ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯರಾತ್ರಿಯಾದರೂ ಪಬ್‌ ಗದ್ದಲ: ಬೆಂಗಳೂರು ಮಹಿಳೆಗೆ ಟ್ವಿಟರ್‌ ಮೂಲಕ ಪರಿಹಾರ

Last Updated 26 ಆಗಸ್ಟ್ 2022, 14:25 IST
ಅಕ್ಷರ ಗಾತ್ರ

ಬೆಂಗಳೂರು: ಬಿಟಿಎಂ ಲೇಔಟ್‌ ಪ್ರದೇಶದಲ್ಲಿ ಪಬ್‌ ವೊಂದರ ವಿಪರೀತ ಸದ್ದಿನಿಂದ ಬೇಸತ್ತಿದ್ದ 81 ವರ್ಷದ ಹಿರಿಯ ನಾಗರಿಕರೊಬ್ಬರು, ಟ್ವಿಟರ್‌ ಮೂಲಕ ಪರಿಹಾರ ಪಡೆದುಕೊಂಡಿದ್ದಾರೆ.

ಅವರ ಟ್ವೀಟ್‌ಗೆ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ಮತ್ತು ಮತ್ತು ಪೊಲೀಸ್‌ ಇಲಾಖೆ ಸ್ಪಂದನೆ ದೊರೆತಿದೆ. ಕ್ರಮದ ಭರವಸೆಯೂ ಸಿಕ್ಕಿದೆ.

ಬಿಟಿಎಂ ಲೇಔಟ್‌ ಎರಡನೇ ಹಂತದ ನಿವಾಸಿ ಲಲಿತಾ ಶ್ರೀನಿವಾಸನ್‌ ಎಂಬುವವರು, ‘ಅವೊನ್‌ಪಬ್‌’ ಎಂಬ ಪಬ್‌ನಿಂದ ಹೊರ ಹೊಮ್ಮುವ ಭಾರಿ ಸದ್ದಿನಿಂದ ತೊಂದರೆ ಒಳಗಾಗಿದ್ದರು ಎನ್ನಲಾಗಿದ್ದು, ಈ ಬಗ್ಗೆ ಬುಧವಾರ ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದರು.

‘ನನ್ನ ವಯಸ್ಸು 81. ಬಿಟಿಎಂ ಲೇಔಟ್‌ನ 2ನೇ ಹಂತದಲ್ಲಿರುವ ‘ಅವೊನ್‌ಪಬ್‌’ನಲ್ಲಿ ಪ್ರತಿ ರಾತ್ರಿ 3:30 ವರೆಗೆ ತುಂಬಾ ಜೋರಾಗಿ ಸಂಗೀತ ಹಾಕಲಾಗುತ್ತದೆ. ನಾವು ಪ್ರತಿ ರಾತ್ರಿ ಪೊಲೀಸರಿಗೆ ದೂರು ನೀಡಬೇಕೇ? ನಿವಾಸಿಗಳಾದ ನಮಗೆ ಇದು ಕಿರುಕುಳ ಎನಿಸಿದೆ. ಹಿರಿಯರಾದ ನಮ್ಮ ಮಾತನ್ನು ಯಾರಾದರೂ ಕೇಳುವರೇ? ಎಂದು ಟ್ವೀಟ್‌ ಮಾಡಿದ್ದರು.

ಮುಂದುವರಿದು, ‘ಸಮಸ್ಯೆ ಬಗ್ಗೆ 2021ರ ಜನವರಿಯಲ್ಲಿ ಲಿಖಿತ ದೂರು ನೀಡಿ ಪೊಲೀಸರ ಗಮನಕ್ಕೆ ತರಲಾಗಿದೆ. ಈ ಪಬ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕಿರುಕುಳ ನಿಂತಿಲ್ಲ. ‘ಅವೊನ್‌ಪಬ್‌’ ಅನ್ನು ನಡೆಸುತ್ತಿರುವವರು ಯಾರು? ಎಂದು ಅವರು ಪ್ರಶ್ನೆ ಮಾಡಿದ್ದರು.

ಆಗಸ್ಟ್‌ 24ರ ಸಂಜೆ 5:27ರಲ್ಲಿ ಮಹಿಳೆ ಮಾಡಿದ್ದ ಟ್ವೀಟ್‌ಗೆ ಮರುದಿನ ಬೆಳಿಗೆ ಸ್ಪಂದಿಸಿದ್ದ ಶಾಸಕಿ ಸೌಮ್ಯಾ ರೆಡ್ಡಿ, ಸಂಪರ್ಕ ಸಂಖ್ಯೆ ನೀಡುವಂತೆ ಕಮೆಂಟ್‌ ಬಾಕ್ಸ್‌ನಲ್ಲಿ ಬರೆದಿದ್ದರು. ಅಲ್ಲದೆ, ಕೆಲವೇ ಗಂಟೆಗಳಲ್ಲಿ ಮರಳಿ ಪ್ರತಿಕ್ರಿಯಿಸಿರುವ ಸೌಮ್ಯಾ ರೆಡ್ಡಿ, ‘ಕ್ರಮ ಕೈಗೊಳ್ಳಲು ಪೊಲೀಸರು ಪರಿಶೀಲನೆ ನಡೆಸಿದ್ದಾರೆ’ ಎಂದು ಬರೆದಿದ್ದಾರೆ.

ಇದಿಷ್ಟೇ ಅಲ್ಲದೆ, ಬೆಂಗಳೂರು ಟ್ರಾಫಿಕ್‌ ಪೊಲೀಸರ ಟ್ವಿಟರ್ ಖಾತೆಯಿಂದ ಮಹಿಳೆಯ ಈ ಟ್ವೀಟ್‌ ಅನ್ನು ಗಮನಿಸಿದ್ದು, ಬೆಂಗಳೂರು ನಗರ ಪೊಲೀಸರಿಗೆ ವಿಷಯ ಮುಟ್ಟಿಸುವ ಕೆಲಸ ಮಾಡಲಾಗಿದೆ.

ಇಂದಿರಾನಗರ, ಕೋರಮಂಗಲ ಮತ್ತು ಬಿಟಿಎಂ ಲೇಔಟ್‌ನಂತಹ ಸ್ಥಳಗಳಲ್ಲಿ ನಿವಾಸಿಗಳು ತಮ್ಮ ಸುತ್ತಮುತ್ತಲಿನ ಗದ್ದಲದ ಬಗ್ಗೆ ದೂರಿದ್ದಾರೆ. ‘ದುಃಖದ ವಿಷಯವೇನೆಂದರೆ, ಬೆಂಗಳೂರು ವಾಣಿಜ್ಯ ಸ್ಥಳವಾಗಿದೆ. ಇಲ್ಲಿ ಪ್ರಾಮುಖ್ಯತೆ ಸಿಗುವುದು ಆದಾಯ ತರುವ ವ್ಯವಹಾರಗಳಿಗೆ ಮಾತ್ರ. ರಾಜಕಾರಣಿಗಳು ನಾಗರಿಕರ ಬಗ್ಗೆ ಚಿಂತಿಸುವುದನ್ನು ನಾನು ನೋಡಿಲ್ಲ’ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT