ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ತೃತ ಸಮಾಲೋಚನೆ ನಂತರವೇ ನೂತನ ಐಟಿ ನಿಯಮಗಳ ರಚನೆ: ಕೇಂದ್ರ ಸರ್ಕಾರ

ವಿಶ್ವಸಂಸ್ಥೆ ವರದಿಗಾರರಿಗೆ ಕೇಂದ್ರ ಸರ್ಕಾರದ ಉತ್ತರ
Last Updated 20 ಜೂನ್ 2021, 14:53 IST
ಅಕ್ಷರ ಗಾತ್ರ

ನವದೆಹಲಿ: ‘ನೂತನ ಐಟಿ ನಿಯಮಗಳನ್ನು ರೂಪಿಸಿ, ಅಂತಿಮಗೊಳಿಸುವ ಮುನ್ನ ಸಂಬಂಧಪಟ್ಟವರೊಂದಿಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯಗಳು ವಿಸ್ತೃತ ಸಮಾಲೋಚನೆ ನಡೆಸಿವೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.

ವಿಶ್ವಸಂಸ್ಥೆಯ ವಿಶೇಷ ವರದಿಗಾರರ ವಿಭಾಗದ ಪತ್ರಕ್ಕೆ ಉತ್ತರ ನೀಡಿರುವ ಕೇಂದ್ರ ಸರ್ಕಾರ, ನೂತನ ಐಟಿ ನಿಯಮಗಳನ್ನು ರೂಪಿಸುವುದಕ್ಕೂ ಮುನ್ನ ಕೈಗೊಂಡ ಚರ್ಚೆ, ಸಮಾಲೋಚನೆ ಹಾಗೂ ಕರಡು ಸಿದ್ಧಪಡಿಸಿದ ಪ್ರಕ್ರಿಯೆ ಕುರಿತು ವಿವರಿಸಿದೆ.

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಣಿತರು, ನಾಗರಿಕ ಸಮಾಜ, ಉದ್ದಿಮೆಗಳ ಪ್ರತಿನಿಧಿಗಳೊಂದಿಗೆ ಎರಡೂ ಸಚಿವಾಲಯಗಳು ಸಮಾಲೋಚನೆ ನಡೆಸಿವೆ. ಕರಡು ನಿಯಮಗಳನ್ನು ರಚಿಸುವುದಕ್ಕೂ ಮುನ್ನ ಸಾರ್ಜನಿಕರಿಂದ ಸಲಹೆ–ಸೂಚನೆಗಳನ್ನು ಸಹ ಆಹ್ವಾನಿಸಲಾಗಿತ್ತು’ ಎಂದು ಕೇಂದ್ರ ಸರ್ಕಾರ ವಿವರಿಸಿದೆ.

ವಿವಿಧ ವಲಯಗಳಿಂದ ಸ್ವೀಕರಿಸಿದ ಸಲಹೆ–ಸೂಚನೆಗಳ ಕುರಿತು ಅಂತರ್‌ ಸಚಿವಾಲಯದ ಸಭೆಯಲ್ಲಿ ಚರ್ಚೆ ನಡೆಸಿ, ನಂತರ ನಿಯಮಗಳನ್ನು ಅಂತಿಮಗೊಳಿಸಲಾಗಿದೆ ಎಂದು ಉತ್ತರಿಸಿರುವುದಾಗಿ ತಿಳಿಸಿದೆ.

‘ಸಾಮಾಜಿಕ ಮಾಧ್ಯಮವನ್ನು ಬಳಸುವ ಸಾಮಾನ್ಯ ನಾಗರಿಕನ ಸಬಲೀಕರಣವೂ ಮುಖ್ಯ. ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನಿಯಮಗಳನ್ನು ರಚಿಸಲಾಗಿದೆ. ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಹಂಚಿಕೊಳ್ಳುವ ವಿಷಯಗಳಿಂದ ಸಂಕಷ್ಟ/ಸಂಕಟ ಅನುಭವಿಸುವ ವ್ಯಕ್ತಿಯ ದೂರು–ಅಹವಾಲಿಗೆ ಪರಿಹಾರ ಸಿಗಬೇಕು ಎಂಬ ಉದ್ದೇಶವೂ ಇದೆ’ ಎಂದು ಸರ್ಕಾರ ಉತ್ತರಿಸಿದೆ.

‘ಉಗ್ರರ ನೇಮಕಾತಿ, ಅಶ್ಲೀಲ ಮಾಹಿತಿಯ ಪ್ರಸಾರ, ಸೌಹಾರ್ದಕ್ಕೆ ಧಕ್ಕೆ ತರುವ ವಿಷಯಗಳನ್ನು ಹಂಚಿಕೊಳ್ಳುವುದು, ಹಣಕಾಸು ವಂಚನೆ, ಹಿಂಸೆಗೆ ಪ್ರಚೋದನೆ, ಕಾನೂನು–ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೃತ್ಯಗಳಿಗೆ ಸಾಮಾಜಿಕ ಮಾಧ್ಯಮಗಳು, ಡಿಜಿಟಲ್‌ ವೇದಿಕೆಗಳು ಬಳಕೆಯಾಗುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವುದು ಅಗತ್ಯವಿತ್ತು’ ಎಂದು ಉತ್ತರಿಸುವ ಮೂಲಕ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.

‘ಬಳಕೆದಾರರ ಖಾಸಗಿತನದ ಹಕ್ಕನ್ನು ಭಾರತ ಸರ್ಕಾರ ಗೌರವಿಸುತ್ತದೆ. ಈ ಅಂಶವನ್ನು ಪರಿಗಣಿಸಿಯೇ ನೂತನ ನಿಯಮಗಳನ್ನು ರೂಪಿಸಲಾಗಿದೆ’ ಎಂದೂ ಹೇಳಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT