ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ | ಜಾನುವಾರುಗಳಿಗೂ ಸ್ಮಾರ್ಟ್‌ ಬ್ಯಾಂಡ್‌!

Last Updated 23 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಗೋಮಾಳದಲ್ಲಿ ಗೋವು ಇರುವ ಸ್ಥಳವನ್ನೂ ನಿಖರವಾಗಿ ತೋರಿಸುತ್ತದೆ ಈ ಸ್ಮಾರ್ಟ್‌ ಬ್ಯಾಂಡ್. ಇದರಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಗೋವಿನ ಹಲವು ಮಾಹಿತಿಗಳು ನಿಖರವಾಗಿ ಸಿಗುತ್ತವೆ.

***

‘ದನ ಕಾಯೋಕ್ಹೋಗು...’ ಎಂಬುದನ್ನು ನಾವು ಇಂದು ಬೈಗುಳವನ್ನಾಗಿ ಬಳಸುತ್ತಿದ್ದೇವೆ. ಹಿಂದಿನ ಶತಮಾನದಲ್ಲಿ ಒಂದು ಕೆಲಸವಾಗಿದ್ದ ಇದು ಈಗ ಬೈಗುಳವಾಗಿ ಚಾಲ್ತಿಯಲ್ಲಿದೆ. ಆದರೆ, ಈ ಪದಕ್ಕೂ ಕೆಲಸಕ್ಕೂ ಇನ್ನು ಸ್ವಲ್ಪ ದಿನಗಳಲ್ಲಿ ಹೊಸ ಸ್ಟೇಟಸ್ ಬರಲಿದೆ! ಇದಕ್ಕೆ ಕಾರಣ ಟೆಕ್ನಾಲಜಿ ಅಂದರೆ ನೀವು ನಂಬಬೇಕು!

ನಮ್ಮಲ್ಲಿ ಗೋವುಗಳ ಉತ್ಪನ್ನದ ಉತ್ಪಾದನೆ, ತಯಾರಿಕೆ ವಿಚಾರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ವ್ಯಾಪಕವಾಗಿದೆ. ಆದರೆ ಗೋವುಗಳ ನಿರ್ವಹಣೆ ವಿಚಾರದಲ್ಲಿ ತಂತ್ರಜ್ಞಾನಗಳ ಬಳಕೆ ಅತ್ಯಂತ ಸೀಮಿತ. ಯುರೋಪ್‌ ದೇಶಗಳಲ್ಲಿ ಗೋವುಗಳ ನಿರ್ವಹಣೆ ವಿಷಯದಲ್ಲಿಯೂ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ನಮ್ಮಲ್ಲಿ ಕೈಯಲ್ಲಿ ಹಾಲು ಹಿಂಡುತ್ತಿದ್ದ ಕಾಲದಲ್ಲೇ ಅಲ್ಲಿ ಮಶಿನ್‌ಗಳು ಬಂದಿದ್ದವು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನ್ಯೂಜಿಲೆಂಡ್‌ನ ಒಂದು ಸ್ಟಾರ್ಟಪ್‌ ‘ಹಾಲ್ಟರ್’ ಗೋವುಗಳಿಗಾಗಿ ಸ್ಮಾರ್ಟ್‌ ಕಾಲರ್ ಬ್ಯಾಂಡ್ ಅನ್ನು ಸಿದ್ಧಪಡಿಸಿದೆ! ಇದು ಗೋವಿನ ತಾಪಮಾನ, ಬೆದೆಗೆ ಬರುವ ಸಮಯ, ಗೋವುಗಳ ವರ್ತನೆ, ಸಾಮಾನ್ಯ ಆರೋಗ್ಯದ ಮಾಹಿತಿಯನ್ನು ದಾಖಲಿಸುತ್ತದೆ. ಇನ್ನು, ಈ ಬ್ಯಾಂಡ್ ಗೋವು ಇರುವ ಸ್ಥಳವನ್ನೂ ನಿಖರವಾಗಿ ತೋರಿಸುತ್ತದೆ. ಈ ಬ್ಯಾಂಡ್‌ಗೆ ಜಿಪಿಎಸ್ ಅಳವಡಿಸಲಾಗಿದ್ದು, ‘ಗೋವು ಎಲ್ಲಿದೆ’ ಎಂಬ ಮಾಹಿತಿ ನಿಖರವಾಗಿ ಸಿಗುತ್ತದೆ. ಇದೆಲ್ಲವನ್ನೂ ಸ್ಮಾರ್ಟ್‌ಫೋನ್‌ನಲ್ಲಿರುವ ಆ್ಯಪ್‌ ಬಳಸಿಕೊಂಡೇ ನೋಡಬಹುದು. ಇನ್ನು ದನ ಕಾಯುವವರೂ ಸ್ಮಾರ್ಟ್‌ ಆಗಬೇಕಾಗುತ್ತದೆ!

ಈ ಕಾಲರ್ ಬ್ಯಾಂಡ್‌ನಿಂದ ದನಗಳನ್ನು ಮೇಯಿಸುವಾಗ ಬೇಲಿ ಹಾಕುವ ಅಗತ್ಯವಿಲ್ಲ. ದನಗಳನ್ನು ಹೊರಗಡೆ ಬಿಟ್ಟರೂ ಅವುಗಳನ್ನು ಹುಡುಕಿ ಕರೆದುಕೊಂಡು ಬರುವುದು ಸುಲಭ. ಪ್ರೀತಿಯ ದನಗಳು ಕಳೆದು ಹೋದರೆ ಚಿಂತೆಯಿಲ್ಲ. ಅದಕ್ಕೊಂದು ಸ್ಮಾರ್ಟ್‌ ಬ್ಯಾಂಡ್ ಹಾಕಿ ಕಳುಹಿಸಿದರೆ, ಅದು ಎಲ್ಲಿದೆ ಎಂದು ಆ್ಯಪ್‌ನಲ್ಲಿ ನೋಡಿಕೊಂಡು ಹುಡುಕಿ ಕರೆದುಕೊಂಡು ಬರಬಹುದು.

ಈ ಬ್ಯಾಂಡ್‌ನ ಮತ್ತೊಂದು ವಿಶೇಷವೇನೆಂದರೆ, ಸೋಲಾರ್‌ ಮೂಲಕ ಚಾರ್ಜ್ ಆಗುತ್ತದೆ. ಬ್ಯಾಟರಿ ಖಾಲಿಯಾದಾಗ ಅದನ್ನು ತೆಗೆದು ಚಾರ್ಜ್‌ಗೆ ಹಾಕುವುದು ಒಂದು ಸಮಸ್ಯೆಯಾದ್ದರಿಂದ ಸೋಲಾರ್ ಸೆಲ್‌ಗಳನ್ನು ಅಳವಡಿಸಿ, ಅದರ ಮೂಲಕ ಬ್ಯಾಂಡ್‌ಗೆ ಬೇಕಾಗುವ ವಿದ್ಯುತ್ತನ್ನು ಒದಗಿಸುವ ಸೌಲಭ್ಯ ಮಾಡಲಾಗಿದೆ. ಇದು ನಿಜಕ್ಕೂ ಅನುಕೂಲಕರ ವಿಧಾನ. ಆದರೆ, ಇಲ್ಲೊಂದು ಮಹತ್ವದ ಸವಾಲಿದೆ. ಪ್ರತಿಯೊಂದು ಗೋವೂ ವಿಭಿನ್ನವಾದುದು. ಒಂದೊಂದು ಗೋವಿಗೂ ಆಹಾರ, ನಿದ್ರೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಒಂದೇ ವಯಸ್ಸಿನ ಗೋವು ತಿಂದಷ್ಟೇ ಹುಲ್ಲನ್ನು ಇನ್ನೊಂದು ಗೋವು ತಿನ್ನುವುದಿಲ್ಲ. ಅದೆಲ್ಲವನ್ನೂ ಅರ್ಥ ಮಾಡಿಕೊಳ್ಳುವುದು ಈ ಸ್ಮಾರ್ಟ್‌ ಕಾಲರ್‌ನ ಸವಾಲು. ಅದಕ್ಕೆ ‘ಹಾಲ್ಟರ್‌ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌’ ಮತ್ತು ‘ಮಶಿನ್ ಲರ್ನಿಂಗ್‌’ ಮಾದರಿಗಳನ್ನೆಲ್ಲ ಅಳವಡಿಸಿದೆ. ಹೀಗಾಗಿ, ಈ ಕಾಲರ್ ಸುಲಭವಾಗಿ ಅದನ್ನೂ ಅರ್ಥಮಾಡಿಕೊಳ್ಳಬಲ್ಲದು.

ಇಂಥ ಬ್ಯಾಂಡ್‌ಗಳು ಪ್ರಾಣಿ ಪ್ರಿಯರಿಗೆ ಹೊಸದೇನಲ್ಲ. 2017ರ ಹೊತ್ತಿನಲ್ಲೇ ನಾಯಿಗಳಿಗೆ ಇಂಥ ಬ್ಯಾಂಡ್‌ಗಳು ಬಂದಿದ್ದವು. ಆರಂಭದಲ್ಲಿ ಸ್ಥಳವನ್ನು ನಿಖರವಾಗಿ ಹೇಳುವ ಬ್ಯಾಂಡ್‌ಗಳು ಬಂದಿದ್ದವು. ಆದರೆ, ಅದು ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ನಂತರದಲ್ಲಿ ಶ್ವಾನಗಳ ಆರೋಗ್ಯ, ವರ್ತನೆ, ಎದೆಬಡಿತ ಸೇರಿದಂತೆ ಹಲವು ಸಂಗತಿಗಳನ್ನು ತಿಳಿಸುವ ಕಾಲರ್ ಬ್ಯಾಂಡ್‌ಗಳೂ ಬಂದಿವೆ. ಇವು ಹೆಚ್ಚು ಶ್ವಾನಪ್ರಿಯವಾಗುತ್ತಿವೆ. ಮನುಷ್ಯರ ಕೈಗೆ ಹಾಕುವ ಬ್ಯಾಂಡ್‌ಗಳ ಜೊತೆ ಜೊತೆಗೇ ನಾಯಿ ಕೊರಳಿಗೆ ತೊಡಿಸುವ ಬ್ಯಾಂಡ್‌ಗಳೂ ಸ್ಮಾರ್ಟ್‌ ಆಗುತ್ತಲೇ ಇದ್ದವು. ಈಗ ಈ ಸರದಿ ಜಾನುವಾರುಗಳದ್ದು.

ಈ ಬ್ಯಾಂಡ್‌ಗಳು ದೊಡ್ಡ ಮಟ್ಟದಲ್ಲಿ ಜಾನುವಾರುಗಳನ್ನು ನಿರ್ವಹಣೆ ಮಾಡುತ್ತಿರುವವರಿಗೆ ಅನುಕೂಲಕರ. ಜಾನುವಾರುಗಳನ್ನು ನಿರ್ವಹಣೆ ಮಾಡುವುದಕ್ಕೆ ಇದರಿಂದ ಜನರ ಸಂಖ್ಯೆ ಕಡಿಮೆ ಸಾಲುತ್ತದೆ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ನಿಗಾ ಇಡುವುದೂ ಸುಲಭವಾಗುತ್ತದೆ. ಈ ಬ್ಯಾಂಡ್‌ಗಳು ಜಾನುವಾರುಗಳ ವರ್ತನೆಯನ್ನು ಅರಿಯುವುದಕ್ಕೆ ಮಶಿನ್ ಲರ್ನಿಂಗ್ ಬಳಸುವುದರಿಂದ ಜಾನುವಾರುಗಳ ಆರೋಗ್ಯದಲ್ಲಿ ಯಾವುದೇ ಏರುಪೇರಾದರೆ ತಕ್ಷಣ ಎಚ್ಚರಿಕೆ ನೀಡಬಲ್ಲವು. ಮಶಿನ್ ಲರ್ನಿಂಗ್ ಇರುವುದರಿಂದ ಹುಸಿ ಅಲರ್ಟ್‌ಗಳ ಪ್ರಮಾಣವೂ ಕಡಿಮೆಯಾಗುತ್ತದೆ.

ಈ ಹಾಲ್ಟರ್ ತನ್ನ ಕಾಲರ್ ಬ್ಯಾಂಡ್‌ಗಳನ್ನು ಮಾರಾಟ ಮಾಡುತ್ತಿಲ್ಲ. ಬದಲಿಗೆ ಚಂದಾದಾರಿಕೆ ಆಧಾರದಲ್ಲಿ ಒದಗಿಸುತ್ತಿದೆ. ಸದ್ಯ ನ್ಯೂಜಿಲೆಂಡ್‌ನಲ್ಲಿ ಮಾತ್ರ ಇದು ಸೇವೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇದು ಇತರ ದೇಶಗಳಿಗೂ ವಿಸ್ತರಿಸಬಹುದು. ಅಷ್ಟೇ ಅಲ್ಲದೆ, ಇದೇ ಮಾದರಿಯನ್ನು ನಮ್ಮ ದೇಶದ ಕಂಪನಿಗಳೂ ಬಳಸಿಕೊಂಡು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT