ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂನಿಕೋಡ್ ಬೆಂಬಲಿಸುವ ಸಾಕಷ್ಟು ಫಾಂಟ್‌ಗಳಿವೆ; ಆದರೆ ಪ್ರಚಾರ ಕಡಿಮೆ

Last Updated 16 ನವೆಂಬರ್ 2022, 12:55 IST
ಅಕ್ಷರ ಗಾತ್ರ

ಯೂನಿಕೋಡ್ ಬಳಸಿ. ನಿಮ್ಮ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂಬ ಸಾಕಷ್ಟು ಪೋಸ್ಟ್‌ಗಳನ್ನು ನಾವು ನೋಡಿ ಹಲವು ವರ್ಷಗಳೇ ಆದವು. ಒಂದಷ್ಟು ವರ್ಷಗಳ ಹಿಂದೆ ಯೂನಿಕೋಡ್‌ ಬಳಸಿಲ್ಲ ಎಂದರೆ ನೀವು ತುಂಬಾ ಹಿಂದುಳಿದಿದ್ದೀರಿ ಎಂಬಂತಾಗಿತ್ತು. ಯೂನಿಕೋಡ್ ಎನ್ನುವುದು ಈಗಿನ ಕಾಲಮಾನಕ್ಕೆ ಅತ್ಯಂತ ಅಗತ್ಯದ ವ್ಯವಸ್ಥೆ ಎಂಬುದರ ಬಗ್ಗೆ ಎರಡು ಮಾತಿಲ್ಲ.

ಅಂತರಜಾಲದಲ್ಲಾಗಲೀ, ಯಾವುದೇ ಕಂಪ್ಯೂಟರ್ ವ್ಯವಸ್ಥೆಯಲ್ಲಾಗಲೀ ಬರೆದಿದ್ದನ್ನು ಓದುವುದಕ್ಕೆ ಒಂದು ಯೂನಿವರ್ಸಲ್ ವ್ಯವಸ್ಥೆ ಬೇಕು. ಅದನ್ನು ಯೂನಿಕೋಡ್ ಕೊಡುತ್ತಿದೆ. ವಿಂಡೋಸ್, ಐಒಎಸ್, ಆಂಡ್ರಾಯ್ಡ್ - ಯಾವುದೇ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕೂಡ ನಾವು ಯಾವುದೇ ಪಠ್ಯವನ್ನು, ಯಾವುದೇ ವಿಶೇಷ ತಂತ್ರಜ್ಞಾನ ಅಳವಡಿಸದೆಯೇ ಓದಲು ಸಾಧ್ಯವಾಗಿರುವುದು ಯೂನಿಕೋಡ್ ಎಂಬ ಜಾಗತಿಕ ಅಥವಾ ಸಾರ್ವತ್ರಿಕ ಶಿಷ್ಟತೆಯು ಜಾರಿಗೆ ಬಂದ ಬಳಿಕ.

ಆದರೆ, ಯೂನಿಕೋಡ್‌ನ ಬಳಕೆಗೆ ಪುಟ ವಿನ್ಯಾಸಕಾರರು, ಜಾಹೀರಾತು ವಿನ್ಯಾಸಕಾರರು, ಆಮಂತ್ರಣ ವಿನ್ಯಾಸಕಾರರೇ ಮೊದಲಾಗಿ, ಮುದ್ರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಸ್ವಲ್ಪ ಹಿಂದೆ ಸರಿಯುತ್ತಿರುವುದಕ್ಕೆ ಪ್ರಧಾನ ಕಾರಣವೆಂದರೆ, ಯೂನಿಕೋಡ್ ಬೆಂಬಲಿಸುವ ಅಕ್ಷರಶೈಲಿಗಳು ಅಥವಾ ಫಾಂಟ್‌ಗಳು ಇರುವುದರ ಬಗೆಗೆ ಪ್ರಕಾಶಕರಿಗಾಗಲೀ, ಡಿಸೈನರುಗಳಿಗಾಗಲೀ ಮಾಹಿತಿ ಇಲ್ಲದಿರುವುದು.

ಯೂನಿಕೋಡ್ ಬರುವುದಕ್ಕಿಂತ ಮೊದಲು ಇದ್ದ ASCII ವ್ಯವಸ್ಥೆಯಲ್ಲಿ ಭಾರಿ ಪ್ರಮಾಣದಲ್ಲಿ ವಿಶಿಷ್ಟ ವಿನ್ಯಾಸದ ಫಾಂಟ್‌ಗಳಿದ್ದವು. ಅವುಗಳು ಜನಪ್ರಿಯವಾಗಿದ್ದೇ ವೈವಿಧ್ಯಮಯ ಫಾಂಟ್‌ಗಳ ಲಭ್ಯತೆಯಿಂದ. ಈಗ ಇರುವ ಎಲ್ಲ ASCII ಮಾದರಿಗಳು – ಉದಾಹರಣೆಗೆ, ನುಡಿ, ಶ್ರೀಲಿಪಿ, ಬರಹ ಎಲ್ಲವೂ ಅವುಗಳಲ್ಲಿರುವ ಫಾಂಟ್‌ಗಳ ಆಕರ್ಷಕ ವಿನ್ಯಾಸದಿಂದಾಗಿ ಜನಪ್ರಿಯವಾದವು. ಶ್ರೀಲಿಪಿಯಲ್ಲಿ ನೂರಾರು ಫಾಂಟ್‌ಗಳಿರುವಂತೆ ಯೂನಿಕೋಡ್ ಬೆಂಬಲಿಸುವ, ವೈವಿಧ್ಯಮಯ ಫಾಂಟುಗಳ ಅಭಿವೃದ್ಧಿಗೂ ಸಾಕಷ್ಟು ಪರಿಶ್ರಮ ಸಾಗುತ್ತಿದೆ. ಕನ್ನಡ ಪ್ರೇಮಿ ತಂತ್ರಜ್ಞರು ಅನೇಕ ಮಂದಿ, ತಮ್ಮ ಕನ್ನಡ ಪ್ರೀತಿಯಿಂದ ಅಕ್ಷರ ಶೈಲಿ ಅಥವಾ ಫಾಂಟ್‌ಗಳನ್ನು ಅಭಿವೃದ್ದಿಪಡಿಸಿದ್ದಾರೆ. ಆದರೆ, ಅವುಗಳ ಪ್ರಚಾರ ಆಗಿರುವುದು ಕಡಿಮೆ.

ತತ್ಫಲವಾಗಿ, ತುಂಗಾ, ನುಡಿ, ಬರಹ, ನೋಟೋ ಕನ್ನಡ, ಅಕ್ಷರ, ಕೇದಗೆ, ಸಂಪಿಗೆ, ನವಿಲು, ಮಲ್ಲಿಗೆ, ಸಂಪಿಗೆ, ಲೋಹಿತ್ ಕನ್ನಡ, ಶ್ರೀರಾಜು, ಬಾಲು ತಮ್ಮ, ಉಮಾ, ಅಕಾಯ, ಬೆಣ್ಣೆ, ರಾವಿ ಮುಂತಾದವು ಸಾಕಷ್ಟು ಸಮಯದಿಂದ ಬಳಕೆಯಲ್ಲಿವೆ. ಇತ್ತೀಚೆಗಷ್ಟೇ ಎಟಿಎಸ್ ಬೆಂಗಳೂರು, ಎಟಿಎಸ್ ಬಂಡೀಪುರ ಹಾಗೂ ತೀರಾ ಇತ್ತೀಚೆಗೆ ಕಿಟೆಲ್ ಫಾಂಟ್‌ಗಳು ಬಿಡುಗಡೆಯಾಗಿವೆ. ಇವೆಲ್ಲವೂ ಸುಂದರ ಹಾಗೂ ವೈವಿಧ್ಯಮಯ ಶೈಲಿಗಳಿಂದ ಗಮನ ಸೆಳೆಯುತ್ತಿದ್ದು, ಸಾಕಷ್ಟು ಪ್ರಚಾರ ದೊರೆಯುವ ಅಗತ್ಯವಿದೆ. ಕೆಲವು ಫಾಂಟುಗಳಲ್ಲಿ ಒತ್ತಕ್ಷರದ ರೆಂಡರಿಂಗ್‌ನಲ್ಲಿ ಸಣ್ಣಪುಟ್ಟ ತೊಡಕುಗಳಿವೆಯಾದರೂ, ಹೆಚ್ಚಿನವುಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಅಕ್ಷರ ಗೋಚರವಾಗುತ್ತದೆ.

ಯೂನಿಕೋಡ್ ಕನ್ಸಾರ್ಶಿಯಂ ಫಾಂಟ್‌ಗಳನ್ನು ಅಭಿವೃದ್ಧಿಪಡಿಸುವುದಿಲ್ಲ. ಅದರ ಕೆಲಸವೂ ಅದಲ್ಲ. ಯೂನಿಕೋಡ್ ಬೆಂಬಲಿಸುವ ವೈವಿಧ್ಯಮಯ ವಿನ್ಯಾಸದ ಫಾಂಟ್‌ಗಳನ್ನು ಜನರೇ ಸ್ವಯಂಪ್ರೇರಣೆಯಿಂದ ಅಭಿವೃದ್ಧಿಪಡಿಸಬಹುದು. ಆದರೆ ಫಾಂಟ್ ಅಭಿವೃದ್ಧಿಪಡಿಸಲು ನೂರಾರು ಗಂಟೆಗಳ ಶ್ರಮವಿರುತ್ತದೆ, ಸಂಪನ್ಮೂಲದ ಸಮಸ್ಯೆಯೂ ಇರುತ್ತದೆ, ಮತ್ತು ಫಾಂಟ್ ಡೆವಲಪ್ ಮಾಡುವುದಕ್ಕೆ ಸಾಕಷ್ಟು ಪರಿಣತಿಯೂ ಬೇಕು.

ಪ್ರಜಾವಾಣಿ ಪತ್ರಿಕೆಯು ತಜ್ಞರ ಮೂಲಕವಾಗಿ ತನ್ನದೇ ಆದ ಯೂನಿಕೋಡ್ ಫಾಂಟ್ ಅಭಿವೃದ್ಧಿಪಡಿಸಿಕೊಂಡು ಈಗಾಗಲೇ ಮುದ್ರಣ ಆವೃತ್ತಿಯಲ್ಲಿ ಬಳಸುತ್ತಿದೆ ಮತ್ತು ಇದರ ಬಳಕೆಯು ಸುದ್ದಿ-ಮಾಹಿತಿಯ ರವಾನೆಗೆ, ಅನುಕೂಲ ಕಲ್ಪಿಸಿದೆ. ಪ್ರಜಾವಾಣಿ ಪತ್ರಿಕೆಯ ಸುಂದರ ವಿನ್ಯಾಸದ ಅನನ್ಯತೆಗೆ ಕಾರಣವೇ ಈ ಸ್ವಂತದ್ದಾದ ಫಾಂಟ್.

ಯೂನಿಕೋಡ್ ಬೆಂಬಲಿಸುವ ಅಕ್ಷರಶೈಲಿಗಳನ್ನು ಬಳಸಿದರೆ ಯಾವುದೇ ಕಾರ್ಯಾಚರಣಾ ವ್ಯವಸ್ಥೆಯಲ್ಲಿ, ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್, ಫ್ಯಾಬ್ಲೆಟ್‌ಗಳೆಂಬ ಭೇದವಿಲ್ಲದೆ ಮುಕ್ತವಾಗಿ ಎಲ್ಲರಿಗೂ ಓದುವುದು ಸಾಧ್ಯವಾಗುತ್ತದೆ. (ಅಂದರೆ ಇದನ್ನು ನೋಡುವುದಕ್ಕೆ ನಮ್ಮ ಸಿಸ್ಟಂಗಳಲ್ಲಿ ಪ್ರತ್ಯೇಕ ತಂತ್ರಾಂಶವನ್ನಾಗಲೀ, ಫಾಂಟ್‌ಗಳನ್ನಾಗಲೀ ಅಳವಡಿಸಿಕೊಳ್ಳುವ ಅಗತ್ಯವಿರುವುದಿಲ್ಲ). ಇದಲ್ಲದೆ, ಯಾವುದೇ ಒಂದು ಡಾಕ್ಯುಮೆಂಟ್ ಅಥವಾ ಲೇಖನದಲ್ಲಿ ಪದ ಹುಡುಕುವ, ಬದಲಿಸುವ ಆಯ್ಕೆಗಳು ಲಭ್ಯವಾಗುವುದು ಯೂನಿಕೋಡ್ ಬೆಂಬಲಿಸುವ ಫಾಂಟ್‌ನಿಂದ ಮಾತ್ರ. ASCII ಫಾಂಟ್‌ನಲ್ಲಿ ಈ ವ್ಯವಸ್ಥೆ ಕಷ್ಟ. ಉಳಿದಂತೆ, ಆಧುನಿಕ ತಂತ್ರಜ್ಞಾನಗಳಾದ ಪಠ್ಯದಿಂದ ಧ್ವನಿಗೆ, ಧ್ವನಿಯಿಂದ ಪಠ್ಯಕ್ಕೆ ಬದಲಿಸುವ ತಂತ್ರಜ್ಞಾನ, ಒಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್) ಇವೆಲ್ಲ ಸಾಧ್ಯವಿರುವುದು ಯೂನಿಕೋಡ್‌ನಲ್ಲಿ.

ಪ್ರಕಾಶಕರು, ಡಿಸೈನರುಗಳು ಕೂಡ ತಮ್ಮ ತಂತ್ರಜ್ಞಾನದ ಜ್ಞಾನವನ್ನು ಹೆಚ್ಚಿಸಿಕೊಂಡು, ಯೂನಿಕೋಡ್‌ನಲ್ಲಿ ಹೊಸ ಅಕ್ಷರಶೈಲಿಗಳನ್ನು ಅಳವಡಿಸಿಕೊಂಡರೆ ಮುದ್ರಣ ಕಾರ್ಯಕ್ಕೂ, ಅದೇ ಪಠ್ಯವನ್ನು ವೆಬ್ ತಾಣಗಳಲ್ಲಿ ಬಳಸುವುದಕ್ಕೂ ಅನುಕೂಲಕರ. ಯಾವುದೇ ಫಾಂಟ್ ಕನ್ವರ್ಟರ್ ಅಗತ್ಯವಿಲ್ಲದೆ ಈ ಕೆಲಸ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಯೂನಿಕೋಡ್ ಬೆಂಬಲಿಸುವ ವೈವಿಧ್ಯಮಯ ವಿನ್ಯಾಸದ ಫಾಂಟ್‌ಗಳ ಅಭಿವೃದ್ಧಿಗೆ, ಅದರ ಪ್ರಚಾರಕ್ಕೆ ಗಮನ ಹರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT