ಗುರುವಾರ , ಅಕ್ಟೋಬರ್ 1, 2020
22 °C
ಸ್ಟಾರ್ಟ್‌ಅಪ್‌ನಿಂದ ಅಭಿವೃದ್ಧಿ

ಕೋವಿಡ್‌ ರೋಗಿಯ ಮೇಲೆ ನಿಗಾವಹಿಸಲು ಅಂತರ್ಜಾಲ ಸಂಪರ್ಕಿತ ಸ್ಮಾರ್ಟ್‌ ಮಾಸ್ಕ್

ಪಿಟಿಐ Updated:

ಅಕ್ಷರ ಗಾತ್ರ : | |

ಫೇಸ್‌ಮಾಸ್ಕ್–ಸಾಂದರ್ಭಿಕ ಚಿತ್ರ

ಹೈದರಾಬಾದ್‌: ಬಿಟ್ಸ್‌ ಪಿಲಾನಿ ಹೈದರಾಬಾದ್‌ ಸಹಕಾರ ಪಡೆದಿರುವ ಸ್ಟಾರ್ಟ್‌ಅಪ್‌ 'ಬೈದ್ (Baiid) ಆಟೊ ಟೆಕ್ನಾಲಜೀಸ್‌' ಅಂತರ್ಜಾಲ ಸಂಪರ್ಕಿತ ಸ್ಮಾರ್ಟ್‌ ಫೇಸ್‌ಮಾಸ್ಕ್‌ ಅಭಿವೃದ್ಧಿ ಪಡಿಸಿದೆ. ಕೋವಿಡ್‌–19 ಮತ್ತು ಇತರೆ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಲ್ಲಿ ರೋಗಿಗಳ ಆರೋಗ್ಯದ ಮೇಲೆ ನಿಗಾವಹಿಸಲು ಈ ಸಾಧನ ಸಹಕಾರಿಯಾಗಲಿದೆ.

ಸೋಂಕಿಗೆ ತೆರೆದುಕೊಳ್ಳುವುದರಿಂದ ವ್ಯಕ್ತಿಯನ್ನು ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ಆಧಾರಿತ ಫೇಸ್‌ಮಾಸ್ಕ್‌ ರಕ್ಷಿಸುತ್ತದೆ. ವ್ಯಕ್ತಿಯ ಆರೋಗ್ಯದ ಮೇಲೆ ದೂರದಿಂದಲೇ ನಿಗಾವಹಿಸಬಹುದು ಎಂದು ಬೈದ್ (Baiid) ಆಟೊ ಟೆಕ್ನಾಲಜೀಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಕೋವಿಡ್‌–19 ದೃಢಪಟ್ಟ ರೋಗಿಗಳ ಆರೋಗ್ಯ ಸ್ಥಿತಿಯನ್ನು ವೈದ್ಯರು ಸೇರಿದಂತೆ ಕೋವಿಡ್‌ ವಾರಿಯರ್ಸ್‌ಗಳು ಸ್ಮಾರ್ಟ್‌ಫೋನ್‌ ಮೂಲಕವೇ ಗಮನಿಸಲು ಸ್ಮಾರ್ಟ್‌ ಫೇಸ್‌ಮಾಸ್ಕ್ ಅನುವು ಮಾಡಿಕೊಡುತ್ತದೆ. ಇದರಿಂದಾಗಿ ಐಸೊಲೇಷನ್‌ ವಾರ್ಡ್‌ಗಳಲ್ಲಿ ರೋಗಿಗಳನ್ನು ಪರೀಕ್ಷಿಸುವ ಸಮಯದಲ್ಲಿ ಉಳಿತಾಯವಾಗುತ್ತದೆ ಹಾಗೂ ಕೋವಿಡ್‌ ವಾರಿಯರ್‌ಗಳಿಗೆ ಸೋಂಕು ತಗುಲುವ ಸಾಧ್ಯತೆಯೂ ಕಡಿಮೆಯಾಗುತ್ತದೆ ಎಂದು ಪ್ರಕಟಣೆ ವಿವರಿಸಿದೆ.

ಮಾಸ್ಕ್‌ಗೆ ಅಳವಡಿಸಲಾದ ಐಒಟಿ ಸಾಧನವು ದೇಹದ ಉಷ್ಣಾಂಶ, ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ, ಮಾಸ್ಕ್‌ನ ಪದರಗಳಲ್ಲಿ ಉಂಟಾಗಿರುವ ತೇವಾಂಶದ ಪ್ರಮಾಣ ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ತುರ್ತು ಅಂಶಗಳನ್ನು ಗಮನಿಸುತ್ತದೆ.  

ಸ್ಮಾರ್ಟ್‌ಮಾಸ್ಕ್‌ನೊಂದಿಗೆ ಒಬಿವಿ (ಆಕ್ಸಿ–ಬ್ರೀಥ್‌ ವೆಂಟಿಲೇಟರ್ಸ್) ಅಳವಡಿಕೆಯಿಂದಾಗಿ ನಿರಂತರವಾಗಿ ಮಾಸ್ಕ್‌ ಧರಿಸಿದರೂ ಕಸಿವಿಸಿ ಉಂಟಾಗುವುದಿಲ್ಲ. ಒಬಿವಿ ಮಾಸ್ಕ್ ಒಳಗಿನ ಬಿಸಿಯನ್ನು ಹೊರಹಾಕುತ್ತದೆ ಹಾಗೂ ತೇವಾಂಶ ತೆಗೆದು ಹಾಕುತ್ತದೆ. ನಿರಂತರ ಮಾಸ್ಕ್‌ ಧರಿಸುವುದರಿಂದ ಸೋಂಕು ಹರಡುವಿಕೆಯೂ ತಪ್ಪುತ್ತದೆ.

ಹತ್ತಿ ನೂಲಿನ ಬಟ್ಟೆಯಿಂದಲೇ ಮಾಸ್ಕ್ ತಯಾರಿಸಲಾದ ಮಾಸ್ಕ್‌ಗೆ ಮೂರು ಪದರಗಳ ಫಿಲ್ಟರ್‌ ಅಳವಡಿಸಲಾಗುತ್ತದೆ. ಪರಿಸರ–ಸ್ನೇಹಿ ಫಿಲ್ಟರ್‌ಗಳನ್ನು ಸುಲಭವಾಗಿ ಬದಲಿಸಬಹುದು ಹಾಗೂ ಮಾಸ್ಕ್‌ ಒಗೆದು ಸ್ವಚ್ಛಗೊಳಿಸಿಕೊಳ್ಳಬಹುದಾಗಿದೆ. ಆ್ಯಂಡ್ರಾಯ್ಡ್ ಮತ್ತು ಐಒಎಸ್‌ 'ಬಿ–ಸ್ಕೌಟ್ ಫೇಸ್‌ಮಾಸ್ಕ್‌ ಮೊಬೈಲ್‌ ಆ್ಯಪ್‌' (BSCOUT) ಅಭಿವೃದ್ಧಿ ಪಡಿಸಲಾಗಿದ್ದು, ಅದರ ಮೂಲಕವೇ ಸ್ಮಾರ್ಟ್‌ಮಾಸ್ಕ್ ರವಾನಿಸುವ ಅಂಶಗಳನ್ನು ಗಮನಿಸಬಹುದು. ವೈದ್ಯರು ದೂರದಲ್ಲಿದ್ದರೂ ಮೊಬೈಲ್‌ ಆ್ಯಪ್‌ ಮೂಲಕವೇ ರೋಗಿಯ ಆರೋಗ್ಯ ಸ್ಥಿತಿಯ ಮೇಲೆ ನಿಗಾವಹಿಸಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು