ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚ್ಯಾಟ್‌ ಜಿಪಿಟಿ ಮತ್ತು ಪರೀಕ್ಷೆಗಳ ಸತ್ವಪರೀಕ್ಷೆ

Last Updated 18 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಮೌಲ್ಯಮಾಪನ ಮಾಡುತ್ತ ಕುಳಿತಿದ್ದ ಸೌಪರ್ಣಿಕಾಗೆ ಫ್ಯಾನ್‌ ಕೆಳಗೂ ಧಗೆ! ಒಂದೇ ಬಗೆಯ ಉತ್ತರಗಳು, ಪಾಸ್‌ ಆಗುವುದೇ ಸಾಧ್ಯವಿಲ್ಲ ಎಂಬಂತಿದ್ದ ವಿದ್ಯಾರ್ಥಿಗಳು ಫಸ್ಟ್‌ ಕ್ಲಾಸ್‌ ಅಂಕಗನ್ನು ತೆಗೆದಿರುವಾಗ, ತನ್ನ ಪುನರಾವರ್ತನೆ ಕ್ಲಾಸುಗಳು ಅಷ್ಟು ಪ್ರಬಲ ಪ್ರಭಾವ ಬೀರಿದ್ದವಾ ಅಥವಾ ಕಾಪಿ ಹೊಡೆದಿದ್ದಾರಾ ಎಂಬ ಪ್ರಶ್ನೆಗಳು ಮನದಲ್ಲಿ ಮೂಡಿ, ಎರಡನೆಯದ್ದೇ ನಿಜ ಎನಿಸಿ ಕಸಿವಿಸಿ ಹೆಚ್ಚಾಗಿತ್ತು. ಪೋಷಕರು, ಶಿಕ್ಷಕರು ಅದೆಷ್ಟೇ ಹುಷಾರಾಗಿದ್ದರೂ ವಿದ್ಯಾರ್ಥಿಗಳು ರಂಗೋಲಿ ಕೆಳಗೆ ತೂರುವವರೇ! ಅದರಲ್ಲೂ ಈಗ ಹೊಚ್ಚಹೊಸ ‘ಚ್ಯಾಟ್-ಜಿಪಿಟಿ’ ಕೂಡ ಕೈಗೆ ಸಿಕ್ಕಿದೆ!

ಚ್ಯಾಟ್‌-ಜಿಪಿಟಿ – ಎಂಬುದೇನು ಎಂದು ಈಗ ಎಲ್ಲರಿಗೂ ಗೊತ್ತೇ ಇದೆ. ಸರಳವಾಗಿ ಹೇಳಬೇಕೆಂದರೆ, ‘ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌’(ಎಐ)ನ ಹೊಸದೊಂದು ರೂಪವಿದು, ಅಷ್ಟೇ. ಗೂಗಲ್‌ ಅಸಿಸ್ಟೆಂಟ್‌ನ ಸಹಾಯ ಪಡೆಯುವ, ಮಾತೆತ್ತಿದರೆ ಎಲ್ಲಕ್ಕೂ ಅಂತರ್ಜಾಲವನ್ನು ಜಾಲಾಡುವ ಎಲ್ಲರಿಗೂ ಇದರ ಬಳಕೆ ಹೇಗೆಂದು ಈಗಾಗಲೇ ಗೊತ್ತಾಗಿದೆ. ಇಂಟರ್ನಲ್ಸ್‌ನ ಅಂಕಗಳಿಗೋಸ್ಕರ ಕಡೇ ಕ್ಷಣದಲ್ಲಿ ಅಸೈನ್‌ಮೆಂಟ್‌ ಬರೆಯುವ ವಿದ್ಯಾರ್ಥಿಗಳಿಗಂತೂ ಚಾಟ್‌ ಜಿಪಿಟಿ ವರವೇ ಎನಿಸಿಬಿಟ್ಟಿದೆ. ಪುಸ್ತಕಗಳ ರಾಶಿಯನ್ನು ಅರಗಿಸಿಕೊಂಡು, ಮೆದುಳಿಗೆ ಕೆಲಸಕೊಟ್ಟು, ಮಾಹಿತಿಯನ್ನು ಮಥಿಸಿ ಬರವಣಿಗೆಗೆ ಕೈಯಿಡುತ್ತಿದ್ದ ತಲೆಮಾರಿನ ಬಗ್ಗೆ ಮಾತಾಡುತ್ತಿಲ್ಲ. ಲೈಬ್ರರಿಯ ದಿಕ್ಕೇ ತಿಳಿದಿರದ ತಲೆಮಾರಿನ ಕಥೆ-ವ್ಯಥೆಯಿದು. ಮೊದಲೆಲ್ಲಾ ಗೂಗಲ್‌, ಯಾಹೂನಂತಹ ಸರ್ಚ್‌ ಇಂಜಿನ್‌ಗಳಲ್ಲಿ ಪ್ರಶ್ನೆ ಹುಡುಕಿ, ಅದಕ್ಕೆ ಉತ್ತರವಾಗಿ ಸಿಗುವ ಜಾಲತಾಣಗಳಲ್ಲಿ ಮೊದಲ ಎರಡೋ ಮೂರೋ ಕ್ಲಿಕ್‌ ಮಾಡಿ, ಅದರೊಳಗಿನ ವಸ್ತುವನ್ನು ಯಥಾವತ್ತು ಕಾಗದದ ಮೇಲೆ ಇಳಿಸುತ್ತಿದ್ದರು; ತರಗತಿಯಲ್ಲಿ ಎಲ್ಲರದ್ದೂ ಅದೇ ಕಥೆಯಾದ್ದರಿಂದ, ಸರಿಸುಮಾರು ಎಲ್ಲರ ಅಸೈನ್‌ಮೆಂಟ್‌ ಉತ್ತರಗಳೂ ಹೆಚ್ಚೂ ಕಡಿಮೆ ಒಂದೇ ಬಗೆಯವು. ಈಗ ಚ್ಯಾಟ್‌-ಜಿಪಿಟಿಯ ಮೂಲಕ ‘ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌’ನ ಸಹಾಯದಿಂದ ‘ನಿಜವಾದ ಸೃಜನಶೀಲ’ ಬರಹ ಕಾಣುವಂತಾಗಿದೆ ಎಂದರೆ, ಪರಿಸ್ಥಿತಿಯ ವ್ಯಂಗ್ಯವೇ ಸರಿ!

ಸೃಜನಶೀಲವೆಂದರೆ, ಖಂಡಿತವಾಗಿ ನಾವೇನು ಚ್ಯಾಟ್‌ಜಿಪಿಟಿಯ ಬರಹಗಳಲ್ಲಿ ಕವಿಸಮಯದ ಕನಸು ಕಾಣುವಂತಿಲ್ಲ; ತನ್ನೊಳಗೆ ಫೀಡ್‌ ಮಾಡಲಾದ ಜಾಲತಾಣಗಳ ಅಂಶವನ್ನು ಒಂದು ಮೊತ್ತ ಮಾಡಿ, ಹತ್ತು ಬಗೆಯಲ್ಲಿ ಸೃಜನಶೀಲವೆನಿಸುವಂತೆ ತುತ್ತ ಮಾಡಿ ತಿನಿಸುತ್ತದೆ, ಅಷ್ಟೇ! ಆದರೆ, ನೈಸರ್ಗಿಕ ಭಾಷೆಗಳ ಕಲಿಕೆಯೆಡೆಗೆ ಸಾಗಿರುವ ಈ ತಂತ್ರಜ್ಞಾನ, ನಮ್ಮನ್ನು ಮತ್ತಷ್ಟು ಚಕಿತರನ್ನಾಗಿಸುವ ದಿನಗಳು ದೂರವಿಲ್ಲ ಎನ್ನುತ್ತಾರೆ, ತಜ್ಞರು. ವಿದ್ಯಾರ್ಥಿಗಳಂತೂ ಅಸೈನ್‌ಮೆಂಟುಗಳಿಗೆ, ತರಗತಿಯ ಯೋಜನೆ, ಚಟುವಟಿಕೆಗಳಿಗೆ ಮಾತ್ರವಲ್ಲದೇ ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೂ ಇದನ್ನೇ ಅವಲಂಬಿಸುತ್ತಿದ್ದಾರೆ ಎಂಬುದು ಹೊಚ್ಚಹೊಸ ಸುದ್ದಿ. ಈಗಷ್ಟೆ ನಡೆದಿರುವ ವಿವಿಧ ಬೋರ್ಡ್‌ ಪರೀಕ್ಷೆಗಳಲ್ಲೂ ಚ್ಯಾಟ್‌ಜಿಪಿಟಿಯ ಪ್ರತ್ಯಕ್ಷ/ಪರೋಕ್ಷ ಬಳಕೆಯಾಗಿದೆ ಎಂದು ಕಳ್ಳಧ್ವನಿಯಲ್ಲಿ ಉಸುರುತ್ತಾರೆ, ಕೆಲವು ತರಲೆಗಳು. ಅದಕ್ಕೇ ಫೋನ್‌ ಬಿಡಿ, ಕೊನೆಗೆ ವಾಚುಗಳನ್ನೂ ಧರಿಸಿ ಪರೀಕ್ಷಾ ಕೊಠಡಿಯೊಳಗೆ ಕಾಲಿರಿಸುವಂತಿಲ್ಲ ಎಂಬುದು ಹೊಸ ನಿಯಮ; ಸ್ಮಾರ್ಟ್‌ವಾಚುಗಳಂತೆ ಕಾಣದ ಸ್ಮಾರ್ಟ್‌ವಾಚುಗಳ ಕಾಲ ಇದು ಎಂಬುದು ಪರೀಕ್ಷಾ ಮೇಲ್ವಿಚಾರಕರಿಗೂ ಗೊತ್ತು. ಗ್ಯಾಡ್ಜೆಟ್‌ಗಳನ್ನು ಗೇಟಿನ ಹೊರಗೇ ಕಸಿದುಕೊಳ್ಳುವ ಸೆಕ್ಯುರಿಟಿಗೆ ಚಳ್ಳೆಹಣ್ಣು ತಿನ್ನಿಸಲು, ವಿದ್ಯಾರ್ಥಿಗಳು, ಮತ್ತೆ ಹಳೆಯ ಪದ್ಧತಿಗೇ ಸೈ ಎಂದಿದ್ದಾರೆ. ಕಾಪಿ ಚೀಟಿಗಳ ಬಳಕೆಗೆ ಜೈ ಎಂದಿದ್ದಾರೆ. ಆದರೆ, ಇಲ್ಲಿ ಟ್ವಿಸ್ಟ್‌ ಏನು ಗೊತ್ತೇ? ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ಬೇಕಾದ ಪುಟ್ಟ ಪುಟ್ಟ ಕಾಪಿಚೀಟಿಗಳನ್ನು ತಯಾರಿಸುವುದೂ ಚ್ಯಾಟ್‌ಜಿಪಿಟಿಯ ಮೂಲಕವೇ ಅಂತೆ! ಬಲ್ಲ, ಅಲ್ಲಲ್ಲ, ಕಳ್ಳಮೂಲಗಳಿಂದ ತಿಳಿದದ್ದು.

ಆದರೆ, ಕೆಲವು ಶೈಕ್ಷಣಿಕ ಬೋರ್ಡ್‌ಗಳೇ ಈಗ ಈ ತಂತ್ರಜ್ಞಾನದ ಬಳಕೆಗೆ ಹಸಿರು ನಿಶಾನೆ ತೋರಿಸಿವೆ ಎಂದರೆ ಅಚ್ಚರಿಯೇ ಆಗುತ್ತದೆ. ಉದಾಹರಣೆಗೆ ಅಂತರರಾಷ್ಟ್ರೀಯ ಶೈಕ್ಷಣಿಕ ಪಠ್ಯಕ್ರಮಗಳಾದ ಐ.ಬಿ. ಮತ್ತು ಐ.ಜಿ.ಸಿ.ಎಸ್‌.ಇ.ಗಳಲ್ಲಿ ಚ್ಯಾಟ್‌ಜಿಪಿಟಿಯೂ ಸೇರಿದಂತೆ ತಂತ್ರಜ್ಞಾನದ ಬಳಕೆಗೆ ಅನುಮತಿ ಸಿಕ್ಕಿದೆ. ಐಬಿ ಪಠ್ಯಕ್ರಮದಲ್ಲಂತೂ, ಅದು ಚಟುವಟಿಕೆ, ಯೋಜನೆ, ಅಸೈನ್‌ಮೆಂಟ್‌ಗಳಾದರೂ ಸರಿ, ಪರೀಕ್ಷೆಯಾದರೂ ಸರಿ, ಅಲ್ಲಿ ಚ್ಯಾಟ್‌ಜಿಪಿಟಿ ತಂತ್ರಜ್ಞಾನಕ್ಕೆ ಕೆಂಪುಹಾಸಿನ ಸ್ವಾಗತ ಸಿಕ್ಕಿದೆ. ಐಬಿ ಪಠ್ಯಕ್ರಮದಲ್ಲಿ ಸಿಕ್ಕಷ್ಟು ಮುಕ್ತವಾಗಿ ಐಜಿಸಿಎಸ್‌ಇಯಲ್ಲಿ ಅನುಮತಿ ಸಿಗದ ಕಾರಣ, ಪರೀಕ್ಷೆಗಳನ್ನು ಹಾಗೂ ಪರೀಕ್ಷೆಗೆ ಪೂರಕವಾಗಿ ನಡೆಯುವ ಚಟುವಟಿಕೆಗಳನ್ನು ನಿರ್ದಿಷ್ಟ ಬಗೆಯ ವಾತಾವರಣದಲ್ಲಿ, ಕೆಲವೇ ತಂತ್ರಜ್ಞಾನಗಳ ಬಳಕೆ ಸಾಧ್ಯವಾಗುವ, ಆದರೆ, ನಿರ್ಬಂಧಗಳಿರುವ ಕಂಪ್ಯೂಟರ್‌ಗಳನ್ನೇ ಬಳಸುವಂತಹ ನಿಬಂಧನೆಗಳನ್ನು ಹಾಕಲಾಗಿದೆ. ಐಬಿ, ಐಜಿಸಿಎಸ್‌ಇ ಪಠ್ಯಕ್ರಮಗಳು ನಿಮಗೆ ಹೊಸದಾಗಿದ್ದರೆ, ಇವೆಲ್ಲ ನಿಮಗೆ ಅಚ್ಚರಿ ಎನಿಸಬಹುದು. ಆದರೆ, ಮಾಹಿತಿಯನ್ನು ಉರು ಹೊಡೆದು, ಉತ್ತರ ಪತ್ರಿಕೆಯಲ್ಲಿ ಯಥಾವತ್ತಾಗಿ ಉದುರಿಸುವ ಪರೀಕ್ಷಾ ಪದ್ಧತಿಗೂ, ಈ ಪಠ್ಯಕ್ರಮಗಳ ಪರೀಕ್ಷಾ ಪದ್ಧತಿಗಳಿಗೂ ಅಜಗಜಾಂತರ. ಇಲ್ಲಿ, ಕೊಟ್ಟ ವಿಷಯವನ್ನು ವಿಶ್ಲೇಷಿಸಿ, ಸ್ವಂತ ಅಭಿಪ್ರಾಯ ಮಂಡಿಸಬೇಕಾಗುತ್ತದೆ. ಹಾಗಾಗಿ, ಅದು ಕೆಮಿಸ್ಟ್ರಿಯ ಆವರ್ತನ ಕೋಷ್ಟಕವಿರಬಹುದು, ಗಣಿತದ ಫಾರ್ಮುಲಾಗಳಿರಬಹುದು – ಎಲ್ಲವನ್ನೂ ಅವರಿಗೆ ಪ್ರಶ್ನೆಪತ್ರಿಕೆಯ ಜೊತೆಗೆ ನೀಡಲಾಗಿರುತ್ತದೆ. ಅದನ್ನು ಬಳಸಿಕೊಂಡೇ ಬರೆಯಬಹುದು, ಕ್ಯಾಲ್ಕುಲೇಟರ್‌ಅನ್ನು ಬಳಸಿಯೇ ಗಣಿತದ ಸಮಸ್ಯೆಯನ್ನು ಪರಿಹರಿಸಬಹುದು. ಅದಕ್ಕೆ ಈಗ ಹೊಸ ಸೇರ್ಪಡೆ, ಚ್ಯಾಟ್-ಜಿಪಿಟಿ.

ಅಂತರರಾಷ್ಟ್ರೀಯ ಪಠ್ಯಕ್ರಮಗಳಲ್ಲಿ, ಎಲ್ಲಾ ವಿಷಯಗಳ ಒಂದು ಪರೀಕ್ಷೆ, ಅಥವಾ ಕೆಲವು ನಿರ್ದಿಷ್ಟ ವಿಷಯಗಳ ಪರೀಕ್ಷೆಗಳೆಲ್ಲವೂ ಆನ್‌ಲೈನ್‌. ಆಗ, ಸಾಮಾನ್ಯವಾಗಿ, ಅವಶ್ಯಕತೆಯಿಲ್ಲದ ಹೊರತು, ಬೇರೆ ಜಾಲತಾಣಗಳ ಸಹಾಯ ಪಡೆಯುವಂತಿಲ್ಲ, ಹಾಗಾಗಿ ಅವುಗಳನ್ನು ಬ್ಲಾಕ್‌ ಮಾಡಲಾಗಿರುತ್ತದೆ. ಆದರೆ, ಚ್ಯಾಟ್‌-ಜಿಪಿಟಿಯನ್ನು ಬಳಸಿದರೂ ಸರಿ, ನಿಮ್ಮ ವಿಶ್ಲೇಷಣೆ ನಿಮ್ಮದೇ ಆಗಿರಲಿ, ಜೊತೆಗೆ ಚ್ಯಾಟ್‌-ಜಿಪಿಟಿಯ ಸಹಾಯ ಪಡೆದಿದ್ದಲ್ಲಿ ಅದರ ಹೆಸರನ್ನೂ ಕಡೆಗೆ ನಮೂದಿಸಿ, ಧನ್ಯವಾದ ತಿಳಿಸಿ ಎನ್ನುತ್ತಾರೆ ಐಬಿಯ ಮೌಲ್ಯಮಾಪನ ತತ್ವಗಳ ಮುಖ್ಯಸ್ಥ ಮ್ಯಾಟ್‌ ಗ್ಲಾನ್ವಿಲ್‌. ಯಾವುದೇ ಪರೀಕ್ಷೆಯ ಮೂಲ ಉದ್ದೇಶವೇ ಅದು ತಾನೆ? ಕಲಿಕೆಯ ಉದ್ದೇಶ ಪೂರ್ಣವಾಗಿದೆಯೇ ಎಂಬುದನ್ನು ಅವಲೋಕಿಸಿ, ಅರ್ಥೈಸಿಕೊಳ್ಳುವ ಸಲುವಾಗಿ ತಾನೇ ಪರೀಕ್ಷೆಗಳನ್ನು ಮಾಸಿಕ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ನಡೆಸುವುದು? ಕಲಿಕೆಯ ಉದ್ದೇಶ ಪೂರ್ಣವಾಗುವುದನ್ನು ಕೇವಲ ಅಂಕಗಳಿಂದ ಅಳೆಯಲು ಸಾಧ್ಯವಿಲ್ಲ, ಅದು ಅನೇಕ ಆಯಾಮಗಳ ಒಟ್ಟಂದ ಎಂದು ಅರಿವಾದಾಗ ಮಾತ್ರ ಚ್ಯಾಟ್‌ ಜಿಪಿಟಿಯಂತಹ ಯಾವುದೇ ತಂತ್ರಜ್ಞಾನವಾಗಲೀ, ಅದು ‘ಶಿಕ್ಷಣದ/ ಸೃಜನಶೀಲತೆಯ ಶತ್ರು’ವಲ್ಲ ಎಂಬುದು ಅರಿವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT