್ದಾರೆ. ನೀರು ಕಲಬೆರಕೆ ಮಾಡಿದ ಅಥವಾ ಅಪ್ಪಟ ಹಾಲು ಉಳಿಸುವ ವಿನ್ಯಾಸಗಳು ಯೂರಿಯಾ ಕಲಬೆರಕೆ ಮಾಡಿದ ಹಾಲಿಗಿಂತ ಬೇರೆಯಾಗಿದ್ದುವು. ಕಲಬೆರಕೆ ಇಲ್ಲದ ಅಪ್ಪಟ ಹಾಲು ಆವಿಯಾದಾಗ ನಿರ್ದಿಷ್ಟ ಗಾತ್ರವಿಲ್ಲದ, ವಿನ್ಯಾಸವೂ ಇಲ್ಲದ ಗುಳ್ಳೆಗಳನ್ನು ಉಳಿಸಿಬಿಟ್ಟಿತ್ತು. ನೀರು ಬೆರೆಸಿದ ಹಾಲಿನಲ್ಲಿ ಈ ವಿನ್ಯಾಸ ಇರಲಿಲ್ಲ. ಬೆರೆಸಿದ ನೀರಿನ ಪ್ರಮಾಣಕ್ಕೆ ತಕ್ಕಂತೆ ವಿನ್ಯಾಸ ಬದಲಾಗಿತ್ತು. ಯೂರಿಯಾ ಬೆರೆಸಿದ ಹಾಲು ಉಳಿಸಿದ ವಿನ್ಯಾಸದಲ್ಲಿ ನಟ್ಟ ನಡುವೆ ಏನೂ ಇರಲೇ ಇಲ್ಲ. ಇದು ಆವಿಯಾಗದ ಪದಾರ್ಥವಾದ್ದರಿಂದ, ಹನಿಯ ನಡುವಿನಿಂದ ಅಂಚಿನವರೆಗೂ ಅದು ಕ್ರಮೇಣ ಹರಳುಗಟ್ಟಿರುತ್ತದೆ.

ಹಾಲು ಕರೆಗಟ್ಟಿದ ವಿನ್ಯಾಸಗಳು ‘ಹಾಲಿನ ಶೇ. 30ರಷ್ಟು ನೀರು ಬೆರೆಸಿದ್ದರೂ ತೋರಿಸಿಕೊಡಬಲ್ಲವು. ಹಾಗೆಯೇ ಶೇ. 0.4ರಷ್ಟು ಕಡಿಮೆ ಯೂರಿಯಾ ಬೆರಕೆ ಆಗಿದ್ದರೂ ಪತ್ತೆ ಮಾಡಬಲ್ಲವು’ ಎನ್ನುತ್ತಾರೆ ಕುಮಾರ್.‌ ಈ ವಿಧಾನವನ್ನು ಬಳಸಲು ಪ್ರಯೋಗಾಲಯಗಳಾಗಲಿ, ಇತರೆ ಉಪಕರಣಗಳಾಗಲಿ ಬೇಕಿಲ್ಲ. ಕುಗ್ರಾಮದಲ್ಲಿಯೂ ಇದನ್ನು ಸುಲಭವಾಗಿ ಬಳಸಬಹುದಂತೆ. ‘ಯಾವ ವಸ್ತು ಬೆರಕೆ ಆಗಿದೆ ಎನ್ನುವುದನ್ನು ಅವಲಂಬಿಸಿ ಈ ವಿನ್ಯಾಸಗಳು ಕರೆಗಟ್ಟುವುದರಿಂದ ಹಾಲಿನಂತಹ ಆವಿಯಾಗುವ ಬೇರೆ ವಸ್ತುಗಳಲ್ಲಿನ ವಿವಿಧ ಕಲಬೆರಕೆಯನ್ನು ಪತ್ತೆ ಮಾಡಲೂ ಇದು ನೆರವಾಗಬಹುದು’ ಎನ್ನುವುದು ದಾಶ್‌ ಅವರ ಆಶಯ.

‘ಹಾಲಿನಲ್ಲಿ ಬೆರೆತಿರಬಹುದಾದ ಎಣ್ಣೆ ಹಾಗೂ ಇತರೆ ವಸ್ತುಗಳು ರಚಿಸುವ ವಿನ್ಯಾಸಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ಇವೆಲ್ಲ ವಿನ್ಯಾಸಗಳನ್ನೂ ಪತ್ತೆ ಮಾಡಿದ ಮೇಲೆ, ಹಾಲಿನ ಹನಿಯನ್ನು ಒಣಗಲು ಬಿಟ್ಟು, ರೂಪುಗೊಂಡ ಕರೆಯ ವಿನ್ಯಾಸದ ಚಿತ್ರವನ್ನು ತೆಗೆದು, ಹೋಲಿಸಿ, ಯಾವ ವಸ್ತು ಕಲಬೆರಕೆಯಾಗಿದೆ ಎಂದು ನಿರ್ದಿಷ್ಟವಾಗಿ ಹೇಳಲೂ ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಪ್ರಯೋಗ ನಡೆಸಿದ್ದೇವೆ’ ಎನ್ನುತ್ತಾರೆ ದಾಶ್.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು