ಭಾನುವಾರ, ಜೂನ್ 26, 2022
28 °C

ಸರಕು ಸಾಗಣೆಗೆ ಬ್ಲೊಹಾರ್ನ್‌

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

prajavani

ಉಬರ್‌, ಓಲಾದಲ್ಲಿ ಸಂಚರಿಸಲು ಬಾಡಿಗೆ ಕಾರ್‌, ಆಟೊ ಬುಕ್‌ ಮಾಡಿದಂತೆ ವ್ಯವಹಾರಸ್ಥರು ನಗರದಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ತಮ್ಮ ಸರಕುಗಳನ್ನು ಸಾಗಿಸಲು ಸರಕು ಸಾಗಣೆ ವಾಹನ ಬುಕ್‌ ಮಾಡುವ ಸೌಲಭ್ಯವನ್ನು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮ ಬ್ಲೊಹಾರ್ನ್‌ (B*owhorn) ಒದಗಿಸಿದೆ. ರಿಟೇಲ್‌ ವ್ಯವಹಾರಸ್ಥರು, ಅಮೆಜಾನ್‌, ಫ್ಲಿಪ್‌ಕಾರ್ಟ್‌, ಬಿಗ್‌ಬಾಸ್ಕೆಟ್‌ನಂತಹ ದೊಡ್ಡ ಸಂಸ್ಥೆಗಳೂ ಇದರ ಸೇವೆ ಪಡೆಯುತ್ತಿವೆ. ಸಾಮಾನ್ಯ ಜನರು ಕೂಡ ತಮ್ಮ ಮನೆಯ ಸರಕುಗಳನ್ನು ಸಾಗಿಸಲು ಇದರ ಸೇವೆ ಪಡೆಯಬಹುದು. ಮೊಬೈಲ್‌ ಆ್ಯಪ್‌ನಲ್ಲಿ ಸರಕು ಸಾಗಣೆ ವಾಹನ ಬುಕ್‌ ಮಾಡುತ್ತಿದ್ದಂತೆ ಮನೆ, ಅಂಗಡಿ, ಉಗ್ರಾಣದ ಬಳಿಗೆ ಸರಕು ಸಾಗಣೆ ವಾಹನ ಬಂದು ಸರಕು ಸಾಗಿಸುವ ಸರಳ ವ್ಯವಸ್ಥೆ ಇಲ್ಲಿದೆ.

ಸರಕು ಸಾಗಣೆ ಮತ್ತು ವಿತರಣೆಗೆ ಸ್ಮಾರ್ಟ್‌ ಮತ್ತು ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವ ನವೋದ್ಯಮ ಇದಾಗಿದೆ. ಸಾಂಪ್ರದಾಯಿಕ ಮತ್ತು ಇ–ಕಾಮರ್ಸ್‌ನಂತಹ ಹೊಸ ಸ್ವರೂಪದ ಉದ್ದಿಮೆಗೆ ಅಗತ್ಯವಾದ ಸರಕುಗಳ ಸಾಗಣೆ ಮತ್ತು ವೈಜ್ಞಾನಿಕ ನಿರ್ವಹಣೆಯ ಸೇವೆಯನ್ನು ಇದು ಒದಗಿಸುತ್ತಿದೆ. ನಗರ ವ್ಯಾಪ್ತಿ ಒಳಗೆ ಸರಕುಗಳ ಸಾಗಣೆಯ ಅತ್ಯುತ್ತಮ ಜಾಲ ಅಭಿವೃದ್ಧಿಪಡಿಸಿರುವುದು ಮತ್ತು ಕಡಿಮೆ ದರದಲ್ಲಿ ಸರಕುಗಳನ್ನು ಸಾಗಿಸುವುದು ಈ ಸ್ಟಾರ್ಟ್‌ಅಪ್‌ನ ವಿಶೇಷತೆಯಾಗಿದೆ.

‘ಬಳಕೆದಾರರು ತಾವು ಸಾಗಿಸಬಹುದಾದ ಸರಕಿನ ಪ್ರಮಾಣಕ್ಕೆ ಅನುಗುಣವಾಗಿ ಸರಕು ಸಾಗಣೆಗೆ ಅಗತ್ಯವಾದ ವಾಹನ ಬುಕಿಂಗ್‌ ಮಾಡುವ ಸೌಲಭ್ಯ ಇಲ್ಲಿದೆ. ಗ್ರಾಹಕರು ತಮಗೆ ಅನುಕೂಲವಾದ ಸಮಯ, ದಿನವನ್ನೂ ನಿಗದಿಪಡಿಸಬಹುದು. ಆ್ಯಪ್‌ನಲ್ಲಿ ನಮೂದಾದ ಮಾಹಿತಿ ಆಧರಿಸಿಯೇ ವಾಹನಗಳು ಸರಕು ಸಾಗಿಸುತ್ತವೆ. ಚಾಲಕರನ್ನು ಮಾತನಾಡಿಸಿ ಅವರ ಅನುಭವ ಪರಿಗಣಿಸಿ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ‘ ಎಂದು ಕಂಪನಿಯ ಸ್ಥಾಪಕ ಮತ್ತು ಸಿಇಒ ಆಗಿರುವ ಮಿಥುನ್‌ ಶ್ರೀವತ್ಸ ಅವರು ಹೇಳುತ್ತಾರೆ.

ರಾಜ್ಯದಲ್ಲಿ ಬಸವಕಲ್ಯಾಣ, ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ 9 ನಗರಗಳಲ್ಲಿ ಇದರ ಸೇವೆ ದೊರೆಯುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ, ಮುಂಬೈ ಮತ್ತು ದೆಹಲಿಯಲ್ಲಿಯೂ ಸೇವೆ ವಿಸ್ತರಿಸಲಾಗಿದೆ.

ಮಿಥುನ್‌ ಅವರು ಪಿಯುಸಿ ಮೊದಲ ವರ್ಷದಲ್ಲಿ ಕಡಿಮೆ ಅಂಕ ಗಳಿಸಿದಾಗ ಆಟೊ ಚಾಲಕರಾಗಿದ್ದ ಇವರ ತಂದೆ, ’ಓದು ತಲೆಗೆ ಹತ್ತದೆ ಈ ಮಟ್ಟದಲ್ಲಿ ಅಂಕ ಪಡೆದರೆ ನಿನಗೂ ಆಟೊ ಖರೀದಿಸಿ ಕೊಡುವೆ‘ ಎಂದು ಹೇಳಿದ್ದನ್ನು ಸವಾಲಾಗಿ ಸ್ವೀಕರಿಸಿದ್ದ ಇವರು ಆನಂತರ ನಿದ್ದೆಗೆಟ್ಟು ಓದಿ ಉತ್ತಮ ಅಂಕಗಳನ್ನು ಗಳಿಸಿ ಎಂಜಿನಿಯರಿಂಗ್‌ ಓದು ಮುಗಿಸಿದ್ದರು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದು, ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದಾರೆ. ಸರಕು ಸಾಗಣೆ ಕ್ಷೇತ್ರದಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿ ಅನುಭವ ಗಳಿಸಿದ ನಂತರವೇ ಈ ನವೋದ್ಯಮ ಸ್ಥಾಪಿಸಿದ್ದಾರೆ. 5 ವರ್ಷಗಳಲ್ಲಿ ಕಂಪನಿಯ ವಹಿವಾಟು ಗಮನಾರ್ಹವಾಗಿ ವಿಸ್ತರಣೆಯಾಗಿರುವುದು ಇದರ ಯಶಸ್ಸಿಗೆ ಕನ್ನಡಿ ಹಿಡಿಯುತ್ತದೆ.

ತಮ್ಮ ಓದು ಮತ್ತು ಕೆಲಸದ ಅನುಭವ ಬಳಸಿಕೊಂಡು ತಂತ್ರಜ್ಞಾನ ನೆರವಿ
ನಿಂದ ಸರಕು ಸಾಗಣೆ ವಹಿವಾಟಿಗೆ ಹೊಸ ಸ್ವರೂಪ ಕೊಟ್ಟಿದ್ದಾರೆ. ‘ಈ ನವೋದ್ಯಮ ನಮ್ಮ ಕೈ ಹಿಡಿದಿದೆ. ಉದ್ದಿಮೆ ವಹಿವಾಟಿನ ದೊಡ್ಡ ಮಾರುಕಟ್ಟೆಯಲ್ಲಿ ಇಂತಹ ಸೇವೆಯ ಅಗತ್ಯ ತುಂಬ ಇತ್ತು. ನಾವು ಆರಂಭಿಸಿರುವ ಈ ನವೋದ್ಯಮವು ಮಾರುಕಟ್ಟೆಯಲ್ಲಿನ ದೊಡ್ಡ ಕೊರತೆಯನ್ನು ತುಂಬಿಕೊಟ್ಟಿದೆ’ ಎಂದು ಹೇಳುತ್ತಾರೆ.

ಉದ್ದಿಮೆಯಿಂದ ಉದ್ದಿಮೆಗೆ (ಬಿಟುಬಿ) ಜತೆಗೆ, ಉದ್ದಿಮೆಯಿಂದ ಗ್ರಾಹಕರಿಗೂ (ಬಿಟುಸಿ) ವಹಿವಾಟು ಲಭ್ಯ ಇರುವುದು ಇದರ ವಿಶೇಷತೆಯಾಗಿದೆ. ಒಟ್ಟು ವಹಿವಾಟಿನಲ್ಲಿ ಕಾರ್ಪೊರೇಟ್‌ ವಹಿವಾಟಿನ ಪಾಲು ಎರಡು ಮೂರಾಂಶದಷ್ಟು ಇದೆ. ಗ್ರಾಹಕರು ನೀಡುವ ಹಣಕ್ಕೆ ತಕ್ಕ ಸೇವೆ ಒದಗಿಸಿದರೆ ಯಾವುದೇ ಉದ್ದಿಮೆಯು ಖಂಡಿತವಾಗಿಯೂ ಯಶಸ್ಸು ಕಾಣಲಿದೆ. ಸರಕು ಸಾಗಣೆ ಕ್ಷೇತ್ರದಲ್ಲಿ ಉತ್ತಮ ಹೆದ್ದಾರಿ, ಸರಕು ಸಾಗಣೆ ಕ್ಷೇತ್ರದಲ್ಲಿ ದಕ್ಷತೆ ಅಳವಡಿಸಿಕೊಂಡರೆ ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎನ್ನುವುದು ಮಿಥುನ್‌ ಅವರ ನಂಬಿಕೆಯಾಗಿದೆ.

‘ಇ–ಕಾಮರ್ಸ್‌ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದ ವಹಿವಾಟು ನಡೆಯುತ್ತಿದೆ. ಸರಕುಗಳ ಸಾಗಣೆ ಕ್ಷೇತ್ರದಲ್ಲಿ ಇದೊಂದು ಹೊಸ ಚಿಂತನೆ. ಇದು ಭಾರತಕ್ಕೆ ಹೆಚ್ಚು ಸೂಕ್ತವಾಗಿದೆ. ಇಲ್ಲಿಯ ಮಾರುಕಟ್ಟೆಗೆ ಸರಿಯಾಗಿ ಹೊಂದಿಕೆಯಾಗಿದೆ. ಇದೇ ಕಾರಣಕ್ಕೆ ಅತ್ಯಲ್ಪ ಅವಧಿಯಲ್ಲಿ ಹೆಚ್ಚು ನಗರಗಳಿಗೆ ಸೇವೆ ವಿಸ್ತರಿಸಲು ಸಾಧ್ಯವಾಗಿದೆ. ಈ ಆ್ಯಪ್‌ ಅನ್ನು ಅನಕ್ಷರಸ್ಥರೂ ಬಳಸುವಂತೆ ಅಭಿವೃದ್ಧಿಪಡಿಸಲಾಗಿದೆ’ ಎನ್ನುತ್ತಾರೆ ಅವರು. ಒಂದು ತುದಿಯಿಂದ ಇನ್ನೊಂದು ತುದಿಗೆ ಸರಕು ಸಾಗಿಸುವ ವಹಿವಾಟಿನ (ಟ್ರಾನ್ಸ್‌ಪೋರ್ಟ್‌) ದಾಸ್ತಾನು ಮಳಿಗೆ, ಮೇಲ್ವಿಚಾರಣೆಯನ್ನು ಯೋಜಿತ ಮತ್ತು ದಕ್ಷ ರೀತಿಯಲ್ಲಿ ನಿರ್ವಹಿಸುವುದು (ಲಾಜಿಸ್ಟಿಕ್‌) ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತಿದೆ.

‘ಇದರ ಸೇವೆ ಪಡೆಯುವವರ ಪಟ್ಟಿಯಲ್ಲಿ ಜನಸಾಮಾನ್ಯರು, ವರ್ತಕರು, ಇ–ಕಾಮರ್ಸ್‌ ಸಂಸ್ಥೆಗಳು ಇವೆ. ಸರಕಿಗೆ ವಿಮೆ ಸೌಲಭ್ಯವೂ ಇರಲಿದೆ. ಇದೊಂದು ಹೊಸ ಬಗೆಯ ವಹಿವಾಟು ಆಗಿರುವುದರಿಂದ ವಿಮೆ ಕಂಪನಿಗಳು ಆರಂಭದಲ್ಲಿ ಹಿಂದೇಟು ಹಾಕಿದ್ದವು. ಈಗ ಅವುಗಳಿಗೆ ನಮ್ಮ ವಹಿವಾಟಿನ ಸ್ವರೂಪ ಅರ್ಥವಾಗಿದೆ. ಹೀಗಾಗಿ ವಿಮೆ ಸೌಲಭ್ಯ ಕಲ್ಪಿಸಲು ಮುಂದೆ ಬಂದಿವೆ’ ಎಂದು ಮಿಥುನ್ ಹೇಳುತ್ತಾರೆ. ಸ್ಕೈಪ್‌, ಟೆಸ್ಲಾ, ಸ್ಪೇಸ್‌ಎಕ್ಸ್‌ನಂತಹ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿರುವ ಅಮೆರಿಕದ ಹೂಡಿಕೆದಾರ ಟಿಮ್‌ ಡ್ರೇಪರ್‌ ಕೂಡ ಇಲ್ಲಿ ಬಂಡವಾಳ ತೊಡಗಿಸಿರುವುದು ಈ ನವೋದ್ಯಮದ ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದರ ನಿದರ್ಶನವಾಗಿದೆ.

* ಕನಿಷ್ಠ ಬುಕಿಂಗ್‌: 45 ನಿಮಿಷಕ್ಕೆ ₹ 200 

* ₹300: ಒಂದು ಗಂಟೆಗೆ ಬಾಡಿಗೆ ದರ

* ನಗರದ 30, 40 ಕಿ.ಮೀ ವ್ಯಾಪ್ತಿಯಲ್ಲಿ 850 ಕೆ.ಜಿ ಸರಕು ಸಾಗಣೆ

* 40 ಕಿ.ಮೀಗಳಿಗಿಂತ ಹೆಚ್ಚು ದೂರ ಕ್ರಮಿಸಿದರೆ ಹೆಚ್ಚುವರಿ ಬಾಡಿಗೆ

* 3,500 – 5,000: ಪ್ರತಿ ದಿನ ದೇಶದಾದ್ಯಂತ ಸರಕು ಸಾಗಿಸುವ ವಾಹನಗಳು

* ವೇಟಿಂಗ್‌ ಚಾರ್ಜ್‌ ಪ್ರತ್ಯೇಕ. ಹೆದ್ದಾರಿ, ನೈಸ್‌ ರೋಡ್‌ ಟೋಲ್‌ ಪಾವತಿ ಹೊಣೆ ಗ್ರಾಹಕರದು

* ಲೋಡ್‌, ಅನ್‌ಲೋಡ್‌ಗೆ ಚಾಲಕನ ನೆರವು ಪಡೆದರೆ ಪ್ರತ್ಯೇಕ ಹಣ ಪಾವತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು