ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರನ್ನು ವೈಫೈ ಹಾಟ್‌ಸ್ಪಾಟ್ ಆಗಿ ಬಳಸುವುದು ಹೇಗೆ?

Published 5 ಸೆಪ್ಟೆಂಬರ್ 2023, 23:30 IST
Last Updated 5 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ
ಕಂಪ್ಯೂಟರನ್ನೇ (ಡೆಸ್ಕ್‌ಟಾಪ್‌ ಅಥವಾ ಲ್ಯಾಪ್‌ಟಾಪ್) ವೈಫೈ ಹಾಟ್‌ಸ್ಪಾಟ್ ಆಗಿ ಬಳಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಮೈಕ್ರೋಸಾಫ್ಟ್‌ ವಿಂಡೋಸ್‌ 10 ಹಾಗೂ ವಿಂಡೋಸ್ 11 ಕಾರ್ಯಾಚರಣಾ ವ್ಯವಸ್ಥೆಯ ಕಂಪ್ಯೂಟರುಗಳಲ್ಲಿ, ಆ್ಯಪಲ್‌ನ ಮ್ಯಾಕ್‌ಬುಕ್‌ಗಳಲ್ಲಿ ಈ ಆಯ್ಕೆ ಲಭ್ಯವಿದೆ. ಡೆಸ್ಕ್‌ಟಾಪ್‌ ಆಗಿದ್ದರೆ, ವೈಫೈ ಸಂಪರ್ಕ ಅದರಲ್ಲಿರಬೇಕಾಗುತ್ತದೆ.

ಇದು ಈಗಿನ ವೈರ್‌ಲೆಸ್ ತಂತ್ರಜ್ಞಾನದ ಯುಗ. ಮೊಬೈಲ್ ಫೋನ್ ಇಲ್ಲದೆ ದೈನಂದಿನ ಕೆಲಸ ಕಾರ್ಯ ಸಾಗುವುದೇ ಇಲ್ಲ ಎಂಬ ಮಾತು ಕೇಳಿರಬಹುದು. ಅದಕ್ಕೆ ಇಂಟರ್ನೆಟ್ ಸಂಪರ್ಕ ಮುಖ್ಯ. ಒಬ್ಬೊಬ್ಬರ ಕೈಯಲ್ಲಿ ಮೊಬೈಲ್‌ ಫೋನ್‌ಗಳ ಸಂಖ್ಯೆಯೂ ಹೆಚ್ಚು ಇರುತ್ತದೆ. ಒಂದೇ ಮನೆಯಲ್ಲಿರುವ ಎಲ್ಲ ಸದಸ್ಯರ ಫೋನ್‌ಗಳಿಗೂ ಪ್ರತ್ಯೇಕ ಇಂಟರ್‌ನೆಟ್‌ ಸಂಪರ್ಕ ದುಬಾರಿಯಾಗಬಹುದು ಅಥವಾ ಬ್ರಾಡ್‌ಬ್ಯಾಂಡ್ ಸಂಪರ್ಕದ ಚಂದಾದಾರಿಕೆ ಅಸಾಧ್ಯವಾಗಿರಬಹುದು. ಹೀಗಾಗಿ, ಬೇಕಾದಾಗ ಮಾತ್ರ ಇಂಟರ್‌ನೆಟ್ ಅನ್ನು ಬಳಸಲು ನಿಮ್ಮ ಕಂಪ್ಯೂಟರಿನ (ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್) ಇಂಟರ್‌ನೆಟ್‌ ಸಂಪರ್ಕವನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಬಳಸಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಮೈಕ್ರೋಸಾಫ್ಟ್ ವಿಂಡೋಸ್ 10 ಹಾಗೂ ವಿಂಡೋಸ್ 11 ಕಾರ್ಯಾಚರಣಾ ವ್ಯವಸ್ಥೆಯ ಕಂಪ್ಯೂಟರುಗಳಲ್ಲಿ, ಆ್ಯಪಲ್‌ನ ಮ್ಯಾಕ್‌ಬುಕ್‌ಗಳಲ್ಲಿ ಈ ಆಯ್ಕೆ ಲಭ್ಯವಿದೆ. ಡೆಸ್ಕ್‌ಟಾಪ್ ಆಗಿದ್ದರೆ, ವೈಫೈ ಸಂಪರ್ಕ ಅದರಲ್ಲಿರಬೇಕಾಗುತ್ತದೆ.

ವಿಂಡೋಸ್ ಪಿಸಿಯನ್ನು ಹಾಟ್‌ಸ್ಪಾಟ್ ಆಗಿ ಬಳಸುವುದು ಹೀಗೆ...

ನಮ್ಮದೇ ಕಂಪ್ಯೂಟರಿಗೆ ಸಾಮಾನ್ಯವಾಗಿ ಈಥರ್‌ನೆಟ್, ವೈಫೈ ಅಥವಾ ಸೆಲ್ಯುಲಾರ್ ಡೇಟಾ (ಸಿಮ್ ಕಾರ್ಡ್) ಮೂಲಕ ಇಂಟರ್‌ನೆಟ್‌ ಸಂಪರ್ಕ ನೀಡಲಾಗಿರುತ್ತದೆ. ಈ ಸಂಪರ್ಕವನ್ನು ನಾವು ಬೇರೊಂದು ಮೊಬೈಲ್ ಫೋನ್‌ನಲ್ಲಿ ಅಂತರ್ಜಾಲ ವೀಕ್ಷಣೆಗೆ ಬಳಸಬಹುದು. ಅದು ಹೇಗೆಂದರೆ, ಕಂಪ್ಯೂಟರಿನ ಸೆಟ್ಟಿಂಗ್ಸ್ ವಿಭಾಗದಲ್ಲಿ, 'ನೆಟ್‌ವರ್ಕ್ & ಇಂಟರ್ನೆಟ್' ಎಂಬಲ್ಲಿಗೆ ಹೋದರೆ, ಅಲ್ಲಿ 'ಮೊಬೈಲ್ ಹಾಟ್‌ಸ್ಪಾಟ್' ಕಾಣಿಸುತ್ತದೆ. ಆನ್‌ ಮಾಡಿದಾಗ (ಸ್ಲೈಡರ್) 'ಶೇರ್ ಓವರ್' ಎಂಬಲ್ಲಿ 'ವೈಫೈ' ಆಯ್ಕೆ ಮಾಡಿ. ಪವರ್ ಸೇವಿಂಗ್ ಆಯ್ಕೆಯೂ ಇದ್ದು, ಯಾವುದೇ ಬೇರೆ ಸಾಧನಗಳು ಸಂಪರ್ಕಿತವಾಗದಿದ್ದಾಗ, ಹಾಟ್‌ಸ್ಪಾಟ್ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ.

ಇದು ದುರ್ಬಳಕೆಯಾಗದಂತಿರಲು, Properties ಎಂಬ ವಿಭಾಗವನ್ನು ಹಿಗ್ಗಿಸಿದರೆ, ಈ ವೈಫೈ ಸಂಪರ್ಕಕ್ಕೆ (ಹಾಟ್‌ಸ್ಪಾಟ್) ನೀವು ಸೂಕ್ತವಾದ ಹೆಸರು ಹಾಗೂ ಪಾಸ್‌ವರ್ಡ್ ಹೊಂದಿಸಬಹುದು. ನಂತರ ಮೊಬೈಲ್ ಫೋನ್‌ನಲ್ಲಿ ವೈಫೈ ಆನ್‌ ಮಾಡಿದಾಗ, ಲಭ್ಯ ವೈಫೈ ಸಂಪರ್ಕಗಳನ್ನು ಅದು ಸ್ಕ್ಯಾನ್ ಮಾಡುತ್ತದೆ. ನೀವು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗೆ ಕೊಟ್ಟಿರುವ ಹೆಸರು ಆಯ್ಕೆ ಮಾಡಿ, ನೀವೇ ಹೊಂದಿಸಿದ ಪಾಸ್‌ವರ್ಡ್ ನಮೂದಿಸಿಬಿಡಿ. ಏಕಕಾಲದಲ್ಲಿ 8 ಸಾಧನಗಳನ್ನು ಸಂಪರ್ಕಿಸಿ, ಕಂಪ್ಯೂಟರಿನ ಇಂಟರ್ನೆಟ್ ಸಂಪರ್ಕವನ್ನು ಬಳಸಬಹುದು. ವೈಫೈ ಮೂಲಕ ಅಥವಾ ಬ್ಲೂಟೂತ್ ಮೂಲಕವೂ ಇಂಟರ್‌ನೆಟ್‌ ಸಂಪರ್ಕವನ್ನು ಹಂಚಿಕೊಳ್ಳಬಹುದು. ವೈಫೈ ಸಂಪರ್ಕ ವೇಗವಾಗಿರುತ್ತದೆ, ಬ್ಲೂಟೂತ್ ಸಂಪರ್ಕ ಸ್ವಲ್ಪ ನಿಧಾನ ಇರುತ್ತದೆ ಮತ್ತು ಕಂಪ್ಯೂಟರ್ - ಮೊಬೈಲ್ ಫೋನ್‌ಗಳನ್ನು ಪರಸ್ಪರ ಬೆಸೆಯಬೇಕಾಗುತ್ತದೆ (ಪೇರಿಂಗ್).

ಗಮನಿಸಬೇಕಾದ ಒಂದು ಅಂಶವೆಂದರೆ, ನೀವು ಸಂಪರ್ಕಿಸಲು ಇಚ್ಛಿಸುವ ಸಾಧನವು 5GHz ನೆಟ್‌ವರ್ಕ್ ಬ್ಯಾಂಡ್ ಅನ್ನು ಬೆಂಬಲಿಸುತ್ತದೆಯೇ ಎಂದು ನೋಡಿಕೊಳ್ಳಬೇಕು. 2.4GHz ಮಾತ್ರ ಬೆಂಬಲಿಸುವ ಸಾಧನಗಳನ್ನು (ಮೊಬೈಲ್ ಫೋನ್) ಈ ಹಾಟ್‌ಸ್ಪಾಟ್‌ಗೆ ಸಂಪರ್ಕಿಸಲು ಸಾಧ್ಯವಾಗದಿರಬಹುದು. ಆಗ Properties ನಲ್ಲಿ ಪುನಃ ಎಡಿಟ್ ಮಾಡಿಕೊಂಡು, ಯಾವ ಬ್ಯಾಂಡ್ ಬೇಕು ಎಂಬುದನ್ನು ಆಯ್ಕೆ ಮಾಡಬಹುದು.

ಮ್ಯಾಕ್‌ಬುಕ್‌ಗಳಲ್ಲಿ (ಆ್ಯಪಲ್ ಕಂಪನಿಯ ಕಂಪ್ಯೂಟರುಗಳಲ್ಲಿ) ಕೂಡ, ಈ ಆಯ್ಕೆ ಇದೆ.ಆ್ಯಪಲ್ ಮೆನುವಿನಲ್ಲಿ ಸಿಸ್ಟಂ ಸೆಟ್ಟಿಂಗ್ಸ್ ಎಂಬಲ್ಲಿ, ಜನರಲ್ ಆಯ್ಕೆ ಮಾಡಿಕೊಂಡರೆ, ಸೈಡ್ ಬಾರ್‌ನಲ್ಲಿ 'ಶೇರಿಂಗ್' ಕ್ಲಿಕ್ ಮಾಡಿ, ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿ, 'ಇಂಟರ್‌ನೆಟ್‌ ಶೇರಿಂಗ್' ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಏಕಕಾಲದಲ್ಲಿ 8 ಸಾಧನಗಳನ್ನು ಸಂಪರ್ಕಿಸಬಹುದಾಗಿರುವುದರಿಂದ, ಪ್ರತ್ಯೇಕ ಬ್ರಾಡ್‌ಬ್ಯಾಂಡ್ ಸಂಪರ್ಕವಿಲ್ಲದಿದ್ದರೂ ಕೂಡ, ಕುಟುಂಬದ ಸದಸ್ಯರೆಲ್ಲರೂ ಒಂದೇ ಇಂಟರ್‌ನೆಟ್‌ ಸಂಪರ್ಕ ಬಳಸಿ, ಶುಲ್ಕದಲ್ಲಿ ಉಳಿತಾಯವನ್ನೂ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT