ಸೋಮವಾರ, ಜೂನ್ 1, 2020
27 °C

ಕೋವಿಡ್–19: ನಕಲಿ ಪೋಸ್ಟ್‌ಗಳ ತೆಗೆಯಲು ಫೇಸ್‌ಬುಕ್‌,ಟಿಕ್‌ಟಾಕ್‌ಗೆ ಕೇಂದ್ರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೊರೊನಾ ವೈರಸ್‌ ಕುರಿತಾದ ಸುಳ್ಳು ಸುದ್ದಿ, ಅನಧಿಕೃತ ಮಾಹಿತಿ ಹಾಗೂ ಆತಂಕಕಾರಿ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಫೇಸ್‌ಬುಕ್‌, ಹಲೊ, ಟಿಕ್‌ಟಾಕ್‌ಗಳಿಗೆ ನಿರ್ದೇಶನ ನೀಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೊರೊನಾ ವೈರಸ್‌ ಕುರಿತಾದ ಅನಧಿಕೃತ ಮತ್ತು ಸುಳ್ಳು ಮಾಹಿತಿಗಳು ಕೋವಿಡ್‌–19 ವಿರುದ್ಧದ ಸರ್ಕಾರದ ಪ್ರಯತ್ನವನ್ನು ದುರ್ಬಲಗೊಳಿಸುವ ಸಾಧ್ಯತೆಗಳಿರುವುದರಿಂದ ಆತಂಕಕಾರಿ ಪೋಸ್ಟ್‌ಗಳನ್ನು ಕಿತ್ತೊಗೆಯುವಂತೆ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ.

ದ್ವೇಷ ಬಿತ್ತುವ ಹಾಗೂ ಆತಂಕಕಾರಿ ಪೋಸ್ಟ್‌ಗಳನ್ನು ಪತ್ತೆ ಹಚ್ಚಿ ತೆಗೆದುಹಾಕುವುದರ ಜತೆಗೆ ಅಂತಹ ಪೋಸ್ಟ್‌ಗಳನ್ನು ಪ್ರಕಟಿಸಿದವರು, ಹಂಚಿಕೊಂಡವರ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಸಚಿವಾಲಯ ಸೂಚನೆ ನೀಡಿದ್ದು, ಅಗತ್ಯವಿದ್ದಲ್ಲಿ ಅಂತಹವರ ವಿವರಗಳನ್ನು ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವಂತೆ ನಿರ್ದೇಶನ ನೀಡಿದೆ.

ಸುಳ್ಳು ಸುದ್ದಿಗಳ ವಿಡಿಯೊ ಮತ್ತು ಆಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸುಪ್ರೀಂ ಕೋರ್ಟ್‌ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದೆ ಎಂದು ಸಚಿವಾಲಯ ತಿಳಿಸಿದೆ.

ಆರೋಗ್ಯ ಇಲಾಖೆ ಮತ್ತು ಸರಕಾರದ ನಿರ್ದೇಶನವನ್ನು ಧಿಕ್ಕರಿಸಿ ಯುಟ್ಯೂಬ್‌, ಟ್ವಿಟರ್‌, ಟಿಕ್‌ಟಾಕ್, ಹಲೋ ಹಾಗೂ ಫೇಸ್‌ಬುಕ್‌ನಲ್ಲಿ ಕೊರೊನಾ ವೈರಸ್ ಹರಡಲು ಕಾರಣವಾಗುವಂತಹ ಪೋಸ್ಟ್‌ಗಳು ಹರಿದಾಡಿರುವ ಬಗ್ಗೆ ಫ್ಯಾಕ್ಟ್ ಚೆಕ್ ಐಟಿ ಸಂಸ್ಥೆ ವೊಯೇಜರ್ ಇನ್ಫೋಸೆಕ್ ಸರಕಾರಕ್ಕೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಕೊರೊನಾ ವೈರಸ್‌ ವಿರುದ್ಧದ ಸುಳ್ಳು ಸುದ್ದಿಗಳ ಮಾಹಿತಿ ಇರುವ ವಿಡಿಯೊಗಳನ್ನು ಭಾರತ ಸೇರಿದಂತೆ ವಿದೇಶದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಅಂತಹ ವಿಡಿಯೊಗಳನ್ನು ಚೀನಾ ಮೂಲದ ವಿಡಿಯೊ ಆ್ಯಪ್‌ ಟಿಕ್‌ಟಾಕ್‌ಗೆ ಮೊದಲು ಸೇರಿಸಲಾಗುತ್ತದೆ. ನಂತರ ಇತರೆ ಸಾಮಾಜಿಕ ಜಾಲತಾಣಗಳಿಗೂ ಹಂಚಿಕೊಳ್ಳಲಾಗುತ್ತದೆ. ಟಿಕ್‌ಟಾಕ್‌ ಆ್ಯಪ್‌ನಲ್ಲಿ ಆರೋಗ್ಯ ಕಾರ್ಯಕರ್ತರ ವಿರುದ್ಧ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವಂತಹ ಸಂದೇಶಗಳ ವಿಡಿಯೊಗಳು ಹೆಚ್ಚಾಗಿ ಹರಿದಾಡುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕಳೆದ 5 ದಿನಗಳಲ್ಲಿ 30 ಸಾವಿರಕ್ಕೂ ಹೆಚ್ಚು ವಿಡಿಯೊಗಳನ್ನು ಪರಿಶೀಲಿಸಲಾಗಿದ್ದು ಆತಂಕಕಾರಿ ಪೋಸ್ಟ್‌ಗಳನ್ನು ಪತ್ತೆ ಹಚ್ಚಲಾಗಿದೆ. ಸುಳ್ಳು ಸುದ್ದಿಗಳ ವಿಡಿಯೊ ಮಾಡುವವರು ವಿಡಿಯೊ ಎಡಿಟಿಂಗ್‌ ಗೊತ್ತಿರುವವರಾಗಿದ್ದಾರೆ. ಇಂತಹ ಪೋಸ್ಟ್‌ಗಳನ್ನು ಪ್ರಕಟಿಸಿದ ಬಳಿಕ ವಿವಿಧ ಸಾಮಾಜಿಕ ಜಾಲತಾಣಗಳಿಗೆ ಶೇರ್‌ ಮಾಡುತ್ತಾರೆ. ಅವು ವೈರಲ್‌ ಆದ ಬಳಿಕ ತಮ್ಮ ಮೂಲ ವಿಡಿಯೊಗಳನ್ನು ತೆಗೆದು ಹಾಕುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

 ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಟಿಕ್‌ಟಾಕ್, ಫೇಸ್‌ಬುಕ್, ಹಲೋ ಸಹಿತ ನಾನಾ ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾ ಕುರಿತಾದ ಅವೈಜ್ಞಾನಿಕ, ತಿರುಚಲಾದ, ಸುಳ್ಳು ಮಾಹಿತಿ ಹರಡುವವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು