ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2020ರಲ್ಲಿ ಟ್ವಿಟರ್‌ನಲ್ಲಿ ಸದ್ದು ಮಾಡಿದ ವಿಜಯ್, ಕೋಹ್ಲಿ, ಮೋದಿ, ಬಚ್ಚನ್

ಟ್ವಿಟರ್ ಹಿನ್ನೋಟ 2020
Last Updated 8 ಡಿಸೆಂಬರ್ 2020, 1:00 IST
ಅಕ್ಷರ ಗಾತ್ರ

2020 ವರ್ಷ ಕೊನೆಗೊಳ್ಳುತ್ತಿರುವ ಹಂತದಲ್ಲಿ ಹಿನ್ನೋಟ ಹರಿಸಿದರೆ ಕೋವಿಡ್‌ನಿಂದಾಗಿ ಅದರ ಅಪಸವ್ಯಗಳೇ ಹೆಚ್ಚು ನೆನಪಾಗುತ್ತವೆ. ಆದರೆ, ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದಲ್ಲಿ, ಭಾರತೀಯರು ಗರಿಷ್ಠ ಹಂಚಿದ, ರೀಟ್ವೀಟ್ ಮಾಡಿದ, ಮೆಚ್ಚಿಕೊಂಡ ವಿಷಯಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಒಟ್ಟಾರೆಯಾಗಿ #Covid19 ಅತೀ ಹೆಚ್ಚು ಬಳಸಿದ ಹ್ಯಾಶ್ ಟ್ಯಾಗ್ ಆಗಿತ್ತು. ಜೊತೆಗೆ, ಮಾಸ್ಕ್ ಧರಿಸಿ ಎಂದು ಮನವಿ ಮಾಡಿಕೊಳ್ಳುವ, ವೈದ್ಯರಿಗೆ, ಶಿಕ್ಷಕರಿಗೆ ಧನ್ಯವಾದ ಹೇಳುವ ಟ್ವೀಟ್‌ಗಳೂ ಗರಿಷ್ಠ ಜನಪ್ರಿಯತೆ ಪಡೆದವು. ನಂತರ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಶ್ರದ್ಧಾಂಜಲಿ, ಹಾಥರಸ್ ದಲಿತ ಮಹಿಳೆಯ ಅತ್ಯಾಚಾರ ಪ್ರಕರಣಗಳು ಹೆಚ್ಚು ಚರ್ಚೆಗೀಡಾದ ವಿಷಯಗಳು.

ಕ್ರೀಡೆಯಲ್ಲಿ #IPL2020, #WhistlePodu ಮತ್ತು #TeamIndia ಗರಿಷ್ಠ ಬಳಕೆಯಾದ ಹ್ಯಾಶ್‌ಟ್ಯಾಗ್‌ಗಳು. ಫೋಟೋಗ್ರಫಿ, ಯೋಗ, ಕವನಗಳು ಕೂಡ ಟ್ವಿಟರ್‌ನಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಮರುಪ್ರಸಾರವಾದ ರಾಮಾಯಣ, ಮಹಾಭಾರತ ಧಾರಾವಾಹಿಯೂ ಬಹುಚರ್ಚಿತ ವಿಷಯವಾಗಿತ್ತು.

ಭಾರತದಲ್ಲಿ ಗರಿಷ್ಠ ರೀಟ್ವೀಟ್, ಲೈಕ್ ಮತ್ತು ಕೋಟ್ ಆಗಿರುವ '2020ರ ಗೋಲ್ಡನ್ ಟ್ವೀಟ್'ಗಳನ್ನು 'ಟ್ವಿಟರ್ ಇಂಡಿಯಾ' ಹಂಚಿಕೊಂಡಿದೆ.

ನಟ ವಿಜಯ್ ಫೆಬ್ರವರಿಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ನೈವೇಲಿಯಲ್ಲಿ ತೆಗೆಸಿದ ಸೆಲ್ಫೀ ದೇಶಾದ್ಯಂತ ಗರಿಷ್ಠ ಶೇರ್ ಆಗಿ ಮೊದಲ ಸ್ಥಾನದಲ್ಲಿದೆ. ಸುಮಾರು 1.45 ಲಕ್ಷ ಮರು-ಟ್ವೀಟ್, ಸುಮಾರು 10 ಸಾವಿರ ಉಲ್ಲೇಖಗಳು ಮತ್ತು 3.75 ಲಕ್ಷ ಲೈಕ್‌ಗಳು ಇದಕ್ಕೆ ದೊರೆತಿವೆ.

ಕೋವಿಡ್-19 ದೇಶಕ್ಕೆ ಕಾಲಿಟ್ಟ ಸಮಯದಲ್ಲಿ, ಪರಸ್ಪರರಿಗೆ ನಾವಿದ್ದೇವೆ, ಭಯಪಡಬೇಡಿ ಎಂಬ ಭರವಸೆಯ ದೀಪ ಹಚ್ಚುವಂತೆ ಜನರಿಗೆ ವಿನಂತಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವು ರಾಜಕಾರಣಿಗಳ ಪೈಕಿ ಅತೀ ಹೆಚ್ಚು ರೀಟ್ವೀಟ್ ಆದ ಸಂದೇಶವಾಗಿದೆ. 1.06 ಲಕ್ಷ ರೀಟ್ವೀಟ್ ಹಾಗೂ 5.12 ಲಕ್ಷ ಲೈಕ್ ಪಡೆದಿದೆ. ಸುಮಾರು 12 ಸಾವಿರ ಮಂದಿ ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ಕ್ರೀಡಾ ವಿಭಾಗದಲ್ಲಿ, ತಮ್ಮ ಕೊಡುಗೆ ಮತ್ತು ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪತ್ರಕ್ಕೆ ಮಹೇಂದ್ರ ಸಿಂಗ್ ಧೋನಿ ನೀಡಿದ ಪ್ರಶಂಸಾತ್ಮಕ ಪ್ರತಿಕ್ರಿಯೆ 73 ಸಾವಿರ ರೀಟ್ವೀಟ್, 3.32 ಲಕ್ಷ ಲೈಕ್ಸ್ ಮೂಲಕ ಮೊದಲ ಸ್ಥಾನದಲ್ಲಿದೆ.

ವ್ಯವಹಾರ ಕ್ಷೇತ್ರದಲ್ಲಿ, ಉದ್ಯಮಿ ರತನ್ ಟಾಟಾ ಅವರು ಕೋವಿಡ್-19 ಬಾಧಿತ ಸಮುದಾಯಗಳಿಗೆ 500 ಕೋಟಿ ರೂ. ನೆರವು ಪ್ರಕಟಿಸಿರುವ ಟ್ವೀಟ್ ಸಂದೇಶವು 58 ಸಾವಿರ ರೀಟ್ವೀಟ್ ಹಾಗೂ 2.09 ಲಕ್ಷ ಲೈಕ್ ಗಳಿಸಿ ಗಮನ ಸೆಳೆದಿದೆ.

ಅತೀ ಹೆಚ್ಚು ಲೈಕ್ಸ್ ಪಡೆದ ಟ್ವೀಟ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರದು. ಪತ್ನಿ ಅನುಷ್ಕಾ ಶರ್ಮಾ ತಾಯಿಯಾಗುತ್ತಿರುವುದನ್ನು ಘೋಷಿಸಿದ ಟ್ವೀಟನ್ನು 6.43 ಲಕ್ಷ ಮಂದಿ ಲೈಕ್ ಮಾಡಿದ್ದು, 57 ಸಾವಿರ ಮಂದಿ ರಿಟ್ವೀಟ್ ಮಾಡಿ, ಶುಭಾಶಯ ಕೋರಿದ್ದರು. ಇದನ್ನೇ ಸಂಭ್ರಮದಿಂದ ಹಂಚಿಕೊಂಡ ಅನುಷ್ಕಾ ಶರ್ಮಾ ಸಂದೇಶವೂ ವರ್ಷದ ಟಾಪ್ 5 ಟ್ವೀಟ್‌ಗಳ ಪಟ್ಟಿಯಲ್ಲಿದೆ.

ಗರಿಷ್ಠ ಸಂಖ್ಯೆಯಲ್ಲಿ ಉಲ್ಲೇಖಗೊಂಡ ಟ್ವೀಟ್

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತಮಗೆ ಕೋವಿಡ್-19 ಸೋಂಕು ತಗುಲಿರುವುದನ್ನು ಘೋಷಿಸಿದ ಟ್ವೀಟ್ 43 ಸಾವಿರಕ್ಕೂ ಹೆಚ್ಚು ಮಂದಿ ಉಲ್ಲೇಖಿಸಿ, ಟ್ವೀಟ್ ಮಾಡಿದ್ದಾರೆ. 78 ಸಾವಿರ ರೀಟ್ವೀಟ್ ಮತ್ತು 4.43 ಲಕ್ಷ ಮಂದಿ ಇದನ್ನು ಲೈಕ್ ಮಾಡಿದ್ದಾರೆ.

ಹೆಚ್ಚು ಚರ್ಚಿತ ವಿಷಯಗಳು
ನಿರ್ದಿಷ್ಟ ವಿಷಯದ ಕುರಿತು ಹ್ಯಾಶ್ ಟ್ಯಾಗ್ ಬಳಸಿ ಜನರು ಟ್ವೀಟ್ ಮಾಡುತ್ತಾರೆ. ಅದರ ಆಧಾರದಲ್ಲಿ ಗರಿಷ್ಠ ಬಳಕೆಯಾದ ಹ್ಯಾಶ್‌ಟ್ಯಾಗ್‌ಗಳು (ಅಂದರೆ ಗರಿಷ್ಠ ಚರ್ಚಿತ ವಿಷಯ) ಎಂದರೆ ಕೋವಿಡ್-19, ಸುಶಾಂತ್ ಸಿಂಗ್ ರಜಪೂತ್ ಹಾಗೂ ಹಾಥರಸ್. ಕೋವಿಡ್ ಬಗ್ಗೆ ಮಾಹಿತಿ ತಿಳಿಯಲು, ಹಂಚಲು, ತಜ್ಞರನ್ನು ಸಂಪರ್ಕಿಸಲು #Covid19 ಹ್ಯಾಶ್ ಟ್ಯಾಗ್ ಬಳಸಿದ್ದರೆ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವು ಮತ್ತು ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ದಲಿತ ಮಹಿಳೆಯ ಅತ್ಯಾಚಾರದ ಬಗ್ಗೆ ಟ್ವಿಟರ್‌ನಲ್ಲಿ ಗರಿಷ್ಠ ಚರ್ಚೆ ನಡೆಯಿತು.

ಕ್ರೀಡಾ ಕ್ಷೇತ್ರದಲ್ಲಿ ಐಪಿಎಲ್ 2020, ವಿಶಲ್ ಪೋಡು ಮತ್ತು ಟೀಂ ಇಂಡಿಯಾ ಹ್ಯಾಶ್‌ಟ್ಯಾಗ್‌ಗಳು ಗರಿಷ್ಠ ಚರ್ಚೆಗೆ ಒಳಗಾದ ವಿಷಯಗಳನ್ನು ಸಂಕೇತಿಸಿದರೆ, ಚಲನಚಿತ್ರ ಕ್ಷೇತ್ರದಲ್ಲಿ ಸುಶಾಂತ್ ಸಿಂಗ್ ಅವರ ದಿಲ್ ಬೇಚಾರಾ ಚಲನಚಿತ್ರ, ಸೂರ್ಯ, ಅಪರ್ಣಾ ಬಾಲಮುರಳಿ ನಟನೆಯ ತಮಿಳಿನ ಸೂರರೈ ಪೋಟ್ರು ಮತ್ತು ಮಹೇಶ್ ಬಾಬು, ರಶ್ಮಿಕಾ ಮಂದಣ್ಣ ನಟನೆಯ ತೆಲುಗಿನ ಸರಿಲೇರು ನೀಕೆವ್ವರು ಚಿತ್ರಗಳು ಭಾರಿ ಚರ್ಚೆಯಾದವು.

ಉಳಿದಂತೆ, ಹಳೆಯ ನೆನಪುಗಳನ್ನು ಮರುಕಳಿಸಿದ, ದೂರದರ್ಶನದಲ್ಲಿ ಮರುಪ್ರಸಾರವಾದ ರಾಮಾಯಣ, ಮಹಾಭಾರತ ಪೌರಾಣಿಕ ಧಾರಾವಾಹಿಗಳು ಮತ್ತು ಪೋಕಿರಿ ಚಿತ್ರದ 14ನೇ ವರ್ಷದ ಸಂಭ್ರಮವನ್ನು ಟ್ವಿಟರ್ ಬಳಕೆದಾರರು ಭರ್ಜರಿಯಾಗಿಯೇ ಹ್ಯಾಶ್‌ಟ್ಯಾಗ್‌ಗಳ ಮೂಲಕ ಹಂಚಿಕೊಂಡರು. ಫೋಟೋಗ್ರಫಿ, ಯೋಗ ಮತ್ತು ಪೊಯೆಟ್ರಿ (ಕವನ) - ಇವುಗಳು ಟ್ವಿಟರ್‌ನಲ್ಲಿ ಅತೀ ಹೆಚ್ಚು ಚರ್ಚೆಗೀಡಾದ ಹವ್ಯಾಸದ ವಿಷಯಗಳಾಗಿದ್ದವು.

2020ರಲ್ಲಿ ಟ್ವಿಟರ್‌ನಲ್ಲಿ ಮೀಮ್‌ಗಳೂ ಹೆಚ್ಚು ಹರಿದಾಡಿದವು. ಅವುಗಳಲ್ಲಿ #Binod ಹೆಸರಿನಲ್ಲಿ ಸ್ಲೇಪಾಯಿಂಟ್ ಎಂಬ ಹ್ಯಾಂಡಲ್‌ನಲ್ಲಿ ಪ್ರಕಟವಾದ ವಿಡಿಯೊದ ತುಣುಕಿನ ಆಧಾರದಲ್ಲಿ ಸಾಕಷ್ಟು ಮೀಮ್‌ಗಳು ಸೃಷ್ಟಿಯಾಗಿ, ಭರ್ಜರಿ ನಗೆಯುಕ್ಕಿಸಿದವು.

ಭಾವನೆಗಳನ್ನು ವ್ಯಕ್ತಪಡಿಸುವ ಇಮೋಜಿಗಳಲ್ಲಿ, ಕಣ್ಣಲ್ಲಿ ನೀರು ತರಿಸುವಷ್ಟು ನಗುವನ್ನು ಸಂಕೇತಿಸುವ ಇಮೋಜಿ ಗರಿಷ್ಠ ಬಳಕೆಯಾಗಿದ್ದರೆ, ನಂತರದ ಸ್ಥಾನಗಳು ಕೈಮುಗಿಯುವ, ಕಣ್ಣಲ್ಲಿ ಪ್ರೀತಿ ತುಂಬಿಕೊಂಡ, ಹೆಬ್ಬೆರಳೆತ್ತಿ ಸೈ ಅನ್ನುವ ಮತ್ತು ಅಳುವ ಇಮೋಜಿಗಳದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT