ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್ | ‘ಐ ಲವ್‌ ಯು ಪಾಪು’ ಅಪ್ಪ ಹೇಳುವ ಮೊದಲೇ ಮಗಳಿಗೆ ಮಾತು ಅರ್ಥವಾಗಿತ್ತು...

‘ನೀನಂದ್ರೆ ಮುದ್ದಿನ ಮುದ್ದೆ. ನಾನು ನಿನಗೆ ಬೆಚ್ಚನೆ ಬ್ಲಾಂಕೆಟ್’
Last Updated 21 ಅಕ್ಟೋಬರ್ 2019, 3:51 IST
ಅಕ್ಷರ ಗಾತ್ರ

ಅವನಿಗೆ ಮಾತುಬಾರದು, ಆತನ ಬೆಚ್ಚನೆ ತೋಳಿನಲ್ಲಿ ಅವಿತು ಜಗತ್ತು ನೋಡುತ್ತಿರುವ ಕಂದಮ್ಮನಿಗೆ ಅವನನ್ನು ಬಿಟ್ಟು ಬೇರೇನೂ ಕಾಣದು. ಇಂಥ ಅಪ್ಪ–ಮಗಳ ಸಂವಾದ ಹೇಗಿರಬಹುದು?

ಟ್ವಿಟರ್‌ನಲ್ಲಿ ಸೋಮವಾರ ಮುಂಜಾನೆ ಈ ತಂದೆ–ಮಗಳದ್ದೇ ಹವಾ. ಮೂಕಭಾಷೆಯಲ್ಲಿ ಮಗಳನ್ನು ಲಾಲಿಸಿದ ಈ ತಂದೆಗೆ ಇದೀಗ ಜಗತ್ತು ಚಪ್ಪಾಳೆ ತಟ್ಟಿ ಶಹಬ್ಬಾಸ್ ಎಂದಿದೆ. 41ಸೆಕೆಂಡ್‌ನ ವಿಡಿಯೊ ನೋಡುವಷ್ಟರಲ್ಲಿ ಹನಿಗಣ್ಣಾದವರು‘ಪ್ರೀತಿಗೆ ಬೇಕಾದ್ದು ಶಬ್ದಗಳ ಭಾಷೆಯಲ್ಲ, ಹೃದಯಗಳ ಭಾಷೆ’ ಎನ್ನುವ ಮಾತನ್ನು ಸಾರಿಹೇಳುತ್ತಿದ್ದಾರೆ. ಮನುಷ್ಯತ್ವಕ್ಕೆ, ಭಾವನೆಗಳಿಗೆ, ಅಪ್ಪ–ಮಗಳ ಭಾವುಕ ಬೆಸುಗೆಗೆಜೀವಂತ ನಿದರ್ಶನಈ ವಿಡಿಯೊ.

ಅಮೆರಿಕದ ನಿವೃತ್ತ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್‌ ಚಾಪ್‌ಮನ್ ಈ ವಿಡಿಯೊ ತುಣುಕನ್ನು ‘ಶ್ರವಣ ದೋಷವಿರುವ ತಂದೆ ಆಗಷ್ಟೇಹುಟ್ಟಿದ ತನ್ನ ಮಗಳನ್ನುಸಂಜ್ಞೆಭಾಷೆಯಲ್ಲಿ ಲಾಲಿಸುತ್ತಿದ್ದಾನೆ’ ಎನ್ನುವ ಒಕ್ಕಣೆಯೊಂದಿಗೆ ಹಂಚಿಕೊಂಡಿದ್ದಾರೆ.

ಟ್ವಿಟರ್‌ಗೆ ಬಂದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 45 ಲಕ್ಷ ಮಂದಿ ಈ ವಿಡಿಯೊ ನೋಡಿದ್ದಾರೆ. 2 ಲಕ್ಷ ಮಂದಿ ರಿಟ್ವಿಟ್ ಮಾಡಿದ್ದಾರೆ, 12 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

ತಂದೆ ತನ್ನ ಮಗಳನ್ನು ಆಸ್ಥೆಯಿಂದ ತೋಳಿನಲ್ಲಿ ಹಿಡಿದುಕೊಂಡಿರುವ ರೀತಿ, ಶತಾಯಗತಾಯ ತನ್ನ ಭಾವನೆಗಳನ್ನು ಮಗುವಿಗೆ ದಾಟಿಸಲೇಬೇಕೆಂಬ ಅವನ ಹಂಬಲ, ನೀನು ಹೇಳೋದೆಲ್ಲಾ ಅರ್ಥವಾಗುತ್ತಿದೆ ಎಂದುಆ ಮಗು ತಂದೆಯ ಕಣ್ಣನ್ನೇ ನೋಡುತ್ತಿರುವ ವೈಖರಿಗೆ ನೆಟಿಗ್ಗರು ಅಕ್ಷರಶಃ ಹನಿಗಣ್ಣಾಗಿದ್ದಾರೆ.

ಸಂಜ್ಞಾಭಾಷೆಯಲ್ಲಿ ತನ್ನ ಭಾವನೆ ತೋಡಿಕೊಳ್ಳಲು ಅಪ್ಪ ಬೆರಳುಗಳನ್ನು ಆಡಿಸಿದ್ದಾನೆ. ಆದರೆ ಮಗುವಿಗೆ ಸಂಜ್ಞಾಭಾಷೆಗಿಂತ ತನಗೆ ಬೆಚ್ಚನೆ ಆಸರೆ ನೀಡಿರುವ ತಂದೆಯ ಕಣ್ಣೇ ಮುಖ್ಯವಾದಂತೆ ಇದೆ. ‘ನೀನು ಹೇಳಬೇಡ, ನನಗೆಲ್ಲಾ ಅರ್ಥವಾಗುತ್ತೆ’ ಎಂಬಂತೆ ಆ ಮಗುತಂದೆಯ ಕಣ್ಣುಗಳನ್ನು ದೃಷ್ಟಿ ಕೀಲಿಸದೆ ನೋಡುತ್ತಿದೆ. ಅಪ್ಪನ ಹಾತೊರೆಯುವಿಕೆಗಿಂತ ಮಗುವಿನ ಪ್ರತಿಕ್ರಿಯೆ, ಅದರ ಮಿನುಗುವ ಕಣ್ಣೇ ನೆಟ್ಟಿಗರಿಗೆ ಹೆಚ್ಚು ಇಷ್ಟವಾಗಿದೆ.

‘ಪ್ರೀತಿಗೆ ಶಬ್ದ, ಭಾಷೆಗಳ ಹಂಗಿಲ್ಲ. ಅದು ನಮ್ಮ ಜೀವ–ಮನಸ್ಸಿನೊಳಗೆ ಅಂತರ್ಗತವಾಗಿರುವ ಇನ್‌ಬಿಲ್ಟ್‌ ಆ್ಯಪ್. ನಮ್ಮ ಜೀವತಂತುಗಳಲ್ಲೇ ಪ್ರೀತಿಯ ಹರಿವಿದೆ. ಅದಕ್ಕೆ ಅಡಾಪ್ಟರ್‌ಗಳು, ಅನುವಾದಕರು, ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್‌ಫೇಸ್‌ಗಳು(ಎಪಿಐ) ಬೇಕಿಲ್ಲ. ನಾವು ಭೂಮಿಗೆ ಬರುವ ಮೊದಲೇ ಪ್ರೀತಿ ನಮ್ಮಲ್ಲಿ ಆ್ಯಕ್ಟಿವೇಟ್ ಆಗಿಬಿಟ್ಟಿರುತ್ತೆ’ ಎಂದು ಮೋಹನ್ ಸುಬ್ರಹ್ಮಣ್ಯ ಎನ್ನುವವರು ಪ್ರೀತಿಯ ಭಾಷೆಯ ಎದುರು ತಂತ್ರಜ್ಞಾನ ಎಷ್ಟು ಹಿಂದುಳಿದಿದೆ ಎಂದು ತಾಂತ್ರಿಕ ಪರಿಭಾಷೆಯಲ್ಲೇ ವಿವರಿಸಿದ್ದಾರೆ.

ಸಂಜ್ಞಾಭಾಷೆ ಬಲ್ಲ ಕೆಲವು ಟ್ವಿಟ್ಟಿಗರು ಅಪ್ಪನ ಮಾತನ್ನು ಅಕ್ಷರಗಳಿಗೆ ಅನುವಾದಿಸಿದ್ದಾರೆ.

‘ಅಪ್ಪ ಕಣೆ, ನಾನು ನಿನ್ನಪ್ಪ. ಐ ಲವ್‌ ಯು. ನನಗೆ ನೀನಂದ್ರೆ ತುಂಬಾ ಇಷ್ಟ. ನಿನ್ನ ಕಣ್ಣುಗಳು ಎಷ್ಟು ಚೆನ್ನಾಗಿವೆ ಗೊತ್ತಾ. ಹೊಳೆವ ಹಸಿರಿನ ನಿನ್ನ ಕಣ್ಣುಸಖತ್ ಬ್ಯೂಟಿಫುಲ್. ನಿನ್ನ ನಗು, ಅಬ್ಬಾ ಎಷ್ಟು ಮುದ್ದಾಗಿದೆ. ನೀನಂದ್ರೆ ಮುದ್ದಿನ ಮುದ್ದೆ. ನಾನು ನಿನ್ನ ಬೆಚ್ಚನೆ ಬ್ಲಾಂಕೆಟ್. ಐ ಲವ್‌ ಯು ಪಾಪು, ಐ ಲವ್‌ ಯು. ನೀನು ಎಷ್ಟು ಚಂದ ಇದ್ದೀ. ನನ್ನ ಮುದ್ದು ಹುಡುಗಿ. ಐ ಲವ್‌ ಯು’.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT