ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೇಗೌಡರ ರೋಬೊ

ಅಪ್ಪಟ ಹಳ್ಳಿ ಪ್ರತಿಭೆಯ ಅದ್ಭುತ ಸಾಧನೆ
Last Updated 18 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಏಳನೇ ತರಗತಿವರೆಗೆ ಓದಿರುವ ರೈತ ವಿಜ್ಞಾನಿ ಮಂಜೇಗೌಡರಿಗೆ ಕೃಷಿ ಭೂಮಿಯೇ ಪ್ರಯೋಗಶಾಲೆ. ಸದಾ ಹೊಸತನಕ್ಕೆ ತುಡಿಯುವ ಇವರು ವ್ಯರ್ಥ ತ್ಯಾಜ್ಯ, ಕೃಷಿ ಉಪಕರಣ ಬಳಸಿ ವಿವಿಧ ರೀತಿ ರೋಬೊಟ್ ಕಂಡು ಹಿಡಿದಿದ್ದಾರೆ. ಈ ರೋಬೊಗಳು ಕೃಷಿ, ಪ್ರಕೃತಿ ವಿಕೋಪ ನಿರ್ವಹಣೆ, ಅಪಘಾತ, ಸೈನಿಕ ಕಾರ್ಯಾಚರಣೆಯಲ್ಲಿ ಸಹಾಯಕ್ಕೆ ಬರುತ್ತವೆ.

ಕೆ.ಆರ್‌.ಪೇಟೆ ತಾಲ್ಲೂಕು, ಕೋಮನಹಳ್ಳಿ ಗ್ರಾಮದ ಮಂಜೇಗೌಡರು ಇಲ್ಲಿಯವರೆಗೆ 15 ರೋಬೊ ರೂಪಿಸಿದ್ದಾರೆ. ‘ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ನಟರಾದ ಅನಿಲ್‌, ಉದಯ್‌ ಕೆರೆಗೆ ಬಿದ್ದು ಮೃತಪಟ್ಟಾಗ ಮಂಜೇಗೌಡರ ‘ಅನ್ವೇಷಣೆ’ ಹೆಸರಿನ ರೋಬೊ ಶವ ಹುಡುಕಿಕೊಟ್ಟಿದೆ. ಸ್ಥಳೀಯವಾಗಿ ಸಂಭವಿಸುವ ಹಲವು ದುರ್ಘಟನೆ ಸಂದರ್ಭದಲ್ಲಿ ಅನ್ವೇಷಣೆ ರೋಬೊ ಬಹಳ ಉಪಯೋಗಕ್ಕೆ ಬರುತ್ತಿದೆ.

ಸೈನಿಕ್‌ ರೋಬೊ

ಇದು ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗೆ ನೆರವಾಗುತ್ತದೆ. ಅಪಾಯದ ಸ್ಥಳಗಳಲ್ಲಿ ಈ ಸೈನಿಕ್‌ ರೋಬೊವನ್ನು ಕರ್ತವ್ಯಕ್ಕೆ ನಿಯೋಜಿಸಬಹುದು. ಶತ್ರುಗಳು ದಾಳಿ ಆರಂಭಿಸುವ ಮುನ್ಸೂಚನೆಯನ್ನು ಇದು ನೀಡುತ್ತದೆ. ಜನಮನ್ನಣೆಗಳಿಸಿರುವ ಇದರ ಬಗ್ಗೆ ಮಂಜೇಗೌಡರು ಹಲವು ಸಮಾರಂಭಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಇಂಥವುಗಳ ಮಹತ್ವ ಅರಿಯಬೇಕು ಎಂದು ಕಳೆದೆರಡು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದಾರೆ.

ಲಿಫ್ಟ್‌ ರೋಬೊ

‌ಕೋಮನಹಳ್ಳಿ ಗ್ರಾಮದ ತಮ್ಮ ಮನೆಗೆ ಅಳವಡಿಸಿಕೊಂಡಿರುವ ಲಿಫ್ಟ್‌ ರೋಬೊ ಕೇವಲ ₹ 18,430 ಖರ್ಚಿನಿಂದ ತಯಾರಾಗಿದೆ. ಎರಡು ಮಹಡಿಯ ಮನೆಗೆ ಇದನ್ನು ಅಳವಡಿಸಿದ್ದಾರೆ. ಜೊತೆಗೆ ತಮ್ಮ ಮನೆಗೆ ಸ್ವಯಂಚಾಲಿತ ಗೇಟ್‌ ಕೂಡ ತಯಾರಿಸಿಕೊಂಡಿದ್ದಾರೆ. ಮನೆಗೆ ಯಾರೇ ಬಂದರೂ ಈ ಗೇಟ್‌ ಸ್ವಯಂಚಾಲಿತವಾಗಿ ಮುನ್ಸೂಚನೆ ನೀಡುತ್ತದೆ.

ಪಂಪ್‌ಸೆಟ್‌ ರೋಬೊ

2014ರಲ್ಲಿ ಮೊದಲ ಬಾರಿಗೆ ಮಂಜೇಗೌಡರು ಕೊಳವೆ ಬಾವಿಯೊಳಗೆ ಬಿದ್ದ ಮಗುವನ್ನು ಮೇಲೆತ್ತುವ ರೋಬೊ ಸಂಶೋಧಿಸಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಸೂಳಿಕೆರಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಮಗು ತಿಮ್ಮಣ್ಣನನ್ನು ಮೇಲೆತ್ತಲು ಯತ್ನಿಸಿದ್ದರು. ಆದರೆ ಅವರ ಯತ್ನ ವಿಫಲಗೊಂಡಿತ್ತು.

‘ಸೂಕ್ತ ಸಮಯದಲ್ಲಿ ನಾನು ಗ್ರಾಮ ತಲುಪಿದ್ದರೆ ಮಗುವನ್ನು ರಕ್ಷಿಸುವ ಸಾಧ್ಯತೆ ಇತ್ತು. ಬಸ್‌ನಲ್ಲಿ ಎಂಟು ಗಂಟೆ ಪ್ರಯಾಣವೇ ಹಿಡಿಯಿತು. ನಾನು ಸ್ಥಳಕ್ಕೆ ಬರುವಷ್ಟರಲ್ಲಿ ಜೆಸಿಬಿ ಯಂತ್ರಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಮಣ್ಣು ಬಿದ್ದು ಮಗು ಮತ್ತಷ್ಟು ಕೆಳಕ್ಕೆ ಬಿದ್ದಿತ್ತು. ಹೀಗಾಗಿ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ’ ಎಂದು ಮಂಜೇಗೌಡ ಬೇಸರದಿಂದಲೇ ಘಟನೆಯನ್ನು ನೆನಪಿಸಿಕೊಂಡರು.

ರೈತರಿಗೆ ಅನುಕೂಲವಾಗುವ ನಾಟಿ ಯಂತ್ರ ಕಂಡು ಹಿಡಿದಿದ್ದಾರೆ. ಅದು ಕೇವಲ ₹300 ವೆಚ್ಚದಲ್ಲಿ. ಸ್ವತಃ ರೈತರೂ ಆಗಿರುವ ಮಂಜೇಗೌಡ ತಮ್ಮ ಹೊಲದಲ್ಲಿ ಈ ಯಂತ್ರದಿಂದಲೇ ನಾಟಿ ಮಾಡಿಕೊಂಡಿದ್ದಾರೆ. ಕರೆಂಟ್‌ ಇಲ್ಲದಿದ್ದರೂ ನೀರು ಪಂಪ್‌ ಮಾಡುವ ಯಂತ್ರ ಕಂಡು ಹಿಡಿದಿದ್ದಾರೆ. ನೀರನ್ನೇ ಶಕ್ತಿಯಾಗಿ ಪರಿವರ್ತಿಸುವ ಇವರ ಸಂಶೋಧನೆ ವಿಜ್ಞಾನಿಗಳಿಗೂ ಕೌತುಕ ಎನಿಸಿದೆ. ಅತ್ಯಂತ ಕಡಿಮೆ ಬೆಲೆಗೆ ತೆಂಗಿನ ಮರಹತ್ತಿ ಕಾಯಿ ಕೀಳುವ ಯಂತ್ರವನ್ನೂ ಇವರು ಸಂಶೋಧಿಸಿದ್ದಾರೆ. ಈ ಕೃಷಿ ಯಂತ್ರಗಳಿಗೆ ಮನ್ನಣೆ ನೀಡುವಂತೆ ಈಗಾಗಲೇ ತೋಟಗಾರಿಕೆ ಹಾಗೂ ಕೃಷಿ ಇಲಾಖೆಗೆ ಮನವಿ ಮಾಡಿದ್ದಾರೆ.

‘ಸ್ವಯಂ ಚಾಲಿತ ರೈಲ್ವೆ ಗೇಟ್‌’ ಇವರ ಮಹತ್ವದ ರೋಬೊಗಳಲ್ಲೊಂದು. ಗೇಟ್‌ ಮ್ಯಾನ್‌ ಇಲ್ಲದಿದ್ದರೂ ರೈಲು ಬಂದಾಗ ಸ್ವಯಂಚಾಲಿತವಾಗಿ ಗೇಟ್‌ ಹಾಕಿಕೊಳ್ಳುವ ಈ ಸಂಶೋಧನೆ ಬಹಳ ಅಪರೂಪ ಎನಿಸಿದೆ. ಮೇಲ್ಸೇತುವೆ ಇಲ್ಲದ ರೈಲ್ವೆಗೇಟ್‌ಗಳು ನಮ್ಮ ದೇಶದಲ್ಲಿ ಬಹಳಷ್ಟು ಕಡೆ ಇವೆ. ಮಂಜೇಗೌಡರ ರೋಬೊ ಇಂತಹ ಸ್ಥಳಗಳಲ್ಲಿ ಉಪಯೋಗಕ್ಕೆ ಬರುತ್ತದೆ.

ವಾಯು ಮಾಲಿನ್ಯ ತಡೆಗೆ ರೋಬೊ

ವಾಯುಮಾಲಿನ್ಯ ತಡೆಗೆ ಅಪರೂಪದ ರೋಬೊ ಕಂಡು ಹಿಡಿದಿದ್ದಾರೆ. ಪಕೃತಿ ಸಂರಕ್ಷಣೆಯ ಮಹತ್ವಕಾಂಕ್ಷೆಯೊಂದಿಗೆ 17 ತಿಂಗಳಿಂದ ಸತತ ಸಂಶೋಧನೆಯಲ್ಲಿ ತೊಡಗಿರುವ ಅವರು ಅದನ್ನು ಶೀಘ್ರ ಬಿಡುಗಡೆ ಮಾಡುವ ಸಂಕಲ್ಪ ಹೊಂದಿದ್ದಾರೆ.

‘ಈ ವರ್ಷ ನನ್ನ ಕನಸಿನ ರೋಬೊವನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದ್ದೇನೆ. ರೋಬೊ ಮಾಯುಮಾಲಿನ್ಯ ತಡೆಯಲಿದೆ. ಆರ್ಗ್ಯಾನಿಕ್‌ ಲಿಕ್ವಿಡ್‌ ಪ್ರೋಸೆಸ್‌ ತಂತ್ರಜ್ಞಾನದ ಮೂಲಕ ವಾಯು ಮಾಲಿನ್ಯವನ್ನು ಈ ಯಂತ್ರ ಹೀರಿಕೊಳ್ಳುತ್ತದೆ. ಕೇವಲ ₹ 1 ಸಾವಿರ ಖರ್ಚು ಮಾಡಿದರೆ ಈ ರೋಬೊ ತಯಾರಾಗುತ್ತದೆ. ವಾಹನಗಳಿಗೆ ಇದನ್ನು ಅಳವಡಿಸಿಕೊಂಡರೆ ಹೊಗೆ ಪ್ರಕೃತಿಗೆ ಪ್ರವೇಶ ಮಾಡುವ ಮುನ್ನವೇ ಯಂತ್ರ ಹೀರಿಕೊಳ್ಳಲಿದೆ. ವರ್ಷಕ್ಕೊಮ್ಮೆ ಸರ್ವೀಸ್‌ ಮಾಡಿಸಿದರೆ ಸಾಕು. ಇದನ್ನು ಕೈಗಾರಿಕೆಗಳಿಗೂ ಅಳವಡಿಸುವ ರೀತಿಯಲ್ಲಿ ವಿನ್ಯಾಸ ಮಾಡಿದ್ದೇನೆ. ಶೇ 80 ಕೆಲಸ ಮುಗಿದಿದ್ದು ಶೀಘ್ರ ಇದನ್ನು ಬಿಡುಗಡೆ ಮಾಡುತ್ತೇನೆ’ ಎಂದು ಮಂಜೇಗೌಡ ತಿಳಿಸಿದರು. ರೋಬೊಗಳ ಮಾಹಿತಿಗಾಗಿ ಮಂಜೇಗೌಡರ ಸಂಪರ್ಕ ಸಂಖ್ಯೆ ಮೊ: 9900773528.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT