ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಕೊಡುವ‘ಡೇರಿ’ ಇರುವೆ!

Last Updated 6 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಇರುವೆ ಎಂದರೆ ಹಾಲು, ಸಕ್ಕರೆಗೆ ಮುತ್ತುವ ಕೀಟ ಎಂದು ನೀವು ನಂಬಿದ್ದರೆ ಇದೋ ಹೊಸ ಸುದ್ದಿ. ಕೆಲವು ಇರುವೆಗಳು ಹಾಲು ಕರೆಯುತ್ತವೆಯಂತೆ. ಈ ಹಾಲು ಇರುವೆಗಳ ಮೊಟ್ಟೆಯ ಪಾಲನೆಗೆ ಅವಶ್ಯಕ ಎಂದು ಮೊನ್ನೆ ‘ನೇಚರ್’ ಪತ್ರಿಕೆಯಲ್ಲಿ ಅಮೆರಿಕೆಯ ರಾಕ್ಫೆಲರ್ ವಿಶ್ವವಿದ್ಯಾನಿಲಯದಲ್ಲಿ ಸಮಾಜ ಮತ್ತು ಸಾಮಾಜಿಕ ನಡವಳಿಕೆಗಳ ವಿಕಾಸವನ್ನು ಅಧ್ಯಯನ ಮಾಡುವ ಡೇನಿಯಲ್ ಕ್ರೊನಿಯೆ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ.

ಇರುವೆಗಳ ಜಗತ್ತು ಮನುಷ್ಯನದಕ್ಕಿಂತಲೂ ಜಟಿಲವಾದ ಸಮಾಜ. ಅಲ್ಲಿ ಸಾವಿರಾರು, ಕೆಲವೊಮ್ಮೆ ಲಕ್ಷಾಂತರ ಇರುವೆಗಳು ಒಟ್ಟಾಗಿ, ಒಂದೇ ಗೂಡಿನಲ್ಲಿ ಸಾಮರಸ್ಯದಿಂದ ವಾಸಿಸುತ್ತವೆ. ತಂತಮ್ಮ ಕರ್ತವ್ಯಗಳನ್ನು ಹಂಚಿಕೊಂಡು, ಚಾಚು ತಪ್ಪದೆ ಮಾಡುತ್ತವೆ. ಇವೆಲ್ಲವನ್ನೂ ಅವಕ್ಕೆ ಕಲಿಸುವವರು ಯಾರೂ ಇಲ್ಲ.

ಗೂಡಿನಲ್ಲಿ ಸದಾ ಬ್ಯುಸಿಯಾಗಿರುವಂತೆ ಕಾಣುವ ಸಹಸ್ರಾರು ಇರುವೆಗಳನ್ನು ವಿಜ್ಞಾನಿಗಳು ಕಾರ್ಮಿಕರು ಎನ್ನುತ್ತಾರೆ. ಇವುಗಳಿಗೆ ಗೂಡಿನಲ್ಲಿ ರಾಣಿ ಇಟ್ಟಿರುವ ಮೊಟ್ಟೆಗಳನ್ನು ಪಾಲಿಸಿ, ಪೋಷಿಸಿ, ರಕ್ಷಿಸಿ ಬೆಳೆಸುವುದಷ್ಟೆ ಕೆಲಸ. ಇದಕ್ಕಾಗಿ ಕೆಲವು ಇರುವೆಗಳಲ್ಲಿ ಆಹಾರವನ್ನು ಸಂಪಾದಿಸುವ ಕಾರ್ಮಿಕರು, ಗೂಡನ್ನು ರಕ್ಷಿಸಲು ಕಾದಾಡುವ ಸೈನಿಕರು, ಗೂಡು ಕಟ್ಟುವ ಇರುವೆಗಳಲ್ಲದೆ, ಗೂಡಿನೊಳಗೆ ಬೂಸುಗಳನ್ನು ಬೆಳೆಸಿ ಆಹಾರವನ್ನಾಗಿ ಕೊಡುವ ಕೃಷಿಕ ಇರುವೆಗಳೂ ಇರುತ್ತವೆ. ಇವೆಲ್ಲದರ ಜೊತೆಗೆ ಇದೀಗ ಹಾಲು ಕೊಡುವ ವರ್ಗವೂ ಇದೆ ಎನ್ನುತ್ತದೆ, ಈ ಸಂಶೋಧನೆ.

ಇರುವೆಗಳ ಈ ಹಾಲಿಗೂ ನಾವು ಬಳಸುವ ಹಸು ಇಲ್ಲವೇ ತಾಯಿಯ ಹಾಲಿಗೂ ವ್ಯತ್ಯಾಸವಿದೆ ಎನ್ನಿ. ವಿಜ್ಞಾನಿಗಳು ಹಾಲು ಎಂದು ಕರೆದಿದ್ದರೂ, ಇದು ದೇಹದಿಂದ ಒಸರುವ ಒಂದು ದ್ರವ. ಅದರಲ್ಲಿಯೂ ಮೊಟ್ಟೆ ಒಡೆದು, ಹುಳುವಾಗಿ, ಆ ಹುಳು ಬೆಳೆದು ಗೂಡು ಕಟ್ಟಿಕೊಂಡು ಇರುವ ಪ್ಯೂಪ ಎನ್ನುವ ಹಂತದಲ್ಲಿ ಒಸರುವ ದ್ರವ. ಈ ಪ್ಯೂಪ ಒಡೆದಾಗ ಹೊಸದೊಂದು ಇರುವೆ ಹೊರ ಬರುತ್ತದೆ. ಇದು ಥೇಟ್ ರೇಷ್ಮೆ ಹುಳುವಿನಲ್ಲಿ ನಡೆಯುವ ಬೆಳೆವಣಿಗೆಯಂತೆಯೇ. ಅದರಲ್ಲೇನು ವಿಶೇಷ ಎಂದಿರಾ?

ವಿಶೇಷವಿದೆ. ಕ್ರೊನಿಯೆ ತಂಡ ಮೊದಲಿಗೆ ‘ಊಸೇರಿಯಾ ಬಿರೋಯ್’ ಎನ್ನುವ ಇರುವೆಯಲ್ಲಿ ಈ ಬಗೆಯ ನಡವಳಿಕೆಯನ್ನು ಗುರುತಿಸಿತು. ಈ ಇರುವೆಗಳಲ್ಲಿ ಮೊಟ್ಟೆ ಒಡೆದು ಹೊರ ಬಂದ ಹುಳುಗಳು ಸ್ವಲ್ಪ ಕಾಲ ಬೆಳೆದು ನಂತರ ಗೂಡು ಕಟ್ಟಿ ಪ್ಯೂಪಗಳಾಗುತ್ತವೆ. ಹುಳುಗಳು ಬೆಳೆಯುವ ಹಂತದಲ್ಲಿ ಹಾವುಗಳು ಪೊರೆ ಬಿಡುವ ಹಾಗೆ, ಹಳೆಯ ಚರ್ಮವನ್ನು ಬಿಸಾಡಿ, ಹೊಸ ಚರ್ಮ ಹೊದೆಯುತ್ತವೆ. ಪ್ಯೂಪವಾಗುವುದಕ್ಕೂ ಮೊದಲು ಹೀಗೆಯೇ ಆಗುತ್ತದಷ್ಟೆ. ಆಗ ಹೊರಗೆಸೆದ ಹಳೆಯ ಚರ್ಮ ದ್ರವದಂತೆ ಅಂಟಂಟಾಗಿ ಉಳಿಯುತ್ತದೆ. ಪ್ಯೂಪಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡುತ್ತದೆ. ಇದು ಪ್ಯೂಪಗಳಿಗೆ ಉಪಕಾರಿಯಂತೂ ಅಲ್ಲ. ಸಾವಿರಾರು ಜೀವಿಗಳು ಒಟ್ಟಿಗಿರುವ ಕಡೆ ಇಂತಹ ಅಂಟು ವಿನಾಶಕಾರಿ.

ಊಸೇರಿಯಾ ಬಿರೋಯ್ ಇರುವೆಗಳಲ್ಲಿ ಕಾರ್ಮಿಕ ಇರುವೆಗಳು ಪ್ಯೂಪಗಳಿಗೆ ಅಂಟಿಕೊಂಡ ಈ ದ್ರವವನ್ನು ಹೆಕ್ಕಿ ನುಂಗುವುದನ್ನು ವಿಜ್ಞಾನಿಗಳು ಕಂಡಿದ್ದರು. ಇದು ಕೇವಲ ಗೂಡನ್ನು ಶುಚಿಗೊಳಿಸುವ ಕ್ರಮವಷ್ಟೆ ಎಂದು ಭಾವಿಸಿದ್ದರು. ಆದರೆ ಇದೀಗ ಕ್ರೊನಿಯೇ ತಂಡ ನಡೆಸಿರುವ ಅಧ್ಯಯನ, ಹಾಗೂ ಜತನದಿಂದ ಮಾಡಿದ ಪ್ರಯೋಗಗಳು ಇದು ಉದ್ದೇಶಪೂರ್ವಕವಾಗಿ ಸ್ರವಿಸಿದ ದ್ರವ. ಮುಂದಿನ ಪೀಳಿಗೆಗೆ ಆಹಾರವೊದಗಿಸುವ ಕ್ರಮ ಎಂದು ಸೂಚಿಸಿವೆ.

ಶುಚಿಗೊಳಿಸುವ ಇರುವೆಗಳು ಪ್ಯೂಪದಿಂದ ಒಸರಿದ ದ್ರವವನ್ನು ಸೇವಿಸಿದ ನಂತರ ಅದನ್ನು ಮೊಟ್ಟೆಯೊಡೆದ ಹೊರ ಬಂದಿರುವ ಹುಳುಗಳಿಗೆ ಉಣಿಸುತ್ತವಂತೆ. ಇದನ್ನು ಕ್ರೊನಿಯೇ ತಂಡ ಅರಿತಿದ್ದು ಹೀಗೆ. ಈ ತಂಡ ಪ್ಯೂಪಗಳನ್ನು ಗುಂಪಿನಿಂದ ಬೇರ್ಪಡಿಸಿ, ಒಬ್ಬಂಟಿಯಾಗಿ ಬೆಳೆಸಿತು. ಹೀಗೆ ಒಂಟಿಯಾಗಿರಿಸಿದ ಪ್ಯೂಪಗಳ ಮೈ ಕಪ್ಪಾಗುತ್ತಿತ್ತು. ತದನಂತರ ಐದು ದಿನಗಳ ಕಾಲ ಅವುಗಳ ಮೈ ಮೇಲೆ ಜೇನಿನಂತೆ ಮಿನುಗುವ ದ್ರವ ಸಂಗ್ರಹವಾಗುತ್ತಿತ್ತು. ಪ್ರತಿಯೊಂದು ಪ್ಯೂಪವೂ ಹೀಗೆ ಸುಮಾರು ಇಪ್ಪತ್ತೈದರಿಂದ ಮೂವತ್ತು ಮೈಕ್ರೊಲೀಟರು ದ್ರವವನ್ನು ಸುರಿಸುತ್ತಿತ್ತು. ಇರುವೆಯ ಗಾತ್ರಕ್ಕೆ ಹೋಲಿಸಿದರೆ ನಾವು ಬಕೆಟುಗಳಲ್ಲಿ ನೀರು ಸಂಗ್ರಹಿಸಿದ ಹಾಗೆ ಇತ್ತು ಈ ಪ್ರಮಾಣ. ಗೂಡಿನಲ್ಲಿ ಒಟ್ಟಿಗೇ ಇದ್ದ ಇದೇ ಕುಲದ ಪ್ಯೂಪಗಳು ಬಲು ಶುಚಿಯಾಗಿದ್ದುವು. ಅವುಗಳ ಮೈಮೇಲೆ ದ್ರವ ಇರಲೇ ಇಲ್ಲ. ಹಾಂ. ಈ ದ್ರವ ಬಲು ಪೌಷ್ಟಿಕ ವಸ್ತು. ಅದರಲ್ಲಿ ಪ್ರೊಟೀನು ಹಾಗೂ ಪೊರೆ ಬಿಡಲು ಪ್ರಚೋದಿಸುವ ಹಾರ್ಮೊನುಗಳು ಸಮೃದ್ಧಿಯಾಗಿವೆ ಎಂದು ಕ್ರೊನಿಯೇ ತಂಡ ಪತ್ತೆ ಮಾಡಿದೆ. ರೇಷ್ಮೆ ಹುಳು, ಚಿಟ್ಟೆಗಳ ಪ್ಯೂಪಗಳು ಬಿಸಾಡಿದ ಪೊರೆಗಳಲ್ಲಿಯೂ ಇದೇ ರಾಸಾಯನಿಕಗಳಿರುತ್ತವೆ ಎನ್ನುವುದು ಕಾಕತಾಳೀಯವಿರಲಿಕ್ಕಿಲ್ಲ.
ಇಷ್ಟೊಂದು ಪೌಷ್ಟಿಕವಾದ ದ್ರವ ಎಲ್ಲಿ ಹೋಯಿತು ಎನ್ನುವುದನ್ನು ಪತ್ತೆ ಮಾಡಲು ಪ್ರಯೋಗಗಳನ್ನು ನಡೆಸಿದರು. ಪ್ಯೂಪಗಳು ಕಪ್ಪಾಗುತ್ತಿದ್ದಂತೆಯೇ ಅವುಗಳ ಹೊಟ್ಟೆಯೊಳಗೆ ನೀಲಿ ದ್ರವವೊಂದನ್ನು ಚುಚ್ಚಿದರು. ಇಂತಹ ಪ್ಯೂಪಗಳಿಂದ ಒಸರಿದ ದ್ರವವೂ ನೀಲಿಯಾಗಿತ್ತು. ಅನಂತರ ಗಮನಿಸಿದಾಗ, ಪ್ಯೂಪಗಳ ಆರೈಕೆ ಮಾಡುತ್ತಿದ್ದ ಇರುವೆಗಳ ಹೊಟ್ಟೆ ನೀಲಿಗಟ್ಟಿತ್ತು. ಪ್ಯೂಪಗಳು ಯಾವುವೂ ಸತ್ತಿರಲಿಲ್ಲವಾದ್ದರಿಂದ ಅವನ್ನು ಇರುವೆಗಳು ತಿಂದಿರಲಿಕ್ಕಿಲ್ಲ. ಪ್ಯೂಪಗಳು ಒಸರಿದ ಈ ರಸವನ್ನು ಸೇವಿಸಿದ್ದರಿಂದಲೇ ಅವು ನೀಲಿಯಾಗಿವೆ ಎಂದು ಕ್ರೊನಿಯೇ ತಂಡ ಊಹಿಸಿದೆ.

ಅಷ್ಟೇ ಅಲ್ಲ. ರಸ ಒಸರುವ ಪ್ಯೂಪಗಳು ಇರುವೆಗಳನ್ನು ಆಕರ್ಷಿಸುತ್ತವೆ ಎಂದೂ ಇವರು ಗುರುತಿಸಿದ್ದಾರೆ. ರಸ ಒಸರದಂತೆ ಪ್ಯೂಪಗಳ ಹಿಂಬದಿಯನ್ನು ಮುಚ್ಚಿಬಿಟ್ಟರೆ, ಅದರ ಬಳಿಗೆ ಇರುವೆಗಳು ಬರುವುದೇ ಇಲ್ಲ. ರಸ ಹೆಚ್ಚು ಒಸರಿರುವ ಪ್ಯೂಪದ ಬಳಿಗೆ ಹೆಚ್ಚು ಇರುವೆಗಳು ಮುತ್ತಿಕೊಂಡಿರುತ್ತವೆ.

ಈ ಇರುವೆಗಳು ಗೂಡಿನ ತುಂಬ ಪ್ಯೂಪಗಳೇ ಇರುವ ಋತುವಿನಲ್ಲಿ ಇಡುವ ಮೊಟ್ಟೆಗಳನ್ನು ಪ್ಯೂಪಗಳ ಮೇಲೆಯೇ ಇಡುತ್ತವೆ ಎನ್ನುವುದು ವಿಶೇಷ. ಈ ಋತುವಿನಲ್ಲಿ ಸಾಮಾನ್ಯವಾಗಿ ಇರುವೆಯ ಲಾರ್ವಗಳು ತಿನ್ನುವ ಕೀಟಗಳನ್ನು ಇಟ್ಟರೂ ಅವನ್ನು ಗಮನಿಸದೆ ಪ್ಯೂಪದ ಮೇಲೆಯೇ ಮೊಟ್ಟೆಗಳನ್ನು ಇಡುತ್ತವೆಯಂತೆ. ಬಹುಶಃ ಮೊಟ್ಟೆಗಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸಲು ಹೀಗೆ ಮಾಡುತ್ತಿರಬೇಕು. ಪ್ಯೂಪದಿಂದ ಒಸರುವ ದ್ರವ ಇವಕ್ಕೆ ಪೌಷ್ಟಿಕ ಆಹಾರವಾಗಿರಬೇಕು ಎನ್ನುತ್ತಾರೆ ಕ್ರೊನಿಯೇ.

ಪ್ಯೂಪದ ದ್ರವವನ್ನು ಕೇವಲ ಊಸೇರಿಯಾ ಬಿರೋಯ್ ಇರುವೆಗಳಷ್ಟೆ ಬಳಸುವುದಿಲ್ಲ. ಇನ್ನೂ ಹಲವು ಪ್ರಬೇಧಗಳಲ್ಲಿ ಪ್ಯೂಪದ ರಸವನ್ನು ಇರುವೆಗಳು ಹೀರುವುದನ್ನು ಕ್ರೊನಿಯೇ ತಂಡ ಗುರುತಿಸಿದೆ. ಹೀಗಾಗಿಯೇ, ತ್ಯಾಜ್ಯದಂತಹ ಈ ದ್ರವವನ್ನು ಹಾಲಿಗೆ ಸಮಾನವೆಂದಿದ್ದಾರೆ.

ಇರುವೆಗಳನ್ನೇ ಜೀವನ ಪರ್ಯಂತ ಅಧ್ಯಯನ ಮಾಡಿದ್ದ ಇ. ಓ. ವಿಲ್ಸನ್ ಅವನ್ನು ನಿಗೂಢ ಜೀವಿಗಳು ಎಂದು ಕರೆದಿದ್ದರು. ನಿಜವೇ. ಬೆಂಗಳೂರು ನಗರದಲ್ಲಿಯೇ ನಾಲ್ಕುನೂರಕ್ಕೂ ಹೆಚ್ಚು ಬಗೆಯ ಇರುವೆಗಳಿವೆಯಂತೆ. ಇನ್ನು ಈ ಪ್ರಪಂಚದಲ್ಲಿರುವ ಒಟ್ಟಾರೆ ಇರುವೆಗಳ ಬಗೆಗಳಲ್ಲಿ ಯಾವು, ಯಾವುವುಗಳಲ್ಲಿ ಇನ್ನೂ ಏನೇನು ರಹಸ್ಯಗಳಿವೆಯೋ ಯಾರಿಗೆ ಗೊತ್ತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT