ಸೋಮವಾರ, ಸೆಪ್ಟೆಂಬರ್ 23, 2019
22 °C

ಮೆಟ್ರೊ ಎಲಿವೇಟರ್‌ನೊಳಗೆ ಯುವತಿ ಮೇಲೆ ಹಲ್ಲೆ; ಈ ಘಟನೆ ಭಾರತದಲ್ಲಿ ನಡೆದಿರುವುದಲ್ಲ

Published:
Updated:

ಬೆಂಗಳೂರು: ಮೆಟ್ರೊ ರೈಲು ಎಲಿವೇಟರ್‌ನೊಳಗೆ ಯುವತಿಯೊಬ್ಬಳ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ದೆಹಲಿ ಮೆಟ್ರೊ ರೈಲು ಎಲಿವೇಟರ್‌ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯರು ಒಬ್ಬಂಟಿಯಾಗಿರುವುದು ಸುರಕ್ಷಿತವಲ್ಲ ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೊ ಹರಿದಾಡಿದೆ. ಆದರೆ ಇದು ದೆಹಲಿ ಮೆಟ್ರೊ ರೈಲು ಎಲಿವೇಟರ್‌ನಲ್ಲಿ ನಡೆದ ಘಟನೆ ಅಲ್ಲ. ಈ ವಿಡಿಯೊ ಕೌಲಾಲಂಪುರ್, ಮಲೇಷ್ಯಾದ್ದು ಎಂದು ಎಂದು ಬೂಮ್‍ಲೈವ್ ಫ್ಯಾಕ್ಟ್ ಚೆಕ್ ಮಾಡಿ ನಿಜ ಸಂಗತಿಯನ್ನು ಬೆಳಕಿಗೆ ತಂದಿದೆ. 

ಫ್ಯಾಕ್ಟ್ ಚೆಕ್
 ಈ ವಿಡಿಯೊದ ಪ್ರಧಾನ ಫ್ರೇಮ್‍ಗಳನ್ನು ಗೂಗಲ್ ರಿವರ್ಸ್ ಇಮೇಜ್‍ನಲ್ಲಿ ಚೆಕ್ ಮಾಡಿದಾಗ ಇದು ಕೌಲಾಲಂಪುರ್‌ನದ್ದು ಎಂದು ತಿಳಿದು ಬಂದಿದೆ.

ಈ ಬಗ್ಗೆ ಮತ್ತಷ್ಟು ಸರ್ಚ್ ಮಾಡಿದಾಗ ಫೆ.16, 2019ರಂದು ಸಿಂಗಾಪುರ್‌ನ ಪತ್ರಿಕೆ ಸ್ಟ್ರೈಟ್ ಟೈಮ್ಸ್ ನಲ್ಲಿ ಪ್ರಕಟವಾದ ವರದಿಯಲ್ಲಿ ಈ ವಿಡಿಯೊದ ಸ್ಕ್ರೀನ್ ಶಾಟ್ ಬಳಸಲಾಗಿದೆ.

ಸ್ಟ್ರೈಟ್ ಟೈಮ್ಸ್ ವರದಿ ಪ್ರಕಾರ ಪ್ರೇಮಿಗಳ ದಿನದಂದು ಕೌಲಾಲಂಪುರ್‌ನ ತಮಮ್ ಮುತಿರಿಯಾ ಮೆಟ್ರೊ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯಲ್ಲಿ ಗಾಯಗೊಂಡ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೌಲಾಲಂಪುರ್ ನಗರ ಅಪರಾಧ ತನಿಖಾ ಇಲಾಖೆ ಮುಖ್ಯಸ್ಥ ರುಸ್ದಿ ಮೊಹಮ್ಮದ್ ಹೇಳಿದ್ದಾರೆ.

ಮಹಿಳೆ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಯನ್ನು ಫೆ. 19ರಂದು ಬಂಧಿಸಲಾಗಿದೆ ಎಂದು ಮಲೇಷ್ಯಾದ ಪತ್ರಿಕೆ ದಿ ಸ್ಟಾರ್ ವರದಿ ಮಾಡಿದೆ.

ಕೌಲಾಲಂಪುರ್ ಮೆಟ್ರೊ ನಿಲ್ದಾಣದಲ್ಲಿ ನಡೆದ ದರೋಡೆ ಎಂದು ಸಿಸಿಟಿವಿ ದೃಶ್ಯಾವಳಿಯ ಕೆಲವೊಂದು ಫ್ರೇಮ್‍ಗಳನ್ನು ಏಷ್ಯಾ ಟೈಮ್ಸ್ ಪ್ರಕಟಿಸಿದೆ.

ದೆಹಲಿ ಮೆಟ್ರೊ ನಿಲ್ದಾಣದಲ್ಲಿ ನಡೆದ ಘಟನೆ ಎಂದು ವಿಡಿಯೊ ಹರಿದಾಡುತ್ತಿರುವುದರಿಂದ ಹಲವಾರು ಮಂದಿ ದೆಹಲಿ ಮೆಟ್ರೊ ಟ್ವಿಟರ್ ಹ್ಯಾಂಡಲ್‍ಗೆ ಟ್ಯಾಗ್ ಮಾಡಿ ಸತ್ಯಾಸತ್ಯತೆ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ  ದೆಹಲಿ ಮೆಟ್ರೊ, ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿಲ್ಲ ಎಂದು ಉತ್ತರಿಸಿದೆ.

Post Comments (+)