ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ಸಂಸ್ಥೆಗಳಿಗೆ ಶುಲ್ಕ ನೀಡಿಕೆ ಕಾನೂನು; ಗೂಗಲ್‌, ಫೇಸ್‌ಬುಕ್‌ಗೆ ತಲ್ಲಣ

Last Updated 28 ಫೆಬ್ರುವರಿ 2021, 4:20 IST
ಅಕ್ಷರ ಗಾತ್ರ

ಸುದ್ದಿಯ ಕಂಟೆಂಟ್‌ ಬಳಸಿದ್ದಕ್ಕಾಗಿ ಗೂಗಲ್‌ ಮತ್ತು ಫೇಸ್‌ಬುಕ್‌ನಂತಹ ಡಿಜಿಟಲ್‌ ಪ್ಲಾಟ್‌ಫಾರಂಗಳು ಮಾಧ್ಯಮ ಸಂಸ್ಥೆಗಳಿಗೆ ಶುಲ್ಕ ನೀಡಬೇಕು ಎಂಬ ಆಸ್ಟ್ರೇಲಿಯಾದ ಕಾನೂನು, ಜಗತ್ತಿನಾದ್ಯಂತ ಚರ್ಚೆಯ ಅಲೆ ಎಬ್ಬಿಸಿದೆ. ಇದೇ ಮಾದರಿಯ ಪಾಲನ್ನು ಕೇಳುವ ಕಾನೂನು ಎಲ್ಲಾ ದೇಶಗಳಲ್ಲೂ ಬರುವ ಸಾಧ್ಯತೆಗಳಿರುವುದು ಗೂಗಲ್‌ ಮತ್ತು ಫೇಸ್‌ಬುಕ್‌ನ ಮುಖ್ಯಸ್ಥರ ನಿದ್ದೆಗೆಡಿಸಿದೆ.

ಈ ರೀತಿಯ ಕಾನೂನು ಬರುತ್ತಿರುವುದು ಆಸ್ಟ್ರೇಲಿಯಾದಲ್ಲೇ ಏನು ಮೊದಲಲ್ಲ. 2015ರಲ್ಲೇ ಗೂಗಲ್ ಮೇಲೆ ಸ್ಪೇನ್ ಇಂತಹದ್ದೊಂದು ರೀತಿಯ ಕಾನೂನಿನ ನಿರ್ಬಂಧ ಹೇರಿತ್ತು. ಇದಕ್ಕೆ ಪ್ರತಿಯಾಗಿ ಸರ್ಚ್‌ನಲ್ಲಿ ಯಾವುದೇ ಸುದ್ದಿಗಳನ್ನು ತೋರಿಸದಿರಲು ಗೂಗಲ್ ನಿರ್ಧರಿಸಿತ್ತು. ಆ ಸಂದರ್ಭದಿಂದ ಸ್ಪೇನ್‌ನಲ್ಲಿ ಗೂಗಲ್ ಸರ್ಚ್‌ನಲ್ಲಿ ಸುದ್ದಿ ತುಣುಕುಗಳನ್ನು ತೋರಿಸಲಾಗುತ್ತಿಲ್ಲ. ಆದರೆ ಇದರಿಂದ ಸ್ಪೇನ್‌ನ ಸುದ್ದಿ ಸಂಸ್ಥೆಗಳಿಗೆ ಲಾಭವೇ ಆಯಿತು. ಮೊದಲು ಗೂಗಲ್‌ನಲ್ಲಿ ಸುದ್ದಿಗಳನ್ನು ಹುಡುಕುತ್ತಿದ್ದ ಜನ ಬಳಿಕ ನೇರವಾಗಿ ಸುದ್ದಿಸಂಸ್ಥೆಯ ವೆಬ್‌ಸೈಟ್‌ಗೇ ಭೇಟಿ ನೀಡತೊಡಗಿದರು. ಇದರಿಂದ ಅವರ ವೆಬ್‌ಸೈಟ್‌ಗಳಿಗೆ ಹೆಚ್ಚಿನ ಟ್ರಾಫಿಕ್ ಹರಿದುಬರತೊಡಗಿ ಸುದ್ದಿಸಂಸ್ಥೆಗಳ ಆದಾಯವೂ ಹೆಚ್ಚಿತು. ಆದ್ದರಿಂದ ಅಲ್ಲಿನ ಯಾವ ಸಂಸ್ಥೆಗಳೂ ಗೂಗಲ್ ಜೊತೆಗೆ ಹೆಚ್ಚಿನ ಒಪ್ಪಂದಕ್ಕೆ ಹೋಗಲಿಲ್ಲ.

2020ರಲ್ಲಿ ಫ್ರಾನ್ಸ್ ದೇಶವು ಯುರೋಪಿಯನ್ ಒಕ್ಕೂಟದ ಹೊಸ ಕಾಪಿರೈಟ್ ಕಾನೂನನ್ನು ಅಂಗೀಕರಿಸಿತು. ಗೂಗಲ್ ಸಂಸ್ಥೆಯು ಸುದ್ದಿಮೂಲಗಳ ಜೊತೆಗೆ ಆದಾಯ ಹಂಚಿಕೆಯ ಒಪ್ಪಂದ ಮಾಡಿಕೊಳ್ಳಲೇಬೇಕೆಂಬ ನಿಯಮವನ್ನು ಅದು ಹೊಂದಿದ್ದು, ಗೂಗಲ್ ಸಹ ಒಪ್ಪಿಕೊಂಡಿದೆ. ಗೂಗಲ್, ಫ್ರಾನ್ಸ್‌ನಲ್ಲಿ ಒಪ್ಪಿದ್ದನ್ನು ಆಸ್ಟ್ರೇಲಿಯಾದಲ್ಲಿ ಯಾಕೆ ನಿರಾಕರಿಸುತ್ತಿದೆಯೆಂದರೆ ಆಸ್ಟ್ರೇಲಿಯಾದ ಕಾನೂನಿನಲ್ಲಿ ಅಲ್ಗಾರಿದಂಗಳ ವಿವರಗಳನ್ನು ಎರಡು ವಾರ ಮುಂಚೆಯೇ ಹಂಚಿಕೊಳ್ಳಬೇಕೆಂಬ ಅಂಶ ಇರುವುದಕ್ಕೆ.

ಚೀನಾ ದೇಶದಲ್ಲಿ ಇದರ ಗೊಡವೆಯೇ ಇಲ್ಲ. ಚೀನಾ ಗೂಗಲ್, ಫೇಸ್‌ಬುಕ್‌ನ ಪರ್ಯಾಯಗಳನ್ನು ಅದಾಗಲೇ ತಾನೇ ಹುಟ್ಟುಹಾಕಿ ಬೆಳೆಸಿದೆ. ಭಾರತದಂತಹ ದೇಶದಲ್ಲಿ ಈ ಕಾನೂನು ಬಂದರೆ ಅದರ ರೂಪುರೇಷೆ ಹೇಗಿರಬಹುದು ಮತ್ತು ಅದರ ದೂರಗಾಮಿ ಪರಿಣಾಮಗಳೇನಾಗಬಹುದು ಎಂಬುದರ ಚರ್ಚೆ ಕುತೂಹಲಕಾರಿ. ಸದ್ಯಕ್ಕೆ ಹಣಬಲದಿಂದ ಅಲ್ಲದಿದ್ದರೂ ಜನಬಲದಿಂದಾದರೂ ಫೇಸ್‌ಬುಕ್ ಮತ್ತು ಗೂಗಲ್‌ಗೆ ದೊಡ್ಡ ಗ್ರಾಹಕ ನೆಲೆ ಭಾರತೀಯ ಒಕ್ಕೂಟ. ಇಲ್ಲಿ ಅಡಿಯಿಂದ ಮುಡಿಯವರೆಗೆ ನೂರಾರು ನುಡಿಗಳು, ನೂರಾರು ಸಂಸ್ಕೃತಿಗಳು ಮತ್ತು ಅಷ್ಟೇ ವೈವಿಧ್ಯಮಯ ಸುದ್ದಿಮೂಲಗಳಿವೆ.

ಮೊದಲನೆಯದಾಗಿ, ಆದಾಯ ಹಂಚಿಕೆಯ ಕಾನೂನನ್ನು ಸಾರ್ವತ್ರಿಕವಾಗಿ ಏಕರೂಪದಲ್ಲಿ ಜಾರಿಗೆ ತರಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಕಾಡುತ್ತದೆ. ಏಕೆಂದರೆ ಆನ್‌ಲೈನ್‌ನಲ್ಲಿ ಪತ್ರಿಕೆಗಳನ್ನು ನಡೆಸುವುದು ಸುಲಭ. ಕನ್ನಡವನ್ನೇ ತೆಗೆದುಕೊಳ್ಳುವುದಾದರೆ ಟ್ರೋಲ್ ಪುಟಗಳೆಷ್ಟಿವೆಯೋ ಸುದ್ದಿಪುಟಗಳೂ ಅಷ್ಟೇ ಇವೆ. ಪ್ರತಿಯೊಂದಕ್ಕೂ ಅವುಗಳ ವಸ್ತುವಿಷಯಗಳ ಆಧಾರದ ಮೇಲೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವುಗಳಲ್ಲಿ ಯಾವುದಕ್ಕೆ ಆದಾಯ ಹಂಚಿಕೊಳ್ಳುವುದು, ಯಾವುದಕ್ಕೆ ಹಂಚಿಕೊಳ್ಳದಿರುವುದು?

ಇನ್ನೊಂದು ತೊಂದರೆಯೆಂದರೆ ಇತರೆ ದೇಶಗಳಲ್ಲಿ ಸುದ್ದಿಗಳ ಪ್ರಸಾರಕ್ಕೂ ಭಾರತದಲ್ಲಿನ ಸುದ್ದಿ ಪ್ರಸಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಒಂದೇ ಸುದ್ದಿಯನ್ನು ಹಿಡಿದು ಎಲ್ಲರೂ ಮುಗಿಬೀಳುವುದಿಲ್ಲ. ಪ್ರತಿಯೊಬ್ಬರದೂ ತಮ್ಮದೇ ವಿಶೇಷ ಸುದ್ದಿಗಳಿರುತ್ತವೆ. ಎಲ್ಲರಿಗೂ ಸಮಾನವಾದ ಸುದ್ದಿಯಿದ್ದರೆ ಪ್ರತೀ ಸುದ್ದಿಮನೆಯು ತನ್ನದೇ ಆಯಾಮದ ಎಳೆ ಹಿಡಿದುಕೊಂಡು ಸಂಶೋಧಿಸಿ ತಂದು ವಿವರಗಳನ್ನು ಜನರ ಮುಂದಿಡುತ್ತದೆ. ಆದರೆ, ಈಗಿನ ಭಾರತೀಯ ಮೀಡಿಯಾಗಳು ಒಂದೇ ಸುದ್ದಿಯನ್ನು ತಾವೇ ಮೊದಲು ಎಂಬಂತೆ ಮುಗಿಬಿದ್ದು ಪ್ರಸಾರ ಮಾಡುತ್ತವೆ. ನಾಯಿಕೊಡೆಗಳಂತೆ ಹುಟ್ಟಿರುವ ಆನ್‌ಲೈನ್ ಪತ್ರಿಕೆಗಳು ಇದನ್ನೇ ವರ್ಣರಂಜಿತವಾಗಿ ಬರೆದು ಪ್ರಸಾರ ಮಾಡಿ ಅಭಿಮಾನಿಗಳನ್ನು ಪಡೆದುಕೊಳ್ಳುತ್ತವೆ. ಪರಿಸ್ಥಿತಿ ಹೀಗಿರುವಾಗ ಅಪಾರ ಜನಸಂಖ್ಯೆಗೆ ಸುದ್ದಿ ಒದಗಿಸಲು ವಿಸ್ತಾರ ಮಾರುಕಟ್ಟೆಯನ್ನು ಸೂರೆಗೊಳ್ಳಲು ಹುಟ್ಟಿಕೊಂಡಿರುವ ಸುದ್ದಿಮನೆಗಳಲ್ಲಿ ಯಾವುದರ ಜೊತೆಗೆ ಈ ಗೂಗಲ್ ಮತ್ತು ಫೇಸ್‌ಬುಕ್‌ ಒಪ್ಪಂದ ಮಾಡಿಕೊಳ್ಳುತ್ತವೆ? ಆದಾಯ ಹಂಚಿಕೆಯ ಸಮಯದಲ್ಲಿ ಕಾಪಿರೈಟ್ ತೊಂದರೆಗಳು ತಲೆದೋರುವುದಿಲ್ಲವೇ?

ಎರಡನೆಯದಾಗಿ ಈಗಾಗಲೇ ಅಸ್ತಿತ್ವಕ್ಕಾಗಿ ಅನೈತಿಕ ಹಾದಿಯಲ್ಲಿ ಹಿಂದಿರುಗಲು ಸಾಧ್ಯವಾಗದಷ್ಟು ದೂರ ಕ್ರಮಿಸಿರುವ ಮಾಧ್ಯಮಗಳು ಈ ಹೊಸ ಆದಾಯ ಮೂಲಕ್ಕಾಗಿ ಅದೆಷ್ಟರ ಮಟ್ಟಿಗೆ ಪೈಪೋಟಿಗೆ ಇಳಿಯಬಹುದು? ಈಗಾಗಲೇ ಮಾರಾಟವಾಗಬಲ್ಲ ರೋಚಕತೆಯ ಹಿಂದೆ ಬಿದ್ದಿರುವ ಮಾಧ್ಯಮಗಳು ಇದೇ ರೋಚಕತೆಯ ಪಟ್ಟನ್ನೇ ಇಲ್ಲೂ ಮುಂದುವರಿಸುತ್ತವೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಆತಂಕದ ವಿಷಯವೆಂದರೆ ಫೇಸ್‌ಬುಕ್‌ನಂತಹ ವೇದಿಕೆಗಳು ತಮ್ಮ ಅಲ್ಗಾರಿದಂಗಳ ಮೂಲಕ ಜನರ ಓದುವಿಕೆಯ ಸ್ವರೂಪವನ್ನು ಗ್ರಹಿಸಿ ಹೆಚ್ಚಿನ ಓದುಗರನ್ನು ಪಡೆಯುವ ಸಾಮರ್ಥ್ಯ ಇರುವ ಸುದ್ದಿಗಳನ್ನೇ ಹೆಚ್ಚಿನ ಮಟ್ಟಿಗೆ ಪಸರಿಸಿ ಹೆಚ್ಚಿನ ಜನರಿಗೆ ಉಣಬಡಿಸುತ್ತವೆ.

ಟಿ.ವಿ, ಪತ್ರಿಕೆಗಳ ಮುಖಾಂತರ ಪಸರಿಸಲು ಸಾಧ್ಯವಿರದ ಕೊನೆಗಳನ್ನು ಫೇಸ್‌ಬುಕ್‌ನಂತಹ ವೇದಿಕೆಗಳು ಆರಾಮವಾಗಿ ತಲುಪುತ್ತವೆ. ಅದಲ್ಲದೇ ಅನೇಕ ದೇಶಗಳಲ್ಲಿ ಸರ್ಕಾರಿ ಅಥವಾ ಮಿಲಿಟರಿ ಪ್ರಾಯೋಜಿತ ಸುದ್ದಿಗಳನ್ನು ತನ್ನ ಅಲ್ಗಾರಿದಂಗಳ ಮೂಲಕ ಹೆಚ್ಚಿನ ಮಟ್ಟಿಗೆ ಪಸರಿಸಿ ಅಲ್ಲಿ ಪ್ರಜಾಪ್ರಭುತ್ವವನ್ನು ಅಪಾಯಕರ ಸ್ಥಿತಿಗೆ ಫೇಸ್‌ಬುಕ್ ತಂದಿಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆಸ್ಟ್ರೇಲಿಯಾ, ಅಮೆರಿಕದಂತಹ ಜಾಗೃತ ಪ್ರಜೆಗಳಿರುವ ದೇಶಗಳಲ್ಲೂ ಫೇಸ್‌ಬುಕ್ ಇಂತಹ ಅಪಾಯವನ್ನು ತಂದೊಡ್ಡಿದೆ. ಇನ್ನು ಅಂಧಾನುಕರಣೆ, ವ್ಯಕ್ತಿಪೂಜೆಯೇ ನೂಲಾಗಿರುವ ಸಮಾಜದಲ್ಲಿ ಇದರ ಅಪಾಯ ಇನ್ನೂ ಹೆಚ್ಚು.

ದೊಡ್ಡ ದೊಡ್ಡ ಬಂಡವಾಳ ಹೊಂದಿದ ಮತ್ತು ಭ್ರಷ್ಟರ ಸೂರನ್ನೇ ಪಡೆದಿರುವ ಸುದ್ದಿ ಸಂಸ್ಥೆಗಳು ಗೂಗಲ್ ಮತ್ತು ಫೇಸ್‌ಬುಕ್ ಜೊತೆ ಒಪ್ಪಂದದಲ್ಲಿ ತೊಡಗಿಕೊಂಡು ತಮಗೆ ಬೇಕಾದ ಸುದ್ದಿಯನ್ನೇ ಪಸರಿಸುವುದು ಮತ್ತು ಕಾನೂನಿನ ನೆಪವೊಡ್ಡಿ ಫೇಸ್‌ಬುಕ್‌ನಂತಹ ಮಾಧ್ಯಮವನ್ನೇ ನೆಚ್ಚಿಕೊಂಡ ಹಣಬಲವಿಲ್ಲದ ಪ್ರಾಮಾಣಿಕ ಸುದ್ದಿಸಂಸ್ಥೆಗಳು ಮೂಲೆಗೆ ಸರಿಯುವ ಸಾಧ್ಯತೆಗಳೂ ಇವೆ. ಹಣ, ಹಣವನ್ನೇ ಆಕರ್ಷಿಸುತ್ತದೆ ಎಂಬ ನುಡಿಯಂತೆ ಈ ಕ್ಯಾಪಿಟಲಿಸಂನ ತೆಕ್ಕೆಗೆ ತಮ್ಮನ್ನು ಒದಗಿಸಿಕೊಂಡ ಸುದ್ದಿಮಾಧ್ಯಮಗಳು ಪ್ರಜಾಪ್ರಭುತ್ವಕ್ಕೆ ಕಂಟಕವಾಗಿ ನಿಂತರೂ ಅಚ್ಚರಿಪಡಬೇಕಿಲ್ಲ.

ನೋಡಿದರೆ ಇಂತಹ ಕಾನೂನಿನಿಂದಾಗಿ ಭಾರತೀಯ ಒಕ್ಕೂಟದಂತಹ ದೇಶಗಳಲ್ಲಿ ಒಳಿತೂ ಇದೆ ಕೆಡುಕೂ ಇದೆ. ಕಾನೂನನ್ನು ಎಷ್ಟೇ ಜಾಗರೂಕತೆಯಿಂದ ಪರಿಣಾಮಕಾರಿಯಾಗಿ ರೂಪಿಸಿದರೂ ಪರಿಣಾಮಕಾರಿಯಾಗಿ ಜಾರಿಗೆ ತರುವುದರ ಮೇಲೆ ಅದರ ಭವಿಷ್ಯ ನಿಂತಿದೆ. ಬಲಿಷ್ಠ ದೇಶಗಳ ಸರ್ಕಾರಗಳನ್ನೇ ದಕ್ಕಿಸಿಕೊಂಡಿರುವ ಈ ದೈತ್ಯ ಟೆಕ್ ಕಂಪನಿಗಳು ಭಾರತದಲ್ಲಿ ಯಾವ ನವರಂಗಿ ಆಟಗಳನ್ನು ಆಡಲಿವೆ ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT