ಗುರುವಾರ , ಮೇ 26, 2022
26 °C

10 ವರ್ಷದ ಹುಡುಗಿಗೆ 'ಅಲೆಕ್ಸಾ' ನೀಡಿದ್ದ ಶಾಕಿಂಗ್‌ ಸವಾಲು!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಸ್ಯಾನ್‌ ಫ್ರಾನ್ಸಿಸ್ಕೊ: ಟೆಕ್‌ ದಿಗ್ಗಜ ಅಮೆಜಾನ್‌ನ ಸ್ಮಾರ್ಟ್‌ ಸ್ಪೀಕರ್‌ 'ಅಲೆಕ್ಸಾ' 10 ವರ್ಷದ ಹುಡುಗಿಯೊಬ್ಬಳಿಗೆ ನೀಡಿದ್ದ ಸವಾಲು ಪೋಷಕರನ್ನು ಗಲಿಬಿಲಿಗೊಳಿಸಿದ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.

ಅಲೆಕ್ಸಾ ಬಳಿ ಏನಾದರೂ ಸವಾಲು ಹಾಕುವಂತೆ ಹುಡುಗಿ ಕೇಳಿದ್ದಳು. ಇದಕ್ಕೆ ಸ್ಮಾರ್ಟ್‌ ಮಾತುಗಾರ್ತಿ ಅಲೆಕ್ಸಾ ಕೊಟ್ಟ ಚಾಲೆಂಜ್‌ ಶಾಂಕಿಂಗ್‌ ಎನಿಸುವಂತಿದೆ. 'ಫೋನ್‌ ಚಾರ್ಜರ್‌ ಅನ್ನು ಗೋಡೆಗೆ ಅಂಟಿಕೊಂಡಿರುವ ವಿದ್ಯುತ್‌ ಸಾಕೆಟ್‌ಗೆ ಅರ್ಧದಷ್ಟು ಚುಚ್ಚಿ, ಬಳಿಕ ಹೊರಗೆ ಕಾಣಿಸುವ ಪ್ಲಗ್‌ನ ಮೊನೆಗೆ ನಾಣ್ಯವನ್ನು (ಪೆನ್ನಿ) ಸ್ಪರ್ಶಿಸಬೇಕು' ಎಂಬ ಸವಾಲನ್ನು ಅಲೆಕ್ಸಾ ನೀಡಿದೆ.

ಇಂತಹ ಅಪಾಯಕಾರಿ ಸವಾಲಿನ ದೋಷದ ಬಗ್ಗೆ ಗೊತ್ತಾಗುತ್ತಿದ್ದಂತೆ ಸರಿಪಡಿಸಲಾಗಿದೆ ಎಂದು ಅಮೆಜಾನ್‌ ಸ್ಪಷ್ಟನೆ ನೀಡಿದೆ.

ಹುಡುಗಿಯ ತಾಯಿ ಕ್ರಿಸ್ಟಿನ್‌ ಲಿವ್‌ಡಹಲ್‌ ಘಟನೆ ಕುರಿತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ನನ್ನ 10 ವರ್ಷದ ಮಗಳಿಗೆ ಅಲೆಕ್ಸಾ ನೀಡಿದ ಸವಾಲಿದು' ಎಂದು ವೆಬ್‌ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ.

ಟಿಕ್‌ಟಾಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಅಪಾಯಕಾರಿ 'ಪೆನ್ನಿ ಚಾಲೆಂಜ್‌' ಕಳೆದ ಒಂದು ವರ್ಷದಿಂದ ಓಡಾಡುತ್ತಿದೆ. ಲೋಹದ ವಸ್ತುಗಳನ್ನು ವಿದ್ಯುತ್‌ ಸಾಕೆಟ್‌ಗಳಿಗೆ ಸ್ಪರ್ಶಿಸಿದರೆ ವಿದ್ಯುತ್‌ ಶಾಕ್‌ ಉಂಟಾಗುತ್ತದೆ, ಅಗ್ನಿ ದುರಂತಕ್ಕೂ ಕಾರಣವಾಗಬಹುದು.

'ಮುಂದಿನ ದಿನಗಳಲ್ಲಿ ಅಲೆಕ್ಸಾ ಸ್ಮಾರ್ಟ್‌ ಸ್ಪೀಕರ್‌ನಿಂದ ಇಂತಹ ಸಲಹೆಗಳು ಬಾರದಂತೆ ತಡೆಯುತ್ತೇವೆ. ದೋಷದ ಕುರಿತು ಗೊತ್ತಾಗುತ್ತಿದ್ದಂತೆ ತಕ್ಷಣ ಕಾರ್ಯರೂಪಕ್ಕಿಳಿದು ಸರಿಪಡಿಸಿದ್ದೇವೆ' ಎಂದು ಅಮೆಜಾನ್‌ 'ಬಿಬಿಸಿ'ಗೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು