ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗಿದು ತಿಳಿದಿರಲಿ: ಇಂಟರ್ನೆಟ್ ವೇಗದ ಅಸಲಿಯತ್ತು - Mbps ಅಥವಾ MBps?

Published 29 ನವೆಂಬರ್ 2023, 0:01 IST
Last Updated 29 ನವೆಂಬರ್ 2023, 0:01 IST
ಅಕ್ಷರ ಗಾತ್ರ

ಬ್ರಾಡ್‌ಬ್ಯಾಂಡ್ ಅಥವಾ ಇಂಟರ್ನೆಟ್ ಸೇವೆಯನ್ನು ಒದಗಿಸುವ ಕಂಪನಿಯು 'ಸೆಕೆಂಡಿಗೆ 100 ಎಂಬಿಪಿಎಸ್ ಡೌನ್‌ಲೋಡ್ ವೇಗ ಇದೆ' ಅಂತ ಹೇಳಿಕೊಂಡಿದ್ದರೂ, ಒಂದು ಸೆಕೆಂಡಿನಲ್ಲಿ 100 ಎಂಬಿ ಫೈಲ್ ಅಥವಾ ವಿಡಿಯೊ ಡೌನ್‌ಲೋಡ್ ಮಾಡುವುದು ಸಾಧ್ಯವಾಗಿಲ್ಲ ಎಂಬುದು ಹೆಚ್ಚಿನವರ ದೂರು. ಈ ಲೇಖನ ಓದಿದ ಬಳಿಕ ನಿಮ್ಮಲ್ಲಿ ಈ ಬಗ್ಗೆ ಗೊಂದಲ ಇರುವುದಿಲ್ಲ.

ಮೆಗಾಬಿಟ್ (Mb) ಮತ್ತು ಮೆಗಾಬೈಟ್ (MB) ನಡುವಿನ ವ್ಯತ್ಯಾಸ

ಮೊದಲು ಈ ಬಿಟ್ (bit) ಎಂದರೇನೆಂದು ಅಂತ ತಿಳಿಯೋಣ. ಇದು ಮೂಲತಃ 'ಬೈನರಿ ಡಿಜಿಟ್' ಎಂಬುದರ ಸಂಕ್ಷಿಪ್ತ ರೂಪ. ಕಂಪ್ಯೂಟರುಗಳು ಅಥವಾ ಯಾವುದೇ ಡಿಜಿಟಲ್ ಜಗತ್ತು ಎರಡು ಅಂಕಿಗಳಲ್ಲೇ (ಸೊನ್ನೆ ಮತ್ತು 1) ನಿಂತಿದೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವ ವಿಚಾರ. ಬಿಟ್ ಎಂಬುದು ದ್ವಿಮಾನ (0 ಮತ್ತು 1 ಬಳಸುವ) ಪದ್ಧತಿಯಲ್ಲಿ ದತ್ತಾಂಶವನ್ನು ಅಳೆಯುವ ಅತ್ಯಂತ ಸಣ್ಣ ಪ್ರಮಾಣ. 8 ಬಿಟ್‌ಗಳು ಸೇರಿದರೆ ಒಂದು ಬೈಟ್ ಆಗುತ್ತದೆ. ಬಿಟ್ ಮತ್ತು ಬೈಟ್ ನಡುವೆ ಇರುವ ಪ್ರಧಾನ ವ್ಯತ್ಯಾಸವೇ ಇದು.

ಬಹುತೇಕವಾಗಿ, ಹಾರ್ಡ್ ಡ್ರೈವ್ ಅಥವಾ ಸ್ಟೋರೇಜ್ ಡ್ರೈವ್‌ಗಳಲ್ಲಿರುವ ಫೈಲ್‌ಗಳ ವಿನಿಮಯದ ಸಂದರ್ಭದಲ್ಲಿ ಬಳಸುವುದು ಮೆಗಾಬೈಟ್ಸ್ ಎಂಬ ಪ್ರಮಾಣವನ್ನು. ಇಂಟರ್ನೆಟ್ ವೇಗವನ್ನು ಅಳೆಯುವುದು ಮೆಗಾಬಿಟ್ಸ್ ಎಂಬ ಮಾನಕದ ಮೂಲಕ. ಇಂಗ್ಲಿಷಿನಲ್ಲಿ ಬರೆಯುವಾಗ ವ್ಯತ್ಯಾಸವು ಎದ್ದು ಕಾಣುತ್ತದೆ Mb (ಒಂದು ಸಣ್ಣಕ್ಷರ) ಎಂದರೆ ಮೆಗಾಬಿಟ್ಸ್ ಮತ್ತು MB (ಎರಡೂ ದೊಡ್ಡಕ್ಷರ) ಎಂದರೆ ಮೆಗಾಬೈಟ್ಸ್.

ನಮಗೆಲ್ಲ ಇತ್ತೀಚೆಗೆ ಜಿಬಿ (ಗಿಗಾಬೈಟ್), ಟಿಬಿ (ಟೆರಾಬೈಟ್) ಹೆಚ್ಚು ಪರಿಚಯವಾಗಿಬಿಟ್ಟಿದೆ. ವಿಶೇಷತಃ ಮೊಬೈಲ್ ಫೋನ್‌ಗಳ ಸ್ಟೋರೇಜ್‌ಗಳು ಈಗ 256GBಯಿಂದ 512GB, 1TB ವರೆಗೆಲ್ಲ ಇದೆ ಎಂಬುದು ಈಗ ಹೆಚ್ಚು ಕೇಳಿಬರುತ್ತಿರುವ ಮಾಹಿತಿ. ಒಂದು ಜಿಬಿ ಅಥವಾ ಗಿಗಾಬೈಟ್ ಎಂದರೆ ಸಾಮಾನ್ಯವಾಗಿ ಹೇಳುವುದಾದರೆ ಒಂದು ಸಾವಿರ ಎಂಬಿ. ನಿಖರವಾಗಿ ಹೇಳುವುದಾದರೆ 1024 ಮೆಗಾಬೈಟ್ಸ್. ಅದೇ ರೀತಿ, ಒಂದು ಮೆಗಾಬೈಟ್ (MB) ಎಂದರೆ 1024 KB (ಕಿಲೋಬೈಟ್ಸ್).

ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಕಂಪನಿಗಳು ಎರಡು ವಿಧಾನಗಳಲ್ಲಿ ನಮ್ಮನ್ನು ಆಕರ್ಷಿಸಲು ಅಥವಾ ನಾವು ದಾರಿ ತಪ್ಪಲು ಅವಕಾಶ ಇದೆ. ಎಂದರೆ, ನಿಮಗೆ 100 ಎಂಬಿಪಿಎಸ್ ವೇಗದ ಸಂಪರ್ಕ ಕೊಡುತ್ತೇವೆ ಎಂದು ಅವರು ಹೇಳಬಹುದು. ವಾಸ್ತವವಾಗಿ, ಈ 100 Mbps ಸೂಪರ್‌ಫಾಸ್ಟ್ ಎಂಬುದು ನಿಜವಾದರೂ ಮತ್ತು ನಮಗೆ ಅದರ ಬಗ್ಗೆ ಖುಷಿಯಿದ್ದರೂ, ಇದರ ಅರ್ಥ ನಾವು ಸೆಕೆಂಡಿಗೆ 100MB ಫೈಲ್‌ಗಳನ್ನು ವಿನಿಮಯ (ಅಪ್‌ಲೋಡ್ ಮತ್ತು ಡೌನ್‌ಲೋಡ್) ಮಾಡಿಕೊಳ್ಳಬಹುದು ಎಂಬುದಲ್ಲ! ಅದು 100 ಮೆಗಾಬಿಟ್ಸ್ ಮಾತ್ರ. ನಾವು ಭಾವಿಸಿದ್ದಕ್ಕಿಂತ ಎಂಟು ಪಟ್ಟು ಕಡಿಮೆ ವೇಗವದು. ಬಿಟ್ ಅನ್ನು 8ರಿಂದ ಗುಣಿಸಿದರೆ ಬೈಟ್ ಆಗುತ್ತದೆ.

ನಾವು ತಿಳಿದುಕೊಂಡಿರಬೇಕಾಗಿದ್ದು

1 ಮೆಗಾಬೈಟ್ (1MB) = 8 ಮೆಗಾಬಿಟ್ಸ್ (8Mb)

1 ಗಿಗಾಬೈಟ್ (1GB) = 8 ಗಿಗಾಬಿಟ್ಸ್ (8Gb

ಇಂಟರ್ನೆಟ್ ಸೇವೆ ಒದಗಿಸುವವರು ಇದನ್ನೇ ಮುಂದಿಟ್ಟುಕೊಂಡು ನಮಗೆ ಅವರ ಬ್ರಾಡ್‌ಬ್ಯಾಂಡ್ ಸೇವೆಯನ್ನು ಪ್ರಚಾರ ಮಾಡುತ್ತಾರೆ - 100Mbps ವರೆಗೆ ವೇಗ ಲಭ್ಯ ಅಂತ! 100Mbps ಸಂಪರ್ಕ ನಿಮ್ಮಲ್ಲಿದೆ ಎಂದಾದರೆ ಅದನ್ನು ಮೆಗಾಬೈಟ್ಸ್‌ನಲ್ಲಿ ಹೇಳುವುದಾದರೆ 12.5MBps ಮಾತ್ರ! 100Mbps ವೇಗದಲ್ಲಿ ನೀವು ಸೆಕೆಂಡಿಗೆ 12.5 ಎಂಬಿ ಗಾತ್ರದ ಫೈಲನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದರ್ಥ.

ಈಗ 5ಜಿ ವೇಗದ ಇಂಟರ್ನೆಟ್ ನೆಟ್‌ವರ್ಕ್ ಸೌಕರ್ಯ ಬಂದಿದೆ. ಕೆಲವು ಕಂಪನಿಗಳು 1Gbps ವೇಗ ಇದೆ ಎಂದು ಹೇಳಿಕೊಳ್ಳುತ್ತವೆ. ಇದರರ್ಥ 3 ಜಿಬಿ ಇರುವ ವಿಡಿಯೊ ಒಂದನ್ನು ನೀವು 3 ಸೆಕೆಂಡಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದಲ್ಲ. 5ಜಿ ನೆಟ್‌ವರ್ಕ್‌ನಲ್ಲಿ ಸದ್ಯದ ಸರಾಸರಿ ವೇಗ ಸುಮಾರು 300ರಿಂದ 325 Mbps. 4ಜಿಯಲ್ಲಿ ಇದ್ದ ಸರಾಸರಿ ವೇಗ ಸುಮಾರು 15Mbps ಮಾತ್ರ.

5ಜಿ ನಾವೆಲ್ಲ ತಿಳಿದುಕೊಂಡಷ್ಟು ವೇಗ ಇಲ್ಲ ಯಾಕೆ ಎಂಬುದು ಈಗ ಗೊತ್ತಾಗಿರಬಹುದು. 1GB (ಗಿಗಾಬೈಟ್) ಫೈಲ್ ಕೇವಲ ಒಂದು ಸೆಕೆಂಡಿನಲ್ಲಿ ಡೌನ್‌ಲೋಡ್ ಆಗಬೇಕಿದ್ದರೆ ವಾಸ್ತವವಾಗಿ 8Gbps ವೇಗದ ಇಂಟರ್ನೆಟ್ ಸಂಪರ್ಕ ಬೇಕು. ಮತ್ತೂ ಸರಳವಾಗಿ ಹೇಳುವುದಾದರೆ, ಇಂಟರ್ನೆಟ್ ವೇಗವು ನಿಜಕ್ಕೂ 100Mbps ಇದ್ದರೆ 12.5MB ಇರುವ ಒಂದು ಫೈಲ್ (ಆಡಿಯೊ, ವಿಡಿಯೊ ಇತ್ಯಾದಿ) 1 ಸೆಕೆಂಡಿನಲ್ಲಿ ಡೌನ್‌ಲೋಡ್ ಆಗುತ್ತದೆ. ಅಂದರೆ ಇಂಟರ್ನೆಟ್ ವೇಗವು 100Mbps , ಫೈಲ್‌ನ ಡೌನ್‌ಲೋಡ್ ವೇಗ 12.5MBps.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT