ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಡೌನ್‌, ವಾಟ್ಸ್‌ಆ್ಯಪ್‌ ಗಾನ್...

Last Updated 12 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಕಳೆದ ಸೋಮವಾರ, ಈ ಅನುಭವ ನಿಮ್ಮೆಲ್ಲರಿಗೂ ಆಗಿಯೇ ಇರುತ್ತೆ. ಕೆಲವರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್‌ಗಳು ಕೇವಲ ಆ್ಯಪ್‌ಗಳಾಗಿರಬಹುದು; ಆದರೆ ಕೋಟ್ಯಂತರ ಜನರಿಗೆ ಅದನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ.

ಮರುದಿನ ಟ್ರಿಪ್ ಹೊರಟಿದ್ದ ನಂದಿನಿಗೆ, ಟ್ರಿಪ್‌ಗೆಂದೇ ವಿಶೇಷವಾಗಿ ರಚಿಸಲಾಗಿದ್ದ ವಾಟ್ಸ್‌ಆ್ಯಪ್‌ ಗ್ರೂಪಿನಲ್ಲಿ ಕೊನೆಯ ನಿಮಿಷದ ಅಪ್ಡೇಟ್ಸ್ ಕಳಿಸಲು ಸಾಧ್ಯವಾಗದೇ, ಚಡಪಡಿಕೆ. ಎಷ್ಟು ಹೊತ್ತಿಗೆ ಏರ್ಪೋರ್ಟ್ ತಲಪಬೇಕು, ಯಾರು ಯಾವ ಗೇಟ್‌ನ ಬಳಿ ಸಿಗ್ತಾರೆ ಅನ್ನೋದನ್ನ ಒಬ್ಬರಿಗೊಬ್ಬರು ತಿಳಿಸಿಕೊಳ್ಳೋದಕ್ಕೇ ಈ ಗ್ರೂಪ್ ತಯಾರಿಸಿಕೊಂಡ ಮೇಲೆ, ಕೈಕೊಟ್ಟ ವಾಟ್ಸ್‌ಆ್ಯಪ್‌ನ ಮೇಲೆ ಇವಳಿಗೆ ಎಲ್ಲಿಲ್ಲದ ಕೋಪ.

ನಟ ಸಂಭ್ರಮ್, ತನ್ನ ಅಭಿಮಾನಿಗಳನ್ನ ಎಂದಿಗೂ ನಿರಾಶೆಗೊಳಿಸಿದವನೇ ಅಲ್ಲ. ಬಹುದಿನಗಳ ಶೂಟಿಂಗ್‌ನ ನಂತರ, ಫೇಸ್‌ಬುಕ್‌ ಲೈವ್ ಬರ್ತೀನಿ ಅಂತ ಪ್ರಾಮಿಸ್ ಮಾಡಿದ್ದ. ಇನ್ನೇನು ಆ ಘಳಿಗೆ ಬಂತು ಅಂತ ಸಂಭ್ರಮ್ ಹಾಗೂ ಆತನ ಅಭಿಮಾನಿಗಳೂ ಸಂಭ್ರಮದಿಂದ ಕಾಯ್ತಾ ಇದ್ದಾಗ ಫೇಸ್‌ಬುಕ್‌ ಕೆಲಸ ಮಾಡೋದು ನಿಲ್ಲಿಸಿತು.

ಕಳೆದ ಸೋಮವಾರ, ಈ ಅನುಭವ ನಿಮ್ಮೆಲ್ಲರಿಗೂ ಆಗಿಯೇ ಇರುತ್ತೆ. ಕೆಲವರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್‌ಗಳು ಕೇವಲ ಆ್ಯಪ್‌ಗಳಾಗಿರಬಹುದು; ಆದರೆ ಕೋಟ್ಯಂತರ ಜನರಿಗೆ ಅದನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಪ್ರತಿಯೊಂದಕ್ಕೂ ಈ ಸೋಶಿಯಲ್ ಮೀಡಿಯಾ ಆ್ಯಪ್‌ಗಳ ಮೇಲೆ ಅವಲಂಬಿತರಾಗಿರುವ ಜನರಲ್ಲಿ ಕೆಲವರು, ‘ಯಾಕೋ ವರ್ಕ್ ಆಗ್ತಿಲ್ವಲ್ಲ’ ಅಂತ ಚಡಪಡಿಸಿ, ಪದೇ ಪದೇ ‘ಸರಿ ಹೋಯ್ತಾ?’ ಅಂತ ಚೆಕ್ ಮಾಡುವುದರಲ್ಲಿ ಬ್ಯುಸಿಯಾದ್ರೆ, ಕೆಲವರಿಗೆ ಡಿಪ್ರೆಶನ್ ಕೂಡ ಉಂಟಾಗಿತ್ತಂತೆ! ಡಿಪ್ರೆಶನ್ ಕೇವಲ ಮಾನಸಿಕವಾಗಿಯಲ್ಲ, ಈ ಆ್ಯಪ್‌ಗಳ ಶೇರ್‌ಗಳಲ್ಲೂ, ಈ ಸಂಸ್ಥೆಯ ಆರ್ಥಿಕ ವಹಿವಾಟಿನಲ್ಲೂ ಡಿಪ್ರೆಶನ್ ಕಂಡುಬಂದಿದೆ. ಈ ಆ್ಯಪ್‌ಗಳು ಕೆಲಸ ಮಾಡದ ಆ ಕೇವಲ 6–7 ಗಂಟೆಗಳಲ್ಲಿ, ಫೇಸ್‌ಬುಕ್ ಸಂಸ್ಥೆಗೆ 600 ಕೋಟಿ ಅಮೆರಿಕನ್ ಡಾಲರ್‌ಗಳಷ್ಟು ನಷ್ಟವಾಗಿದೆಯಂತೆ! ಅಂದರೆ ಸುಮಾರು 4,50,78,81,00,000 ರೂಪಾಯಿಗಳಷ್ಟು ಖೋತಾ!

ಫೇಸ್‌ಬುಕ್‌ ಡೌನ್‌, ವಾಟ್ಸ್‌ಆ್ಯಪ್‌ ಗಾನ್...

ಒಬ್ಬರ ನಷ್ಟ ಮತ್ತೊಬ್ಬರ ಲಾಭ ಅಲ್ವೇ? ಒಂದು ಅಂಗಡಿಯ ಕಥೆ ಮುಗಿಯಿತೆಂದಾಗ, ಮತ್ತೊಂದು ಅದರ ಬದಲಿಗೆ ತಲೆ ಎತ್ತಿ ಜಯಭೇರಿ ಬಾರಿಸುತ್ತೆ; ಒಬ್ಬ ಆಟಗಾರ ಅಪ್ಪಿತಪ್ಪಿ ಸರಿಯಾಗಿ ಆಡದ ಒಂದೇ ಒಂದು ಮ್ಯಾಚ್, ಮತ್ತೊಬ್ಬ ಆಟಗಾರನ ಅದೃಷ್ಟದ ಬಾಗಿಲು ತೆರೆಯುತ್ತಂತೆ. ಹಾಗೇ ವಾಟ್ಸ್‌ಆ್ಯಪ್‌ ಕೆಲಸ ಮಾಡದ ಆ ಒಂದೇ ರಾತ್ರಿಯಲ್ಲಿ, ಅದರ ಎದುರಾಳಿ ಟೆಲಿಗ್ರಾಮ್ ಸಂಸ್ಥೆಗೆ ಅತ್ಯಂತ ಯಶಸ್ವಿ ಘಳಿಗೆಗಳನ್ನು ತಂದುಕೊಟ್ಟಿದೆ. ಕೇವಲ ಆರು ಗಂಟೆಗಳಲ್ಲಿ ಏಳು ಕೋಟಿ ಹೊಸ ಬಳಕೆದಾರರು, ಟೆಲಿಗ್ರಾಮ್ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿ ಬಳಸಿದ್ದಾರೆ. ಇದರ ಬಗ್ಗೆ ಹೆಮ್ಮೆಯಿಂದ ಮಾತಾಡುವ ಟೆಲಿಗ್ರಾಮ್ ಸಂಸ್ಥೆಯ ಸಿಇಒ ಪವೆಲ್ ಡುರೋವ್, ತನ್ನ ಸಂಸ್ಥೆಯ ಉದ್ಯೋಗಿಗಳಿಗೊಂದು ಶಹಬ್ಬಾಸ್ ಹೇಳುವುದನ್ನು ಮರೆಯೋದಿಲ್ಲ; ಯಾವುದೇ ಮುನ್ಸೂಚನೆಯಿಲ್ಲದೇ ಹೀಗೆ ರಾತ್ರೋರಾತ್ರಿ ಬಳಕೆದಾರರ ಪ್ರವಾಹ ಬಂದಾಗ, ಜಾಗರೂಕತೆಯಿಂದ ನಿರ್ವಹಣೆ ಮಾಡೋದು ಕೂಡ ಬೃಹತ್ ಸವಾಲೇ ಎಂಬುದು ಆತನಿಗೆ ತಿಳಿದ ಸಂಗತಿಯೇ.

ಟೆಲಿಗ್ರಾಮ್ ಸಂಸ್ಥೆಗೆ ಹೀಗೆ ಅನುಕೂಲವಾಗಿದ್ದು ಇದೇ ಮೊದಲ ಬಾರಿಯಲ್ಲ. ವಾಟ್ಸ್‌ಆ್ಯಪ್‌ನಲ್ಲಿ ನಮ್ಮ ಖಾಸಗೀತನಕ್ಕೆ, ನಮ್ಮ ಮಾಹಿತಿಗೆ ಸುರಕ್ಷತೆಯಿಲ್ಲ ಎಂಬ ಸುದ್ದಿ ಸದ್ದು ಮಾಡಿದ್ದಾಗ ಕೂಡ ಹೀಗೇ ಆಗಿತ್ತು; ಕೆಲವೇ ತಿಂಗಳ ಅಂತರದಲ್ಲಿ ಇತಿಹಾಸ ಮರುಕಳಿಸಿದೆಯಷ್ಟೇ.

ಅಷ್ಟಕ್ಕೂ ಈ ‘ಸೋಶಿಯಲ್ ಮೀಡಿಯಾ ಸ್ಯೂಡೋ ಅಪೋಕಾಲಿಪ್ಸ್’ ಆಗಿದ್ದಾದರೂ ಏಕೆ ಗೊತ್ತೇ? ಫೇಸ್‌ಬುಕ್ ಸಂಸ್ಥೆಯ ಡೇಟಾ ಕೇಂದ್ರಗಳ ನಡುವೆ ನೆಟ್‌ವರ್ಕ್‌→ದಟ್ಟಣೆಯುಂಟಾಗುತ್ತದಲ್ಲ?→ಅದನ್ನು ಸಂಭಾಳಿಸುವ ಮೂಲಭೂತ ರೌಟರ್‌ಗಳಲ್ಲಿ ಸಮಸ್ಯೆ ತಲೆದೋರಿತ್ತು. ಇದು ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್‌ನ ಮೇಲೂ ಪರಿಣಾಮ ಬೀರಿ, ಅವುಗಳ ಕಾರ್ಯವೂ ಸ್ಥಗಿತವಾಯ್ತು.

ಈ ಸಮಸ್ಯೆಯನ್ನು ತಾಂತ್ರಿಕವಾಗಿ ಪರಿಹರಿಸಲು ಬೇಕಾದ ಕೆಲವೇ ಘಂಟೆಗಳಲ್ಲಿ ಫೇಸ್‌ಬುಕ್ ಬೊಕ್ಕಸದಿಂದ ಸೋರಿಕೆಯಾದ ನಿಧಿಯು, ಹೊಸ ಸದಸ್ಯರ ರೂಪದಲ್ಲಿ ಟೆಲಿಗ್ರಾಮ್‌ನ ಬೊಕ್ಕಸಕ್ಕೆ ಇಳಿದಿತ್ತು. ಅಲ್ಪಸ್ವಲ್ಪ ಲಾಭ ‘ಸಿಗ್ನಲ್‘ ಆ್ಯಪ್‌ಗೆ ಕೂಡ ಆಗಿದೆ. ಆದರೆ ಇದು ಕೇವಲ ತಾತ್ಕಾಲಿಕ ಸತ್ಯವಷ್ಟೇ ಎಂಬುದು ಫೇಸ್‌ಬುಕ್‌ನ ಮಾರ್ಕ್ ಝುಕರ್‌ ಬರ್ಗ್‌ನ ಅಚಲ ನಂಬಿಕೆ. ‘ಬಿದ್ರೂ ಮೀಸೆ ಮಣ್ಣಾಗ್ಲಿಲ್ಲ’ ಅನ್ನುವ ಜಟ್ಟಿಯಾ ಈತ ಎನಿಸಬಹುದೇನೋ? ಆದರೆ ವಾಟ್ಸ್‌ಆ್ಯಪ್‌ನ ಸುರಕ್ಷತೆ ಬಗ್ಗೆ ಜನರಲ್ಲಿ ಮತ್ತೆ ನಂಬಿಕೆ ಹುಟ್ಟಿಸಿದ ನಂತರ, ವಲಸೆ ಹೋಗಿದ್ದವರಲ್ಲಿ ಬಹುಪಾಲು ಜನ, ಟೆಲಿಗ್ರಾಮ್, ಸಿಗ್ನಲ್ ಬಿಟ್ಟು ವಾಪಸ್ ಬಂದಿದ್ದರಲ್ಲವೇ? ಈಗಲೂ ಹಾಗೆಯೇ. ಇತರ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದರೂ, ಅದಕ್ಕೆ ಹೊಂದಿಕೊಳ್ಳುವಷ್ಟರಲ್ಲಿ ಪುನಃ ಗರಿಗೆದರಿ ನಿಂತ ನವಿಲಾಗಿ ಮರಳಿದ ವಾಟ್ಸ್‌ಆ್ಯಪ್‌, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಸಾಟಿಯೇ ಇಲ್ಲ ಎಂಬುದು ಕೇವಲ ಝುಕರ್‌ ಬರ್ಗ್‌ನ ಮಾತಲ್ಲ, ಬಳಕೆದಾರರ ಅಂಬೋಣ ಕೂಡ ಎನ್ನುತ್ತವೆ ಸಮೀಕ್ಷೆಗಳು. ಇತರರ ತಾತ್ಕಾಲಿಕ ಅಡಚಣೆಗಳನ್ನು ತಮ್ಮ ಟ್ರಂಪ್‌ಕಾರ್ಡ್‌ ಆಗಿ ಬಳಸಿಕೊಳ್ಳಲು ಉದಯೋನ್ಮುಖ ಎದುರಾಳಿಗಳು ಕಾಯುತ್ತಲೇ ಇರುತ್ತಾರೆ. ದೈತ್ಯಸಂಸ್ಥೆಯೇ ಆದರೂ, ಒಮ್ಮೆಯೂ ಎಚ್ಚರ ತಪ್ಪುವಂತಿಲ್ಲ ಎಂಬುದನ್ನು ಇದು ಮತ್ತೊಮ್ಮೆ ಸಾರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT