ಭಾನುವಾರ, ಅಕ್ಟೋಬರ್ 24, 2021
24 °C

ಕೃತಕ ಮಾತಿನಲ್ಲೂ ಇದೆ ಸಹಜತೆ!

ಕೃಷ್ಣ ಭಟ್ Updated:

ಅಕ್ಷರ ಗಾತ್ರ : | |

Prajavani

ಎಪಿಐಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ದುರುದ್ದೇಶ ಪೂರಿತವಾದ ಪ್ರಚಾರವನ್ನೂ ಮಾಡಬಹುದು. ಸುಳ್ಳು ಸಂಗತಿಗಳನ್ನು ಅಪಾರ ಪ್ರಮಾಣದಲ್ಲಿ ಹರಿಬಿಡಬಹುದು. ಅಸಲಿ ವ್ಯಕ್ತಿಯನ್ನೇ ನಕಲಿಸುವ ಕೆಲಸವನ್ನೂ ಮಾಡಬಹುದು.

ಮುಂದಿನ ಕೆಲವು ವರ್ಷಗಳಲ್ಲಿ ಕೌನ್‌ ಬನೇಗಾ ಕರೋಡ್‌ಪತಿಯಂತಹ ಕಾರ್ಯಕ್ರಮದಲ್ಲಿ ಒಂದು ರೋಬೋವನ್ನು ತೆಗೆದುಕೊಂಡು ಹೋಗಿ ಕೂರಿಸಿದರೆ, ಅಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೂ ಯಾವುದೇ ಲೈಫ್‌ಲೈನ್ ಬಳಸದೇ ಕೆಲವೇ ಸೆಕೆಂಡುಗಳಲ್ಲಿ ಉತ್ತರ ಹೇಳಿ ಕಾರ್ಯಕ್ರಮದ ಅಷ್ಟೂ ಬಹುಮಾನಗಳನ್ನು ಗೆದ್ದು ಬೀಗಿದರೆ ಯಾರಿಗೂ ಅಚ್ಚರಿಯೇ ಆಗದಿರಬಹುದು!

ಹೈಸ್ಕೂಲಿನಲ್ಲಿ ಇಂಗ್ಲಿಷ್ ಶಿಕ್ಷಕರ ಬದಲಿಗೆ ಒಂದು ಪುಟ್ಟ ಸ್ಮಾರ್ಟ್‌ ಸ್ಪೀಕರ್ ಇಟ್ಟರೆ, ಇಂಗ್ಲಿಷ್ ಶಿಕ್ಷಕರಿಗಿಂತ ಅತ್ಯದ್ಭುತವಾದ ಇಂಗ್ಲಿಷ್ ಪಾಠವನ್ನೂ ಮಕ್ಕಳಿಗೆ ಹೇಳುವುದಲ್ಲದೆ, ಇಂಗ್ಲಿಷ್‌ ಬಗ್ಗೆ ಇರುವ ಎಲ್ಲ ಅನುಮಾನಗಳನ್ನೂ ಕ್ಷಣಾರ್ಧದಲ್ಲಿ ಪರಿಹರಿಸಿದರೆ ಅದರಲ್ಲಿ ಯಾವ ಆಶ್ಚರ್ಯವೂ ಇಲ್ಲ!

ಇದೆಲ್ಲ ಸಾಧ್ಯವಾಗುವುದು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೋಸೆಸಿಂಗ್‌ನಿಂದ. ಕಳೆದ ಹಲವು ದಶಕಗಳಿಂದ ನ್ಯಾಚುರಲ್‌ ಲ್ಯಾಂಗ್ವೇಜ್ ಪ್ರೋಸೆಸಿಂಗ್ ಅಥವಾ ಎನ್‌ಎಲ್‌ಪಿ ಎಂಬುದು ಎಲ್ಲ ಸ್ಮಾರ್ಟ್‌ ಸ್ಪೀಕರ್‌ಗಳು, ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಆದರೆ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಸ್ಥಾಪಿಸಿದ ಓಪನ್ ಎಐ ಎಂಬ ಸಂಸ್ಥೆ ಕಳೆದ ವರ್ಷ ’ಜಿಪಿಟಿ 3’ ಎಂಬ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೋಸೆಸಿಂಗ್ ಪ್ರೋಗ್ರಾಮ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದಾಗ ಇದರ ಸಂಪೂರ್ಣ ಸಾಮರ್ಥ್ಯದ ಅರಿವು ಜಗತ್ತಿಗೆ ಆಗಲು ಶುರುವಾಯಿತು.

ಇದಕ್ಕೆ ಈಗ ಪ್ರತಿಸ್ಫರ್ಧಿಯಾಗಿ ಇಸ್ರೇಲ್‌ನ ಎಐ21 ಲ್ಯಾಬ್ಸ್‌ ಎಂಬ ಸಂಸ್ಥೆ ‘ಜುರಾಸಿಕ್-1’ ಎಂಬ ಪ್ರೋಗ್ರಾಮ್ ಅನ್ನು ಮುಂದಿನ ಕೆಲವು ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿಕೊಂಡಿದೆ.

ಏನಿದು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್?

ಸರಳವಾಗಿ ಹೇಳುವುದಾದರೆ, ಮನುಷ್ಯ ಮಾತನಾಡುವ ಮತ್ತು ಮಾತನ್ನು ಅರ್ಥ ಮಾಡಿಕೊಳ್ಳುವ ವಿಧಾನವನ್ನು ಕಂಪ್ಯೂಟರ್‌ಗಳಿಗೆ ಕಲಿಸುವುದು. ಇದರಲ್ಲಿ, ಹೀಗೆ ಕಲಿಸುವ ಕಂಪನಿ ಎಷ್ಟು ಹೆಚ್ಚು ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ ಎಂಬುದರ ಮೇಲೆ ಅದರ ದಕ್ಷತೆಯೂ ಅಂದಾಜಾಗುತ್ತದೆ. ಉದಾಹರಣೆಗೆ, ಎಐ21 ತನ್ನ ’ಜುರಾಸಿಕ್‌-1’ಕ್ಕೆ ತರಬೇತಿ ನೀಡಲು 2.50 ಲಕ್ಷ ಪದಗುಚ್ಛಗಳನ್ನು ಬಳಸಿಕೊಂಡಿದೆಯಂತೆ! ಇನ್ನು ಓಪನ್‌ಎಐ 50 ಸಾವಿರ ಪದಗುಚ್ಛಗಳನ್ನು ಬಳಸಿಕೊಂಡು ’ಜಿಪಿಟಿ 3’ಗೆ ತರಬೇತಿ ನೀಡಿದೆ. ಪ್ರತಿ ಪದ ಹಾಗೂ ಪದರಚನೆ, ವಾಕ್ಯಗಳಲ್ಲಿ ಅವುಗಳನ್ನು ಬಳಸುವ ಬಗೆಯೆಲ್ಲವನ್ನೂ ಎನ್‌ಎಲ್‌ಪಿಗೆ ಕಲಿಸಲಾಗುತ್ತದೆ. ಹೆಚ್ಚು ಹೆಚ್ಚು ಕಲಿಸಿದಷ್ಟೂ ಇದು ಹೆಚ್ಚು ಹೆಚ್ಚು ನಿಖರವಾಗಿ ಸಂವಹನ ನಡೆಸಲು ಶಕ್ತವಾಗುತ್ತದೆ. ಹೀಗೆ ಕಲಿಸುವಾಗ, ಈಗಾಗಲೇ ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿರುವ ಮಾಹಿತಿಯನ್ನೇ ಬಳಸಲಾಗುತ್ತದೆ. ಉದಾಹರಣೆಗೆ, ವಿಕಿಪೀಡಿಯಾದಲ್ಲಿರುವ ಮಾಹಿತಿಯನ್ನು ಇವು ಬಳಸುವುದರಿಂದ ಅದರಲ್ಲಿರುವ ಎಲ್ಲ ಮಾಹಿತಿ ಸಹಜವಾಗಿಯೇ ಇವುಗಳಿಗೆ ಡೇಟಾ ಆಗಿ ಲಭ್ಯವಾಗಿರುತ್ತವೆ.

ಈ ಪದಗುಚ್ಛಗಳನ್ನು ಬಳಸಿ ಎಷ್ಟು ವಿಧದಲ್ಲಿ ತರಬೇತಿ ನೀಡಲಾಗುತ್ತದೆ ಎಂಬುದರ ಮೇಲೆ ಎನ್‌ಎಲ್‌ಪಿಯ ನಿಖರತೆ ತಿಳಿಯುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ಕೆಲವರಿಗಷ್ಟೇ ಲಭ್ಯವಿರುವ ’ಜಿಪಿಟಿ 3’ನ್ನು ಬಳಸಿಕೊಂಡು ಮಾಡಿದ ಪ್ರಯೋಗಗಳಲ್ಲಿ ಒಬ್ಬ ಸಾಮಾನ್ಯ ಇಂಗ್ಲಿಷ್ ಶಿಕ್ಷಕರಿಗಿಂತ ಈ ಮಾದರಿಗಳು ಹೆಚ್ಚು ಉತ್ತಮ ಭಾಷಾಜ್ಞಾನವನ್ನು ಹೊಂದಿವೆ ಎಂಬುದು ತಿಳಿದುಬಂದಿದೆ.

ಎನ್‌ಎಲ್‌ಪಿ ಬಳಸಿ ಏನು ಮಾಡಬಹುದು?

ಕಳೆದ ಕೆಲವು ದಿನಗಳ ಹಿಂದೆ ತನ್ನ ಗರ್ಲ್‌ಫ್ರೆಂಡ್ ಕಳೆದುಕೊಂಡ ಅಮೆರಿಕದ ಯುವಕನೊಬ್ಬ, ಆಕೆಯ ಜೊತೆ ನಡೆಸಿದ ಚಾಟ್‌ಗಳು, ವಾಯ್ಸ್‌ ನೋಟ್‌ಗಳು, ವಿಡಿಯೊಗಳ ಧ್ವನಿಗಳನ್ನೆಲ್ಲ ‘ಜಿಪಿಟಿ 3’ಗೆ ಕೊಟ್ಟು, ಒಂದು ಅಪ್ಲಿಕೇಶನ್ ತಯಾರಿಸಿದ. ಅದರಲ್ಲಿ, ಅವನ ಗೆಳತಿ ಮಾತನಾಡಿದ ಧ್ವನಿ, ಶೈಲಿಯಲ್ಲೇ ತನ್ನ ಜೊತೆ ಮಾತನಾಡುವ ಹಾಗೆ ಒಂದು ಅಪ್ಲಿಕೇಶನ್ ತಯಾರಿಸಿದ.

ಇನ್ನೊಂದು ಉದಾಹರಣೆಯಲ್ಲಿ, ಬ್ರಿಟನ್‌ನ ಒಬ್ಬ ಯೂಟ್ಯೂಬರ್‌ ತನ್ನ ಯೂಟ್ಯೂಬ್ ವಿಡಿಯೋಗೆ ಹೊಸ ಹೊಸ ಐಡಿಯಾ ಹುಡುಕುತ್ತಿದ್ದಾಗ ಹೊಸದೇನೂ ಹೊಳೆಯದೇ, ’ಜಿಪಿಟಿ 3’ ಬಳಿ ತನ್ನೆಲ್ಲ ಹಳೆಯ ಯೂಟ್ಯೂಬ್ ವೀಡಿಯೋಗಳನ್ನು ಗಮನಿಸಿ ಹೊಸ ಯೂಟ್ಯೂಬ್‌ ವಿಡಿಯೋಗೆ ಐಡಿಯಾ ಕೊಡುವಂತೆ ಕೇಳಿದ. ಮೊದಲ ಒಂದೆರಡು ಆಸಕ್ತಿಕರವಲ್ಲದ ಐಡಿಯಾಗಳನ್ನು ಕೊಟ್ಟ ನಂತರ, ’ಜಿಪಿಟಿ 3’ ಅಪ್ಲಿಕೇಶನ್ ಕೊಟ್ಟ ಐಡಿಯಾ ಅದ್ಭುತವಾಗಿತ್ತಂತೆ!

ದುರ್ಬಳಕೆ ಆಗದೇ?

ಇದು ಈಗಿರುವ ಅತ್ಯಂತ ದೊಡ್ಡ ಭೀತಿ! ಇದೇ ಕಾರಣಕ್ಕೆ, ಇನ್ನೂ ‘ಜಿಪಿಟಿ 3’ ಎಪಿಐಗಳು ಮುಕ್ತವಾಗಿ ಎಲ್ಲರಿಗೂ ಲಭ್ಯವಿಲ್ಲ. ವಿದ್ಯಾರ್ಥಿಗಳು ಮತ್ತು ಪ್ರಾಯೋಗಿಕವಾಗಿ ಬಳಸುವವರಿಗೆ ಮಾತ್ರ ಇದನ್ನು ಓಪನ್ಎಐ ಲಭ್ಯವಾಗಿಸುತ್ತಿದೆ. ಇನ್ನು, ಇಸ್ರೇಲ್‌ನ ಸಂಸ್ಥೆ ಕೂಡ ತನ್ನ ಜುರಾಸಿಕ್ ಬಳಕೆಯ ಮೇಲೆ ನಿಯಂತ್ರಣವನ್ನು ಹೇರುವ ಬಗ್ಗೆ ಚಿಂತನೆ ನಡೆಸಿದೆ.

ಈ ಎಪಿಐಗಳನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ದುರುದ್ದೇಶಪೂರಿತವಾದ ಪ್ರಚಾರವನ್ನೂ ಮಾಡಬಹುದು. ಸುಳ್ಳು ಸಂಗತಿಗಳನ್ನು ಅಪಾರ ಪ್ರಮಾಣದಲ್ಲಿ ಹರಿಬಿಡಬಹುದು. ಅಸಲಿ ವ್ಯಕ್ತಿಯನ್ನೇ ನಕಲಿಸುವ ಕೆಲಸವನ್ನೂ ಮಾಡಬಹುದು.

ಇದರ ಅನುಕೂಲ ಎಷ್ಟಿದೆಯೋ ಅದನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವೂ ಅಷ್ಟೇ ಇದೆ. ಇದೇ ಕಾರಣಕ್ಕೆ ಇದರ ಬಳಕೆಯ ಮೇಲೆ ನಿಯಂತ್ರಣವೂ ಅಷ್ಟೇ ಮುಖ್ಯ. ಆದರೆ, ಅದು ಸುಲಭವಲ್ಲ ಎಂಬುದು ಎನ್‌ಎಲ್‌ಪಿ ಕುರಿತ ಪ್ರಯೋಗ ನಡೆಸುತ್ತಿರುವವರಿಗೂ ತಿಳಿದಿದೆ. ಎನ್‌ಎಲ್‌ಪಿ ವ್ಯಾಪಕವಾಗಿ ಮತ್ತು ಹೆಚ್ಚು ನಿಖರವಾಗಿ ಬೆಳೆಯುತ್ತಿರುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ಗೆ ಇನ್ನಷ್ಟು ಪೂರಕವಾಗಿದೆ. ಎನ್‌ಎಲ್‌ಪಿ ಎಂಬುದು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ನ ಮುಖ್ಯ ಅಂಗವಾಗಿ ಕೆಲಸ ಮಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು