ಶುಕ್ರವಾರ, ಆಗಸ್ಟ್ 12, 2022
25 °C

ಸೋಷಿಯಲ್‌ ಮೀಡಿಯಾ: ಪ್ರತಿಭಟನೆಯ ಹೊಸ ದುನಿಯಾ

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಭಾರತದ ರೈತರ ಪ್ರತಿಭಟನೆಗೆ ಶಕ್ತಿಯನ್ನು ತುಂಬಿದ್ದು, ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧದ ಹೋರಾಟವನ್ನು ಹಬ್ಬಿಸಿದ್ದು, ಬೆಲಾರಸ್‌ನಲ್ಲಿ ಜನ ಬೀದಿಗೆ ಇಳಿಯುವಂತೆ ಮಾಡಿದ್ದು, ಅಮೆರಿಕದಲ್ಲಿ ಕಪ್ಪು ವರ್ಣೀಯ ವ್ಯಕ್ತಿಯ ಕೊಲೆಯ ವಿರುದ್ಧ ಪ್ರತಿಭಟನೆಯ ಕಿಚ್ಚು ಹಚ್ಚಿದ್ದು, ಅರಬ್‌ ರಾಷ್ಟ್ರಗಳಲ್ಲಿ ಹಲವು ಭ್ರಷ್ಟ ಅಧ್ಯಕ್ಷರನ್ನು ಕಸದ ಬುಟ್ಟಿಗೆ ಎಸೆಯುವಂತಾದ ದಂಗೆಗೆ ಕಾರಣವಾಗಿದ್ದು – ಎಲ್ಲದರ ಹಿಂದಿನ ಶಕ್ತಿಯೂ ಈ ಸೋಶಿಯಲ್‌ ಮೀಡಿಯಾ. ಅಂದಹಾಗೆ, ಇದು ಜನಸಾಮಾನ್ಯರ ಪ್ರತಿಭಟನೆಯ ಸಾಧನವಾಗಿ ಮಾರ್ಪಟ್ಟಿರುವುದು ಹೇಗೆ ಗೊತ್ತೆ?

***

ಬೆಲಾರಸ್‌ನ ಸರ್ವಾಧಿಕಾರಿ ಅಲೆಕ್ಸಾಂಡರ್‌ ಲುಕಶೆಂಕೊ ಅವರ ಎದೆಗುಂಡಿಗೆಯಲ್ಲಿ ಭೀತಿಯ ಬಿರುಗಾಳಿಯನ್ನೇ ಎಬ್ಬಿಸಿದ ಪತ್ರಕರ್ತ ರಮೊನ್‌ ಪ್ರಾಟೊಸೆವಿಕ್‌ ಕೇವಲ 26ರ ಹರೆಯದ ಯುವಕ. ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಬೆಂಗಳೂರಿನ ಹುಡುಗಿ ದಿಶಾ ರವಿಗೂ ಈಗಷ್ಟೇ 22 ವರ್ಷ. ವಿಶ್ವಸಂಸ್ಥೆಯ ಸಭೆಯಲ್ಲಿ ಅಂಜದೆ, ಅಳುಕದೆ ಬಲಿಷ್ಠ ನಾಯಕರ ವಿರುದ್ಧ ನೇರಾನೇರ ಧ್ವನಿ ಎತ್ತಿದ ಸ್ವಿಟ್ಜರ್ಲೆಂಡ್‌ನ ಗ್ರೇತಾ ಥನ್‌ಬರ್ಗ್‌ ಸಹ ಇನ್ನೂ 18ರ ಹರೆಯದ ಕಿಶೋರಿ.

ಶಸ್ತ್ರಸಜ್ಜಿತ ಮಿಲಿಟರಿ–ಪೊಲೀಸ್‌ ಬಲವನ್ನೂ ದೇಶದ್ರೋಹ ಕಾಯ್ದೆಯಂತಹ ಝಳಪಿಸುವ ಅಸ್ತ್ರವನ್ನೂ ತನ್ನ ಬತ್ತಳಿಕೆಯಲ್ಲಿ ಹೊಂದಿದ ಬಲಾಢ್ಯ ಪ್ರಭುತ್ವವನ್ನೇ ಎದುರು ಹಾಕಿಕೊಂಡು, ಅದರ ವಿರುದ್ಧ ಎದೆಸೆಟೆಸಿ ನಿಂತಿರುವ ಇಂತಹ ಯುವಶಕ್ತಿಯ ಹತ್ತಿರ ಇರುವ ಏಕೈಕ ಪ್ರತ್ಯಸ್ತ್ರ ‘ಸೋಶಿಯಲ್‌ ಮೀಡಿಯಾ’! ಅಧಿಕಾರದ ಮದವೇರಿದ ಆಡಳಿತ ವ್ಯವಸ್ಥೆಗೆ ಮಾಹಿತಿ ಬಲದ ಅಂಕುಶದಿಂದ ತೀಕ್ಷ್ಣವಾಗಿ ಚುಚ್ಚುವುದೇನು ಸಣ್ಣ ಸಾಧನೆಯೇ ಮತ್ತೆ?

ಸರ್ಕಾರಗಳು ಜನರ ಕಣ್ಣಿಗೆ ಮಣ್ಣೆರಚಿ ನಡೆಸುವ ಕಿತಾಪತಿಯನ್ನೂ ಪೊಲೀಸ್‌ ಪಡೆಗಳು ಎಸಗುವ ಅಮಾನುಷ ಕ್ರೌರ್ಯವನ್ನೂ ಆಡಳಿತ ವ್ಯವಸ್ಥೆಯಲ್ಲಿ ಮುಗ್ಧರು ಅನುಭವಿಸುವ ಅನ್ಯಾಯವನ್ನೂ ಭ್ರಷ್ಟಾಚಾರದ ಕರ್ಮಕಾಂಡವನ್ನೂ ಸೋಶಿಯಲ್‌ ಮೀಡಿಯಾದ ಮೂಲಕ ಬಟಾಬಯಲು ಮಾಡುವ ಈ ಕ್ಲಿಕ್ಟಿವಿಸ್ಟ್‌ಗಳು (ಸಾಮಾಜಿಕ ಜಾಲತಾಣಗಳ ಮೂಲಕ ಚಳವಳಿ ರೂಪಿಸುವವರು), ಅಧಿಕಾರದ ಗದ್ದುಗೆಯನ್ನೇ ಅಲುಗಾಡಿಸುವಷ್ಟು ಕಂಪನ ಉಂಟು ಮಾಡಬಲ್ಲವರು. ಒಂದೊಂದು ಹ್ಯಾಷ್‌ಟ್ಯಾಗ್‌ ಆಂದೋಲನದಿಂದ ಲಕ್ಷಗಟ್ಟಲೆ ಪ್ರತಿರೋಧದ ಅಲೆ ಎಬ್ಬಿಸುವ ಸಾಮರ್ಥ್ಯವನ್ನು ಹೊಂದಿದವರು. ಆ ಮೂಲಕ ಜನಪರ ಪ್ರತಿಭಟನೆಗಳಿಗೆ ಶಕ್ತಿಯನ್ನೂ ತುಂಬುವವರು. ಇಂಥವರ ಮೇಲೆ ಪ್ರಭುತ್ವಗಳಿಗೆ ಸದಾ ಕೋಪ. ಆದ್ದರಿಂದಲೇ ಅವರ ಧ್ವನಿಯನ್ನು ಅಡಗಿಸಲು ಯಾವಾಗಲೂ ಅವುಗಳದ್ದು ಅಟಾಟೋಪ.

ವ್ಯವಸ್ಥೆಯ ವಿರುದ್ಧ ಸೆಣಸಲಾಗದೆ ಸೋತು ಮೌನಕ್ಕೆ ಶರಣಾದವರಿಗೆ ಸೋಶಿಯಲ್‌ ಮೀಡಿಯಾದ ಜಾಲತಾಣಗಳು ಧ್ವನಿಯನ್ನು ನೀಡಿವೆ. ಅವರಲ್ಲಿ ಅಡಗಿದ್ದ ಭೀತಿಯನ್ನು ದೂರಮಾಡಿವೆ. ಅನುಭವಿಸಿದ ಅನ್ಯಾಯದ ವಿರುದ್ಧ ಮುಕ್ತವಾಗಿ ಮಾತನಾಡುವಂತೆಯೂ ಪ್ರೇರೇಪಿಸಿವೆ. ‘ಓಹ್‌ ಅವನು ಇಷ್ಟೆಲ್ಲ ಹೇಳಿದನೇ? ನಾನು ಇನ್ನೂ ಸ್ವಲ್ಪ ಹೆಚ್ಚಿನದನ್ನೇ ಹೇಳುವೆ’ ಎನ್ನುವಂತಹ ಧೈರ್ಯವನ್ನು ಸಹ ಅವರಲ್ಲಿ ತುಂಬಿವೆ.

ಜನಸಾಮಾನ್ಯರ ಪ್ರತಿಭಟನೆಗಳಿಗೆ ಸೋಶಿಯಲ್‌ ಮೀಡಿಯಾ ಹೇಗೆ ಶಕ್ತಿ ತುಂಬುತ್ತಿದೆ ಎನ್ನುವುದನ್ನು ದೇಶದಾದ್ಯಂತ ಸದ್ದು ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯ ಉದಾಹರಣೆಯೊಂದಿಗೆ ನೋಡೋಣ. ರೈತರ ಪ್ರತಿಭಟನೆಯು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅಪಪ್ರಚಾರದ ಅಬ್ಬರ ಹೆಚ್ಚಾಗಿದ್ದರಿಂದ ಅವರ ಒಗ್ಗಟ್ಟು ಛಿದ್ರಗೊಳ್ಳುವ ಅಪಾಯದಲ್ಲಿತ್ತು. ಅದನ್ನು ಬಹುಬೇಗ ಗುರುತಿಸಿದ ಕಿಸಾನ್‌ ಏಕತಾ ಮೋರ್ಚಾದ ಪ್ರತಿನಿಧಿಗಳು ಸರ್ಕಾರದೊಂದಿಗೆ ನಡೆಸಿದ ಸಭೆಗಳ ಕಲಾಪವನ್ನು ಫೇಸ್‌ಬುಕ್‌ ಲೈವ್‌ ಮಾಡತೊಡಗಿದರು. ಪ್ರತಿಭಟನೆಗೆ ಸಂಬಂಧಿಸಿದ ಪ್ರತಿಯೊಂದು ವಿವರವನ್ನೂ ಸೋಶಿಯಲ್‌ ಮೀಡಿಯಾ ಮೂಲಕ ಹಂಚಿಕೊಳ್ಳತೊಡಗಿದರು. ಇದರಿಂದ ಸಂಶಯ–ಗೊಂದಲಗಳೆಲ್ಲ ತಾವೇ ತಾವಾಗಿ ದೂರವಾದವು.

ಟ್ರ್ಯಾಕ್ಟರ್‌ಗಳ ಸ್ಟೇರಿಂಗ್‌ಗಳನ್ನು ಹಿಡಿದ, ಹಸುಗಳ ಗಂಜಲವನ್ನು ಬಳಿದ ಕೈಗಳು ಟ್ವಿಟರ್‌ ಖಾತೆಗಳನ್ನೂ ನಿರ್ವಹಣೆ ಮಾಡತೊಡಗಿದವು. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌, ಸ್ನ್ಯಾಪ್‌ಚಾಟ್‌, ಯೂಟ್ಯೂಬ್‌ಗಳು ಸಹ ರೈತರಿಗೆ ಮಾಹಿತಿ ಬಟವಾಡೆ ಮಾಡುವ ಸಾಧನಗಳಾದವು. ‘ಎದುರಿನ ಬಣ ಸುಳ್ಳು ಸಂಕಥನಗಳನ್ನು ಕಟ್ಟಿ ಹರಿಬಿಡುತ್ತಿರುವಾಗ ನಾವು ಸುಮ್ಮನೆ ಕೈಕಟ್ಟಿ ಕುಳಿತಿರಲು ಸಾಧ್ಯವಿರಲಿಲ್ಲ. ‘ವರ್ಚುವಲ್‌ ಯುದ್ಧಭೂಮಿ’ಯಲ್ಲಿ ಡಿಜಿಟಲ್‌ ಮೀಡಿಯಾ ಮೂಲಕವೇ ನಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕಿತ್ತು. ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದೆವು’ ಎನ್ನುತ್ತಾರೆ ರೈತ ಸಂಘಟನೆಗಳ ಐ.ಟಿ ವಿಭಾಗದ ಮುಖ್ಯಸ್ಥ ಬಲ್ಜಿತ್‌ ಸಿಂಗ್‌ ಸಂಧು.

ಪಂಜಾಬ್‌ ಹಾಗೂ ಹರಿಯಾಣದ ರೈತರ ಮಕ್ಕಳು #SpeakUpForFarmers ಹ್ಯಾಷ್‌ಟ್ಯಾಗ್‌ ಮೂಲಕ ಪ್ರತಿಭಟನೆಗೆ ದೊಡ್ಡ ಬಲವನ್ನೇ ತುಂಬಿದರು. ಪ್ರತಿಭಟನೆಗೆ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಬೆಂಬಲದ ದೊಡ್ಡ ಪ್ರವಾಹವೇ ಹರಿದುಬಂತು. ರೈತ ಸಂಘಟನೆಗಳ ಐ.ಟಿ ವಿಭಾಗದ ಅಡಿಯಲ್ಲಿ ಡಿಜಿಟಲ್‌ ಪಡೆಯೊಂದು ಸೃಷ್ಟಿಯಾಯಿತು. ಸುಮಾರು 50 ಜನ ಯುವಕರ ತಂಡ ಪ್ರತಿಭಟನೆಗಾಗಿಯೇ ತೆರೆಯಲಾದ ಸೋಶಿಯಲ್‌ ಮೀಡಿಯಾ ಖಾತೆಗಳನ್ನು ಹ್ಯಾಂಡಲ್‌ ಮಾಡತೊಡಗಿತು. ಕ್ಷಣ ಕ್ಷಣದ ಮಾಹಿತಿಯನ್ನೂ ರೈತರಿಗೆ ನೀಡತೊಡಗಿತು. ಅಷ್ಟೇ ಅಲ್ಲ, ಕಿಸಾನ್‌ ಏಕತಾ ಮೋರ್ಚಾದಿಂದ ಯೂಟ್ಯೂಬ್‌ ಚಾನೆಲ್‌ಅನ್ನೂ ಆರಂಭಿಸಲಾಯಿತು. ‘ನಮ್ಮ ಎಲ್ಲ ಜಾಲತಾಣಗಳ ಸದಸ್ಯರನ್ನು ಒಟ್ಟುಗೂಡಿಸಿದರೆ ಅವರ ಸಂಖ್ಯೆಯೀಗ 1.80 ಕೋಟಿಯನ್ನು ತಲುಪುತ್ತದೆ, ಗೊತ್ತಾ’ ಸಂಧು ಹೆಮ್ಮೆಯಿಂದ ಕೇಳುತ್ತಾರೆ. ರೈತರ ಪ್ರತಿಭಟನೆ ಇಷ್ಟೊಂದು ಸುದೀರ್ಘ ಅವಧಿಯಿಂದ ನಡೆಯುತ್ತಿರುವುದರ ಹಿಂದೆ ಸೋಶಿಯಲ್‌ ಮೀಡಿಯಾ ಕೂಡ ಇಂಧನಶಕ್ತಿಯಾಗಿ ಕೆಲಸಮಾಡುತ್ತಿದೆ.

ಅಮೆರಿಕದ ಪಾಪ್‌ ಗಾಯಕಿ ರಿಯಾನಾ ಭಾರತೀಯ ರೈತರನ್ನು ಬೆಂಬಲಿಸಿ ಮಾಡಿದ ಕೇವಲ ಆರು ಪದಗಳ ಒಂದು ಟ್ವೀಟ್‌ ಸುಂಟರಗಾಳಿಯನ್ನೇ ಎಬ್ಬಿಸಿಬಿಟ್ಟಿತಲ್ಲ? ದೇಶದ ಸಾರ್ವಭೌಮತ್ವವೇ ಅಪಾಯದಲ್ಲಿದೆ ಎಂದು ಸರ್ಕಾರ ಆಗ ಅಲವತ್ತುಕೊಂಡಿತು. ‘ಡಿಜಿಟಲ್‌ ರಣರಂಗ’ದಲ್ಲಿ ರಿಯಾನಾಳ ಹತ್ತು ಕೋಟಿ ಟ್ವಿಟರ್‌ ಫಾಲೋವರ್‌ಗಳನ್ನು ಸರಿಗಟ್ಟುವಂತೆ ಅಷ್ಟೇ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿದ ಭಾರತೀಯ ಸೆಲೆಬ್ರಿಟಿಗಳನ್ನು ಒಟ್ಟುಗೂಡಿಸಿ, ಪ್ರತಿರೋಧದ ಬಾಣವನ್ನೂ ಹೂಡಲಾಯಿತು. ಜಗತ್ತಿನ ಗಮನಸೆಳೆದ ಕಿಶೋರಿ ಗ್ರೇತಾ ಬೇರೆ ರೈತರನ್ನು ಬೆಂಬಲಿಸಿ ಟ್ವೀಟ್‌ ಮಾಡಿದಳು. ಹಲವು ದೇಶಗಳ ಅಸಂಖ್ಯ ಜಾಲತಾಣಿಗರು ರೈತರಿಗೆ ‘ಜೈ’ ಎಂಬ ಸಂದೇಶವನ್ನು ಪೋಸ್ಟ್‌ ಮಾಡಿದರು. ಸರ್ಕಾರಕ್ಕೆ ದಿಕ್ಕು ತೋಚದಂತಾಗಿ ದೆಹಲಿ ಗಡಿಭಾಗದಲ್ಲಿ ಕೆಲ ದಿನಗಳವರೆಗೆ ಅಂತರ್ಜಾಲ ಸೌಲಭ್ಯವನ್ನೇ ಸ್ಥಗಿತಗೊಳಿಸಿಬಿಟ್ಟಿತು.

ರೈತರ ಪ್ರತಿಭಟನೆಯ ಬೆಂಬಲಕ್ಕೆ ‘ಟೂಲ್‌ ಕಿಟ್‌’ ರೂಪಿಸಿ, ಅದನ್ನು ಗ್ರೇತಾ ಅವರಂತಹ ಚಳವಳಿಗಾರರ ಜತೆ ಹಂಚಿಕೊಂಡ ಆರೋಪ ಹೊತ್ತು ದೇಶದ್ರೋಹ ಪ್ರಕರಣವನ್ನೂ ಎದುರಿಸುತ್ತಿರುವವರು ಪರಿಸರ ಕಾರ್ಯಕರ್ತೆ ದಿಶಾ ರವಿ. ದೆಹಲಿ ಪೊಲೀಸರು ಅವರನ್ನು ಬೆಂಗಳೂರಿನಲ್ಲಿ ಬಂಧಿಸಿದರು. ಕೋರ್ಟ್‌ ಅವರನ್ನು ಬಿಡುಗಡೆ ಮಾಡಿತು. ‘ಫ್ರೈಡೇ ಫಾರ್‌ ಫ್ಯೂಚರ್‌’ ಸಂಸ್ಥೆಯ ಮೂಲಕ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಜಾಗೃತಿ ಅಭಿಯಾನವನ್ನೂ ನಡೆಸಿದವರು ಆಕೆ. ದೇಶದ್ರೋಹದ ಅಪರಾಧವೆಂದರೆ ಏನು ಎಂಬುದನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 (ಎ) ವ್ಯಾಖ್ಯಾನಿಸುತ್ತದೆ. ಆದರೆ, ಈ ಸೆಕ್ಷನ್‌ ಅನ್ನು ಅಕ್ಷರಶಃ ಅರ್ಥೈಸಿ, ಕ್ರಮ ಕೈಗೊಳ್ಳುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ಹೇಳಿದೆ. ದಿಶಾ ಅವರು ಹಂಚಿಕೊಂಡಿದ್ದರು ಎಂದು ಹೇಳಲಾಗಿರುವ ಟೂಲ್‌ಕಿಟ್‌ನಲ್ಲಿ ಹಿಂಸೆಗೆ ಕರೆ ನೀಡುವ ಯಾವ ಅಂಶವೂ ಇಲ್ಲ ಎಂದು ಸಹ ಕೋರ್ಟ್‌ ಸ್ಪಷ್ಟಪಡಿಸಿದೆ. ಹೀಗಿದ್ದೂ ಈ ಕಾರ್ಯಕರ್ತೆ, ಸೋಶಿಯಲ್‌ ಮೀಡಿಯಾದ ಚಟುವಟಿಕೆಗಳಿಗಾಗಿ ದೇಶದ್ರೋಹದ ಆರೋಪವನ್ನು ಹೊರುವಂತಾಗಿದೆ.

ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ವಿರೋಧಿಸಿ ದೇಶದಾದ್ಯಂತ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ, ಅತ್ಯಂತ ವ್ಯವಸ್ಥಿತವಾಗಿ ಸಾವಿರಾರು ಪ್ರತಿಭಟನೆಗಳು ರೂಪುಗೊಳ್ಳಲು ಕಾರಣವಾದ ಸಾಧನವಾದರೂ ಯಾವುದೆಂದು ಕೆದಕಿದರೆ ಸಿಗುವ ಉತ್ತರ ಕೂಡ ಸೋಶಿಯಲ್‌ ಮೀಡಿಯಾ! ಹೋರಾಟದಲ್ಲಿ ಧುಮುಕಿದವರಿಗೆ ಎಲ್ಲಿ ಮತ್ತು ಯಾವಾಗ ಒಟ್ಟುಗೂಡಬೇಕು ಎಂಬ ಮಾಹಿತಿಯನ್ನು ‘ಆನ್‌ಲೈನ್‌ ವಾರಿಯರ್‌’ಗಳು ನಿರಂತರವಾಗಿ ಪೋಸ್ಟ್‌ ಮಾಡುತ್ತಿದ್ದರು. #SOSJAMIA #SOSAMU #SOSJNU #SOS ಮೊದಲಾದ ಹ್ಯಾಷ್‌ಟ್ಯಾಗ್‌ಗಳು ಆ ಸಂದರ್ಭದಲ್ಲಿ ಟ್ರೆಂಡಿಂಗ್‌ನಲ್ಲಿದ್ದವು. ಎಲ್ಲೆಲ್ಲಿ, ಏನೇನು ನಡೆಯುತ್ತಿದೆ ಎಂಬುದರ ಮಾಹಿತಿ ಕ್ಷಣಮಾತ್ರದಲ್ಲಿ ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ರವಾನೆಯಾಗುತ್ತಿತ್ತು.

‘ಮಸೂದೆ ಏನು ಹೇಳುತ್ತದೆ?’, ‘ಮುಂದೆ ನಡೆಯಲಿರುವ ಪ್ರತಿಭಟನೆಗಳು’ ಇವೇ ಮೊದಲಾದ ಪೋಸ್ಟ್‌ಗಳು, ‘ಪ್ರತಿಭಟನಾ ಸ್ಥಳದಿಂದ ನೇರಪ್ರಸಾರ’ದ ನೋಟಗಳು ಜನರಲ್ಲಿ ಜಾಗೃತಿಯನ್ನು ಉಂಟು ಮಾಡಿದ್ದಲ್ಲದೆ, ಮಸೂದೆ ವಿರುದ್ಧದ ನಿಲುವು ಹರಳು ಗಟ್ಟುವಂತೆಯೂ ಮಾಡಿದವು. ಪೊಲೀಸರ ಕ್ರೌರ್ಯದ ಕುರಿತು ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಮೌನ ವಹಿಸಿದರೆ, ಜಾಲತಾಣಗಳು ಸತ್ಯದ ‘ದರ್ಶನ’ವನ್ನು ಮಾಡಿಸಿದವು. ಮಹಾಪೂರದಂತೆ ಹರಿದುಬರುತ್ತಿದ್ದ ವಿಡಿಯೊಗಳು ಹಾಗೂ ಫೋಟೊಗಳಿಂದಾಗಿ ಆ ತಾಣಗಳು ಸದಾ ದಟ್ಟಣೆಯಿಂದ ಕೂಡಿರುತ್ತಿದ್ದವು. ಅದು ದೆಹಲಿ ಪೊಲೀಸ್‌ ಮುಖ್ಯ ಕಚೇರಿ ಇಲ್ಲವೆ ಜೆಎನ್‌ಯು ಮುಂಭಾಗವೇ ಇರಬಹುದು ಅಥವಾ ಆಗಸ್ಟ್‌ ಕ್ರಾಂತಿ ಮೈದಾನವೇ ಆಗಿರಬಹುದು, ಕೆಲವೇ ಗಂಟೆಗಳಲ್ಲಿ ಆ ಸ್ಥಳಗಳಲ್ಲಿ ಬೃಹತ್‌ ಪ್ರತಿಭಟನೆಗಳನ್ನು ನಡೆಸಲು ಸಂಘಟಕರಿಗೆ ಸಾಧ್ಯವಾಗುತ್ತಿದ್ದುದು ಇಂತಹ ಕ್ರಿಯಾಶೀಲ ಸೋಶಿಯಲ್‌ ಮೀಡಿಯಾದ ಬಲದಿಂದ. ದೇಶದಾದ್ಯಂತ ಸಿಎಬಿ ವಿರುದ್ಧ ಹೋರಾಟದ ಕಿಚ್ಚು ಹರಡಲು ಈ ಜಾಲತಾಣಗಳೇ ನೆರವಿಗೆ ಬಂದಿರುವುದು ಇದೀಗ ಚಾರಿತ್ರಿಕ ಸಂಗತಿ.

ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ 2011ರಲ್ಲಿ ಆಂದೋಲನ ನಡೆಸಿದಾಗ ಅದಕ್ಕೆ ದೇಶದಾದ್ಯಂತ ಕ್ಷಿಪ್ರಗತಿಯಲ್ಲಿ ಬೆಂಬಲ ಸಿಗುವಂತೆ ಮಾಡಿದ್ದು ಕೂಡ ಸೋಶಿಯಲ್‌ ಮೀಡಿಯಾವೇ. ಟ್ವಿಟರ್‌ ಬಂದು ಆಗಿನ್ನೂ ಹೆಚ್ಚು ವರ್ಷಗಳು ಆಗಿರಲಿಲ್ಲ. ಹ್ಯಾಷ್‌ಟ್ಯಾಗ್‌ ಮೂಲಕ ಈ ಪ್ರತಿಭಟನೆಯ ನಿತ್ಯದ ಆಗುಹೋಗುಗಳ ಮಾಹಿತಿ ದೇಶದಾದ್ಯಂತ ತಲುಪಲು ಜಾಲತಾಣಗಳೇ ಕಾರಣವಾದವು. ಡಿಜಿಟಲ್‌ ಮಾಧ್ಯಮದ ಬೆಂಬಲದೊಂದಿಗೆ ದೇಶದಲ್ಲಿ ನಡೆದ ಮೊದಲ ಯಶಸ್ವಿ ಪ್ರತಿಭಟನೆ ಎಂದು ‘ಅಣ್ಣಾ ಆಂದೋಲನ’ ಚರಿತ್ರೆಯ ಪುಟದೊಳಗೆ ದಾಖಲಾಯಿತು.

ಸೋಶಿಯಲ್‌ ಮೀಡಿಯಾದ ‘ಬಲ’ವನ್ನು ಬೆನ್ನಿಗೆ ಕಟ್ಟಿಕೊಂಡ ಪ್ರತಿಭಟನೆಗಳು ಎಂತಹ ಯಶಸ್ಸನ್ನು ಕಾಣಬಲ್ಲವು ಎಂಬುದಕ್ಕೆ 2010ರ ದಶಕದಲ್ಲಿ ನಡೆದ ‘ಅರಬ್‌ ದಂಗೆ’ಯೇ ಅತ್ಯುತ್ತಮ ಉದಾಹರಣೆ. ಅರಬ್‌ ರಾಷ್ಟ್ರಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರದ ವಿರುದ್ಧ, ಅಮಾನುಷ ಕ್ರೌರ್ಯದ ವಿರುದ್ಧ, ಸ್ವಜನಪಕ್ಷಪಾತದ ವಿರುದ್ಧ, ತಾಂಡವವಾಡುತ್ತಿದ್ದ ನಿರುದ್ಯೋಗ ಸಮಸ್ಯೆಯ ವಿರುದ್ಧ ಎದ್ದ ದಂಗೆಯ ತೀವ್ರತೆ ಹೇಗಿತ್ತೆಂದರೆ ಟುನೇಶಿಯಾದ ಅಧ್ಯಕ್ಷನಾಗಿದ್ದ ಬೆನ್‌ ಅಲಿ, ಲಿಬಿಯಾದ ಅಧ್ಯಕ್ಷನಾಗಿದ್ದ ಕರ್ನಲ್‌ ಗಡಾಫಿ, ಈಜಿಪ್ಟ್‌ ಅಧ್ಯಕ್ಷನಾಗಿದ್ದ ಮಹಮ್ಮದ್‌ ಹೋಸ್ನಿ ಅಲ್‌ ಸೈಯದ್‌ ಮುಬಾರಕ್‌, ಯಮನ್‌ ಅಧ್ಯಕ್ಷನಾಗಿದ್ದ ಅಲಿ ಅಬ್ದುಲ್ಲಾ ಅವರನ್ನೆಲ್ಲ ಆ ದಂಗೆ ಅನಾಮತ್ತಾಗಿ ಅಧಿಕಾರದ ಗದ್ದುಗೆಯಿಂದ ಕಿತ್ತು ಕಸದಬುಟ್ಟಿಗೆ ಎಸೆದುಬಿಟ್ಟಿತು.

ಶಕ್ತಿಶಾಲಿ ನಾಯಕರನ್ನೆಲ್ಲ ಮಣ್ಣು ಮುಕ್ಕಿಸಿದ ಈ ಸರಣಿ ಪ್ರತಿಭಟನೆಗಳ ಹಿಂದೆನಿಂತು ಕೆಲಸ ಮಾಡಿದ್ದುದು ಜಾಲತಾಣಗಳಲ್ಲಿ ಎಡೆಬಿಡದೆ ಹರಿದಾಡಿದ ಸಂದೇಶಗಳು. ಅದರಲ್ಲೂ ಟುನೇಶಿಯಾದ ಆರಂಭಿಕ ಪ್ರತಿಭಟನೆಗೆ ಕಿಡಿ ಹಚ್ಚಿದ್ದು, ಗೆಳೆಯರಿಬ್ಬರು ಹೋಟೆಲ್‌ನಲ್ಲಿ ಚಹಾ ಹೀರುತ್ತಾ ಮಾಡಿದ ಟ್ವೀಟ್‌! ಭೌಗೋಳಿಕವಾಗಿ ಭಿನ್ನ ನಕ್ಷೆಯಲ್ಲಿದ್ದರೂ ಸೋಶಿಯಲ್‌ ಮೀಡಿಯಾದಿಂದ ಒಂದಾಗಿದ್ದ ಅರಬ್‌ ಜನ ತಮ್ಮ ತಾಕತ್ತು ಏನೆಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದರು.

ಕಳೆದ ವರ್ಷ ಅಮೆರಿಕದಲ್ಲಿ ಜಾರ್ಜ್‌ ಫ್ಲಾಯ್ಡ್‌ ಎಂಬ ಕಪ್ಪುವರ್ಣೀಯ ವ್ಯಕ್ತಿಯ ಕತ್ತಿನ ಮೇಲೆ ತನ್ನ ಕಾಲನ್ನು ಒತ್ತಿ ಹಿಡಿದಿದ್ದ ಡೆರೆಕ್‌ ಚೌವಿನ್‌ ಎಂಬ ಪೊಲೀಸ್‌ ಅಧಿಕಾರಿ, ಆ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ. ‘ನನ್ನಿಂದ ಉಸಿರಾಡಲು ಆಗುತ್ತಿಲ್ಲ’ ಎನ್ನುತ್ತಾ, ಫ್ಲಾಯ್ಡ್‌ ಸಾವಿನ ತೆಕ್ಕೆಗೆ ಜಾರುತ್ತಿದ್ದ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ದಾರಿಹೋಕನೊಬ್ಬ ಸೋಶಿಯಲ್‌ ಮೀಡಿಯಾದಲ್ಲಿ ಅದನ್ನು ಪೋಸ್ಟ್‌ ಮಾಡಿದ್ದ. ಮನ ಕಲಕುವ ಆ ದೃಶ್ಯ ಕ್ಷಣಾರ್ಧದಲ್ಲಿ ಇಡೀ ಅಮೆರಿಕದ ತುಂಬಾ ಹರಿದಾಡಿತು. ಆಕ್ರೋಶ ಭುಗಿಲೆದ್ದಿತು. ದೇಶದಾದ್ಯಂತ ಭಾರಿ ಪ್ರತಿಭಟನೆಗಳು ನಡೆದವು. ಆ ಪ್ರತಿಭಟನೆಗಳು ಹಿಂಸಾತ್ಮಕ ರೂಪವನ್ನೂ ಪಡೆದವು. ಕೊನೆಗೆ ಚೌವಿನ್‌ಗೆ ಶಿಕ್ಷೆಯಾಯಿತು.

ಇಪ್ಪತ್ತನೇ ಶತಮಾನದ ಕೊನೆಯ ದಶಕದವರೆಗೆ ಪ್ರತಿಭಟನೆಗಳನ್ನು ಸಂಘಟಿಸುವುದು ಎಷ್ಟೊಂದು ಕಷ್ಟವಿತ್ತು. ಚಳವಳಿಗಾರರಂತೂ ಅದನ್ನು ಕಥೆ ಮಾಡಿ ಹೇಳುತ್ತಾರೆ. ‘ಬೆಂಗಳೂರು ಚಲೋ’ ಎಂದೋ ‘ದೆಹಲಿ ಚಲೋ’ ಎಂದೋ ರ‍್ಯಾಲಿಗಳಿಗೆ ಸಂಬಂಧಿಸಿದ ವಿವರವನ್ನು ರಾತ್ರಿ ನಿದ್ರೆಗೆಟ್ಟು ಗೋಡೆಗಳ ಮೇಲೆ ಬರೆಯಬೇಕಿತ್ತು. ಕರಪತ್ರ ಹಂಚಬೇಕಿತ್ತು. ಗಲ್ಲಿ, ಗಲ್ಲಿಯಲ್ಲಿ ಸುತ್ತಾಡಿ ಜನಕ್ಕೆ ಮಾಹಿತಿಯನ್ನೂ ನೀಡಬೇಕಿತ್ತು. ಹಿಂದೆ ಸಿದ್ಧತೆಗೆ ಬೇಕಾಗಿದ್ದ ಕೆಲವು ವಾರಗಳ ಸಮಯವನ್ನು ಸೋಶಿಯಲ್‌ ಮೀಡಿಯಾ ಈಗ ಕ್ಷಣಾರ್ಧಕ್ಕೆ ಇಳಿಸಿಬಿಟ್ಟಿದೆ. ಅಮೆರಿಕದಲ್ಲಿ 1963ರಲ್ಲಿ ನಾಗರಿಕ ಹಕ್ಕುಗಳಿಗಾಗಿ ನಡೆದ ಬೃಹತ್‌ ಹೋರಾಟದ ತಯಾರಿಗಾಗಿ ಸಂಘಟಕರಿಗೆ ಆರು ತಿಂಗಳು ಬೇಕಾಯಿತಂತೆ. ಕಳೆದ ವರ್ಷ, ಅಲ್ಲಿ ಫ್ಲಾಯ್ಡ್‌ ಕೊಲೆಯಾದ ಮಾರನೆಯ ದಿನದಿಂದಲೇ ದೇಶದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ ಪ್ರತಿಭಟನೆಯನ್ನು ಕಣ್ಮುಂದೆ ತಂದುಕೊಂಡರೆ ಸೋಶಿಯಲ್‌ ಮೀಡಿಯಾದ ಪ್ರಭಾವ ಎಂತಹದ್ದು ಎನ್ನುವುದು ಅರ್ಥವಾಗುತ್ತದೆ.

ಸಂಖ್ಯೆ ಚಿಕ್ಕದು, ಪರಿಣಾಮ ದೊಡ್ಡದು

ಕಳೆದ ಎರಡು ದಶಕಗಳ ಅವಧಿಯಲ್ಲಿ ಸೋಶಿಯಲ್‌ ಮೀಡಿಯಾ ಜಗತ್ತಿನಾದ್ಯಂತ ಪ್ರಬಲವಾಗಿ ಬೆಳೆದಿದೆ. ಅದರ ವೇದಿಕೆಗಳು ಹಲವಾರಿವೆ. ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಟ್ವಿಟರ್‌, ಇನ್‌ಸ್ಟಾಗ್ರಾಮ್‌, ಸ್ನ್ಯಾಪ್‌ ಚಾಟ್‌, ಸಿಗ್ನಲ್‌, ಕೂ ಮೊದಲಾದವು. ಸೋಶಿಯಲ್‌ ಮೀಡಿಯಾದ ಇಂತಹ ವೇದಿಕೆಗಳ ಬಹುಮುಖ್ಯ ಉದ್ದೇಶ ಲಾಭ ಮಾಡುವುದೇ ಆಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಖಾಸಗಿತನವನ್ನೂ ಗೌರವಿಸುವುದಾಗಿ ಹೇಳಿದರು ಸಹ ಪ್ರಭುತ್ವದ ಇಶಾರೆಯಂತೆ ಅವುಗಳು ನಡೆದುಕೊಳ್ಳುವುದೂ ಇದೆ. ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಇನ್ನಷ್ಟು–ಮತ್ತಷ್ಟು ಲಾಭ ಮಾಡುವ ಹಪಹಪಿಯಿಂದ ಸರ್ಕಾರಗಳ ಜತೆ ಕೈಜೋಡಿಸುವುದೂ ಇದೆ.

ವಾಟ್ಸ್‌ಆ್ಯಪ್‌ಗೆ ಬದಲಿಯಾಗಿ ಬಳಸಬಹುದಾದ ಮೆಸೇಜಿಂಗ್‌ ಆ್ಯಪ್‌ಗಳ ಪೈಕಿ ಟೆಲಿಗ್ರಾಮ್‌ ಕೂಡ ಒಂದು. ಇದು ಹಲವು ದೇಶಗಳಲ್ಲಿ ಪ್ರತಿರೋಧದ, ಜನತಂತ್ರದ ಸಾಧನವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಸರ್ವಾಧಿಕಾರಿಗಳ ಪಾಲಿನ ಕಣ್ಣ ಕಿಸುರಾಗಿದೆ. ಹಿಂಸೆಯ ದಮನಕಾರಿ ಕ್ರಮಗಳ ವಿರುದ್ಧ ಬೆಲಾರಸ್‌ನಲ್ಲಿ ಜನತಾಂತ್ರಿಕ ಆಂದೋಲನಗಳ ಕೊಂಡಿಯಂತೆ ಕೆಲಸ ಮಾಡಿದ ಶ್ರೇಯಸ್ಸು ಕೂಡ ಟೆಲಿಗ್ರಾಮ್‌ನದು. ಪ್ರಸ್ತುತ ಈ ಆ್ಯಪ್‌ ಅನ್ನು ಜಗತ್ತಿನಾದ್ಯಂತ 50 ಕೋಟಿಗೂ ಅಧಿಕ ಜನರು ಬಳಸುತ್ತಿದ್ದು, ಅತಿ ಹೆಚ್ಚು ಡೌನ್‌ಲೋಡ್‌ ಮಾಡಲಾದ ಹತ್ತು ಆ್ಯಪ್‌ಗಳ ಪೈಕಿ ಇದೂ ಒಂದು.

ಫೇಸ್‌ಬುಕ್ ಮತ್ತು ಟ್ವಿಟರ್ ಎರಡರ ಗುಣಲಕ್ಷಣಗಳು ಮತ್ತು ಅನುಕೂಲಗಳನ್ನು ಬೆಸೆದು ಟೆಲಿಗ್ರಾಮ್‌ಗೆ ಅಳವಡಿಸಲಾಗಿದ್ದು, ಜನರ ಮಾತುಕತೆಗಳು ಈ ತಾಣದಲ್ಲಿ ಪೂರ್ಣ ಸುರಕ್ಷಿತ ಮತ್ತು ಕಡು ಖಾಸಗಿಯೆಂದೂ ಹೇಳಲಾಗಿದೆ. ಜನಾಂದೋಲನಗಳ ಸಂಘಟನೆಗೆ ಪೂರಕ ಅನುಕೂಲಗಳನ್ನು ಸಹ ಈ ಸಂದೇಶವಾಹಕ ಹೊಂದಿದೆ ಎಂಬ ಹೆಗ್ಗಳಿಕೆಯನ್ನು ಗಿಟ್ಟಿಸಿದೆ.

ಟೆಲಿಗ್ರಾಮ್‌ನ ಮತ್ತೊಂದು ಅನುಕೂಲವೆಂದರೆ 2 ಜಿ.ಬಿ.ಯಷ್ಟು ದೊಡ್ಡ ಗಾತ್ರದ ಫೋಟೊ,ವಿಡಿಯೊ ಹಾಗೂ ಇತರೆ ಫೈಲ್‌ಗಳನ್ನು ಅದರ ಮೂಲಕ ಕಳಿಸಬಹುದು. ಟೆಲಿಗ್ರಾಮ್‌ ಒಂದು ಕ್ಲೌಡ್‌ ಬೇಸ್ಡ್‌ ಮೆಸೇಜಿಂಗ್‌ ಆ್ಯಪ್‌ ಆಗಿರುವುದೇ ಈ ಸಾಮರ್ಥ್ಯವಿರಲು ಕಾರಣ. ಇದೇ ಕಾರಣದಿಂದಾಗಿ ಸಂದೇಶಗಳನ್ನು ಹಲವು ಡಿವೈಸ್‌ಗಳಿಂದಲೂ ಓದಬಹುದು. ಅದೇ ವಾಟ್ಸ್‌ಆ್ಯಪ್‌ನಲ್ಲಾದರೆ ಗರಿಷ್ಠ 16 ಎಂ.ಬಿ ಗಾತ್ರದ ಫೈಲ್‌ಗಳನ್ನು ಮಾತ್ರ ಕಳುಹಿಸಲು ಸಾಧ್ಯ. ಫೈಲ್‌ಗಳನ್ನು ಕಳಿಸುವ ಸೌಲಭ್ಯದ ವಿಷಯದಲ್ಲಿ ಬೇರೆ ಯಾವ ಆ್ಯಪ್‌ ಕೂಡ ಟೆಲಿಗ್ರಾಮ್‌ನ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವ ವಿಡಿಯೊ ಅಥವಾ ಫೋಟೊ ಗಾತ್ರವು ಕಂಪ್ರೆಸ್‌ ಆಗಿ ಅದರ ಗುಣಮಟ್ಟ ಕಡಿಮೆಯಾಗುತ್ತದೆ. ಟೆಲಿಗ್ರಾಮ್‌ನಲ್ಲಿ ನಿಮಗೆ ಅಗತ್ಯವಿದ್ದರಷ್ಟೇ ಫೋಟೊ, ವಿಡಿಯೊ ಕಂಪ್ರೆಸ್‌ ಮಾಡಬಹುದು, ಇಲ್ಲವಾದಲ್ಲಿ ಉತ್ತಮ ಗುಣಮಟ್ಟದ ಫೈಲ್‌ಗಳನ್ನೇ ನೇರವಾಗಿ ಕಳುಹಿಸಬಹುದು.

ಇವೆಲ್ಲಕ್ಕಿಂತ ಮಿಗಿಲಾಗಿ ಲಕ್ಷಾಂತರ ಜನರನ್ನು ಏಕಕಾಲದಲ್ಲಿ ತಲುಪಲು ಟೆಲಿಗ್ರಾಮ್‌ನಲ್ಲಿ ಸಾಧ್ಯ. ಎರಡು ಲಕ್ಷ ಸದಸ್ಯರಿರುವ ಗ್ರೂಪ್‌ ಅನ್ನೂ ಯೂಟ್ಯೂಬ್‌ನಂತೆ ಚಾನೆಲ್‌ ಅನ್ನೂ ಇಲ್ಲಿ ರಚಿಸಲು ಸಾಧ್ಯವಿದೆ. ವಾಟ್ಸ್‌ಆ್ಯಪ್‌ನಲ್ಲಿ ಗರಿಷ್ಠ 256 ಸದಸ್ಯರಿರುವ ಗ್ರೂಪ್‌ ರಚಿಸಲಷ್ಟೇ ಸಾಧ್ಯವಿದೆ. ಇದರ ಜೊತೆಗೆ ವಾಟ್ಸ್‌ಆ್ಯಪ್‌ನಲ್ಲಿ ಯಾರಿಗಾದರೂ ಸಂದೇಶ ಕಳುಹಿಸಬೇಕು ಎಂದರೆ ಆ ವ್ಯಕ್ತಿಯ ಮೊಬೈಲ್‌ ನಂಬರ್‌ ಸಂದೇಶ ಕಳುಹಿಸುವವರ ಮೊಬೈಲ್‌ನಲ್ಲಿ ಇರಲೇಬೇಕು. ಆದರೆ ಟೆಲಿಗ್ರಾಮ್‌ನಲ್ಲಿ ಮೊಬೈಲ್‌ ಸಂಖ್ಯೆ ನೀಡದೆಯೇ ಕೇವಲ ಯೂಸರ್‌ನೇಮ್‌ ನೀಡಿ ಸಂದೇಶ ಸ್ವೀಕರಿಸಬಹುದು ಅಥವಾ ಗ್ರೂಪ್‌ಗೆ ಸೇರಿಕೊಳ್ಳಬಹುದು. ಫೇಸ್‌ಬುಕ್‌–ವಾಟ್ಸ್‌ಆ್ಯಪ್‌ನ ಬಳಕೆದಾರರು 300 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವುಗಳಿಗೆ ಹೋಲಿಸಿದರೆ ಟೆಲಿಗ್ರಾಮ್‌ನ ಸಂಖ್ಯೆ ಚಿಕ್ಕದು. ಆದರೆ, ಅದರ ಕಸರತ್ತು ದೊಡ್ಡದು.

ಹಾರುತ್ತಿದ್ದ ವಿಮಾನ ಇಳಿಸಿ ಹಿಡಿದರು!

ಬೆಲಾರಸ್‌ನಲ್ಲಿ ಇತ್ತೀಚೆಗೆ ಒಂದು ಬಲು ವಿಚಿತ್ರ ವಿದ್ಯಮಾನ ನಡೆಯಿತು. ಗ್ರೀಸ್‌ನ ಅಥೇನ್ಸ್‌ನಿಂದ ಲಿಥುವೇನಿಯಾದ ವಿಲ್ನಿಯಸ್‌ ನಗರಕ್ಕೆ ಹೊರಟಿದ್ದ ವಿಮಾನವನ್ನು ಬೆಲಾರಸ್‌ನ ಮಿನ್ಸ್ಕ್‌ ನಗರದಲ್ಲಿ ಬಲವಂತವಾಗಿ ಇಳಿಸಲಾಯಿತು. ಆ ವಿಮಾನವನ್ನು ಹೀಗೆ ಬಲವಂತವಾಗಿ ಕೆಳಗೆ ಇಳಿಸಲು ಕಾರಣ ಅದರಲ್ಲಿ ಪ್ರಯಾಣ ಮಾಡುತ್ತಿದ್ದ ಯುವ ಪತ್ರಕರ್ತ ರಮೊನ್‌ ಪ್ರಾಟೊಸೆವಿಕ್‌.

ಬೆಲಾರಸ್‌ನ ಸರ್ವಾಧಿಕಾರಿ ಅಲೆಕ್ಸಾಂಡರ್‌ ಲುಕಶೆಂಕೊ ಅವರ ಕಡು ವಿರೋಧಿಯಾದ, ಅವರ ಸರ್ಕಾರದ ಪ್ರಮಾದಗಳನ್ನು ಟೆಲಿಗ್ರಾಮ್‌ನ ನೆಕ್ಸ್ಟಾ ಜಾಲತಾಣದ ಮೂಲಕ ಜಗಜ್ಜಾಹೀರು ಮಾಡಿದ ಪ್ರಾಟೊಸೆವಿಕ್‌ ಅವರನ್ನು ಬಂಧಿಸಲು ಅಲ್ಲಿನ ಸರ್ಕಾರ ಹಾತೊರೆಯುತ್ತಿತ್ತು. ಅಥೇನ್ಸ್‌ನಿಂದ ಹೊರಟ ರೈನರ್‌ ವಿಮಾನದಲ್ಲಿ (ಮೇ 23) ಪ್ರಾಟೊಸೆವಿಕ್‌ ಪ್ರಯಾಣ ಮಾಡುತ್ತಿರುವ ಮಾಹಿತಿ ಪಡೆದ ಬೆಲಾರಸ್‌ ಸರ್ಕಾರ, ಆ ವಿಮಾನವು ತನ್ನ ಬಾಹ್ಯಾಕಾಶದಲ್ಲಿ ಪ್ರವೇಶಿಸುತ್ತಿದ್ದಂತೆಯೇ ‘ವಿಮಾನದಲ್ಲಿ ಬಾಂಬ್‌ ಇರುವ ಕುರಿತು ಕರೆ ಬಂದಿದ್ದು, ಮಿನ್ಸ್ಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕು’ ಎಂದು ಪೈಲಟ್‌ಗೆ ಸಂದೇಶ ರವಾನಿಸಿತು. ಬೆಲಾರಸ್‌ನ ಮಿಲಿಟರಿ ವಿಮಾನವೊಂದು ರೈನರ್‌ಅನ್ನು ಎಸ್ಕಾರ್ಟ್‌ ಮಾಡಿಕೊಂಡು ಮಿನ್ಸ್ಕ್‌ ನಿಲ್ದಾಣಕ್ಕೆ ಕರೆತಂದಿತು. ಆಗ ನಡೆದ ಪರಿಶೀಲನೆಯಲ್ಲಿ ವಿಮಾನದಲ್ಲಿ ಯಾವುದೇ ಬಾಂಬ್‌ ಪತ್ತೆ ಆಗಲಿಲ್ಲ. ಪ್ರಾಟೊಸೆವಿಕ್‌ ಮತ್ತು ಅವರ ಗೆಳತಿ ಸೋಫಿಯಾ ಸಪೇಗಾ ಇಬ್ಬರನ್ನೂ ಬೆಲಾರಸ್‌ ಪೊಲೀಸರು ಬಂಧಿಸಿದರು. ಈ ಬಂಧನಕ್ಕಾಗಿಯೇ ವಿಮಾನವನ್ನು ಕೆಳಗಿಳಿಸಲು ಬಾಂಬ್‌ ಕರೆಯ ನಾಟಕ ಆಡಲಾಗಿತ್ತು.

ಪ್ರಾಟೊಸೆವಿಕ್‌ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಭಯೋತ್ಪಾದನೆ ಕಾಯ್ದೆಗಳ ಅಡಿಯಲ್ಲೂ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಆರೋಪ ಸಾಬೀತಾದರೆ 15 ವರ್ಷಗಳ ಕಠಿಣ ಶಿಕ್ಷೆಯನ್ನು ಅವರು ಅನುಭವಿಸಬೇಕಾಗುತ್ತದೆ. ‘ನನಗೆ ಮರಣದಂಡನೆ ಕಟ್ಟಿಟ್ಟ ಬುತ್ತಿ’ ಎಂದು ಮಿನ್ಸ್ಕ್‌ನಲ್ಲಿ ವಿಮಾನದಿಂದ ಇಳಿಯುವಾಗ ಪ್ರಾಟೊಸೆವಿಕ್‌ ಹೇಳಿದ್ದನ್ನು ಸಹಪ್ರಯಾಣಿಕರು ಕೇಳಿಸಿಕೊಂಡಿದ್ದಾರೆ.

ಪ್ರಾಟೊಸೆವಿಕ್‌ 2020ರ ನವೆಂಬರ್‌ವರೆಗೆ ಟೆಲಿಗ್ರಾಮ್‌ನ ನೆಕ್ಸ್ಟಾ ಚಾನೆಲ್‌ನ ಸಂಪಾದಕನಾಗಿದ್ದರು. ಸುಮಾರು 20 ಲಕ್ಷ ಬಳಕೆದಾರರನ್ನು ಹೊಂದಿದ ಈ ಚಾನೆಲ್‌, ಹಲವು ಬೃಹತ್‌ ಪ್ರತಿಭಟನೆಗಳನ್ನು ಸಂಘಟಿಸಲು ಸಾಧನವಾಗಿತ್ತು. ಕಳೆದ ಆಗಸ್ಟ್‌ನಲ್ಲಿ ತಾನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವುದಾಗಿ ಲುಕಶೆಂಕೊ ಘೋಷಿಸಿಕೊಂಡಾಗಲೂ ಭಾರಿ ಪ್ರತಿಭಟನೆಗಳು ನಡೆದಿದ್ದವು. ನೆಕ್ಸ್ಟಾ ಇದಕ್ಕೆ ಕಾರಣವಾಗಿತ್ತು. ಸರ್ಕಾರದ ವಿರುದ್ಧದ ಮಾಹಿತಿಯನ್ನು ಕತ್ತರಿಸಿ ಹಾಕುವ ಬಲವಾದ ಸೆನ್ಸಾರ್‌ ವ್ಯವಸ್ಥೆ ಬೆಲಾರಸ್‌ನಲ್ಲಿ ಜಾರಿಯಲ್ಲಿದ್ದರೂ ಅಂತಹ ಕೋಟೆಯನ್ನೇ ಭೇದಿಸಿಕೊಂಡು ಮಾಹಿತಿಯನ್ನು ಜಾಲತಾಣಗಳಿಗೆ ನುಸುಳಿಸುವ ಕೌಶಲವನ್ನು ಈ ಚಾನೆಲ್‌ ಸಿದ್ಧಿಸಿಕೊಂಡಿತ್ತು.

ಕಾಲೇಜು ದಿನಗಳಿಂದಲೂ ಪ್ರಾಟೊಸೆವಿಕ್‌ ಸರ್ಕಾರದ ವಿರುದ್ಧ ನಿಲುವನ್ನು ತಳೆಯುತ್ತಲೇ ಬಂದವರು. ಹಲವು ಪ್ರತಿಭಟನೆಗಳಲ್ಲೂ ಅವರು ಪಾಲ್ಗೊಂಡಿದ್ದರು. ಬೆಲಾರಸ್‌ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ಪ್ರಾಟೊಸೆವಿಕ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡ ತಪ್ಪಿಗಾಗಿ ವಿಶ್ವವಿದ್ಯಾಲಯದಿಂದ ಹೊರದಬ್ಬಿಸಿಕೊಳ್ಳಬೇಕಾಯಿತು. ಉಗ್ರ ರಾಷ್ಟ್ರವಾದಿ ಅಜೋವ್‌ ಸಂಘಟನೆಯೊಂದಿಗೂ ಅವರು ಗುರ್ತಿಸಿಕೊಂಡಿದ್ದರು. ಪತ್ರಕರ್ತನಾಗಿ ಮಾಡಿದ ವರದಿಗಳಿಂದ ರೊಚ್ಚಿಗೆದ್ದ ಸರ್ಕಾರ ಅವರ ಬೆನ್ನಿಗೆ ಬಿದ್ದಾಗ ಪೋಲೆಂಡ್‌ಗೆ ತಮ್ಮ ವಾಸ್ತವ್ಯವನ್ನು ಬದಲಿಸಿದ್ದರು. ಅಲ್ಲಿನ ಪೌರತ್ವಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಮಿಲಿಟರಿ ಅಧಿಕಾರಿಯಾಗಿ ನಿವೃತ್ತವಾಗಿರುವ ಅವರ ತಂದೆ ಡಿಮಿಟ್ರಿ ಪ್ರಾಟೊಸೆವಿಕ್‌ ಸಹ ಸರ್ಕಾರದ ಕಿರುಕುಳ ಹೆಚ್ಚಾದಾಗ ತಮ್ಮ ಪತ್ನಿಯೊಂದಿಗೆ ಪೋಲೆಂಡ್‌ಗೆ ತಮ್ಮ ವಾಸವನ್ನು ಬದಲಿಸಿದ್ದರು.

ವಿಮಾನವನ್ನು ಇಳಿಸಿ ಪತ್ರಕರ್ತನನ್ನು ಬಂಧಿಸಿದ ಬೆಲಾರಸ್‌ನ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಯುರೋಪ್‌ ಒಕ್ಕೂಟ ‘ಇದು ಸರ್ಕಾರಿ ಪ್ರಾಯೋಜಿತ ಹೈಜಾಕ್‌’ ಎಂದು ಕಟು ಶಬ್ದಗಳಲ್ಲಿ ಹೇಳಿದೆ. ಬೆಲಾರಸ್‌ ಮೇಲೆ ನಿರ್ಬಂಧ ಹೇರುವ ಮಾತುಗಳನ್ನೂ ಆಡಿದೆ.

ಕನ್ನಡದ ಕೆಲಸಕ್ಕೂ ಅಸ್ತ್ರವಾಗಿ ಬಳಕೆ

ರಾಜ್ಯದಲ್ಲೂ ಕನ್ನಡ ಭಾಷೆಗೆ ಅವಮಾನವಾದ ಸಂದರ್ಭದಲ್ಲಿ, ಹಿಂದಿ ಹೇರಿಕೆ ವಿರುದ್ಧ, ಉದ್ಯೋಗದಲ್ಲಿ ಕನ್ನಡಿಗರಿಗೆ ಮೋಸವಾದ ಸಂದರ್ಭಗಳಲ್ಲಿ ಹಲವು ಬಾರಿ ಸಾಮಾಜಿಕ ಜಾಲತಾಣಗಳನ್ನೇ ಕನ್ನಡಿಗರು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಮೆಟ್ರೊ ನಿಲ್ದಾಣಗಳಲ್ಲಿ ತ್ರಿಭಾಷಾ ಸೂತ್ರ ಜಾರಿಗೊಳಿಸುತ್ತಿರುವುದಕ್ಕೆ 2017ರಲ್ಲಿ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‌ಟ್ಯಾಗ್‌ಗಳಲ್ಲಿ ‘ನಮ್ಮಮೆಟ್ರೊಹಿಂದಿಬೇಡ’ ಅಭಿಯಾನ ನಡೆಸಲಾಗಿತ್ತು. ಕೊನೆಗೆ ಮೆಟ್ರೊದ ನಾಮಫಲಕಗಳಲ್ಲಿ ಹಿಂದಿ ಭಾಷೆಯಲ್ಲಿ ಬರೆದ ನಿಲ್ದಾಣಗಳ ಹೆಸರನ್ನು ತೆಗೆದುಹಾಕಲಾಗಿತ್ತು. ಇತ್ತೀಚೆಗೆ ಗೂಗಲ್‌ನಲ್ಲಿ ಭಾರತದ ಕೊಳಕು(ಅಗ್ಲಿಯೆಸ್ಟ್‌) ಭಾಷೆ ಯಾವುದು ಎಂಬ ಪ್ರಶ್ನೆಗೆ ‘ಕನ್ನಡ’ ಕನ್ನಡ ಎಂಬ ಉತ್ತರ ಬಂದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದ ಆಕ್ರೋಶಕ್ಕೆ ಸ್ವತಃ ಗೂಗಲ್‌ ಕನ್ನಡದಲ್ಲೇ ಲಿಖಿತ ಕ್ಷಮಾಪಣೆಯನ್ನು ಕೇಳಿತ್ತು. ಇದಾದ ಕೆಲವೇ ದಿನಗಳಲ್ಲಿ ಮಹಿಳೆಯರ ಒಳ ಉಡುಪಿನ ಮೇಲೆ ಕನ್ನಡ ಬಾವುಟದ ಬಣ್ಣ ಮತ್ತು ರಾಜ್ಯ ಲಾಂಛನ ಇದ್ದ ಚಿತ್ರದ ಜಾಹೀರಾತನ್ನು ಅಮೆಜಾನ್‌ ಇ ಕಾಮರ್ಸ್‌ ಕಂಪನಿಯು ಪ್ರಕಟಿಸಿತ್ತು. ಇದಕ್ಕೂ ಆಕ್ರೋಶ ವ್ಯಕ್ತವಾದಾಗ, ಕಂಪನಿಯು ತೆಗೆದುಹಾಕಿತ್ತು. ಎಂಆರ್‌ಪಿಎಲ್‌ನಲ್ಲಿ ಉದ್ಯೋಗದಲ್ಲಿ ಸ್ಥಳೀಯರಿಗೆ ಮೋಸವಾಗಿರುವುದರ ಕುರಿತೂ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮುಖಾಂತರ ಅಭಿಯಾನ ನಡೆಸಲಾಗುತ್ತಿದೆ.

ವಿಡಿಯೊ ನೋಡಿ

https://www.youtube.com/watch?v=QuG4ryZoMM8

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು