ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಟ್ವಿಟರ್ ಸ್ನೇಹಿತನನ್ನು ಭೇಟಿಯಾದ ಜಗತ್ತಿನ ಶ್ರೀಮಂತ ಇಲಾನ್ ಮಸ್ಕ್!

Last Updated 23 ಆಗಸ್ಟ್ 2022, 10:21 IST
ಅಕ್ಷರ ಗಾತ್ರ

ನವದೆಹಲಿ: ಪ್ರಪಂಚದ ನಂಬರ್ 1 ಶ್ರೀಮಂತ ಹಾಗೂ ಟೆಸ್ಲಾ ಕಂಪನಿ ಸಿಇಒ ಇಲಾನ್ ಮಸ್ಕ್ ಅವರು ತಮ್ಮ ಉದ್ಯಮಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡರೂ ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಅವರು ಯುವಜನರೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ.

ವರ್ಣರಂಜಿತ ವ್ಯಕ್ತಿತ್ವವನ್ನು ಹೊಂದಿರುವ ಇಲಾನ್ ಮಸ್ಕ್ ಅವರನ್ನು ಭೇಟಿಯಾಗಲು ಅದೆಷ್ಟೊ ಉದ್ಯಮಿಗಳು, ವ್ಯಾಪಾರಸ್ಥರು, ಪತ್ರಕರ್ತರು ಕಾಯ್ದು ಕುಳಿತಿರುತ್ತಾರೆ. ಆದರೆ, ಹೆಚ್ಚಿನವರಿಗೆ ಅವಕಾಶ ಸಿಗುವುದಿಲ್ಲ. ಇದೀಗ ಭಾರತದ 23 ವರ್ಷದ ಯುವ ಟಕ್ಕಿ ಒಬ್ಬರು ಇಲಾನ್ ಮಸ್ಕ್‌ರನ್ನು ಭೇಟಿಯಾಗಿ ಮಾತನಾಡಿಸಿ ಬಂದಿದ್ದಾರೆ.

ಹೌದು, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌ನಲ್ಲಿ (ಟಿಸಿಎಸ್‌) ಕೆಲಸ ಮಾಡುತ್ತಿರುವ ಪುಣೆ ಮೂಲದ ಪ್ರಣಯ್ ಪಾತೋಳೆ ಅವರು ಟೆಕ್ಸಾಸ್‌ನ ಟೆಸ್ಲಾ ಕಾರು ತಯಾರಿಕಾ ಘಟಕದಲ್ಲಿ ಇಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ. ಅವರೊಂದಿಗಿರುವ ಫೋಟೊ ಹಂಚಿಕೊಂಡು ಗಮನ ಸೆಳೆದಿದ್ದಾರೆ.

ಪ್ರಣಯ್‌ಗೆ 2018ರಿಂದಇಲಾನ್ ಮಸ್ಕ್ ಟ್ವಿಟರ್ ಸ್ನೇಹಿತರಾಗಿದ್ದಾರೆ. ‘ಟೆಸ್ಲಾ ಗಿಗಾ ಫ್ಯಾಕ್ಟರಿಯಲ್ಲಿ ನಿಮ್ಮನ್ನು ಭೇಟಿಯಾಗಿದ್ದು ಅದ್ಭುತ ಕ್ಷಣವಾಗಿತ್ತು. ಅತ್ಯಂತ ವಿನಯಪೂರ್ವಕವಾದ ಹಾಗೂ ಸಾದಾಸೀದಾ ಮನುಷ್ಯನನ್ನು ಎಲ್ಲಿಯೂ ನೋಡಿಲ್ಲ. ಲಕ್ಷಾಂತರ ಜನರಿಗೆ ನೀವು ಸ್ಫೂರ್ತಿಯಾಗಿದ್ದಿರಿ’ ಎಂದು ಇಲಾನ್ ಮಸ್ಕ್ ಅವರನ್ನು ಉದ್ದೇಶಿಸಿ ಪ್ರಣಯ್ ಪಾತೋಳೆ ಟ್ವೀಟ್ ಮಾಡಿದ್ದಾರೆ.

ಪ್ರಣಯ್ ತಂದೆ ಪ್ರಶಾಂತ್ ಪಾತೋಳೆ ಕೂಡ ‘ನಿನ್ನ ಕನಸು ನನಸಾಗಿದೆ’ ಎಂದು ಮಗನನ್ನು ಮೆಚ್ಚಿಕೊಂಡಿದ್ದಾರೆ.

ಟಿಸಿಎಸ್‌ನಲ್ಲಿ ಮಷಿನ್ ಲರ್ನಿಂಗ್ ಎಂಜಿನಿಯರ್ ಆಗಿರುವ ಪ್ರಣಯ್ ಅವರು ಟ್ವಿಟರ್‌ನಲ್ಲಿ 1.8 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ. ಪ್ರಣಯ್ ಕೇಳುವ ಪ್ರಶ್ನೆಗಳಿಗೆ ಮಸ್ಕ್ ಅವರು ಆಗಾಗ ಉತ್ತರ ಕೊಡುತ್ತಾ ಗಮನ ಸೆಳೆದಿದ್ದರು.‌

ಅಲ್ಲದೇ ಪ್ರಣಯ್ ಅವರು ಮಸ್ಕ್ ಅವರಿಗೆ ನೇರ ಸಂದೇಶಗಳನ್ನು (ಡಿಎಂ) ಕಳಿಸುವ ಮೂಲಕ ಸಂಪರ್ಕದಲ್ಲಿದ್ದಾರೆ. ಸ್ಪೇಸ್ ಕಾರ್‌ಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಪ‍್ರಣಯ್ ಹೇಳಿಕೊಂಡಿದ್ದರು. ಅಂದಹಾಗೇ ಇಲಾನ್ ಮಸ್ಕ್ ಅವರಿಗೆ ಟ್ವಿಟರ್‌ ಒಂದರಲ್ಲೇ 103 ಮಿಲಿಯನ್ (10.3 ಕೋಟಿ) ಫಾಲೊವರ್‌ಗಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT